ಹಾಸ್ಯ ಮಾತುಗಳು ಪ್ರಾಸ ಬದ್ಧ, ನಿಸ್ವಾರ್ಥ ಸೇವೆಗೆದು ಜನಮನ ಗೆದ್ದ ಡಾ. ಎಂ.ಬಿ ದಿಲ್ಶಾದ್
ಪ್ರಾಸ ಬದ್ದ ಹಾಸ್ಯ ಮಾತಿನ ಮೂಲಕ ಜನರ ಮೊಗದಲ್ಲಿ ನಗು ಅರಳಿಸಿ, ಸಮಾಜದ ಸರ್ವ ಸಮೂಹಗಳ ಮನದಲ್ಲಿ ಏಕತಾ ಭಾವ ಮೂಡಿಸಿ, ನಾಡಿನ ಉದ್ದಗಲಕ್ಕೂ ಸಾಮರಸ್ಯ, ಸಹಿಷ್ಣುತೆಯ ಕುರಿತು ನೂರಾರು ಉಪನ್ಯಾಸ ನೀಡಿ ಯುವ ಜನಾಂಗಕ್ಕೆ ಸನ್ನಡತೆಯ ಮಾರ್ಗದರ್ಶನ ಬೋಧಿಸಿ, ಪ್ರೀತಿಯ ಸಿಹಿ ನುಡಿಗಳಿಂದ ಉತ್ತರ ಕರ್ನಾಟಕದ ಕೀರ್ತಿ ಮತ್ತು ಸ್ಫೂರ್ತಿಯಾಗಿ ಜನರ ಹೃದಯದಲ್ಲಿ ಅಳಿಯದೆ ಉಳಿದ ಸ್ನೇಹಜೀವಿ, ಸಂಗಜೀವಿ. ಗುಮ್ಮಟ ನಗರಿಯ ಆಧುನಿಕ ಬೀಚಿ ಎಂದೇ ಜನಜನಿತರಾದ ಡಾ.ಎಂ.ಬಿ. ದಿಲ್ಶಾದ್ ರವರ ಸರಳ ವ್ಯಕ್ತಿತ್ವ ಹಾಗೂ ಆದರ್ಶ ಬದುಕು, ಪ್ರಸ್ತುತ ಸಮಾಜಕ್ಕೆ ಮಾದರಿ ಮತ್ತು ಅನುಕರಣೀಯ. ಹುಟ್ಟಿದ್ದು ಇಸ್ಲಾಂ ಧರ್ಮವಾದರೂ ಇವರ ಮನಸ್ಸು ಮಾತ್ರ ಭಾವೈಕ್ಯತ ಸಂಗಮ. ನಿರಂತರ ಅಧ್ಯಯನ ಎಲ್ಲರನ್ನೂ ಪ್ರೀತಿಸುವ ಗುಣ ಇವರದ್ದಾಗಿತ್ತು. ಇಂದು ನಮ್ಮ ಜೊತೆಗೆ ಇಲ್ಲವಾದರೂ ಡಾ.ಎಂ ಬಿ ದಿಲ್ಶಾದ್ ರವರು ಮರೆಯಲಾಗದ ಸ್ವಾತಿ ಮುತ್ತು ಎಂದೇ ಹೇಳಬಹುದು.
ಬಾಗಲಕೋಟೆ ಜಿಲ್ಲೆಯ ಸೂಳೆಬಾವಿಯಲ್ಲಿ 1953 ಜನವರಿ 3 ರಲ್ಲಿ ಜನಿಸಿದ ಡಾ.ಎಂ.ಬಿ ದಿಲ್ಶಾದ್, ಇಲಕಲ್ಲಿನಲ್ಲಿ ಪದವಿ ಶಿಕ್ಷಣ ಮುಗಿಸಿ 1974 ರಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆನಂತರ ವಿಜಯಪುರದಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಿದರು. ನಿರಂತರ ಅಧ್ಯಯನದ ಮೂಲಕ ಅಪಾರ ಜ್ಞಾನ ಸಂಪತ್ತು ಹೊಂದಿರುವ ಡಾ.ಎಂ.ಬಿ. ದಿಲ್ಶಾದ್ ರವರು ನಾಡಿನಾದ್ಯಂತ ನೂರಾರು ಉಪನ್ಯಾಸ, ವಿಚಾರ ಸಂಕೀರ್ಣ, ತರಬೇತಿ ಶಿಬಿರ, ಭಾವೈಕ್ಯತಾ ಗೋಷ್ಠಿ , ಜಿಲ್ಲಾ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ರಾಷ್ಟ್ರ ಮಟ್ಟದ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಸ್ಯದ ಜೊತೆಗೆ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡಿದ್ದಾರೆ.