ಚಿಕ್ಕಮಗಳೂರು ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ
1 ಪುರಸಭೆ, 4 ಪ.ಪಂಚಾಯತ್‍ಗಳಿಗೆ ನಾಳೆ ಮತದಾನ
ಚಿಕ್ಕಮಗಳೂರು, ಮೇ 28: ಕಳೆದ ತಿಂಗಳನಿಂದ ಲೋಕಸಭೆ ಚುನಾವಣೆಯ ಗುಂಗಿನಲ್ಲಿದ್ದ ಜಿಲ್ಲೆಯ ಜನರು ಇದೀಗ ಮತ್ತೊಂದು ಚುನಾವಣೆಯ ಗುಂಗಿನತ್ತ ಮುಖ ಮಾಡಿದ್ದಾರೆ. ಲೋಕಸಭೆ ಚುನಾವಣೆ ಬೆನ್ನಲ್ಲೆ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಕಡೂರು ಪುರಸಭೆ ಹಾಗೂ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಮತ್ತು ಮೂಡಿಗೆರೆ ಸೇರಿದಂತೆ ಜಿಲ್ಲೆಯ 4 ಪಟ್ಟಣ ಪಂಚಾಯತ್‍ಗಳಿಗೆ ಮೇ 29ರಂದು ಬುಧವಾರ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಭಾರೀ ಯಶಸ್ಸುಗಳಿಸಿರುವ ಬಿಜೆಪಿ ಹಾಗೂ ಭಾರೀ ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಪ್ರತಿಷ್ಟೆಯಾಗಿ ಪರಿಗಣಿಸಿರುವುದರಿಂದ ಈ ಮೂರು ಪಕ್ಷಗಳ ನಡುವೆ ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆ 1 ನಗರಸಭೆ, ಮೂರು ಪುರಸಭೆಗಳು ಹಾಗೂ ನಾಲ್ಕು ಪಟ್ಟಣ ಪಂಚಾಯತ್‍ಗಳನ್ನು ಹೊಂದಿದ್ದು, ಈ ಪೈಕಿ ಚಿಕ್ಕಮಗಳೂರು ನಗರಸಭೆ ಹಾಗೂ ಬೀರೂರು, ತರೀಕೆರೆ ಪುರಸಭೆಗಳ ಮೀಸಲಾತಿ ವಿಚಾರ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲಾಗಿದೆ. ಉಳಿದಂತೆ ಕಡೂರು ಪುರಸಭೆ ಹಾಗೂ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಪಟ್ಟಣ ಪಂಚಾಯತ್‍ಗಳಿಗೆ ಮೇ 29ರಂದು ಬುಧವಾರ ಚುನಾವಣೆ ನಡೆಯಲಿದೆ.
ಕಡೂರು ಪುರಸಭೆಯು 23 ವಾರ್ಡ್‍ಗಳನ್ನು ಹೊಂದಿದ್ದು, ಹಾಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ಪಟ್ಟಣ ಪಂಚಾಯತ್‍ಗಳು ತಲಾ 11 ವಾರ್ಡ್‍ಗಳನ್ನು ಒಳಗೊಂಡಿದ್ದು, ಈ ಮೂರು ಪಟ್ಟಣ ಪಂಚಾಯತ್‍ಗಳಲ್ಲಿ ಬಿಜೆಪಿ ಸದಸ್ಯ ಬಲ ಹೆಚ್ಚಿದ್ದು, ಕಳೆದ ಎರಡು ಅವಧಿಗೆ ಬಿಜೆಪಿಗೇ ಇಲ್ಲಿನ ಮತದಾರರು ಅಧಿಕಾರದ ಚುಕ್ಕಾಣಿ ಒಪ್ಪಿಸಿದ್ದಾರೆ. ಇನ್ನು ಮೂಡಿಗೆರೆ ಪಟ್ಟಣ ಪಂಚಾಯತ್ ಕೂಡ 11 ವಾರ್ಡ್‍ಗಳನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷ ಪಪಂ ಅಧಿಕಾರದ ಗದ್ದುಗೆ ಹಿಡಿದಿದೆ.
2019ರ ಲೋಕಸಭೆ ಚುನಾವಣೆ ಫಲಿತಾಂಶ ಮೇ 23ರಂದು ಹೊರಬಿದ್ದಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ತೀವ್ರ ಮುಖಭಂಗ ಅನುಭವಿಸಿದೆ. ಲೋಕಸಭೆ ಚುನಾವಣಾ ಫಲಿತಾಂಶದ ಪರಿಣಾಮ ಎಂಬಂತೆ ಸ್ಥಳೀಯಸಂಸ್ಥೆಗಳ ಚುನಾವಣೆ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಹಾಗೂ ಜೆಡಿಎಸ್ ಪಾಲಿಗೆ ಪ್ರತಿಷ್ಟೆಯ ವಿಷಯವಾಗಿ ಮಾರ್ಪಟ್ಟಿದೆ. ಲೋಕ ಚುನಾವಣೆಯಲ್ಲಿ ಮೈತ್ರಿ ಲೆಕ್ಕಾಚಾರದ ಮೂಲಕ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಾತ್ರ ಮೈತ್ರಿಯ ಸಹವಾಸಕ್ಕೆ ಒಲ್ಲೆ ಎಂದಿದ್ದು, ಇದರಿಂದಾಗಿ ಈ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಲೋಕಸಭೆ ಚುನಾವಣೆಯ ಯಶಸ್ಸಿನ ಗುಂಗಿನಲ್ಲಿರುವ ಬಿಜೆಪಿ ಮೋದಿ ಅಲೆಯನ್ನೇ ಪುರಸಭೆ ಹಾಗೂ ಪಪಂ ವಾರ್ಡ್‍ಗಳ ಮತದಾರರ ಮುಂದಿಟ್ಟು ಮತಯಾಚಿಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರಕಾರದ ಸಾಧನೆಗಳು ಹಾಗೂ ಸಿದ್ದರಾಮಯ್ಯ ಸರಕಾರದ ಯೋಜನೆ, ಸ್ಥಳೀಯ ಮಟ್ಟದಲ್ಲಾದ ಅಭಿವೃದ್ಧಿ ತೋರಿಸಿ ಮತಯಾಚಿಸುತ್ತಿದ್ದಾರೆ. ಲೋಕ ಚುನಾವಣೆಯಲ್ಲಿ ಸಾಧಿಸಿದ ಯಶಸ್ಸಿನ ಓಟವನ್ನು ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲೂ ಮುಂದುವರಿಸುವ ತವಕದಲ್ಲಿದ್ದಾರೆ. ಭಾರೀ ಮುಖಬಂಗದಲ್ಲಿರುವ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿವೆ.
ಕಡೂರು ಪುರಸಭೆಯ 23 ವಾರ್ಡುಗಳ ಪೈಕಿ ಕಾಂಗ್ರೆಸ್ ಸದಸ್ಯರು ಅತೀ ಗೆಲ್ಲುವ ಮೂಲಕ ಹಿಂದಿನ ಅವಧಿಯಲ್ಲಿ ಪುರಸಭೆ ಗದ್ದುಗೆ ಹಿಡಿದಿದ್ದರು. ಕಡೂರು ತಾಲೂಕು ಸತತ ಬರದಿಂದ ಬಳಲಿದ್ದು, ಕಡೂರು ಪಟ್ಟಣದಲ್ಲೂ ಬರದ ಛಾಯೆ ತೀವ್ರವಾಗಿದೆ. ಇಲ್ಲಿನ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯನ್ನು ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪುರಸಭೆ ಆಡಳಿತ ಸಮರ್ಥವಾಗಿ ನಿಭಾಯಿಸಿದ್ದು, ಈ ಬಾರಿಯೂ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬೀಳಿಲಿದೆ ಎಂಬ ವಿಶ್ವಾಸ ಪುರಸಭೆ ಚುನಾವಣೆಯ ಸಾರಥ್ಯ ವಹಿಸಿರುವ ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಅವರದ್ದಾಗಿದೆ. ಆದರೆ ಈ ಬಾರಿ ಬಿಜೆಪಿ ಶಾಸಕರನ್ನು ಹೊಂದಿರುವ ಕಡೂರು ವಿಧಾನಸಭೆ ಕ್ಷೇತ್ರದಲ್ಲಿ ಶಾಸಕ ಬೆಳ್ಳಿ ಪ್ರಕಾಶ್ ಕೂಡ ಪುರಸಭೆ ವಶಕ್ಕೆ ಕಸರತ್ತು ನಡೆಸಿದ್ದು, ಜೆಡಿಎಸ್ ಕೂಡ ವೈಎಸ್‍ವಿ ದತ್ತ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದೆ. ಹಾಗಾಗಿ ಕಾಂಗ್ರೆಸ್‍ಗೆ ಈ ಬಾರಿ ತೀವ್ರ ಪೈಪೋಟಿ ಇದೆ.
