ಮೊಬೈಲ್ ಟವರ್ ಹಾವಳಿಗೆ ತಡೆ?
ಮಾನ್ಯರೇ,
ಈಗ ಮೊಬೈಲ್ ಯುಗ. ಮೊಬೈಲ್ ಫೋನ್‌ಗಳಲ್ಲಿ ಹೊಸ ಹೊಸ ತಾಂತ್ರಿಕತೆಯ ಅಳವಡಿಕೆಯಿಂದಾಗಿ ಜನಸಾಮಾನ್ಯರ ಕೈಗಳಲ್ಲೂ ಇಂದು ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತಿವೆ. ಹಾಗಾಗಿ ಮೊಬೈಲ್ ಟವರ್‌ಗಳೂ ಎಲ್ಲೆಡೆ ಸರ್ವೇಸಾಮಾನ್ಯವಾಗುತ್ತಿದೆ. ಕೆಲವೊಂದು ಕಡೆ ಶಾಲೆ, ಆಸ್ಪತ್ರೆ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳ ಸಮೀಪವೂ ಈಗ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಈ ಮೊಬೈಲ್ ಟವರ್ ಹಾವಳಿಯ ವಿರುದ್ಧ ರಾಜ್ಯಾದ್ಯಂತ ವ್ಯಾಪಕವಾಗಿ ದೂರುಗಳು ಬರುತ್ತಿದ್ದರೂ ಇದುವರೆಗೆ ಇವುಗಳಿಗೆ ನಿಯಂತ್ರಣವಿರಲಿಲ್ಲ. ಇದೀಗ ಕೊನೆಗೂ ರಾಜ್ಯ ಸರಕಾರ ಬೇಕಾಬಿಟ್ಟಿ ಟವರ್‌ಗಳ ಸ್ಥಾಪನೆಯ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವುದು ಸ್ವಾಗತಾರ್ಹ. ಜನನಿಬಿಡ ಪ್ರದೇಶದಲ್ಲಿ, ಶಾಲೆ, ಆಸ್ಪತ್ರೆ ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದು ಎಷ್ಟು ಸರಿ.? ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಒಂದು ವೇಳೆ ಅಂತಹ ಅನಿವಾರ್ಯ ಇದ್ದರೆ ಇಂತಹ ಸ್ಥಳಗಳಿಂದ ಇಂತಿಷ್ಟು ದೂರದಲ್ಲಿ ಟವರ್ ಸ್ಥಾಪಿಸಬೇಕು ಎಂಬ ಮಿತಿಯನ್ನು ವಿಧಿಸಿದ್ದು ಸರಿಯಾಗಿದೆ. ಹಾಗೆಯೇ ಕೆಲವೊಂದು ಕಡೆ ಪಾರಂಪರಿಕ ತಾಣಗಳ ಸಮೀಪದಲ್ಲಿ ಕೂಡಾ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ ಎಂಬ ದೂರು ಕೂಡಾ ಕೇಳಿ ಬಂದಿದೆ. ಈ ಕುರಿತು ಕೂಡಾ ರಾಜ್ಯ ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ ಕೊಡುವ ವೇಳೆ ನಿಯಮ ಉಲ್ಲಂಘನೆ ನಡೆದಿದ್ದರೆ, ಇದರ ಕುರಿತು ತನಿಖೆ ನಡೆಸಬೇಕಾದ ಅಗತ್ಯವಿದೆ.