ಆದ್ದರಿಂದಲೇ ಇವರ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಾಗಿ ಸೇರುತಿದ್ದರು. ಸಮಾಜದಲ್ಲಿ ನಮ್ಮ ನಡವಳಿಕೆ ಮತ್ತು ನಮ್ಮ ಮಾತು ಹೇಗೆ ಇರಬೇಕು ಎಂದೂ ಹೀಗೆ ಹೇಳುತಿದ್ದರು. ‘‘ಮಾತು ಹ್ಯಾಂಗ ಇರಬೇಕು. ಹ್ಯಾಂಗಾರ ಇರಬಾರದು, ಅವರಹಾಂಗ, ಇವರಾಂಗ, ಯಾರ ಹಾಂಗು ಇರಬಾರದು, ಯಾರ ಹಂಗು ಇರಬಾರದು, ಆದ್ರ ಕೇಳುವಾಂಗ ಇರಬೇಕು. ಮಾತಿನ್ಯಾಗ ಮತ್ತ ಎನಿರಬೇಕು. ಮಾತಿನ್ಯಾಗ ಆತ ಇರಬೇಕು, ನೀತಿ ಇರಬೇಕು, ಪ್ರೀತಿ ಇರಬೇಕು, ಮಾತಿನ್ಯಾಗ ಸಂದೇಶ ಇರಬೇಕು, ಆದೇಶ ಇರಬೇಕು, ಉಪದೇಶ ಇರಬೇಕು, ಉದ್ದೇಶ ಇರಬೇಕು. ಮಾತಿನ್ಯಾಗ ತೂಕ ಇರಬೇಕು ಇಲ್ಲಂದ್ರ ಸುಮ್ಮನ ಕೂತಿರಬೇಕು. ಮಾತು ಸಾಧನವಾಗಬೇಕು ಆದರೆ ಅದೇ ಸಾಧನೆ ಆಗಬಾರದು. ಮಾತಿನಲ್ಲಿ ವೇಗ ಇರಬೇಕು ಉದ್ವೇಗ ಇರಬಾರದು, ಮಾತಿನಲ್ಲಿ ಮಗುವಿನ ನಲೆ ಇರಬೇಕು ಹಗೆ ಇರಬಾರದು, ಮಾತಿನಲ್ಲಿ ಆತ್ಮೀಯತೆಯ ನಲುವೆಯ ನೆಲೆ, ಸೌಹಾರ್ದತೆಯ ಸೆಲೆ ಇರಬೇಕು, ಬದುಕಿನ ಬೆಲೆ ಇರಬೇಕು, ಮಾತು ಮತಿಯಿಂದ ಬರಬೇಕು ಆದರೆ ಮತೀಯವಾಗಿರಬಾರದು. ಮಾತು ಮುತ್ತಾಗಿರಬೇಕು ಸ್ವಲ್ಪ ಮೆತ್ತಗೆ ಇರಬೇಕು, ಮಾತು ಮಿತವಾಗಿರಬೇಕು, ಎಲ್ಲರಿಗೂ ಹಿತವಾಗಿರಬೇಕು. ಮಾತು ಕೊಟ್ಟಾಂಗ ಮಾತು ಇರಬೇಕು ಇಲ್ಲವಾದರೆ ಮೂಖಾಗಿರಬೇಕು’’ ಎಂಬ ಅರ್ಥಗರ್ಭಿತ ಇವರ ಮಾತುಗಳು ಕೇಳಿದ ಜನರು ಚಪ್ಪಾಳೆ ತಟ್ಟಿ ಇವರ ಸತ್ಯದ ಸಾಲುಗಳಿಗೆ ಮನ ಸೋಲುತಿದ್ದರು. 1981 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಸಂಸ್ಥೆ ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿ ದುಡಿದು 1982 ರಿಂದ 86 ರವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಪ್ರೋಗ್ರಾಂ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತ ರಾಷ್ಟ್ರೀಯ ಸೇವಾ ಯೋಜನೆಯ NSS ಕುರಿತು ಆಳವಾಗಿ ಅಧ್ಯಯನ ಮಾಡಿ ಇದರ ಕುರಿತು ಮಹಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದುಕೊಂಡ್ಡಿದ್ದಾರೆ. ಅಲ್ಲದೇ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಘೆಖಖ ಗೀತೆಯನ್ನು ರಚಿಸಿದ್ದಾರೆ. ಇವರು ರಚಿಸಿದ ‘ರಾಷ್ಟ್ರೀಯ ಸೇವಾ ಯೋಜನೆ ಮಾಡಿಹರು, ಸೇವೆಯ ಮಾಡೋಣ ಬನ್ನಿ ನಾವು ಸೇವೆಯ ಮಾಡೋಣ ಬನ್ನಿ’ ಎಂಬ ಗೀತೆ ಇಂದು NSS ಗೀತೆಯಾಗಿದೆ. ಈ ಗೀತೆಯನ್ನು ಕರ್ನಾಟಕದಲ್ಲಿರುವ ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಸ್ವಾಗತ ಗೀತೆಯಾಗಿ ಹಾಡಲಾಗುತ್ತದೆ. ಘೆಖಖ ಇದೊಂದು ಕೇವಲ ಯೋಜನೆಯಾಗಿ ಉಳಿಯ ಬಾರದು ಇದು ಒಂದು ಯೋಚನೆ ಆಗಬೇಕು ಎಂಬ ಧ್ಯೇಯದೊಂದಿಗೆ ಬದಲಾವಣೆಗಳನ್ನು ಮಾಡಿ ಸಾಕಷ್ಟು ಬಲಪಡಿಸಿ ಸೇವೆಯ ಜೊತೆಗೆ ಹಲವು ಸಾಹಸ ಚಟುವಟಿಕೆಗಳಲ್ಲಿ ಯುವ ಜನಾಂಗವನ್ನು ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸರಕಾರದ ಅನೇಕ ಯೋಜನೆಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ NSS ಅನ್ನು ಒಂದು ಪ್ರಭಾವಿ ಮಾಧ್ಯಮವಾಗಿ ಬಳಸಿಕೊಂಡು ಇದರ ಆಚಾರ ವಿಚಾರ ಪ್ರಚಾರ ಜನರಿಗೆ ಮುಟ್ಟಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವರದಕ್ಷಿಣೆ, ಏಡ್ಸ್, ಬಾಲ ಕಾರ್ಮಿಕ, ಮಹಿಳಾ ದೌರ್ಜನ್ಯ, ಅಸಮಾನತೆ, ಲಿಂಗ ತಾರತಮ್ಯ ಸೇರಿದಂತೆ ಸಮಾಜದಲ್ಲಿನ ಗೊಡ್ಡು ಆಚರಣೆಗಳ ವಿರುದ್ಧ ಸಮಾಜದಲ್ಲಿ ಅರಿವು ಮೂಡಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ತಮ್ಮ NSS ತಂಡವನ್ನು ಮೊತ್ತಮೊದಲ ಬಾರಿಗೆ ಸೇರಿಸಿ ಶಿಸ್ತು ಬದ್ಧತಯಿಂದ ಪರೇಡ್ ಮಾಡಿ ಪ್ರಥಮ ಸ್ಥಾನ ಪಡೆದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಂದ ಶ್ಲಾಘನೀಯ ಮತ್ತು ಗೌರವ ಸನ್ಮಾನ ಪಡೆದುಕೊಂಡಿದ್ದಾರೆ. ‘ನ್ಯಾಶನಲ್ ಸರ್ವಿಸ್ ಸ್ಕಿಮ್ ಇನ್ ಇಂಡಿಯಾ’ ಎಂಬ ಕೃತಿ ರಚಿಸಿ ಇದರ ಕುರಿತು ಸಾವಿರಾರು NSS ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಮಕ್ಕಳ ಮನೋಜ್ಞಾನವನ್ನು ವಿಕಾಸಗೊಳಿಸಲು ಹಾಗೂ ಅವರಲ್ಲಿನ ದಿವ್ಯಶಕ್ತಿಯನ್ನು ಹೊರ ತಂದು ಸಮಾಜದಲ್ಲಿ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಧಾರವಾಡದಲ್ಲಿ ಮಕ್ಕಳ ತಜ್ಞರೊಂದಿಗೆ ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸರ್ವ ಧರ್ಮಗಳ ಸಹಿಷ್ಣುತೆಯ ಪ್ರತಿಪಾದಕರಾದ ಡಾ. ಎಂ.ಬಿ. ದಿಲ್ ಶಾದ್ ರವರು ‘ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ ನಾವೆಲ್ಲರೂ ಒಂದಾಗಿ ಹೊಸ ನಾಡು ಕಟ್ಟೋಣ ಬನ್ನಿ’ ಎಂಬ ನೂರಾರು ಭಾವೈಕ್ಯತೆ ಮೂಡಿಸುವಂತಹ ಕವಿತೆಗಳನ್ನು ಬರೆದಿದ್ದಾರೆ. ‘ದಯದಾ ನಿಧಿ ನಿನೇ ಪ್ರಭು ನಿನಗೆ ನಾ ನಮಿಪೆ’ ಎಂಬ ತಾವೇ ಬರೆದು ಹಾಡಿ ಅಭಿನಯಿಸಿದ ಆಲ್ಬಮನ್ನು ಹೊರ ತಂದಿದ್ದಾರೆ. ಅದಲ್ಲದೇ ತಮ್ಮ ರಚನೆಯ ಎಂಟು ಹಾಡುಗಳನ್ನು ಅಂಧ ಮಕ್ಕಳಿಂದ ಹಾಡಿಸಿ ವಿಜಯ ಜ್ಯೋತಿ ಎಂಬ ಧ್ವನಿಸುರುಳಿಯನ್ನು ರಾಜ್ಯಪಾಲರಿಂದ ಬಿಡುಗಡೆಗೊಳಿಸಿದ್ದಾರೆ. ಈ ಧ್ವನಿ ಸುರುಳಿಯಿಂದ ಬಂದ ಹಣವನ್ನು ಆ ಅಂಧ ಮಕ್ಕಳಿಗೆ ನೀಡಿದ್ದಾರೆ. ಇವರ ಸಾಮಾಜಿಕ ಕಳಕಳಿ ಮತ್ತು ಭಾವೈಕ್ಯತ ಮೇಲು ಗುಣಕ್ಕೆ ರಂಭಾಪುರ ಪೀಠದ ಜಗದ್ಗುರುಗಳಿಂದ ವಾಗ್ ವಿನೋದ್ ಚಂದ್ರ ಪ್ರಶಸ್ತಿ, ಗದುಗಿನ ಪತ್ರಿಕಾ ಬಳಗದಿಂದ ಕುಮಾರವ್ಯಾಸ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಬಿರುದು ಸನ್ಮಾನಗಳು ಅನೇಕ ಸಂಘ ಸಂಸ್ಥೆಗಳು ನೀಡಿ ಗೌರವಿಸಿವೆ. ತಮ್ಮ ಬದುಕಿನುದ್ದಕ್ಕೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ವಿಭಾಗ ಮೇಲ್ವಿಚಾರಕರಾಗಿ, ಅಂತರ್ರಾಷ್ಟ್ರೀಯ ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷರಾಗಿ, ನಿಸ್ವಾರ್ಥ ಸೇವೆಗೈದು ನಾಡಿನ ಉತ್ತಮ ವಾಗ್ಮಿಯಾಗಿ ಸಮಾಜದ ಸಾಮಾಜಿಕ ಸಮಾನತೆಗೆ ಶ್ರಮಿಸಿದ ಪುಣ್ಯ ಪುರುಷ, ಆದರ್ಶ ಜೀವನದ ಪ್ರತಿರೂಪ. ಅನೇಕ ಪ್ರಗತಿಪರ ಕೆಲಸಗಳನ್ನು ಸದ್ದಿಲ್ಲದೆ ಮಾಡಿ ಸುದ್ದಿಯಾಗದೆ ಉಳಿದ ಬುದ್ದಿಜೀವಿ ನಮ್ಮ ಡಾ.ಎಂ.ಬಿ. ದಿಲ್ ಶಾದ್. ಇಂತಹವರು ಇಂದಿನ ಸಮಾಜಕ್ಕೆ ಅತ್ಯಗತ್ಯ.