ಬಿಗಡಾಯಿಸುತ್ತಿರುವ ನೀರಿನ ಸಮಸ್ಯೆ ಮಧ್ಯೆ ಮೇ 29ರಂದು ಶಾಲೆ ಪುನರಾರಂಭ
ಉಡುಪಿ, ಮೇ 28: ಕರಾವಳಿಯ ಜಿಲ್ಲೆಗಳು ಈವರೆಗೆ ಕಂಡು-ಕೇಳರಿಯದ ರೀತಿಯ ನೀರಿನ ಸಮಸ್ಯೆಗೆ ತುತ್ತಾಗಿರುವ ನಡುವೆ 2019-20ನೇ ಸಾಲಿನ ಶೈಕ್ಷಣಿಕ ಋುತು ಮೇ 29ರಿಂದ ಪ್ರಾರಂಭಗೊಳ್ಳಲಿದೆ.
ಜಿಲ್ಲೆಯ 952 ಪ್ರಾಥಮಿಕ ಹಾಗೂ 290 ಪ್ರೌಢ ಶಾಲೆಗಳು ನಾಳೆ ಪ್ರಾರಂಭ ಗೊಳ್ಳಬೇಕಾಗಿದ್ದು, ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡು ಎಷ್ಟು ಶಾಲೆ ಗಳು ಬಾಗಿಲು ತೆರೆಯಲಿವೆ ಎಂಬುದು ನಾಳೆಯಷ್ಟೇ ಸ್ಪಷ್ಟಗೊಳ್ಳಬೇಕಿದೆ. ನಾಳೆಯಿಂದಲೇ ಬಿಸಿಯೂಟವನ್ನೂ ನೀಡಬೇಕಾಗಿರುವುದರಿಂದ ನೀರಿನಾಶ್ರಯ ಇಲ್ಲದ ಎಷ್ಟು ಶಾಲೆಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಫಲವಾಗುತ್ತವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಸ್ಥಳೀಯ ಪರಿಸ್ಥಿತಿಗಳನ್ನು ನೋಡಿಕೊಂಡು, ಶಾಲೆಗಳು ಪುನರಾರಂಭಗೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ. ಪರಿಸ್ಥಿತಿ ಗನುಗುಣವಾಗಿ ಕೆಲವು ಶಾಲೆಗಳಿಗೆ ಬೆಳಗಿನ ತರಗತಿಗಳನ್ನು ಮಾತ್ರ ನಡೆಸಲು ಬಿಇಓ ಅವರು ಅನುಮತಿಯನ್ನು ನೀಡಬಹುದಾಗಿದೆ ಎಂದು ಅವರು ವಿವರಿಸಿದರು.
ಸ್ವಂತ ಬಾವಿಗಳನ್ನು ಹೊಂದಿರುವ ಶಾಲೆಗಳಲ್ಲೂ ಈ ಬಾರಿ ನೀರು ಸಂಪೂರ್ಣವಾಗಿ ಬತ್ತಿಹೋಗಿರುವ ಸಾಧ್ಯತೆ ಹೆಚ್ಚಾಗಿದ್ದು, ಜಿಲ್ಲೆಯ ಹೆಚ್ಚಿನೆಲ್ಲಾ ಶಾಲೆಗಳು ನೀರಿಗಾಗಿ ಗ್ರಾಪಂ ಅಥವಾ ಸ್ಥಳೀಯ ಸಂಸ್ಥೆಗಳನ್ನೇ ಅವಲಂಬಿಸಬೇಕಾಗಿದೆ.
ಶಾಲಾರಂಭ ಮುಂದೂಡಿದ ಬಗ್ಗೆ ರಾಜ್ಯ ಸರಕಾರದಿಂದ ಈವರೆಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಪೂರ್ವನಿಗದಿಯಾದಂತೆ ಮೇ 29ರಂದು ಶಾಲೆಗಳು ಪ್ರಾರಂಭಗೊಳ್ಳಬೇಕಾಗಿದೆ. ಗ್ರಾಪಂನಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ, ಅಗತ್ಯ ಬಿದ್ದರೆ ಟ್ಯಾಂಕರ್ ನೀರನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ ಎಂದು ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯರು ತಿಳಿಸಿದರು.
ಇಂದು ಹೆಚ್ಚಿನೆಲ್ಲಾ ಶಾಲೆಗಳು ನಾಳೆಯಿಂದ ಶಾಲೆಯ ಪ್ರಾರಂಭಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಿದವು. ಶಾಲೆಗಳಲ್ಲಿ ನಾಳೆ ಬೆಳಗ್ಗೆ ಶಾಲಾ ಪ್ರಾರಂಭೋತ್ಸವವೂ ನಡೆಯಲಿದೆ. ಬಿಸಿಯೂಟದ ಜೊತೆಗೆ ಸಿಹಿಯನ್ನು ನೀಡಲೂ ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಶಾಲಾ ಕೊಠಡಿಗಳನ್ನು ಗುಡಿಸುವ, ನೆಲ ಒರೆಸಿ ಸ್ವಚ್ಚಗೊಳಿಸುವ, ಬೆಂಚು- ಡೆಸ್ಕ್, ಮೇಜು, ಕುರ್ಚಿಗಳ ಧೂಳನ್ನು ಜಾಡಿಸುವ, ಶೌಚಾಲಯ ಸ್ವಚ್ಚಗೊಳಿಸುವ ಪ್ರಕ್ರಿಯೆಗಳೂ ಇಂದು ನಡೆದವು. ಕೆಲವು ಶಾಲೆಗಳನ್ನು ತಳಿರು- ತೋರಣ ಗಳಿಂದ, ಬಣ್ಣ ಬಣ್ಣದ ಕಾಗದಗಳಿಂದ ಸಿಂಗರಿಸಲಾಯಿತು. ಹೊಸದಾಗಿ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ಮಕ್ಕಳನ್ನು ವಿಶೇಷವಾಗಿ ಬರಮಾಡಿ ಕೊಂಡು ಅವರಲ್ಲಿರುವ ಭಯ, ಅಳುಕನ್ನು ನಿವಾರಿಸಲು ಹಿರಿಯ ವಿದ್ಯಾರ್ಥಿ ಗಳಿಗೆ ಸೂಚನೆಗಳನ್ನು ನೀಡಲಾಯಿತು.
22 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ: ರಾಜ್ಯದಲ್ಲಿ ಸುಮಾರು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಈ ವರ್ಷದಿಂದ ಪ್ರಾರಂಭಿಸಲು ಸರಕಾರ ನಿರ್ಧರಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ 22 ಶಾಲೆಗಳು ಸೇರ್ಪಡೆಗೊಂಡಿವೆ. ಈ 22 ಶಾಲೆಗಳಲ್ಲಿ ಎಂಟು ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯಾಗಿ ಗುರುತಿಸಲ್ಪಟ್ಟಿದ್ದು ಇಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುಸಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತದೆ.
ಕಳೆದ ಸಾಲಿನಲ್ಲಿ ಬೈಂದೂರಿನ ವಂಡ್ಸೆ ಮತ್ತು ನೆಂಪು, ಕಾಪುವಿನ ಪಡುಬಿದ್ರಿ ನಡ್ಸಾಲು, ಹಿರಿಯಡಕ ಸಮೀಪದ ಬೊಮ್ಮರಬೆಟ್ಟು, ಕಾರ್ಕಳ ತಾಲೂಕು ವರಂಗದ ಮುನಿಯಾಲು, ಕುಂದಾಪುರದ ಕೋಟೇಶ್ವರ ಹಾಗೂ ಬ್ರಹ್ಮಾವರದ ಕೊಕ್ಕರ್ಣೆ ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಗುರುತಿಸ ಲಾಗಿತ್ತು. ಈ ವರ್ಷ ಈ ಪಟ್ಟಿಗೆ ಬಿದ್ಕಲ್ಕಟ್ಟೆ ಹಾಗೂ ಕಾರ್ಕಳ ತಾಲೂಕು ಈದುವಿನ ಹೊಸ್ಮಾರು ಶಾಲೆಯನ್ನು ಸೇರಿಸಲಾಗಿದೆ ಎಂದು ಶೇಷಶಯನ ತಿಳಿಸಿದರು.
ಈ ಎಂಟು ಶಾಲೆಗಳನ್ನು ಹೊರತು ಪಡಿಸಿ ಜಿಲ್ಲೆಯ ಇನ್ನೂ 14 ಶಾಲೆಗಳಲ್ಲಿ ಈ ಬಾರಿ ಮೊದಲ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾ ತ್ತಿದೆ. ಈಗ ಮೊದಲ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಬೋಧಿಸಿದರೆ ಮುಂದೆ ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಲಾಗುತ್ತದೆ. ಈ ಶಾಲೆಗಳ ಒಂದರಿಂದ ಐದನೇ ತರಗತಿವರೆಗಿನ ಶಿಕ್ಷಕರಿಗೆ ಈಗಾಗಲೇ ಡಯಟ್ ಮೂಲಕ ತರಬೇತಿಯನ್ನು ನೀಡಲಾಗಿದೆ. ಇದು ದ್ವಿಭಾಷೆಯಲ್ಲಿ ಚಟುವಟಿಕೆ ಆಧಾರಿತವಾ ಗಿರುತ್ತದೆ ಎಂದು ಶೇಷಶಯನ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭಗೊಳ್ಳುವ ಶಾಲೆಗಳ ವಿವರ ಹೀಗಿದೆ. (ಕೆಪಿಎಸ್ ಹೊರತಾದ ಶಾಲೆಗಳು).
ಬೈಂದೂರು ವಲಯ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು (ಒಂದರಿಂದ 10ನೇ ತರಗತಿ), ಜಿಎಚ್ಪಿಎಸ್ ದೊಂಬೆ, ಜಿಎಚ್ಪಿಎಸ್ ಉಪ್ಪುಂದ, ಜಿಎಚ್ಪಿಎಸ್ ವಂಡ್ಸೆ (ಒಂದರಿಂದ 8ನೇ ತರಗತಿ).
