ಕೆದ್ದಳಿಕೆಯಲ್ಲಿ ಹೀಗೊಂದು ಮಾದರಿ ಶಾಲಾ ಕೈ ತೋಟ!
ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಪ್ರಗತಿಪರ ಕೃಷಿಕರು
ಶಾಲೆಯಲ್ಲಿ ಬೆಳೆದ ಸೌತೆಕಾಯಿಯೊಂದಿಗೆ ಶಿಕ್ಷಕರು
ಶಿಕ್ಷಕ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯು ಹಣ್ಣಿನ ತೋಟದ ನಿರ್ಮಾಣದ ಹಿಂದಿರುವ ಶಕ್ತಿಗಳು. ಶಾಲೆ ಆರಂಭಕ್ಕೆ ಮೊದಲು ಮತ್ತು ರಜಾ ದಿನಗಳಲ್ಲೂ ಶಿಕ್ಷಕರು ಬಂದು ತೋಟದ ಪೋಷಣೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ಮಕ್ಕಳ ಪೋಷಕರು ಗಿಡ ನೆಡುವಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಮ್ಮ ಮಕ್ಕಳ ಹೆಸರಿನಲ್ಲಿ ನೆಡಲಾದ ಗಿಡಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
-ಉಮಾ ಡಿ.ಗೌಡ, ಮುಖ್ಯಶಿಕ್ಷಕಿ
ಬಂಟ್ವಾಳ, ಜೂ. 8: ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಪ್ರಗತಿಪರ ಕೃಷಿಕರಂತೆ ಕಾಣುತ್ತಾರೆ. ಶಾಲೆಯಲ್ಲಿ ಓದು, ಪಾಠಗಳಲ್ಲಿ ತೊಡಗಿಕೊಂಡರೂ ಶಾಲೆಯ ಹಸಿರು ನೋಟದ ತೋಟ ಅವರನ್ನು ಕೈ ಬೀಸಿ ಕರೆಯುತ್ತದೆ. ಅಲ್ಲಿ ತಾವೇ ನೆಟ್ಟ ಗಿಡದಲ್ಲಿ ತರಕಾರಿ, ಹಣ್ಣುಗಳು ಹೇಗೆ ಬೆಳೆಯುತ್ತದೆ ಎನ್ನುವ ಕುತೂಹಲ ಶಾಲೆಯ ಪುಟ್ಟ ಮಕ್ಕಳದ್ದು. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾತ್ರವಲ್ಲ. ತಾವೇ ಬೆಳೆದ ತರಕಾರಿ ಊಟವೂ ಅವರ ಹೊಟ್ಟೆಯನ್ನು ತಂಪಾಗಿಸುತ್ತಿದ್ದು, ಮಕ್ಕಳಿಗೆ ವಾರವಿಡೀ ಸಾವಯವದೂಟ ಸವಿಯುವ ಭಾಗ್ಯ ಒದಗಿದೆ.
ಪರಿಸರ ಸಂರಕ್ಷಣೆ ಜೊತೆಗೆ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಹಾಗೂ ಸ್ವಾವಲಂಬನೆ, ಶ್ರಮದ ಗೌರವ ಇವುಗಳನ್ನು ತಿಳಿಸಿಕೊಡುವಲ್ಲಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈ ತೋಟದ ಮೂಲಕ ಯಶಸ್ವಿಯಾಗಿದೆ. ಶಾಲೆಯ ಸುತ್ತಮುತ್ತ ಬೆಳೆಯಲಾಗಿರುವ ಹೂತೋಟ, ತರಕಾರಿ ತೋಟ, ಹಣ್ಣಿನ ತೋಟ, ಕಂಗು, ಬಾಳೆ, ತೆಂಗಿನ ನೋಟ ಎಂತವರನ್ನೂ ಬೆರಗುಗೊಳಿಸುತ್ತದೆ.
