ತಂಬಾಕು ಮುಕ್ತ ಭಾರತವಾಗಲಿ
ಇಂದು ವಿಶ್ವ ತಂಬಾಕು ರಹಿತ ದಿನ
ಡಾ. ಮುರಲೀ ಮೋಹನ್,
ಚೂಂತಾರು
ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಮತ್ತು ದುಷ್ಪರಿಣಾಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಜಗತ್ತಿನಾದ್ಯಂತ ಮಾಡಲಾಗುತ್ತಿದೆ. 1987ರಿಂದ ಈ ಆಚರಣೆಯನ್ನು ವಿಶ್ವದಾದ್ಯಂತ ಜಾರಿಗೆ ತರಲಾಯಿತು. 1987ರಲ್ಲಿ ಎಪ್ರಿಲ್ 7ರಂದು ವಿಶ್ವ ತಂಬಾಕು ರಹಿತ ದಿನವೆಂದು ಆಚರಣೆ ಆರಂಭಿಸಲಾಯಿತು, ಆದರೆ 1988ರಲ್ಲಿ ಈ ದಿನವನ್ನು ಬದಲಾವಣೆ ಮಾಡಿ ಪ್ರತೀ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಏನಾದರೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಈ ಆಚರಣೆಯನ್ನು ಆಚರಿಸಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಾವು-ನೋವು, ರೋಗ-ರುಜಿನ, ದುಗುಡ-ದುಮ್ಮಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಪ್ರಚೋದಿಸಲಾಗುತ್ತದೆ. ಈ ಬಾರಿ ಈ ಆಚರಣೆಯನ್ನು ‘ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಜಾಗತಿಕವಾಗಿ, ತಂಬಾಕು ಸುಮಾರು 7 ಮಿಲಿಯನ್ ಮಂದಿಯನ್ನು ವರ್ಷವೊಂದರಲ್ಲಿ ಆಪೋಷನ ತೆಗೆದುಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತದೆ. ಇಂದಿನ ಜಾಗತೀಕರಣಗೊಂಡ ಮತ್ತು ವೈಭವೀಕೃತಗೊಂಡ ಆಧುನಿಕ ಜಗತ್ತಿನಲ್ಲಿ ಸಿಗರೇಟ್ ಸೇವನೆ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಫ್ಯಾಷನ್ ಮತ್ತು ಪ್ರತಿಷ್ಠೆಯಾಗಿ ಮಾರ್ಪಾಡಾಗಿದೆ. ದೃಶ್ಯ ಮಾಧ್ಯಮ, ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ತಂಬಾಕು ಉತ್ಪನ್ನಗಳ ವೈಭವೀಕರಣದಿಂದಾಗಿ ಇಂದಿನ ಯುವಕ, ಯುವತಿಯರು ಬಹು ಬೇಗ ದಾರಿ ತಪ್ಪಿ, ಧೂಮಪಾನದ ಮೋಜಿಗೆ ಬಲಿಯಾಗಿ ಲಕ್ಷಾಂತರ ಮಂದಿ ನತದೃಷ್ಟರು ದಿನನಿತ್ಯ ಸಾವಿನ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಹೀಗೆ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಎಚ್ಚರಿಸಿ, ಅರಿವು ಮೂಡಿಸಿ, ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಾಡಿ ತಂಬಾಕಿನ ಬಳಕೆಯಿಂದ ಉಂಟಾಗುವ ಸಾವು, ನೋವು ಮತ್ತು ಮನುಷ್ಯ ಶಕ್ತಿಯ ಸೋರುವಿಕೆಯನ್ನು ತಪ್ಪಿಸಿ, ಸುಂದರ ಸದೃಢ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟುವ ಅರ್ಥ ಪೂರ್ಣ ಉದ್ದೇಶ ಈ ವಿಶ್ವ ತಂಬಾಕು ರಹಿತ ದಿನಾಚರಣೆಯ ಹಿಂದೆ ಇದೆ.
ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಗುಟ್ಕಾ ಇವೆಲ್ಲ ಕ್ಷಣಿಕ ಸುಖ ನೀಡುವ, ವ್ಯಕ್ತಿಯನ್ನು ಕ್ಷಣ ಕ್ಷಣಕ್ಕೂ ಕೊಲ್ಲುವ ಮತ್ತು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಬಾಂಬ್ ಇದ್ದಂತೆ ಎಂದರೆ ಅತಿಶಯೋಕ್ತಿಯಾಗದು. ಜಗತ್ತಿನಲ್ಲಿ ಚಿಕಿತ್ಸೆ ಇಲ್ಲದ ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು ಎನ್ನುವುದು ಸೂರ್ಯ ಚಂದ್ರರಷ್ಟೇ ನಿಜವಾದ ಮಾತು ಎಂಬ ಕಟು ಸತ್ಯವನ್ನು ಜನರು ಮರೆಯಲೇಬಾರದು. ಈ ತಂಬಾಕು ಉತ್ಪನ್ನಗಳ ಬಳಕೆಯಿಂದ ಹಲವಾರು ರೀತಿಯ ಕ್ಯಾನ್ಸರ್ಗಳಾದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು, ಅಂದತ್ವ ಮುಂತಾದ ಹಲವಾರು ತೊಂದರೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ.
