ಇಬ್ಬರು ಮಹಿಳೆಯರು, ಇಬ್ಬರು ಪೊಲೀಸರು
ಇಶ್ರತ್ ಜಹಾನ್ ಮತ್ತು ಪ್ರಜ್ಞಾ ಠಾಕೂರ್ ವೈದೃಶ್ಯದ ಒಂದು ಅಧ್ಯಯನ
ಭಾಗ-2
ಅದು ನಕಲಿ ಪೊಲೀಸ್ ಎನ್ಕೌಂಟರ್ ಎಂದು ವಿಶೇಷ ತನಿಖಾದಳ ತೀರ್ಮಾನಿಸಿದ ನಂತರ 14 ಮಂದಿ ಗುಜರಾತ್ ಪೊಲೀಸ್ ಅಧಿಕಾರಿಗಳು ಎಸ್ಐಟಿಯ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಪ್ರಕರಣದ ಸಿಬಿಐ ವಿಚಾರಣೆ ನಡೆಯಬೇಕೆಂದು ಹಕ್ಕೊತ್ತಾಯ ಮಂಡಿಸಿದರು. 2011ರ ಡಿಸೆಂಬರ್ನಲ್ಲಿ ಗುಜರಾತ್ ಹೈಕೋರ್ಟ್ ಸಿಬಿಐ ವಿಚಾರಣೆಗೆ ಆಜ್ಞೆ ಮಾಡಿತು.
2013ರಲ್ಲಿ ಹೈಕೋರ್ಟ್ಗೆ ಸಲ್ಲಿಸಲಾದ ಸಿಬಿಐ ವರದಿ ಕೂಡ ತಮಾಂಗ್ ಮತ್ತು ಎಸ್ಐಟಿಯ ತೀರ್ಮಾನಗಳನ್ನು ಬೆಂಬಲಿಸಿತು. ನಾಲ್ಕು ಮಂದಿಯನ್ನು ಬರ್ಬರವಾಗಿ ಕೊಂದು ಅದೊಂದು ‘ಎನ್ಕೌಂಟರ್’ ಎಂದು ಕಾಣುವಂತೆ ಪೊಲೀಸರು ಸನ್ನಿವೇಶವನ್ನು ತಾವೇ ಸೃಷ್ಟಿಸಿದ್ದರು ಎಂದು ಅದು ಕೂಡ ಹೇಳಿತು. ಪುರಾವೆಗಳು ಮತ್ತು ವಿಧಿ ವಿಜ್ಞಾನ ಪುರಾವೆಯಲ್ಲದೆ ಸಾಕ್ಷಿಗಳನ್ನು ಕೂಡ ಅದು ಪರಿಗಣಿಸಿತು. ಅಲ್ಲದೆ, ಆ ಹತ್ಯೆಗಳಿಗೆ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪೂರ್ವಾನುಮತಿ ಪ್ರಾಯಶಃ ಇದ್ದಿರಬಹುದೆಂದು ಕೂಡ ಸಿಬಿಐ ಹೇಳಿತು.
2013-2014ರ ನಡುವೆ ಸಿಬಿಐ ಗುಜರಾತಿನ ಏಳು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ನಾಲ್ಕು ಮಂದಿ ಗುಪ್ತಚರದಳ ಅಧಿಕಾರಿಗಳ ಮೇಲೆ ಅಪಹರಣ, ಕೊಲೆ ಮತ್ತು ಒಳಸಂಚಿನ ಆಪಾದನೆಯನ್ನು ದಾಖಲಿಸಿತು.
ಈ ಹಂತದವರೆಗೆ ಪೊಲೀಸರ ವಿರುದ್ಧ ಹೂಡಲಾದ ಮೊಕದ್ದಮೆಯಲ್ಲಿ ಅಂದಿನ ಕೇಂದ್ರ ಸರಕಾರ ಹೂಡಿದ ಸಂಚು ಎಂಬ ಮಾತಿನ ಉಲ್ಲೇಖವೇ ಇಲ್ಲ ಎಂಬುದು ಗಮನಾರ್ಹ.
