ಮಹಿಳಾ ಸಾಹಿತ್ಯೋತ್ಸವದಲ್ಲಿ ಮುಸ್ಲಿಂ ಮಹಿಳೆಯರ ಕಡೆಗಣನೆಯೇಕೆ?
ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ) ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಾಹಿತ್ಯ ಸಂಘಗಳಲ್ಲೊಂದು. ಸುಮಾರು ಮೂವತ್ತು ವರ್ಷಗಳ ಹಿಂದೆ ಹುಟ್ಟಿಕೊಂಡ ಜಿಲ್ಲೆಯ ಸದ್ರಿ ಸಂಸ್ಥೆಯು ಹಲವಾರು ಲೇಖಕಿಯರಿಗೆ ಅವಕಾಶಗಳನ್ನು ನೀಡಿ ಅವರನ್ನು ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿಯನ್ನೂ ಹೊಂದಿದೆ. ಜಿಲ್ಲೆಯಲ್ಲಿ ಬಲಪಂಥೀಯ ರಾಜಕೀಯದ ಬಿರುಗಾಳಿ ಬಲವಾಗಿ ಬೀಸತೊಡಗಿದ ಬಳಿಕ ಕರಾವಳಿ ಲೇಖಕಿಯರ-ವಾಚಕಿಯರ ಸಂಘವೂ ಅತ್ತ ಕಡೆಗೆ ವಾಲಿದೆಯೋ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ಸಂಸ್ಥೆಯು ಇದೇ ರವಿವಾರ (09-06-2019) ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ "ಮಹಿಳಾ ಸಾಹಿತ್ಯೋತ್ಸವ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೇಸರದ ಸಂಗತಿಯೇನೆಂದರೆ ಸದ್ರಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಕಡೆಗಣನೆ ಕಣ್ಣಿಗೆ ರಾಚುವಂತಿದೆ. ಜೊತೆಗೆ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವನ್ನೂ ಹೆಚ್ಚು ಕಡಿಮೆ ಕಡೆಗಣಿಸಲಾಗಿದೆ. (ಪತ್ರಿಕಾ ವಿತರಕಿ ಐರೀನ್ ಮೆಂಡೋನ್ಸಾ ಎಂಬವರಿಗೆ ಮಾಡಲಾಗುವ ಒಂದು ಸನ್ಮಾನದ ಹೊರತಾಗಿ)
ಹೀಗ್ಯಾಕೆ ...?
ಬೇಸರದ ಸಂಗತಿಯೇನೆಂದರೆ ಸದ್ರಿ ಸಂಸ್ಥೆಯ ಸ್ಥಾಪಕ ಸದಸ್ಯೆಯರಲ್ಲಿ ಡಾ.ಸಾರಾ ಅಬೂಬಕರ್ ಕೂಡಾ ಓರ್ವರು. ಅವರಲ್ಲದೇ ಪ್ರಖರ ಪ್ರಗತಿಪರ ಚಿಂತಕಿಯೂ ಪ್ರಸ್ತುತ ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿರುವ ಪ್ರೊ.ಸಬೀಹಾ ಭೂಮಿಗೌಡ ಕೂಡಾ ಎರಡು ಅವಧಿಗೆ ಸದ್ರಿ ಸಂಘದ ಅಧ್ಯಕ್ಷೆಯಾಗಿ ಸಂಸ್ಥೆಯ ಏಳಿಗೆಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ ಪ್ರೊ.ಚಂದ್ರಕಲಾ ನಂದಾವರ, ಜ್ಯೋತಿ ಚೇಳ್ಯಾರು, ಗುಲಾಬಿ ಬಿಲಿಮಳೆ, ಬಿ.ಎಂ.ರೋಹಿಣಿಯವರಂತಹ ಪ್ರಗತಿಪರ ಲೇಖಕಿಯರೂ ಸದಸ್ಯರಾಗಿದ್ದಾರೆ. ಅದಾಗ್ಯೂ ಯಾಕೆ ಅಲ್ಪಸಂಖ್ಯಾತ ಸಮುದಾಯವನ್ನು ಬದಿಗೆ ಸರಿಸಲಾಗಿದೆ ಎಂಬುವುದಂತೂ ಯಕ್ಷ ಪ್ರಶ್ನೆ.