ಹಚ್ಚ ಹಸುರಾದ ಸುಂದರ ಕೈ ತೋಟ: ಇಲ್ಲಿನ ಮುಖ್ಯ ಶಿಕ್ಷಕರಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರ ಪ್ರಯತ್ನದಿಂದ ಕೆದ್ದಳಿಕೆ ಶಾಲೆ ಹಲವು ವಿನೂತನ ಪ್ರಯೋಗಗಳಿಗೆ ಹೆಸರಾಗಿದೆ. ಶಾಲೆ ಹಾಗೂ ಶಾಲೆಯ ಸುತ್ತಮುತ್ತ ಕಂಡುಬರುವ ನೋಟವೇ ಈ ಶಾಲೆಯ ಹಿರಿಮೆಗೆ ಸಾಕ್ಷಿಯಂತಿದೆ. ಈ ಊರ ಗ್ರಾಮಸ್ಥರು, ಇಲ್ಲಿನ ಶಿಕ್ಷಕರು ಈ ಸರಕಾರಿ ಶಾಲೆಯನ್ನು ಮನೆಗಿಂತಲೂ ಹೆಚ್ಚು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದು, ಇಲ್ಲಿನ ಶಿಕ್ಷಕರ ಪ್ರೋತ್ಸಾಹ, ಶ್ರಮ, ಊರಿನವರ ಸಹಕಾರ, ಮಕ್ಕಳ ಉತ್ಸಾಹದಿಂದ ಬೆಳೆದು ನಿಂತ ಹಚ್ಚ ಹಸುರಾದ ಸುಂದರ ಕೈ ತೋಟ ಶಿಕ್ಷಣಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.
ಮಾದರಿ ಶಾಲೆಯ ಮೋಹಕ ತೋಟ: ಶಾಲೆಯ ಒಟ್ಟು ಒಂದೂವರೆ ಎಕ್ರೆ ಜಮೀನಿನಲ್ಲಿ ಸುಮಾರು ಅರ್ಧ ಎಕ್ರೆಯಷ್ಟು ಜಮೀನನ್ನು ತರಕಾರಿ ತೋಟ, ಹಣ್ಣಿನ ತೋಟಕ್ಕೆ ಮೀಸಲಿಟ್ಟಿರುವುದು ಇಲ್ಲಿನ ವಿಶೇಷ. ಊರಿನವರ ಸಹಕಾರದೊಂದಿಗೆ ಶಿಕ್ಷಕರು, ಪುಟಾಣಿ ಮಕ್ಕಳು ಸೇರಿಕೊಂಡು ತೊಂಡೆಕಾಯಿ, ಬಸಳೆ, ಸೋರೆಕಾಯಿ, ಹರಿವೆ ಸೊಪ್ಪು, ಸುವರ್ಣಗೆಡ್ಡೆ, ಪಪ್ಪಾಯಿ, ಬದನೆ ಗಿಡ, ಅಳಸಂಡೆ ಬೆಳೆಯಲಾಗುತ್ತಿದ್ದು, ತೊಂಡೆಕಾಯಿ ಹಾಗೂ ಅಳಸಂಡೆಯ ಚಪ್ಪರ ಗಮನಸೆಳೆಯುತ್ತಿದೆ. ವಾರಕ್ಕೆ ಒಂದೆರಡು ಬಾರಿ ಅಳಸಂಡೆ ಕೀಳಲಾಗುತ್ತಿದೆ. ಸುಮಾರು 30 ಕೆ.ಜಿ.ಯಷ್ಟು ಅಳಸಂಡೆ ಲಭ್ಯವಾಗುತ್ತಿದ್ದು, ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಸಾಂಬಾರಿಗೆ ಅಳಸಂಡೆಯನ್ನು ಬಳಸಲಾಗುತ್ತಿದೆ. ಇನ್ನೊಂದು ಚಪ್ಪರದಲ್ಲಿ ಬೆಳೆದಿರುವ ಬಸಳೆಯನ್ನು ಕೂಡ ವಾರಕ್ಕೊಮ್ಮೆ ಕತ್ತರಿಸಿ ಸಾಂಬಾರು ಮಾಡಲಾಗುತ್ತದೆ. ಹೀಗೆ ಇಲ್ಲಿನ ಮಕ್ಕಳಿಗೆ ವಾರವಿಡೀ ಸಾವಯವದೂಟ ಸವಿಯುವ ಭಾಗ್ಯ ಲಭಿಸಿದೆ.
