"ನನ್ನ ಮಂತ್ರಿ ಸ್ಥಾನಕ್ಕಿಂತ ಮೈತ್ರಿ ಸರ್ಕಾರ ಹೆಚ್ಚು ದಿನ ಬದುಕಬೇಕು"
'ವಾರ್ತಾಭಾರತಿ' ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಎಚ್.ವಿಶ್ವನಾಥ್
ಮೈಸೂರು,ಜೂ.10: ನಾನು ಮಂತ್ರಿ ಸ್ಥಾನಕ್ಕಾಗಿ ಆಸೆ ಪಟ್ಟವನಲ್ಲ, ಅದು ಬೇಕು ಎಂದು ದುಂಬಾಲು ಬಿದ್ದವನಲ್ಲ, ನನ್ನ ಮಂತ್ರಿ ಸ್ಥಾನಕ್ಕಿಂತ ರಾಜ್ಯ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬದುಕಬೇಕು ಎಂಬುದೇ ನನ್ನ ಆಸೆ ಎಂದು ಮಾಜಿ ಸಚಿವ, ಶಾಸಕ ಅಡಗೂರು ಎಚ್.ವಿಶ್ವನಾಥ್ ಅಭಿಪ್ರಾಯಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ “ವಾರ್ತಾಭಾರತಿ”ಯೊಂದಿಗೆ ಅವರು ಮಾತನಾಡಿದರು.
ಪ್ರಶ್ನೆ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ದೇಶ?
ಉತ್ತರ: ನಾನು ಪಕ್ಷದ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹೊಸಬರಿಗೆ ಅವಕಾಶ ನೀಡಿ ಯುವಕರಿಗೆ ಆದ್ಯತೆ ನೀಡಬೇಕಿದೆ. ಹಾಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ಪ್ರಶ್ನೆ: ನಿಮ್ಮ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರಲ್ಲ?
ಉತ್ತರ: ನಾನು ರಾಜೀನಾಮೆ ಕೊಟ್ಟಾಗಿದೆ. ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ, ಈ ಹಿಂದೆ ಎರಡು ಬಾರಿ ರಾಜೀನಾಮೆ ಕೊಡಲು ಮುಂದಾಗಿದ್ದೆ. ನಮ್ಮ ರಾಷ್ಟ್ರೀಯ ನಾಯಕರಾದ ಎಚ್.ಡಿ.ದೇವೇಗೌಡರು ಒಪ್ಪಲಿಲ್ಲ. ನನ್ನ ಮೇಲಿನ ಪ್ರೀತಿ ಮತ್ತು ಗೌರವದಿಂದ ಅವರು ನನ್ನನ್ನೇ ಮುಂದುವರೆಯುವಂತೆ ಸೂಚಿಸಿದರು. ಅದರಂತೆ ಈಗಲೂ ಮುಂದುವರೆಯುವಂತೆ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಹಿಂಪಡೆಯುವುದಿಲ್ಲ. ಹೊಸಬರಿಗೆ ಅವಕಾಶ ನೀಡಬೇಕಿದೆ. ನಾವೆಲ್ಲರೂ ಒಟ್ಟಿಗೆ ಇದ್ದು ಪಕ್ಷವನ್ನು ಸಂಘಟಿಸುತ್ತೇವೆ.
ಪ್ರಶ್ನೆ: ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ಹೇಳುತ್ತಾರಲ್ಲ?
ಉತ್ತರ: ಹಾಗೇನಿಲ್ಲ, ನಾನು ಇಷ್ಟು ದಿನ ಅಧ್ಯಕ್ಷನಾಗಿದ್ದೆ. ಒಂದು ದಿನವೂ ಎಚ್.ಡಿ.ದೇವೇಗೌಡರಾಗಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಾಗಲಿ ಹೀಗೆ ನಡಿಬೇಕು, ನೀವು ಈ ಕೆಲಸ ಮಾಡಬೇಕು ಎಂದು ಹೇಳಿಲ್ಲ, ಪಾಪ ದೇವೇಗೌಡರು ಪಕ್ಷಕ್ಕೆ ಸಲಹೆಗಳನ್ನಷ್ಟೇ ನೀಡುತ್ತಿದ್ದರು. ನಾನು ಎರಡು ಬಾರಿ ರಾಜೀನಾಮೆ ನೀಡಿದಾಗಲೂ ಅವರು ಒಪ್ಪಲಿಲ್ಲ. ಹಾಗಾಗಿ ಮಾಧ್ಯಮಗಳ ಮೂಲಕ ಅವರಿಗೆ ರಾಜೀನಾಮೆ ಸಲ್ಲಿಸಿದೆ.
ಪ್ರಶ್ನೆ: ಕೆ.ಆರ್.ನಗರ ಪುರಸಭೆ ವಿಚಾರದಲ್ಲಿ ಸಚಿವ ಸಾ.ರಾ.ಮಹೇಶ್ ನಿಮಗೆ ಗೌರವ ನೀಡಲಿಲ್ಲ ಎಂಬ ಮಾತಿದೆಯಲ್ಲ?
ಉತ್ತರ: ಪಕ್ಷಕ್ಕೆ ಯಾರೂ ದೊಡ್ಡವರಲ್ಲ, ಕೆಲವರು ಸಚಿವರ ಬಳಿ ಹೋಗುತ್ತಾರೆ. ಹಾಗೆ ನಮ್ಮ ಪಕ್ಷದ ಮುಖ್ಯಮಂತ್ರಿಗಳ ಬಳಿಯೂ ಹೋಗುತ್ತಾರೆ. ಹಾಗಂದ ಮಾತ್ರಕ್ಕೆ ನನಗೆ ಗೌರವ ನೀಡಲಿಲ್ಲ ಎಂದಲ್ಲ, ಮುಂದೆ ಎಲ್ಲವೂ ಸರಿಯಾಗಲಿದೆ.
ಪ್ರಶ್ನೆ: ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಇದೆಯೇ?
ಉತ್ತರ: ನಾನು ಮಂತ್ರಿ ಸ್ಥಾನಕ್ಕೆ ಆಸೆಪಟ್ಟವನಲ್ಲ, ಅದು ಬೇಕು ಎಂದು ಯಾರ ಬಳಿಯೂ ದುಂಬಾಲು ಬಿದ್ದವನಲ್ಲ, ಅವರಾಗೆ ಕೊಟ್ಟರೆ ಒಳ್ಳೆಯ ಅವಕಾಶ, ಚೆನ್ನಾಗಿ ಕೆಲಸ ಮಾಡುತ್ತೇನೆ. ನನ್ನ ಮಂತ್ರಿ ಸ್ಥಾನಕ್ಕಿಂತ ರಾಜ್ಯ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬದುಕಬೇಕು, ನಮ್ಮ ಪಕ್ಷದ ನಾಯಕರೇ ಮುಖ್ಯಮಂತ್ರಿ ಆಗಿರಬೇಕಾದರೆ ಮೈತ್ರಿ ಸರ್ಕಾರ ಮುಂದುವರೆಯಬೇಕು.
ಪ್ರಶ್ನೆ: ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನುತ್ತಿದ್ದಾರಲ್ಲ?
ಉತ್ತರ: ಕೊಡಲಿ, ಇದರಲ್ಲಿ ತಪ್ಪೇನಿಲ್ಲ, ಈಗ ಸಚಿವರಾಗಿ ಕೆಲಸ ಮಾಡುತ್ತಿರುವ ಕೆಲವರು ರಾಜೀನಾಮೆ ನೀಡಲಿ. ಹೊಸಬರಿಗೆ ಅವಕಾಶ ನೀಡಲಿ. ಆಗ ಪಕ್ಷ ಮತ್ತು ಮೈತ್ರಿ ಗಟ್ಟಿಯಾಗಿ ಉಳಿಯುತ್ತದೆ.
ಪ್ರಶ್ನೆ: ನಿಮ್ಮ ಸಚಿವ ಸ್ಥಾನಕ್ಕೆ ಸಿದ್ದರಾಮಯ್ಯ ತೊಡಕಾಗಿದ್ದಾರೆಯೆ?
ಉತ್ತರ: ಸಿದ್ದರಾಮಯ್ಯ ಬೇಡ ಅಂದರು ನಮ್ಮ ಪಕ್ಷದ ನಾಯಕರು ಕೇಳಬೇಕಲ್ಲ, ನಮ್ಮ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಏಕೆ ಕೈ ಹಾಕುತ್ತಾರೆ ?