ಕಾಪು ವಲಯ: ಜಿಎಚ್ಪಿಎಸ್ ಕುಕ್ಕೆಹಳ್ಳಿ, ಜಿಎಚ್ಪಿಎಸ್ ರಾಜೀವನಗರ. ಕಾರ್ಕಳ ವಲಯ: ಜಿಎಚ್ಪಿಎಸ್ ಹೆಬ್ರಿ, ಜಿಎಂಎಚ್ಪಿಎಸ್ ಪೆರ್ವಾಜೆ.
ಕುಂದಾಪುರ ವಲಯ: ಜಿಎಚ್ಪಿಎಸ್ ಬೀಜಾಡಿ ಪಡು, ಜಿಎಚ್ಪಿಎಸ್ ಅಮಾಸೆಬೈಲು, ಜಿಎಚ್ಪಿಎಸ್ ತೆಕ್ಕಟ್ಟೆ. ಉಡುಪಿ ವಲಯ: ಜಿಎಂಎಚ್ಪಿಎಸ್ ಬ್ರಹ್ಮಾವರ (ಒಂದರಿಂದ ಎಂಟನೇ ತರಗತಿ), ಜಿಎಚ್ಪಿಎಸ್ ಸಂತೆಕಟ್ಟೆ, ಜಿಎಂಎಚ್ಪಿಎಸ್ ವಳಕಾಡು.
ಜಿಲ್ಲೆಯಲ್ಲಿರುವ ಸರಕಾರಿ, ಖಾಸಗಿ ಶಾಲೆಗಳ ವಿವರ
ಸರಕಾರಿ ಶಾಲೆಗಳು: ಕಿರಿಯ ಪ್ರಾಥಮಿಕ ಶಾಲೆಗಳು (ಬ್ರಹ್ಮಾವರ 30, ಬೈಂದೂರು 89, ಕಾರ್ಕಳ 55, ಕುಂದಾಪುರ 50, ಉಡುಪಿ 7, ಒಟ್ಟು 231). ಹಿರಿಯ ಪ್ರಾಥಮಿಕ ಶಾಲೆಗಳು (ಬ್ರಹ್ಮಾವರ 62, ಬೈಂದೂರು 95, ಕಾರ್ಕಳ 84, ಕುಂದಾಪುರ 76, ಉಡುಪಿ 46, ಒಟ್ಟು 363), ಪ್ರೌಢ ಶಾಲೆಗಳು (ಬ್ರಹ್ಮಾವರ 22, ಬೈಂದೂರು 15, ಕಾರ್ಕಳ 27, ಕುಂದಾಪುರ 20, ಉಡುಪಿ 22, ಒಟ್ಟು 106).
ಅನುದಾನಿತ ಶಾಲೆಗಳು: ಕಿರಿಯ ಪ್ರಾಥಮಿಕ ಶಾಲೆ(ಬ್ರಹ್ಮಾವರ 3, ಬೈಂದೂರು 1, ಕಾರ್ಕಳ 2, ಕುಂದಾಪುರ 1, ಉಡುಪಿ 3, ಒಟ್ಟು 10). ಹಿರಿಯ ಪ್ರಾಥಮಿಕ ಶಾಲೆಗಳು (ಬ್ರಹ್ಮಾವರ 61, ಬೈಂದೂರು 9, ಕಾರ್ಕಳ 31, ಕುಂದಾಪುರ 20, ಉಡುಪಿ 58, ಒಟ್ಟು 179), ಪ್ರೌಢ ಶಾಲೆಗಳು (ಬ್ರಹ್ಮಾವರ 22, ಬೈಂದೂರು 5, ಕಾರ್ಕಳ 13, ಕುಂದಾಪುರ 7, ಉಡುಪಿ 26, ಒಟ್ಟು 73).
ಅನುದಾನ ರಹಿತ ಶಾಲೆಗಳು: ಕಿರಿಯ ಪ್ರಾಥಮಿಕ ಶಾಲೆಗಳು (ಬ್ರಹ್ಮಾವರ 6, ಬೈಂದೂರು 5, ಕಾರ್ಕಳ 3, ಕುಂದಾಪುರ 4, ಉಡುಪಿ 7, ಒಟ್ಟು 25), ಹಿರಿಯ ಪ್ರಾಥಮಿಕ ಶಾಲೆಗಳು (ಬ್ರಹ್ಮಾವರ 23, ಬೈಂದೂರು 18, ಕಾರ್ಕಳ 31, ಕುಂದಾಪುರ 28, ಉಡುಪಿ 44, ಒಟ್ಟು 144), ಪ್ರೌಢ ಶಾಲೆಗಳು (ಬ್ರಹ್ಮಾವರ 20, ಬೈಂದೂರು 17, ಕಾರ್ಕಳ 23, ಕುಂದಾಪುರ 16, ಉಡುಪಿ 35, ಒಟ್ಟು 111).
ಒಟ್ಟು ಶಾಲೆಗಳು: ಬ್ರಹ್ಮಾವರ ವಲಯ- 249, ಬೈಂದೂರು-254, ಕಾರ್ಕಳ-269, ಕುಂದಾಪುರ-222, ಉಡುಪಿ-248, ಒಟ್ಟು-1242.