11 ಸದಸ್ಯ ಬಲದ ಮೂಡಿಗೆರೆ ಪಟ್ಟಣ ಪಂಚಾಯತ್ ಕಳೆದ ಅವಧಿಯಲ್ಲಿ ಜೆಡಿಎಸ್ ಶಾಸಕರಿದ್ದಾಗ್ಯೂ ಪಟ್ಟಣ ಪಂಚಾಯತ್ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈ ಬಾರಿಯೂ ಪಪಂ ಅಧಿಕಾರ ಸಾಧಿಸಲು ಮಾಜಿ ಸಚಿವೆ ಮೋಟಮ್ಮ ಸಾರಥ್ಯದಲ್ಲಿ ಸ್ಥಳೀಯ ಮುಖಂಡರು ರಣತಂತ್ರ ಹೆಣದಿದ್ದಾರೆ. ಇನ್ನೊಂದೆಡೆ ಶಾಸಕರಾದ ಕುಮಾರಸ್ವಾಮಿ, ಪ್ರಾಣೇಶ್ ನೇತೃತ್ವದಲ್ಲಿ ಬಿಜೆಪಿ ಪಪಂ ಅಧಿಕಾರ ಕಬಳಿಸಲು ತಮ್ಮದೇಯಾದ ರಣತಂತ್ರ ಮಾಡಿದ್ದರೆ, ಮಾಜಿ ಶಾಸಕ ಬಿಬಿ ನಿಂಗಯ್ಯ ಅವರ ನೇತೃತ್ವದಲ್ಲಿ ಜೆಡಿಎಸ್ ಕೂಡ ಬಿಜೆಪಿ, ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡಲು ಅಣಿಯಾಗಿದೆ.
ಇನ್ನು ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ಪಪಂಗಳು ಮಾಜಿ ಶಾಸಕ ಜೀವರಾಜ್ ಮೂರು ಬಾರಿ ಶಾಸಕರಾಗಿದ್ದಾಗಿನಿಂದಲೂ ಬಿಜೆಪಿಯದ್ದೇ ಅಧಿಕಾರವಿದೆ. ಈ ಬಾರಿ ಶೃಂಗೇರಿ ವಿಧಾನಸಭೆ ಕ್ಷೇತ್ರ ಕೈವಶವಾಗಿದ್ದ ಶಾಸಕ ಟಿ.ಡಿ.ರಾಜೇಗೌಡ ಅವರು ತನ್ನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಲ್ಲಿರುವ ಮೂರು ಪ.ಪಂಚಾಯತ್‍ಗಳನ್ನು ಈ ಕೈವಶ ಮಾಡಿಕೊಳ್ಳಲು ತಮ್ಮದೇಯಾದ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸುತ್ತಿದ್ದಾರೆ.
ಮೈತ್ರಿ ಇಲ್ಲ: ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯುವುದಿಲ್ಲ. ಆದರೆ ಬಿಜೆಪಿಯನ್ನು ಸೋಲಿಸಲು ಆಯಾ ವಾರ್ಡ್ ಮಟ್ಟದಲ್ಲಿ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ. ಅದರಂತೆ ಚುನಾವಣೆ ಎದುರಿಸಲಾಗುತ್ತಿದೆ. ಕಡೂರು ಪುರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯತ್ ಈ ಬಾರಿ ಕೈ ವಶ ಆಗಲಿದೆ.
- ಡಾ.ಡಿ.ಎಲ್.ವಿಜಯ್‍ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷಮೂಡಿಗೆರೆ ಪಪಂ ವ್ಯಾಪ್ತಿಯಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ಹಾಗೂ ಈಗಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹರಿದು ಬಂದಿದೆ. ಹಿಂದಿನ ಅವಧಿಯಲ್ಲೂ ಕಾಂಗ್ರೆಸ್ ಸದಸ್ಯರು ಪಪಂ ಮೂಲಕ ನಾಗರಿಕರಿಗೆ ಉತ್ತಮ ಆಡಳಿತ ನೀಡಿದ್ದಾರೆ. ಈ ಬಾರಿಯೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮತದಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷ ಪಪಂ ಗದ್ದುಗೆ ಹಿಡಿಯುವುದು ನಿಶ್ಚಿತ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಮೋದಿ ಅಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.
- ಎಂ.ಎಸ್.ಅನಂತ್, ಮೂಡಿಗೆರೆ ಕಾಂಗ್ರೆಸ್ ವಕ್ತಾರ