ನಿದ್ದೆಗೆಡಿಸಿದ ಕಿರಿಕ್ ಕೀಟ
ಕ್ರೀ.... ಕ್ರೀ ....ಕ್ರೀ...ಇನ್ನೇನು ಮಲಗಲು ಸಿದ್ಧತೆ ನಡೆಸುವಾಗ ಮನೆಯೊಳಗಿನಿಂದ ಯಾವುದೋ ಮೂಲೆಯಿಂದ ಕೇಳಿಬರುತ್ತಿದ್ದ ಸದ್ದು. ಸ್ವಲ್ಪ ಶಬ್ದವಾದರೂ ನಿದ್ದೆಯಿಂದ ಎಚ್ಚರಗೊಳ್ಳುವ ನನಗೆ ಕಿವಿಯ ಹತ್ತಿರಕ್ಕೇ ಕೇಳಿಬರುತ್ತಿದ್ದ ಸದ್ದು ನನ್ನ ನಿದ್ದೆ ಮಾಡಲು ಬಿಟ್ಟೀತೇ?.
ಒಮ್ಮೆ ಸಣ್ಣದಿರುವಾಗ ನಾನು ಮತ್ತು ತಮ್ಮ ಮನೆಯ ನಡುಕೋಣೆಯಲ್ಲಿ ಮಲಗಿದ್ದೆವು.ಯಾವುದೋ ಕೆಲಸಕ್ಕೆ ಹೋದ ದೊಡ್ಡಪ್ಪ ಮನೆಸೇರುವಾಗ ಅಂದು ರಾತ್ರಿಯಾಗಿತ್ತು. ಸ್ನಾನ ಮುಗಿಸಿ ನಾವು ಮಲಗಿದ ಕೋಣೆಯಲ್ಲೇ ಇದ್ದ ಕುರ್ಚಿಯಲ್ಲಿ ದೊಡ್ಡಪ್ಪ ಬಂದು ಕುಳಿತರು. ಇನ್ನೇನು ನನ್ನ ಕಣ್ಣಿಗೆ ನಿದ್ದೆ ಹತ್ತುತ್ತಿದೆ ಎನ್ನುವಾಗಲೇ ತನ್ನ ತಲೆನೋವನ್ನು ಹೋಗಲಾಡಿಸುವ ಸಲುವಾಗಿ ಬಿಸಿ ಬಿಸಿ ಚಹಾದ ಲೋಟವನ್ನು ಹಿಡಿದು ದೊಡ್ಡಪ್ಪ ಅದನ್ನು ಹೀರಲು ಶುರುಮಾಡಿದ್ದರು. ನಿಶ್ಯಬ್ದವಾದ ಕೋಣೆಯಲ್ಲಿ ಅವರ ಚಹಾ ಹೀರುವಿಕೆಯ ಫ್ರೋ... ಫ್ರೋ .....
ಎಂಬಂತಹ ಲಯ ಬದ್ಧವಾದ ಶಬ್ದಕ್ಕೆ ನನ್ನ ಹತ್ತಿರವೇ ಸುಳಿಯುತ್ತಿದ್ದ ನಿದ್ದೆ ಕುಣಿಕುಣಿಯುತ್ತಾ ನನ್ನ ಬಿಟ್ಟು ದೂರ ಹೋಗಿತ್ತು. ಮತ್ತೆ ನಿದ್ದೆ ಹತ್ತಲು ಅದೆಷ್ಟು ಹೊತ್ತಾಯಿತೋ ನೆನಪಿಲ್ಲ.
ಈ ಹಳೆಘಟನೆಯೆಲ್ಲಾ ನೆನಪಾಗುತ್ತಿದ್ದಂತೆ ಈಗ ಕೇಳುತ್ತಿರುವ ಕ್ರೀ.... ಕ್ರೀ..... ಶಬ್ದವೂ ಜೋರಾಗತೊಡಗಿತ್ತು. ನನಗಂತೂ ಕಣ್ಣಿಗೆ ಹತ್ತುತ್ತಿರುವ ನಿದ್ದೆಯನ್ನು ಹಿಡಿದಿಡಬೇಕೆಂಬ ಅದಮ್ಯ ಬಯಕೆ. ಆದರೆ ಈ ಕ್ರೀ ...ಸದ್ದು ತೊಲಗದೆ ನನಗಿಂದಿನ ರಾತ್ರಿಯ ನಿದ್ದೆ ಕನಸಿನ ಮಾತು ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು. ಆ ಕೀಟ ಎಲ್ಲಿದ್ದರೂ ಹಿಡಿಯಬೇಕು ಎಂದು ಪಣತೊಟ್ಟು ಪಕ್ಕದಲ್ಲೇ ಮಲಗಿದ್ದ ನನ್ನವರನ್ನು ಸಹಾಯಕ್ಕೆಂದು ಎಬ್ಬಿಸಲು ನೋಡಿದೆ.