ಇಡೀ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಆರಂಭವಾದದ್ದೇ 2014ರಲ್ಲಿ, ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ. ಅದಕ್ಕೆ ಮೊದಲು 2013ರಲ್ಲಿ ವಂಝಾರಾ ಜೈಲಿನಿಂದ ಹಲವಾರು ಪತ್ರಗಳನ್ನು ಬರೆದು ತಾನು ಮೋದಿ ಮತ್ತು ಅವರ ಬಲಗೈಯಂತಿರುವ ಅಮಿತ್ ಶಾರ ಕೃತ್ಯಗಳನ್ನು ಬಯಲು ಮಾಡುವುದಾಗಿ ಹೇಳಿದ್ದರು. ಆ ಪತ್ರಗಳಲ್ಲಿ ಮೋದಿಯವರು ಶಾರನ್ನು ರಕ್ಷಿಸುತ್ತಿದ್ದಾರೆ; ಮತ್ತು ಆ ನಾಲ್ಕು ಹತ್ಯೆಗಳಿಗೆ ಅವರ ನೇರ ಅನುಮತಿ ಇತ್ತು; ಈಗ ಮಾತ್ರ ಆ ಹತ್ಯೆಗಳ ಆರೋಪವನ್ನು ತನ್ನಂತಹ ಪೊಲೀಸ್ ಅಧಿಕಾರಿಗಳ ಮೇಲೆ ಹೊರಿಸಲಾಗುತ್ತಿದೆ ಎಂದು ವಂಝಾರಾ ಹೇಳಿದ್ದರು.
ಪೊಲೀಸ್ ಅಧಿಕಾರಿಗಳು ರಾಜ್ಯ ಸರಕಾರ ನೀಡುವ ಸೂಚನೆಗಳನ್ನಷ್ಟೇ ಪಾಲಿಸುತ್ತಿದ್ದುದರಿಂದ, ಆ ಹತ್ಯೆಗಳಿಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಜೈಲಿನಲ್ಲಿರುವುದಾದರೆ, ಆ ಸೂಚನೆಗಳನ್ನು ನೀಡಿದ್ದ ಮೋದಿ ಮತ್ತು ಅವರ ಸಚಿವರು ಕೂಡ ‘‘ಗಾಂಧಿನಗರದಲ್ಲಿರುವ ಬದಲು, ನವ ಮುಂಬೈಯ ತಲೋಜಾ ಜೈಲಿನಲ್ಲಿ ಅಥವಾ ಅಹ್ಮದಾಬಾದ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಬೇಕಾದದ್ದು ನ್ಯಾಯ’’ ಎಂದು ವಂಝಾರಾ ಬರೆದಿದ್ದರು.
ಅಮಿತ್ ಶಾ ವಿರುದ್ಧ ವಿಚಾರಣೆ ಮುಂದುವರಿಸಲು ಸಾಕಷ್ಟು ಸಾಕ್ಷಾಧಾರಗಳಿಲ್ಲವೆಂದು 2014ರ ಮೇ ತಿಂಗಳಲ್ಲಿ ಸಿಬಿಐ ನ್ಯಾಯಾಲಯಕ್ಕೆ ಹೇಳಿತು. ಬಳಿಕ ಆಪಾದಿತ ಪೊಲೀಸ್ ಅಧಿಕಾರಿಗಳಿಗೆ ಜಾಮೀನು ದೊರಕಿತು.
ಇಶ್ರತ್ ಜಹಾನ್ ಓರ್ವ ಭಯೋತ್ಪಾದಕಿಯೇ?
ಗುಜರಾತ್ ಪೊಲೀಸರನ್ನು ರಕ್ಷಿಸಲು ಹಲವರು ನೀಡಿದ ಒಂದು ನೆಪ ಏನೆಂದರೆ ಇಶ್ರತ್ ಮತ್ತು ಆಕೆಯ ಸಹವರ್ತಿಗಳು ಲಷ್ಕರ್ ಭಯೋತ್ಪಾದಕರು; ಅಲ್ಲದೆ ಇಶ್ರತ್ ಓರ್ವ ಭಯೋತ್ಪಾದಕಿಯಾಗಲು ಬೇಕಾದ ತರಬೇತಿ ಪಡೆದಿದ್ದಳು ಎಂಬುದು.
