ಮೊಳಕೆಯಲ್ಲೇ ಇರುವ ಕಾಳುಗಳು
ಈ ಹೊತ್ತಿನ ಹೊತ್ತಿಗೆ
‘ಮೊಳಕೆ ಕಾಳು’ ಗೌಡಗೆರೆ ಮಾಯುಶ್ರೀ ಅವರು ಬರೆದಿರುವ ಚಿಂತನ ಬರಹಗಳ ಸಂಕಲನ. ಲೇಖಕರ ಮೊದಲ ಲೇಖನಗಳ ಸಂಕಲನ ಇದು. ಕೃತಿಯ ಹೆಸರೇ ಇಲ್ಲಿರುವ ಲೇಖನಗಳ ನೆಲಮೂಲ ಸಂಬಂಧವನ್ನು ಹೇಳುತ್ತದೆ. ಭಾಷಾಚಳವಳಿ, ದಲಿತ ಚಳವಳಿ, ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡು ಬಂದಿರುವ ಗೌಡಗೆರೆ ಅವರ ಬರಹಗಳು ಆ ಚಳವಳಿಯ ಕಾವಿನಿಂದಲೇ ಮೊಳಕೆ ಹೊಡೆದಿರುವುದು.
ಇಲ್ಲಿ ಒಟ್ಟು 43 ಲೇಖನಗಳು ಇವೆ. ಎರಡು ದಶಕಗಳ ಕಾಲಮಾನದಲ್ಲಿ ಆಯಾ ಸಂದರ್ಭಕ್ಕೆ, ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ವಿಶ್ಲೇಷಣೆ ರೂಪದಲ್ಲಿ ರಚನೆಗೊಂಡ ಬರಹಗಳು. ಪತ್ರಿಕೆಗಳಲ್ಲಿ ಪ್ರಕಟಗೊಂಡ ಬರಹಗಳು ಇದಾಗಿರುವುದರಿಂದ ಸಹಜವಾಗಿಯೇ ಪುಟಗಳ ಮಿತಿ ಇದೆ. ಖಾಸಗಿ ಶಾಲೆಗಳ ಹಣದ ಮೋಹ, ಕೋಮುಗಲಭೆಗಳ ಹುಚ್ಚಾಟ-ಅದರ ದುಷ್ಪರಿಣಾಮ, ಕನ್ನಡ ಶಾಸ್ತ್ರೀಯ ಭಾಷೆಯಾದ ಕುರಿತ ಹೆಮ್ಮೆ, ಹೊಗೆನೇಕಲ್ ವಿವಾದದ ಹಿನ್ನೆಲೆ- ಮುನ್ನೆಲೆ, ಸುವರ್ಣ ಕರ್ನಾಟಕದಲ್ಲಿ ದಲಿತರ ಆಶೋತ್ತರಗಳು, ಬಿಬಿಎಂಪಿ ಗುತ್ತಿಗೆ ಕಾರ್ಮಿಕರ ಬದುಕಿನ ಕುರಿತ ಕಾಳಜಿ, ದಲಿತರ ಮೇಲೆ ಪದೇ ಪದೇ ನಡೆಯುವ ದೌರ್ಜನ್ಯಗಳ ಕುರಿತಂತೆ ಆತಂಕ, ಭಡ್ತಿ ಮೀಸಲಾತಿ ಕುರಿತ ಹೋರಾಟ, ಜನಪರ ಚಳವಳಿಗಳ ಕುರಿತ ಕಾಳಜಿ, ಕನ್ನಡಿಗರಿಗೆ ಉದ್ಯೋಗಾವಕಾಶ ಹೀಗೆ ಬೇರೆ ಬೇರೆ ಶ್ರೀಸಾಮಾನ್ಯರ ಬದುಕಿಗೆ ಸಂಬಂಧಪಟ್ಟ ವಿಷಯ ವೈವಿಧ್ಯಗಳನ್ನು ಬರಹಗಳಿಗೆ ವಸ್ತುವಾಗಿಸಿಕೊಂಡಿದ್ದಾರೆ. ಬಹುತೇಕ ಬರಹಗಳು ವಿಷಯದಾಳಕ್ಕೆ ಇಳಿಯದೆ ತೆಳುವಾಗಿವೆ. ಸಂಬಂಧಪಟ್ಟ ವಿಷಯಗಳಿಗೆ ಪೂರಕವಾದ ಅಂಕಿಅಂಶ ಹಾಗೂ ಇನ್ನಿತರ ವಿವರಗಳನ್ನು ದಾಖಲಿಸಿ ಇನ್ನಷ್ಟು ಗಟ್ಟಿಯಾಗಿಸುವ ಅವಕಾಶಗಳು ಲೇಖಕರಿಗೆ ಇತ್ತು. ಜನಪರ ಉದ್ದೇಶವಷ್ಟೇ ಬರಹವನ್ನು ವೌಲಿಕವಾಗಿಸುವುದಿಲ್ಲ, ಅದಕ್ಕೆ ಲೇಖಕ ಮಾಡಬೇಕಾದ ಅಧ್ಯಯನ, ಅದರ ನಿರೂಪಣೆಗೆ ಬಳಸುವ ಭಾಷೆ, ಓದುಗರಿಗೆ ಅದನ್ನು ಸರಿ ಎನ್ನಿಸುವಂತೆ ಮಂಡಿಸುವ ರೀತಿಯೂ ಈ ಸಂದರ್ಭದಲ್ಲಿ ಅಗತ್ಯವಾಗಿದೆ. ಅವಸರ ಕೆಲವೊಮ್ಮೆ ಬರಹವನ್ನು ತೆಳುವಾಗಿ ಉದ್ದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ವಿಫಲವಾಗಿಸಬಹುದು. ಆದರೂ ಇಲ್ಲಿರುವ ಕೆಲವು ಲೇಖನಗಳು ಗಮನಾರ್ಹವಾಗಿವೆ.
ಜನಮುಖಿ ಪ್ರಕಾಶನ, ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 150. ಮುಖಬೆಲೆ 100 ರೂ. ಆಸಕ್ತರು 99725 16266 ದೂರವಾಣಿಯನ್ನು ಸಂಪರ್ಕಿಸಬಹುದು.