‘ರೀ ಈ ಶಬ್ದ ಎಲ್ಲಿಂದ ಬರ್ತಾ ಇರೋದು ನೋಡ್ರೀ’ ಎಂದೆ. ಅಂದು ಅವರು ಕಾಲೇಜು ಅಡ್ಮಿಶನ್ ಕೆಲಸದಿಂದ ತುಂಬಾ ದಣಿದೇ ಬಂದಿದ್ದು ಅದಾಗಲೇ ನಿದ್ದೆಗೆ ಜಾರಿದ್ದರು. ನಾನು ಎಬ್ಬಿಸುತ್ತಿದ್ದಂತೆ ನಿದ್ದೆ ಕಣ್ಣಲ್ಲಿ ‘ಅಡ್ಮಿಶನ್ ಸ್ಟಾರ್ಟ್ ಆಗಿದೆ’ ಎಂದು ತನ್ನ ವೃತ್ತಿಭಾಷೆಯನ್ನಾಡಲು ಶುರುಮಾಡಿದ್ದರು. ಇವರನ್ನು ಎಬ್ಬಿಸಿ ಪ್ರಯೋಜನವಿಲ್ಲ ಎಂದರಿತ ನಾನು ಮಂಚದಿಂದ ಕೆಳಗಿಳಿದು ಲೈಟ್ ಹಾಕಿದೆ.
ಶಬ್ದ ಕೇಳುತ್ತಿತ್ತೇ ಹೊರತು ಎಲ್ಲಿಂದ ಎಂಬುದು ಗೊತ್ತಾಗುತ್ತಿರಲಿಲ್ಲ. ಎಲ್ಲಿ ಎಂದು ಅವಲೋಕಿಸುವಷ್ಟರಲ್ಲಿ ಸದ್ದು ನಿಂತಿತು. ರೂಮಿನ ಕಿಟಕಿ ಬಾಗಿಲುಗಳನ್ನೆಲ್ಲಾ ತೆಗೆದು ಲೈಟ್ ಆರಿಸಿದೆ. ಹೊರಗಿನ ಬೀದಿ ದೀಪದ ಬೆಳಕಿಗೆ ಕೀಟ ಹೋದರೂ ಹೋಗಲಿ ಎಂದು. ಸ್ವಲ್ಪ ಹೊತ್ತು ಬಿಟ್ಟು ಪುನಃ ಲೈಟ್ ಹಾಕಿ ಕಿಟಕಿ ಮುಚ್ಚಿದೆ. ರೂಮಿಗೆ ಹೊಂದಿಕೊಂಡಿದ್ದ ಬಾತ್ ರೂಮಿನೊಳಗೆ ಹೊಕ್ಕ ನಾನು ಸುದೀರ್ಘವಾಗಿ ಎಲ್ಲವನ್ನೂ ಪರೀಕ್ಷಿಸಿದೆ. ಪಾಯಖಾನೆಯ ಸುತ್ತಲೆಲ್ಲಾ ನೀರು ಚೆಲ್ಲಿದೆ. ಆದರೂ ಆ ಕೀಟ ನನ್ನ ಕಣ್ಣಿಗೆ ಎಲ್ಲೂ ಕಾಣಿಸಲೇ ಇಲ್ಲ. ಸದ್ದೂ ಇಲ್ಲ. ಎಲ್ಲಾ ಲೈಟ್ ಆರಿಸಿ ಮಲಗೋಣವೆಂದು ಹೊರಟ ಕೂಡಲೇ ಮತ್ತದೇ ಕ್ರೀ ..ಕ್ರೀ... ಕ್ರೀ ಸದ್ದು. ಇವತ್ತು ನನ್ನ ದಿನವೇ ಸರಿ ಇಲ್ಲವೇನೋ ಛೆ !