ಇದಕ್ಕೆ ಸರಳ ಉತ್ತರ: ಇಶ್ರತ್ ಜಹಾನ್ ಈಗ ಬದುಕಿಲ್ಲ, ಆಕೆ ಭಯೋತ್ಪಾದಕಿ ಎಂಬ ವಿಚಾರಣೆ ನಡೆಯುತ್ತಿಲ್ಲ.
ನೆನಪಿರಲಿ: ಪ್ರಜ್ಞಾಸಿಂಗ್ ಠಾಕೂರ್ ಮೇಲೆ ಭಯೋತ್ಪಾದನೆಯ ಆರೋಪ ಇದೆ. ಆದರೂ ಆಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಜಹಾನ್ಗೆ ಎಂದೂ ನ್ಯಾಯಾಲಯದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ದೊರಕಿರಲಿಲ್ಲ. 19ರ ಹರೆಯದ ಹೆಣ್ಣು ಮಗಳೊಬ್ಬಳನ್ನು ನಿರ್ದಯವಾಗಿ ಕೊಂದು, ಬಳಿಕ ಆಕೆಗೆ ಭಯೋತ್ಪಾದಕಿ ಎಂಬ ಹಣೆಪಟ್ಟಿ ಅಂಟಿಸಲು ಪೊಲೀಸರಿಗೆ ಅದು ಹೇಗೆ ಅವಕಾಶ, ಅನುಮತಿ ನೀಡಲು ಸಾಧ್ಯ?
ಅಲ್ಲಿಗೆ ಜಹಾನ್ ತನ್ನ ಉದ್ಯೋಗದಾತ ಜಾವೇದ ಶೇಖ್ನನ್ನು ಭೇಟಿಯಾದ 45 ದಿನಗಳ ಬಳಿಕ ಆಕೆ ಮತ್ತು ಆತನನ್ನು ಪೊಲೀಸರು ಕೊಂದಿದ್ದರು. ಆ 45 ದಿನಗಳಲ್ಲಿ 35 ದಿನಗಳ ಕಾಲ ಆಕೆ ಮುಂಬ್ರಾದಲ್ಲಿ ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳೆಂಬುದ್ದಕ್ಕೆ ದಾಖಲೆ ಇದೆ. ಹಾಗಾದರೆ, ಆಕೆ ಕೇವಲ ಹತ್ತು ದಿನಗಳ ಕಾಲ ಮನೆಯಿಂದ ದೂರವಿದ್ದಲ್ಲಿ, ಅವಳನ್ನು ‘ಓರ್ವ ಆತ್ಮಾಹುತಿ ಬಾಂಬರ್’ ಆಗಿ ತರಬೇತಿಗೊಳಿಸಿರುವುದು ಅದು ಹೇಗೆ ಸಾಧ್ಯ?
ಹೀರೋ ಆಗಿ ಗೋಡ್ಸೆ
‘‘ಯಾವನೇ ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಇಷ್ಟರವರೆಗೆ ಆಗಿಯೂ ಇಲ್ಲ’’ ಎಂದು ಮೋದಿ ತನ್ನ ವಾರ್ಧಾ ಭಾಷಣದಲ್ಲಿ ಘೋಷಿಸಿದರು ಮತ್ತು ಹಿಂದೂಗಳ ವಿರುದ್ಧ ಭಯೋತ್ಪಾದನೆಯ ಆಪಾದನೆಗಳನ್ನು ಹೊರಿಸಿ ಅವಮಾನಿಸಿದ್ದಕ್ಕಾಗಿ ಹಿಂದೂಗಳು ಕಾಂಗ್ರೆಸ್ ಮತ್ತು ಯುಪಿಎಯನ್ನು ಶಿಕ್ಷಿಸಬೇಕು (ಅವುಗಳಿಗೆ ಮತ ನೀಡಬಾರದು) ಎಂದು ಅವರು ಹೇಳಿದರು.