ಹಣ್ಣಿನ ತೋಟ: ಕೇವಲ ತರಕಾರಿಯ ತೋಟ ಮಾತ್ರವಲ್ಲದೆ, ಅಪರೂಪದ ಅಂಜೂರ, ಲಕ್ಷ್ಮಣ ಫಲ, ಸೀತಾಫಲ, ಲಿಂಬೆ, ಮಾವು, ಜಂಬು ನೆರಳೆ, ಅನಾನಸು, ಪಪ್ಪಾಯಿ, ದಾಳಿಂಬೆ, ರಂಬುಟನ್ ಸೇರಿದಂತೆ 28 ಜಾತಿಯ ಗಿಡಗಳನ್ನು ಶಾಲೆಯ ಸುತ್ತಮುತ್ತ ವ್ಯವಸ್ಥಿತವಾಗಿ ನೆಡಲಾಗಿದೆ. 2014-15ನೇ ಸಾಲಿನಲ್ಲಿ ವಿಶೇಷ ಯೋಜನೆಯ ನಿರ್ಮಿಸಲಾಗಿರುವ ಹಣ್ಣುಗಳ ತೋಟ ಮಕ್ಕಳಲ್ಲಿ ಹಸಿರು ಪ್ರೀತಿ, ಗಿಡಗಳ ಪಾಲನೆ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಹಣ್ಣುಗಳ ತೋಟದ ಪರಿಕಲ್ಪನೆಯ ಮಗುವಿಗೊಂದು ಗಿಡ-ಮನೆಗೊಂದು ಮರ ಶೀರ್ಷಿಕೆಯಂತೆ ಶಾಲೆಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಲಾಗಿದ್ದು, ಅದೀಗ ಫಲಕೊಡುವ ಹಂತಕ್ಕೆ ಬೆಳೆಯುತ್ತಿದೆ.
ಸಮುದಾಯದ ಸಹಭಾಗಿತ್ವ: ಶಾಲೆಯ ಚಟುವಟಿಕೆಗಳಲ್ಲಿ ಹೆತ್ತವರನ್ನೂ ಸೇರಿಸಿಕೊಳ್ಳುವ ಸಮುದಾಯಾಭಿವೃದ್ಧಿಯ ವಿಶೇಷ ಕಲ್ಪನೆಯಂತೆ ಈ ಶಾಲೆಯ ಪ್ರತೀ ಆಗುಹೋಗುಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರ ಭಾಗವಹಿಸುವಿಕೆ ಇದೆ. ಮಗುವಿನ ಹೆಸರಿನಲ್ಲಿರುವ ಗಿಡವನ್ನು ಹೆತ್ತವರು-ಮಗು ಸೇರಿ ಗುಂಡಿ ತೋಡಿ, ಮನೆಯಿಂದ ತಂದ ಗೊಬ್ಬರ ಹಾಕಿ ನೆಟ್ಟಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೂ ಮಕ್ಕಳ ಪೋಷಕರ ಜೊತೆಗೆ ತೋಟ ರಚನೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ನೆಟ್ಟಿರುವ ಪ್ರತೀ ಹಣ್ಣಿನ ಗಿಡಗಳಿಗೆ ಮಕ್ಕಳ, ಗಿಡಗಳ ಹೆಸರಿನ ನಾಮಫಲಕ ಅಳವಡಿಸಲಾಗಿದೆ.
ಸ್ವಚ್ಛತೆಗಾಗಿ ಜಿಲ್ಲಾ ಪ್ರಶಸ್ತಿ: ಸ್ವಚ್ಛತೆಗಾಗಿ ಜಿಲ್ಲಾ ಪ್ರಶಸ್ತಿ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳು, ಮೆಟ್ರಿಕ್ ಮೇಳ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದ ನಲಿಕಲಿ ಉತ್ಸವ, ಸಿರಿದೊಂಪ ಚಪ್ಪರದ ಆಕರ್ಷಣೆ, ಹಚ್ಚ ಹಸಿರಿನ ವರ್ಣ ವೈವಿಧ್ಯದ ಟೋಪೊಗ್ರಾಫಿ, ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಮಕ್ಕಳ ದಿಬ್ಬಣ, ಶಾಲೆಗಾಗಿ ಹೊರೆಕಾಣಿಕೆ ಮೆರವಣಿಗೆ, ಮಕ್ಕಳ ಸಾಹಿತ್ಯ ಸಮ್ಮೇಳನ, ಮುಖ್ಯ ಶಿಕ್ಷಕರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸ್ವಚ್ಛತೆಗೆ ಪ್ರಶಸ್ತಿ, ಮಕ್ಕಳ ಜಾಗೃತಿ ನಾಟಕ ಮೊದಲಾದವುಗಳು ಕೆದ್ದಳಿಕೆ ಶಾಲೆಯ ಸಾಧನೆಯ ಹಾದಿಯಲ್ಲಿನ ಕೆಲವು ಹೆಜ್ಜೆಗಳು.