ಎಂದು ಸಿಡಿಮಿಡಿಗೊಳ್ಳುತ್ತಾ ನಾನು ಮಧ್ಯದ ಕೋಣೆಗೆ ಬಂದು ಮಧ್ಯದಲ್ಲಿ ನಿಂತೆ. ಸದ್ದು ಯಾವ ಭಾಗದಿಂದ ಬರುತ್ತಿದೆ ಎಂದು ಎರಡೂ ಕಿವಿ ನೆಟ್ಟಗೆ ಮಾಡಿ ಅಲ್ಲೇ ಸ್ವಲ್ಪ ಹೊತ್ತು ನಿಂತೆ. ಎಲ್ಲರೂ ಮಲಗಿರುವ ವೇಳೆಯಲ್ಲಿ ನಾನೊಂದು ರೀತಿ ಸಂಶೋಧನೆಯಲ್ಲಿ ತೊಡಗಿದಂತೆ ಆಗುತ್ತಿತ್ತು. ಹೌದು! ಸದ್ದು ಎಡಭಾಗದಿಂದ ಬರುತ್ತಿದೆ ಎಂಬುದು ಈಗ ಸ್ಪಷ್ಟವಾಯಿತು. ಎಡಭಾಗದಲ್ಲಿದ್ದ ಅಡುಗೆ ಮನೆ, ಸ್ನಾನ ಗೃಹ, ಮೇಲ್ಮಡಿಯಲ್ಲಿದ್ದ ಕೋಣೆ ಎಲ್ಲ ಕಡೆಯಿಂದಲೂ ಸದ್ದು ಬರುತ್ತಿದ್ದಂತೆ ಅನಿಸತೊಡಗಿತು. ಒಂದೊಂದೇ ಕೋಣೆಗೆ ಹೋಗಿ ಶು ...ಶು ... ಎನ್ನುತ್ತಾ, ಅಲ್ಲಿಗಿಲ್ಲಿಗೆ ಬಡಿಯುತ್ತಾ ಕಿಟಕಿ ಬಾಗಿಲುಗಳನ್ನೆಲ್ಲಾ ತೆರೆದಿಟ್ಟೆ. ಕೆಲ ನಿಮಿಷಗಳಲ್ಲಿ ಸದ್ದು ನಿಂತಿತು. ಮತ್ತೆ ಶು.. ಶು ..ಎನ್ನುತ್ತಾ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿ ಲೈಟ್ ಆರಿಸಿ ಮಲಗುವ ಕೋಣೆಗೆ ಬಂದೆ. ಈಗ ಸ್ವಲ್ಪ ನಿರಾಳತೆಯಿತ್ತು. ಸದ್ದು ಕೇಳಿ ಕೇಳಿ ಕಿವಿಯೊಳಗೆ ಅದೇ ಸದ್ದಿನ ಹ್ಯಾಂಗೋವರ್ ನಡೆಯುತ್ತಿತ್ತು. ಇಡೀ ಮನೆಯೊಳಗೆ ಸುತ್ತಿ ಸುತ್ತಿ ನಾನಂತೂ ಬಸವಳಿದಿದ್ದೆ. ಕಣ್ಮುಚ್ಚಿ ಚೆನ್ನಾಗಿ ನಿದ್ದೆ ಮಾಡಬೇಕೆಂದು ಕೋಣೆಯ ಲೈಟ್ ಆರಿಸಲು ಸ್ವಿಚ್ ಮೇಲೆ ಕೈ ಇಡುತ್ತಿದ್ದಂತೆ ಮತ್ತೆ ಶುರುವಾಯಿತು ಕ್ರೀ ...ಕ್ರೀ ...ಕ್ರೀ ಸದ್ದು!
ಪ್ರಪಂಚವನ್ನೇ ಮರೆತು ನಿದ್ರಿಸುತ್ತಿದ್ದ ನನ್ನ ಗಂಡನ ನೋಡಿ ಅವರ ಮೇಲೆ ಅಸೂಯೆಯೂ, ಅವರಂತೆ ನನಗೆ ನಿದ್ದೆ ಬಾರದಕ್ಕೆ ಬೇಸರವೂ ಆಗಿ ಅಳುವೇ ಬಂದಂತಾಯಿತು. ನಿದ್ದೆ ಬಿಟ್ಟರೂ ಪರವಾಗಿಲ್ಲ ಅದನ್ನು ಹುಡುಕಿಯೇ ತೀರಬೇಕೆಂಬ ಹಠಕ್ಕೆ ನಾನೀಗ ಬಿದ್ದಿದ್ದೆ.