ಆಪಾದಿತರ ಧರ್ಮವನ್ನಾಧರಿಸಿ ವ್ಯಕ್ತಿಗಳ ನಡುವೆ ಕಾನೂನು ತಾರತಮ್ಯ ಮಾಡಬಾರದು ಎನ್ನುವ ಸಂವಿಧಾನಕ್ಕೆ ಮೋದಿಯವರು ಮಾಡಿದ ಅತ್ಯಂತ ನೇರವಾದ ಅವಮಾನ ಇದು.
ಒಬ್ಬ ಹಿಂದೂವಿನ ಮೇಲೆ ಭಯೋತ್ಪಾದನೆ (ಅಥವಾ ದೊಂಬಿ, ಅತ್ಯಾಚಾರ ಅಥವಾ ಯಾವುದೇ ರೀತಿಯ ಹಿಂಸೆಯ) ಆಪಾದನೆ ಹೊರಿಸುವುದು ಹಿಂದೂ ನಾಗರಿಕತೆಗೆ ಮಾಡುವ ಅವಮಾನ ಎಂಬುದು ಮೋದಿಯವರ ವಾರ್ಧಾ ಭಾಷಣದ ಇಂಗಿತ, ಓಳ ಅರ್ಥವಾಗುತ್ತದೆ. ಹೀಗಿರುವಾಗ ಮೋದಿಯವರ ಅನುಯಾಯಿಗಳು ಗಾಂಧೀಜಿಯ ಹಂತಕ ಗೋಡ್ಸೆಯನ್ನು ಓರ್ವ ಹೀರೋ ಎಂದು ಆತ ಒಬ್ಬ ಭಯೋತ್ಪಾದಕನಲ್ಲವೆಂದು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಕೇಸರಿ ಭಯೋತ್ಪಾದನೆಯ ವಿಚಾರಣೆಗಳನ್ನು ಹಾದಿ ತಪ್ಪಿಸಲು ಪ್ರಯತ್ನ ನಡೆದಿರುವಂತೆ ಕಾಣುತ್ತದೆ.
2015ರ ಜೂನ್ನಲ್ಲಿ, ಮಾಲೇಗಾಂವ್ ಸ್ಫೋಟಗಳ ಪ್ರಕರಣದ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲ್ಯಾನ್, ಪ್ರಕರಣದ ಆರೋಪಿಗಳ ವಿರುದ್ಧ ಮೃದುಧೋರಣೆ ತಳೆಯಲು ತನ್ನ ಮೇಲೆ ರಾಷ್ಟ್ರೀಯ ವಿಚಾರಣಾ ಸಂಸ್ಥೆ (ಎನ್ಐಎ) ಒತ್ತಡ ತಂದಿತ್ತು ಎಂದು ಹೇಳಿದರು. ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ತಂಡದ ವಿಷಯದಲ್ಲೂ ಬಿಜೆಪಿಯ ತಾರತಮ್ಯ ನೀತಿ, ದ್ವಿಮುಖ ಮಾನದಂಡ ಸ್ಪಷ್ಟವಾಗಿ ಕಾಣಿಸುತ್ತದೆ. ಕರ್ಕರೆಯವರ ನೇತೃತ್ವದ ತಂಡವು ತನ್ನ ಮೇಲೆ ಸುಳ್ಳು ಆಪಾದನೆ ಹೊರಿಸುವ ‘ಪಾಪ’ ಮಾಡಿತೆಂದು ಠಾಕೂರ್ ಹೇಳಿದರು. ಆದರೆ ಹಾಲಿ ಬಿಜೆಪಿ ಸರಕಾರದ ಭಯೋತ್ಪಾದನಾ ವಿರೋಧಿ ತಂಡವೇ ಭಯೋತ್ಪಾದನೆಯ ಆರೋಪದಲ್ಲಿ ಹಲವು ಮಂದಿ ಕೇಸರಿ ಕಾರ್ಯಕರ್ತರನ್ನು ಬಂಧಿಸಿದೆ...
ಜಹಾನ್ಳ ಪ್ರಕರಣದಲ್ಲಿ ನ್ಯಾಯ ದೊರಕಬೇಕಾಗಿದೆ.
ಕೃಪೆ: scroll.in