ತಂಬಾಕು ಮತ್ತು ಶ್ವಾಸಕೋಶದ ತೊಂದರೆಗಳು
COPD ಶ್ವಾಸಕೋಶದ ಕ್ಯಾನ್ಸರ್ಗೆ ಅತ್ಯಂತ ಪ್ರಮಖ ಮತ್ತು ಸಾಮಾನ್ಯ ಕಾರಣವೆಂದರೆ ಧೂಮಪಾನ. ನೂರರಲ್ಲಿ ತೊಂಬತ್ತು ಮಂದಿ ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ ತಂಬಾಕಿನ ಚಟ ಇದ್ದೇ ಇರುತ್ತದೆ. ಇದಲ್ಲದೇ ತಂಬಾಕಿನ ಅತಿಯಾದ ಬಳಕೆಯಿಂದ ಶ್ವಾಸಕೋಶದ ಒಳಭಾಗದಲ್ಲಿ ಉರಿಯೂತ ಉಂಟಾಗಿ ಶ್ವಾಸಕೋಶದ ದ್ರವ್ಯಗಳು ಗಟ್ಟಿಯಾಗಿ ಬಹಳಷ್ಟು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ ಎಂದು ಕರೆಯುತ್ತಾರೆ. ಕನ್ನಡದಲ್ಲಿ ದೀರ್ಘ ಕಾಲಿಕ ಉಸಿರಾಟ ತಡೆಗಟ್ಟುವ ಶ್ವಾಸಕೋಶದ ಖಾಯಿಲೆ ಎಂದು ಕರೆಯುತ್ತಾರೆ. ತಂಬಾಕು ಸೇವಿಸುವ ನೂರು ಮಂದಿಯಲ್ಲಿ 95 ಮಂದಿಗೆ ಈ ರೋಗ ಬಂದೇ ಬರುತ್ತದೆ. ಇನ್ನು ಮಕ್ಕಳಲ್ಲಿ ಶ್ವಾಸಕೋಶ ಬಹಳ ಚಂಚಲವಾಗಿರುತ್ತದೆ. ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಲೇ ಮಕ್ಕಳ ಶ್ವಾಸಕೋಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು ಮತ್ತು ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹೆತ್ತವರು ಸದಾಕಾಲ ಧೂಮಪಾನ ಮಾಡುವುದರಿಂದ ಸಣ್ಣ ಮಕ್ಕಳಿಗೂ ಶ್ವಾಸಕೋಶದ ತೊಂದರೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನ ಮಾಡುವುದರಿಂದ ಮತ್ತಷ್ಟು ಶ್ವಾಸಕೋಶಕ್ಕೆ ಹಾನಿಯಾಗಿ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗುತ್ತದೆ.
ಕೊನೆ ಮಾತು
ತಂಬಾಕು ಎನ್ನುವುದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಮೂಲಭೂತ ವಸ್ತು ಎಂಬುವುದು ಸಾರ್ವಕಾಲಿಕ ಸತ್ಯ. ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಂದ 10 ವರ್ಷಗಳ ಮೊದಲೇ ಸಾಯುತ್ತಾನೆಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಖಂಡಿತವಾಗಿಯೂ ಹತ್ತಾರು ಕಾಯಿಲೆಗಳು ಬಂದೇ ಬರುತ್ತದೆ ಎಂಬ ಸತ್ಯದ ಅರಿವು ಇದ್ದೂ, ಜನರು ಅದಕ್ಕೆ ದಾಸರಾಗಿ ಹತ್ತಾರು ರೋಗಗಳನ್ನು ದಿನ ನಿತ್ಯ ಆಹ್ವಾನಿಸಿಕೊಳ್ಳುತ್ತಿರುವುದು ವೈದ್ಯ ಲೋಕಕ್ಕೆ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ ಎಂದರೆ ತಪ್ಪಾಗದು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ, ತಂಬಾಕು ಜಾಹೀರಾತು ನಿರ್ಬಂಧ, ಶಾಲೆಗಳ ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಇವೆಲ್ಲವನ್ನು ಸರಕಾರ ಮಾಡಿದರೂ, ಜನರು ತಮ್ಮ ಇಚ್ಛಾಶಕ್ತಿಯಿಂದ ಜವಾಬ್ದಾರಿ ಅರಿತು ತಂಬಾಕು ಉತ್ಪನ್ನಗಳಿಂದ ದೂರ ಇದ್ದರೆ ಮಾತ್ರ ಸರಕಾರದ ಪ್ರಯತ್ನ ಯಶಸ್ವಿಯಾದೀತು. ಹೀಗಾಗಿ ಈ ವಿಚಾರದಲ್ಲಿ ಜನರ ಪಾಲುದಾರಿಕೆ ಮತ್ತು ಪಾಲುಗೊಳ್ಳುವಿಕೆ ಅತೀ ಅಗತ್ಯ.