ಕಣ್ಣು , ಕಿವಿಯನ್ನೇ ಆಯುಧವನ್ನಾಗಿ ಮಾಡಿಕೊಂಡು ಕೋಣೆಯೊಳಗೆ ನಿಂತು ಸದ್ದಿನ ತೀವ್ರತೆ ಯಾವ ಕಡೆ ಹೆಚ್ಚಾಗಿದೆ? ಎಂದು ನನ್ನ ಕಿವಿಯನ್ನು ಒಂದೊಂದೇ ಕಡೆಗೆ ಕೇಂದ್ರೀಕರಿಸುತ್ತಾ ಬಂದೆ. ಕೋಣೆಗೆ ಹೊಂದಿಕೊಂಡಿದ್ದ ಶೌಚ ಗೃಹ ದೊಳಗಿನಿಂದಲೇ ಸದ್ದು ಸ್ವಲ್ಪ ಜೋರಾಗಿ ಕೇಳುತ್ತಿದ್ದಂತೆ ಅನಿಸಿತು. ಅಲ್ಲಿಗೇ ಮತ್ತೊಮ್ಮೆ ಹೋದೆ. ಒಳಗೆ ಕಾಲಿಟ್ಟ ಕೂಡಲೇ ಸದ್ದು ನಿಂತಿತು. ಅಲ್ಲೇ ಗೋಡೆ ಮೇಲೆ ಉರಿಯುತ್ತಿದ್ದ ಬಲ್ಬಿನ ಮೇಲ್ಬದಿಯಲ್ಲಿ ಕಪ್ಪಾಗಿರುವ ವಸ್ತುವೊಂದನ್ನು ಕಂಡು ಅದೇ ಇರಬಹುದೇನೋ ಎಂದು ಜೋರಾಗಿ ‘ಉಫ್’ ಎಂದು ಊದಿದೆ. ಸತ್ತಿದ್ದ ಜೇಡವೊಂದು ಕೆಳಗೆ ಬಿತ್ತು. ನನ್ನ ನಿರಾಸೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಓ ದೇವರೇ !ಈ ಮಿನಿದೈತ್ಯ ಕೀಟದ ಧ್ವನಿಗೆ ಇಷ್ಟೊಂದು ಶಕ್ತಿಯನ್ನು ಯಾಕಾಗಿ ಕರುಣಿಸಿದೆ? ಎಂದು ನೋವಿನಿಂದ ದೇವರಲ್ಲಿ ಹೇಳಿಕೊಳ್ಳುತ್ತಾ ಅಲ್ಲೇ ಕೆಳಗಡೆಯಿದ್ದ ಬಕೆಟನ್ನು ಸರಿಸಿದೆ.
ಏನಾಶ್ಚರ್ಯ!! ಕಳೆದೊಂದು ಗಂಟೆಯಿಂದ ನನ್ನ ನಿದ್ದೆ, ನೆಮ್ಮದಿ, ಕಿವಿಯ ತಮಟೆ, ಕಣ್ಣ ದೃಷ್ಟಿಯನ್ನೆಲ್ಲಾ ವಶಕ್ಕೆ ತೆಗೆದುಕೊಂಡಿದ್ದ ಕಪ್ಪುಕೀಟವು ಬಕೆಟ್ ಎಳೆದ ರಭಸಕ್ಕೆ ಇದೀಗ ಅರೆಜೀವವಾಗಿ ನನ್ನ ಕಣ್ಣ ಮುಂದೆ ಬಿದ್ದಿತ್ತು. ರಾತ್ರಿಯಾದ್ದರಿಂದ ಯುರೇಕ... ಯುರೇಕ.... ಎಂದು ಮನದಲ್ಲೇ ನಾನು ಕಿರುಚುತ್ತಾ ಮೆಲ್ಲಗೆ ಅದನ್ನು ಎತ್ತಿ ಅಂಗೈ ಮೇಲೆ ಇಟ್ಟೆ. ಒಂದೆರೆಡು ನಿಮಿಷ ಅದರ ಸರ್ವ ಭಾಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. ಅದು ಕೈಗೆ ಸಿಕ್ಕಿದರೆ ಚಚ್ಚಿಹಾಕ್ಬೇಕು ಎಂದು ಗಂಟೆಯಿಂದಲೂ ಕುದಿಯುತ್ತಿದ್ದ ನಾನು ಈಗ ಮಾತ್ರ ‘ಬದುಕಿಕೋ ಹೋಗು’ ಎಂದು ಅದನ್ನು ಕಿಟಕಿಯ ಹೊರಗೆ ಹಾಕಿದೆ. ಎಲ್ಲಾ ಲೈಟ್ಗಳನ್ನು ಕೆಡಿಸಿ ನನ್ನೀ ಸಾಧನೆಯನ್ನು ಗಂಡನಿಗೆ ಹೇಳಲೇಬೇಕೆಂದು ಅವರ ಭುಜ ತಟ್ಟಿ ‘ರೀ ಆ ಕೀಟ ಸಿಕ್ಕಿತು. ಬಾತ್ ರೂಂ ನಲ್ಲಿತ್ತು’ ಎಂದೆ. ಇಪ್ಪತ್ನಾಲ್ಕು ಗಂಟೆಯೂ ವೃತ್ತಿಪ್ರೇಮಿಯಾದ ಅವರು ‘ಫಾರಂ ಫಿಲ್ ಅಪ್ ಮಾಡಿ ಕೊಡಿ’ ಎಂದು ಹೇಳಿ ಮಗ್ಗಲು ಬದಲಿಸಿ ಮಲಗಿದರು.