ಮುಸ್ಲಿಂ ಸಮುದಾಯದಲ್ಲಿ ಪ್ರಸ್ತುತ ಲೇಖಕಿಯರಿಗೋ, ಕವಯತ್ರಿಯರಿಗೋ ಕೊರತೆಯೇನಿಲ್ಲ. ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಧಾರಾಳ ಲೇಖಕಿಯರಿದ್ದಾರೆ. ಮೂರು ವಿಚಾರಗೋಷ್ಠಿಗಳು, ಒಂದು ಕವಿಗೋಷ್ಠಿಗಳಲ್ಲದೇ ಮತ್ತಿತರ ಕಾರ್ಯಕ್ರಮಗಳೂ ಮಹಿಳಾ ಸಾಹಿತ್ಯೋತ್ಸವದಲ್ಲಿದೆ. ಆದರೆ ಯಾವುದರಲ್ಲೂ ಮುಸ್ಲಿಂ ಮಹಿಳೆಯರಿಗೆ ಅವಕಾಶವೇ ಇಲ್ಲ. ಒಂದೆಡೆ ಮುಸ್ಲಿಮರು ಮಹಿಳೆಯರನ್ನು ಮುಖ್ಯವಾಹಿನಿಯಿಂದ ಹೊರಗಿಡುತ್ತಿದ್ದಾರೆ ಎಂಬ ವೃಥಾ ಆರೋಪವನ್ನು ಮುಸ್ಲಿಂ ಸಮುದಾಯದ ಮೇಲೆ ಮಾಡಲಾಗುತ್ತಿದೆ. ಇನ್ನೊಂದೆಡೆ ಸ್ತ್ರೀವಾದಿಗಳೆಂದೇ ಕರೆಸಿಕೊಳ್ಳತ್ತಿರುವವರು ಈ ರೀತಿ ಮುಸ್ಲಿಂ ಮಹಿಳೆಯರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ವಿಷಯ ಬಂದಾಗ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಧ್ವನಿಯೆತ್ತುವವರು, ಮುಸ್ಲಿಂ ಪುರುಷರು ಬುರ್ಖಾ ಹಾಕಿಸಿ ಮಹಿಳೆಯರನ್ನು ಮುಖ್ಯವಾಹಿನಿಯಿಂದ ಹೊರಗಿಡುತ್ತಿದ್ದಾರೆ ಎನ್ನುವವರೆಲ್ಲಾ ಈ ವಿಚಾರದಲ್ಲಿ ಮಾತ್ರ ದಿವ್ಯ ಮೌನ ತಾಳಿರುವುದು ವಿಷಾದನೀಯ.
ಪ್ರಸ್ತುತ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯರ ಸಾಹಿತ್ಯಿಕ ಪ್ರತಿಭೆಗೆ ವೇದಿಕೆ ಒದಗಿಸುತ್ತಿರುವ ಎರಡೂ ಸಂಸ್ಥೆಗಳೂ ಮುಸ್ಲಿಮರದ್ದೇ ಅಥವಾ ಮುಸ್ಲಿಮರಿಗಾಗಿ ಮಾತ್ರ ಇರುವಂತಹದ್ದು. ಮುಸ್ಲಿಂ ಲೇಖಕರ ಸಂಘ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾತ್ರ. ಇವುಗಳಲ್ಲಿ ಮುಸ್ಲಿಮರು ಮಾತ್ರ ಇರುವುದರಿಂದ ಇವುಗಳಲ್ಲಿ ಸಿಕ್ಕ ಅವಕಾಶವು ಮುಸ್ಲಿಂ ಮಹಿಳೆಯರಿಗೆ ತಮ್ಮ ಸಾಹಿತ್ಯಿಕ ಪ್ರತಿಭೆಯನ್ನು ಮುಸ್ಲಿಂ ಸಮುದಾಯದಾಚೆಗೆ ಕೊಂಡೊಯ್ಯಲು ಹೇಗೆ ತಾನೆ ಸಾಧ್ಯ..?
ಸಂಘವು ಯಾರದೇ ಕಿಸೆಯಿಂದ ದುಡ್ಡು ಹಾಕಿಸಿ ಮಹಿಳಾ ಸಾಹಿತ್ಯೋತ್ಸವ ಮಾಡುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಘಕ್ಕೆ ವಾರ್ಷಿಕ ಐದು ಲಕ್ಷ ರೂಪಾಯಿ ಅನುದಾನವನ್ನೂ ನೀಡುತ್ತಿದೆ. ಹೀಗಿರುವುದರಿಂದ ಮುಸ್ಲಿಂ ಮಹಿಳೆಯರ ಕಡೆಗಣನೆಯನ್ನು ಸಂಸ್ಥೆಯ ತೀರ್ಮಾನ ಎಂದು ಸುಮ್ಮನಿರಲಾಗದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಂತೂ ಮುಸ್ಲಿಮರನ್ನು ತನ್ನ ಕಾರ್ಯಕ್ರಮಗಳಿಂದ ಹೆಚ್ಚು ಕಡಿಮೆ ಹೊರಗಿಡುತ್ತಿದೆ. ಇಂತಹ ವಿಭಜನಕಾರಿ ನೀತಿಯನ್ನು ಯಾವ ಕಾರಣಕ್ಕೂ ಅಪ್ರಜ್ಞಾಪೂರ್ವಕ ಎನ್ನಲಾಗದು. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ. ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಮೇಲೆ ಈ ಕುರಿತಾಗಿ ಗಂಭೀರ ಜವಾಬ್ದಾರಿಯಿದೆ ಎನ್ನುವುದನ್ನು ಈ ಮೂಲಕ ನೆನಪಿಸಬಯಸುತ್ತೇನೆ.