ಮಳೆ ನೀರು ಪೋಲಾಗದಿರಲಿ
ಮಾನ್ಯರೇ,
ಈ ಸಲ ರಾಜ್ಯದ ಜನತೆ ಭೀಕರ ಬರದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಮನೆಗಳಲ್ಲಿ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಇದರ ಕುರಿತು ಅರಿವು ಇಲ್ಲದವರಿಗೆ ವೆಬ್ ಸೈಟ್‌ನಲ್ಲಿ ಕೂಡಾ ಮಾಹಿತಿ ನೀಡಲಾಗಿದೆ. ಆದರೆ ಈ ಬಗ್ಗೆ ಸಾಕಷ್ಟು ಸಲ ಸೂಚನೆ ನೀಡಿದರೂ ಬೆಂಗಳೂರಿನಲ್ಲಿ ಮಳೆ ನೀರು ಸಂಗ್ರಹದ ಬಗ್ಗೆ ನಿರಾಸಕ್ತಿ ವಹಿಸುವ ಗ್ರಾಹಕರಿಗೆ ನೀರಿನ ಬಿಲ್ ಮೇಲೆ ವಿಧಿಸುವ ದಂಡದ ಪ್ರಮಾಣವನ್ನು ಶೇಕಡಾ ಐವತ್ತಕ್ಕೆ ಏರಿಸಲು ನಿರ್ಧರಿಸಿರುವುದು ಒಂದು ಎಚ್ಚರಿಕೆ ಕೂಡಾ ಆಗಿದೆ. ಮಳೆಗಾಲದ ವೇಳೆ ಹೆಚ್ಚಿನ ಕಡೆ ಮಳೆ ನೀರನ್ನು ಪೋಲು ಮಾಡುವವರೇ ಹೆಚ್ಚು. ಇತ್ತೀಚೆಗೆ ಮನೆಯಲ್ಲಿ, ಗದ್ದೆ, ಜಮೀನಿನಲ್ಲಿ ಮಳೆ ನೀರನ್ನು ಶೇಖರಿಸಿಡಲು ಈಗ ಹೊಸ ಹೊಸ ಪ್ರಯೋಗಗಳು ನಡೆದಿವೆ. ಆದರೆ ಈ ಕುರಿತಾದ ಮಾಹಿತಿ ಹೆಚ್ಚಿನವರಿಗೆ ಇಲ್ಲ. ಹೀಗಾಗಿ ನೀರಾವರಿ, ಕೃಷಿ ತಜ್ಞರ ಮೂಲಕ ಮಳೆ ನೀರಿನ ಸಂಗ್ರಹ ಮಾಡುವ ಕುರಿತಾದ ಅಭಿಯಾನ ನಡೆಸಿ ಜಾಗೃತಿ ಮೂಡಿಸಬೇಕಾಗಿದೆ. ಹಾಗೆಯೇ ನಗರಗಳಲ್ಲಿ ಇರುವ ಪ್ರತಿ ಕಟ್ಟಡಗಳಲ್ಲಿ ಕೂಡಾ ಮಳೆ ನೀರು ಸಂಗ್ರಹದ ತೊಟ್ಟಿಗಳ ವ್ಯವಸ್ಥೆ ಹೆಚ್ಚು ಮಾಡಬೇಕಾಗಿದೆ. ಈ ಮೂಲಕ ನೀರಿನ ಕೊರತೆಯನ್ನು ಸಣ್ಣ ಮಟ್ಟಿಗಾದರೂ ನಿಭಾಯಿಸಬಹುದು. ಇದಕ್ಕಾಗಿ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಜೊತೆಗೆ ಜನರು ಕೈ ಜೋಡಿಸಬೇಕಾಗಿದೆ. ಸ್ವಯಂಪ್ರೇರಿತರಾಗಿ ಜನರು ಮಳೆ ನೀರು ಸಂಗ್ರಹದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿದೆ.