ಹಲಾಲ್ ಲಾಭದ ಆಸೆಯಲ್ಲಿ ಹಲಾಲುಕೋರತನಕ್ಕೆ ಬಲಿಬಿದ್ದ ಜನ
ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಬ್ಲೇಡ್ ಕಂಪೆನಿಗಳು ಮತ್ತು ಪೊಂಝಿ ಯೋಜನೆಗಳು ಬೆಂಗಳೂರಿನ ಕೆಳ ಮಧ್ಯಮ ಆದಾಯ ಗುಂಪಿನ ಅಮಾಯಕ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿಗಳನ್ನು ಪಂಗನಾಮ ಹಾಕಿವೆ. ಇವುಗಳಲ್ಲಿ ತೀರ ಇತ್ತೀಚಿನ ಕಂಪೆನಿ ಐ ಮೊನಿಟರಿ ಅಡ್ವೈಸರಿ(ಐಎಂಎ). ಈ ಕಂಪೆನಿಯು ನಗರದಾದ್ಯಂತ ತನ್ನ ಹೆಜ್ಜೆ ಗುರುತುಗಳನ್ನು ನಿರಂತರವಾಗಿ ವಿಸ್ತರಿಸುತ್ತಾ ಬಂದಿತ್ತು. ಮುಹಮ್ಮದ್ ಮನ್ಸೂರ್ ಖಾನ್ ಸ್ಥಾಪಿಸಿದ ಈ ಕಂಪೆನಿಯು ಸಾರ್ವಜನಿಕರ ಹಣವನ್ನು ದೋಚಿ ತಣ್ಣಗೆ ಪರಾರಿಯಾಗಿರುವ ಎಲ್ಲ ವಂಚಕ ಕಂಪೆನಿಗಳಿಗಿಂತ ಹೆಚ್ಚು ಸಮಯ ಬಾಳಿಕೆ ಬಂದಿತ್ತು ಮತ್ತು ಇದೇ ಕಾರಣದಿಂದ ಜನರು ಈ ಕಂಪೆನಿಯನ್ನು ನಂಬಿದ್ದರು. ಅದರ ವಂಚನೆಯ ಗುಳ್ಳೆ ಒಡೆಯಲು ಭರ್ತಿ 13 ವರ್ಷಗಳೇ ಹಿಡಿದವು. ಐಎಂಎ ಎರಡು ಜ್ಯುವೆಲ್ಲರಿ ಶೋರೂಮ್ಗಳು, ಸರಣಿ ಔಷಧಿ ಅಂಗಡಿಗಳು, ಹಾಲಿ ಕಾಮಗಾರಿ ನಡೆಯುತ್ತಿರುವ ಕೆಲವು ನಿರ್ಮಾಣ ಯೋಜನೆಗಳು ಮತ್ತು ಒಂದು ಆಸ್ಪತ್ರೆಯನ್ನು ಹೊಂದಿದ್ದು,ಇದು ಹೂಡಿಕೆದಾರರ ಮುಖ್ಯವಾಗಿ ಕೆಳಮಧ್ಯಮ ವರ್ಗದ ಮುಸ್ಲಿಮರಲ್ಲಿ ವಿಶ್ವಾಸವನ್ನು ಮೂಡಿಸಿತ್ತು.
ಕಂಪೆನಿಯು ಹೂಡಿಕೆಗಳ ಮೇಲೆ ಪ್ರತಿ ತಿಂಗಳಿಗೆ ಶೇ.10ರಷ್ಟು ನಂಬಲಸಾಧ್ಯ ಲಾಭವನ್ನು ನೀಡುವ ಭರವಸೆಯೊಂದಿಗೆ ಹುಚ್ಚುಧೈರ್ಯದಲ್ಲಿ ಭರ್ಜರಿ ಪ್ರಚಾರ ಅಭಿಯಾನವನ್ನು ನಡೆಸಿತ್ತು. ಕಂಪೆನಿಯ ಭರವಸೆಗಳಿಗೆ ಮಾರು ಹೋಗಿದ್ದ ದೊಡ್ಡ ಸಂಖ್ಯೆಯ ಜನರು ನಗರದ ಖ್ಯಾತ ಇಸ್ಲಾಮಿಕ್ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ಕೆಲವು ಧಾರ್ಮಿಕ ಮುಖಂಡರಿಂದಾಗಿ ಹಣವನ್ನು ತೊಡಗಿಸಲು ಹೆಚ್ಚು ಉತ್ತೇಜಿತಗೊಂಡಿದ್ದರು. ಸ್ಥಳೀಯ ಉರ್ದು ಪತ್ರಿಕೆಗಳು ಆಗಾಗ್ಗೆ ಕಂಪೆನಿಯ ಕುರಿತು ಪಾವತಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದವು. ಇದನ್ನೆಲ್ಲಾ ನೋಡಿ ಕೈಯಲ್ಲಿ ಸ್ವಲ್ಪ ಹಣವಿದ್ದವರು ಕಂಪೆನಿಯ ಯೋಜನೆಗಳ ಬಗ್ಗೆ, ಅದು ಮಾಸಿಕ ಶೇ.10ರಷ್ಟು ಲಾಭ ನೀಡಲು ಸಾಧ್ಯವೇ ಎನ್ನುವುದನ್ನು ಯೋಚಿಸದೆ ಹೂಡಿಕೆ ಮಾಡಲು ಮುಗಿಬಿದ್ದಿದ್ದರು.
ಬ್ಲೇಡ್ ಕಂಪೆನಿಗಳ ಪೈಕಿ ಕೆಲವು 'ತಿಂಗಳ ಲಾಭಾಂಶ' ದ ರೂಪದಲ್ಲಿ ಹೂಡಿಕೆದಾರರಿಗೆ ಸ್ವಲ್ಪ ಹಣದ ರುಚಿಯನ್ನು ತೋರಿಸಿ ಕೆಲವೇ ಸಮಯದಲ್ಲಿ ತಮ್ಮ ಟೆಂಟ್ಗಳನ್ನೆತ್ತಿಕೊಂಡು ಜಾಗ ಖಾಲಿ ಮಾಡಿದ್ದವು. ಐಎಂಎ ತೋರಿಸಲಿಕ್ಕಾದರೂ ಕೆಲವು ಉದ್ಯಮಗಳಲ್ಲಿ ಸಕ್ರಿಯವಾಗಿದ್ದರೆ ಇತರ ಹೆಚ್ಚಿನ ಬ್ಲೇಡ್ ಕಂಪೆನಿಗಳ ಬಳಿ ತೋರಿಸುವಂತಹ ಯಾವುದೇ ವ್ಯವಹಾರಗಳಿರಲಿಲ್ಲ, ಶುದ್ಧ ವಂಚನೆಗೆಂದೇ ಅವು ಹುಟ್ಟಿಕೊಂಡಿದ್ದವು.
ನಗರದ ಕೆಲವು ಖ್ಯಾತ ಧಾರ್ಮಿಕ ವಿದ್ವಾಂಸರ ಶಿಫಾರಸುಗಳು ಕಂಪೆನಿಗೆ ಅದೃಷ್ಟದ ಬಾಗಿಲುಗಳನ್ನೇ ತೆರೆದಿದ್ದವು. ಕಂಪೆನಿಯ ಎಂಡಿ ಮನ್ಸೂರ್ ಖಾನ್ ಈ ಧಾರ್ಮಿಕ ವಿದ್ವಾಂಸರ ಜೊತೆಯಲ್ಲಿದ್ದುದನ್ನು ತೋರಿಸುವ ಜಾಹೀರಾತುಗಳು ಉರ್ದು ಮಾಧ್ಯಮಗಳಲ್ಲಿ ರಾಶಿರಾಶಿಯಾಗಿ ಪ್ರಕಟವಾಗಿದ್ದವು. ನಗರದ ಕೆಲವು ಖ್ಯಾತನಾಮ ಮಸೀದಿಗಳ ಧರ್ಮಗುರುಗಳು ಐಎಂಎ ವ್ಯವಹಾರ ಸಮರ್ಪಕವಾಗಿದೆ ಎಂದು ಶಿಫಾರಸು ಮಾಡಿದ್ದರು.
ಕಂಪೆನಿಯು ತನ್ನ ವಿವಿಧ ಕಾರ್ಯತಂತ್ರಗಳ ಮೂಲಕ ಈ ಮುಖಂಡರನ್ನು ಮರುಳು ಮಾಡಿತ್ತು. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಭವ್ಯವಾದ ಮದ್ರಸಾ ಮಸೀಹುಲ್ ಉಲೂಂ ನಿರ್ಮಾಣಕ್ಕೆ ಐಎಂಎ ಹಣಕಾಸು ನೆರವನ್ನು ಒದಗಿಸಿತ್ತು. ಅದು ಉತ್ತರ ಪ್ರದೇಶದಲ್ಲಿರುವ ಭಾರತೀಯ ಉಪಖಂಡದ ಪ್ರಸಿದ್ಧ ಧಾರ್ಮಿಕ ಶಿಕ್ಷಣ ಕೇಂದ್ರವೊಂದರಲ್ಲಿ ಕಂಪ್ಯೂಟರ್ ಲ್ಯಾಬ್ಗೂ ಆರ್ಥಿಕ ನೆರವು ನೀಡಿತ್ತು. ಐಎಂಎ ಸ್ಥಾಪಿಸಿದ್ದ ಆಧುನಿಕ ಮುದ್ರಣ ಘಟಕವು ಉಚಿತ ವಿತರಣೆಗಾಗಿ ಪವಿತ್ರ ಕುರ್ಆನ್ ಅನ್ನು ಪ್ರಕಟಿಸಿತ್ತು. ಒಂದು ಸಂದರ್ಭದಲ್ಲಿ ಮಕ್ಕಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಉಮ್ರಾ ಯಾತ್ರಿಗಳನ್ನು ಐಎಂಎ ಹಣಕಾಸು ನೆರವಿನೊಡನೆ ರಕ್ಷಿಸಿ ವಾಪಸ್ ಬೆಂಗಳೂರಿಗೆ ಕರೆತರಲಾಗಿತ್ತು. ಇನ್ನೂ ತನ್ನ ಆರಂಭಿಕ ಹಂತದಲ್ಲಿರುವ ಉದ್ಯಮ ಸಂಸ್ಥೆಯೊಂದು ಇಷ್ಟೊಂದು ಆತ್ಮವಿಶ್ವಾಸದಿಂದ ಇಂತಹ ಬೃಹತ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂಬ ಅಚ್ಚರಿಯನ್ನೂ ಹಲವರು ವ್ಯಕ್ತಪಡಿಸಿದ್ದರು. ಕಂಪೆನಿಯು ಇನ್ನಷ್ಟು ಹೂಡಿಕೆದಾರರನ್ನು ಸೆಳೆಯಲು ಇವೆಲ್ಲವನ್ನೂ ಮಾಡಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆ.
ಇವೆಲ್ಲವುಗಳ ಕೇಂದ್ರಬಿಂದುವಾಗಿದ್ದುದು ಧಾರ್ಮಿಕ ಸಂವೇದನೆಗಳನ್ನು ಬಡಿದೆಬ್ಬಿಸಿದ್ದ ಭಾವನಾತ್ಮಕ ಮನವಿ. ಶ್ರದ್ಧಾವಂತ ಮುಸ್ಲಿಮರು ಬಡ್ಡಿ ಆಧರಿತ ವಹಿವಾಟುಗಳು ಅಥವಾ ಬ್ಯಾಂಕುಗಳನ್ನೊಳಗೊಂಡ ಹೂಡಿಕೆ ಮಾರ್ಗಗಳ ಗೋಜಿಗೆ ಹೋಗುವುದಿಲ್ಲ. ಅವರು ಹಲಾಲ್(ಧಾರ್ಮಿಕ ಅನುಮತಿ ಇರುವ ಉದ್ಯಮಗಳು) ಹಾಗೂ ಶರಿಯಾಕ್ಕೆ ಅನುಗುಣವಾದ ವಹಿವಾಟುಗಳಲ್ಲಿ ಹಣ ತೊಡಗಿಸುತ್ತಾರೆ. ಆ್ಯಂಬಿಡೆಂಟ್, ಐಎಂಎ, ಇಂಜಾಝ್, ಆಲಾ ವೆಂಚರ್ಸ್ ಮತ್ತು ಮಾರ್ಗೆನಾಲ್ನಂತಹ ಕಂಪೆನಿಗಳು ಈ ಧಾರ್ಮಿಕ ಪ್ರತಿಬಂಧವನ್ನು ದುರುಪಯೋಗಿಸಿಕೊಂಡಿದ್ದವು ಹಾಗೂ ತಮ್ಮ ಯೋಜನೆಗಳು ಶರಿಯಾಕ್ಕೆ ಅನುಗುಣವಾಗಿವೆ ಎಂದು ಪ್ರಚಾರ ಮಾಡಿದ್ದವು. ಶ್ರದ್ಧಾವಂತ ಮುಸ್ಲಿಮರಿಂದ ಠೇವಣಿಗಳ ಕ್ರೋಡೀಕರಣಕ್ಕೆ ಅನುಕೂಲವಾಗುವಂತೆ ಕೆಲವು ಉಲೇಮಾಗಳು ಇವುಗಳಿಗೆ 'ಹಲಾಲ್ ಸರ್ಟಿಫಿಕೇಟ್' ಗಳನ್ನೂ ವಿತರಿಸಿದ್ದರು.
ಒಂದು ಸಂದರ್ಭದಲ್ಲಿ, ಐಎಂಎ ಯೋಜನೆಗಳು ಶರಿಯಾಕ್ಕೆ ಅನುಗುಣವಾಗಿವೆ. ಅದು ತನ್ನ ತಿಜೋರಿಗಳಲ್ಲಿ ಸಾಕಷ್ಟು ಚಿನ್ನದ ದಾಸ್ತಾನು ಹೊಂದಿದೆ ಮತ್ತು ಯೋಜನೆಗಳಲ್ಲಿ ಕಂಪೆನಿ ನಿರ್ದೇಶಕರ ಹೂಡಿಕೆಗಳು ಜನರಿಂದ ಸಂಗ್ರಹಿಸಲಾದ ಠೇವಣಿಗಳಿಗಿಂತ ತುಂಬ ಹೆಚ್ಚಿನ ಪ್ರಮಾಣದಲ್ಲ್ಲಿವೆ ಎಂದು ದೇವ್ಬಂದ್ನ ಓರ್ವರು ಸೇರಿದಂತೆ ಮೂವರು ಪ್ರಮುಖ ಧಾರ್ಮಿಕ ಮುಖಂಡರು 'ಸರ್ಟಿಫೈ' ಮಾಡಿದ್ದ ವರದಿಯ ಜಾಹೀರಾತನ್ನು ಐಎಂಎ ಉರ್ದು ದೈನಿಕವೊಂದರ 2018, ಅ.26ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.
ಧಾರ್ಮಿಕ ಲೇಪನದ ಸೋಗಿನಡಿ ಹೆಣೆದಿದ್ದ ಕಪಟ ತಂತ್ರವು ನಿರೀಕ್ಷೆಯನ್ನೂ ಮೀರಿ ಫಲ ನೀಡಿತ್ತು ಮತ್ತು ಹೂಡಿಕೆದಾರರು ತಮ್ಮ ಆಸ್ತಿಗಳನ್ನೂ ಮಾರಾಟ ಮಾಡಿ ಬಂದ ಹಣವನ್ನು ಈ ವಂಚಕ ಯೋಜನೆಗಳಲ್ಲಿ ತೊಡಗಿಸಿದ್ದರು. ಕಂಪೆನಿಗಳಿಗೆ ಹಣ ಹಾಕಲು ಮುಗಿಬಿದ್ದವರಿಗೂ ಕನಿಷ್ಠ ತಾವು ಹಣವನ್ನು ಹೂಡಿಕೆ ಮಾಡುತ್ತಿದ್ದೇವೆಯೇ ಅಥವಾ ಠೇವಣಿ ಇರಿಸುತ್ತಿದ್ದೇವೆಯೇ ಎನ್ನುವುದೂ ಗೊತ್ತಿರಲಿಲ್ಲ. 'ತಿಂಗಳ ಲಾಭಾಂಶ'ದ ರೂಪದಲ್ಲಿ ತ್ವರಿತ ಹಣ ಸಂಪಾದನೆಯ ಲೋಭದಿಂದ ಕುರುಡಾಗಿದ್ದವರು ಕಂಪೆನಿಯ ಉದ್ಯಮ ಸ್ವರೂಪವನ್ನು ಅಥವಾ ಪ್ರವರ್ತಕರ ಹಿನ್ನೆಲೆಯನ್ನು ಪರಿಶೀಲಿಸುವ ವಿವೇಚನೆಯನ್ನೂ ಕಳೆದುಕೊಂಡಿದ್ದರು.
ಜನರನ್ನು ವಂಚಿಸಲು ಬಡ್ಡಿರಹಿತ ಮತ್ತು ಶರಿಯಾ ಅನುಗುಣವಾದ ವ್ಯವಹಾರದ ಹೆಸರಲ್ಲಿ ಹಲಾಲು ಕೋರತನ ಮಾಡುವುದಕ್ಕೆ ಸಾಕಷ್ಟು ಹಳೆಯ ಇತಿಹಾಸವಿದೆ. 1980ರ ದಶಕದ ಆದಿಭಾಗದಲ್ಲಿ ಮದ್ರಾಸ್ನ 'ಅಲ್-ಮೀಝಾನ್ ಲೆದರ್ಸ್' ಕಂಪೆನಿಯು ಈ ದಗಲ್ಬಾಜಿ ಪ್ರವೃತ್ತಿಯನ್ನು ಹುಟ್ಟು ಹಾಕಿತ್ತು. 1987ರಲ್ಲಿ ಅದು ದಿವಾಳಿಯೆದ್ದಿತ್ತು. ಬೆಂಗಳೂರಿನ ಬರ್ಕತ್ ಇನ್ವೆಸ್ಟ್ಮೆಂಟ್ಸ್ 1998ರಲ್ಲಿ ತನ್ನ ಬಾಗಿಲುಗಳನ್ನೆಳೆದಿತ್ತು. 1990ರ ದಶಕದ ಮಧ್ಯದಲ್ಲಿ ಇಂದೋರ್ನ ಇತ್ತೆಫಾಕ್ ಮತ್ತು ಫಲಾಹ್ ಇನ್ವೆಸ್ಟ್ಮೆಂಟ್ಸ್ ತನ್ನ ಗುರುತೂ ಬಿಡದೇ ಮಾಯವಾಗಿತ್ತು. ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ಅಲ್-ಅಮೀನ್ ಇಸ್ಲಾಮಿಕ್ ಫೈನಾನ್ಸಿಯಲ್ ಇನ್ವೆಸ್ಟ್ ಮೆಂಟ್ ಕಂಪೆನಿಯು ಹತ್ತೇ ವರ್ಷಗಳಲ್ಲಿ ಮುಚ್ಚಿತ್ತು. ಕೇವಲ ಎರಡು ವರ್ಷಗಳ ಹಿಂದಷ್ಟೇ ತಿರುಪತಿಯ ನೌಹೇರಾ ಗೋಲ್ಡ್ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿತ್ತು.
ಭಾರತದ ಐಟಿ ರಾಜಧಾನಿ ಎಂಬ ಖ್ಯಾತಿಯನ್ನು ಪಡೆದಿರುವ ಬೆಂಗಳೂರಿನಲ್ಲಿ ಜನರನ್ನು ವಂಚಿಸಿರುವ ಇಷ್ಟೊಂದು ದೊಡ್ಡ ಹಗರಣ ನಡೆದಿರುವುದು ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅವರು ಈಗಲಾದರೂ ನಿದ್ದೆಯಿಂದ ಎಚ್ಚೆತ್ತುಕೊಂಡು ಅಮಾಯಕ ಜನರನ್ನು ಹಗರಣಕೋರರಿಂದ ಮತ್ತು ವಂಚಕ ಕಂಪೆನಿಗಳಿಂದ ಸುರಕ್ಷಿತವಾಗಿಸುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕಿದೆ. ಧಾರ್ಮಿಕ ಭಾವನೆಗಳನ್ನು ದುರುಪ ಯೋಗ ಪಡಿಸಿಕೊಳ್ಳುತ್ತಿರುವ ಇಂತಹ ಎಲ್ಲ ಕಂಪೆನಿಗಳನ್ನು ನಿಗಾಕ್ಕೆ ಒಳಪಡಿ ಸಲು ಸಹ ಇದು ಸಕಾಲವಾಗಿದೆ