ಗಾಂಧೀಜಿ ಕೊನೆ ತನಕ ದೇಶ ವಿಭಜನೆಗೆ ಒಪ್ಪಿಕೊಳ್ಳಲಿಲ್ಲ
ಗಾಂಧಿ ಕಗ್ಗೊಲೆ: ಕಾರಣ - ಪರಿಣಾಮ
ಭಾಗ-39
ಮೌಲಾನಾ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್‌ಖಾನ್ ಮುಂತಾದ ಅಪ್ರತಿಮ ದೇಶಭಕ್ತರು ದೇಶವಿಭಜನೆಯನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ವಿಭಜನೆಯನ್ನು ತಪ್ಪಿಸುವುದು ಸಾಧ್ಯವಿಲ್ಲದಂಥ ಪರಿಸ್ಥಿತಿ ಬಂದೊದಗಿತು. ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ, ಸಿಖ್ಖರ ಮುಂದಾಳು ಮಾಸ್ಟರ್ ತಾರಾಸಿಂಗ್, ಬಲದೇವ ಸಿಂಗ್, ದಲಿತರ ಮುಖಂಡ ಡಾ.ಅಂಬೇಡ್ಕರ್ ಮುಂತಾದವರೂ ಆ ಅನಿವಾರ್ಯ ದುರ್ಘಟನೆಗೆ ತಲೆಬಾಗಬೇಕಾಯಿತು. ಗಾಂಧೀಜಿ ಮಾತ್ರ ಕೊನೆತನಕ ದೇಶ ವಿಭಜನೆಯನ್ನು ಒಪ್ಪಿಕೊಳ್ಳಲಿಲ್ಲ.
ಗಾಂಧಿ ಹತ್ಯೆ ಮಾಡಿ ಸಂಘಪರಿವಾರ ದಕ್ಕಿಸಿಕೊಂಡು, ಹತ್ಯೆಯಲ್ಲಿ ಪರೋಕ್ಷವಾಗಿ ಪಾತ್ರ ವಹಿಸಿದ ಸಾವರ್ಕರ್‌ರನ್ನು ಭಾರತದ ಪರಮೋಚ್ಚ ರಾಷ್ಟ್ರಭಕ್ತರ ಸ್ಥಾನಕ್ಕೆ ಏರಿಸಿ, ಅವರ ತೈಲವರ್ಣದ ಭಾವಚಿತ್ರವನ್ನು ಸಂಸದ್ ಭವನದ ಕೇಂದ್ರ ಸಭಾಂಗಣದಲ್ಲಿ ಅನಾವರಣ ಮಾಡಿದ ಜಗತ್ತಿನ ಇತಿಹಾಸದಲ್ಲಿ ಕಂಡರಿಯದ ಘಟನೆಯನ್ನು ಸಂಘಪರಿವಾರ ನೆರವೇರಿಸಿತು!! ಅಬ್ರಹಾಂ ಲಿಂಕನ್ ಮತ್ತು ಜಾನ್ ಎಫ್. ಕೆನಡಿಯನ್ನು ಹತ್ಯೆ ಮಾಡಿದವರು ಶ್ವೇತವರ್ಣೀಯರ ಪರಿಶುದ್ಧತೆಯನ್ನು ಕಾಪಾಡಲು, ನೀಗ್ರೋ ಕರಿಯರ ದಾಸ್ಯ ಮುಕ್ತಿಯನ್ನು ವಿರೋಧಿಸಲು ಎಂಬ ತತ್ವ ಸಂರಕ್ಷಣೆಗಾಗಿಯೆ. ಈ ‘ತತ್ವ’ವನ್ನು ಒಪ್ಪುವ ಅಮೆರಿಕನ್ನರು ಆಗಲೂ ಇದ್ದರು. ಈಗಲೂ ಇದ್ದಾರೆ. ಅದನ್ನು ಸಮರ್ಥಿಸುವ ‘ಕ್ಲೂ ಕ್ಲಕ್ಸ್ ಕ್ಲಾನ್’ ಎಂಬ ಒಂದು ಅಗ್ನಿ ಭಕ್ಷಕ ಸಂಸ್ಥೆಯೂ ಇದೆ! ಆದರೆ ಅಮೆರಿಕೆಯ ಜನ ಲಿಂಕನ್ ಮತ್ತು ಕೆನಡಿ ಇಬ್ಬರನ್ನೂ ಹತ್ಯೆ ಮಾಡಿದವರನ್ನು ದೇಶ ರಕ್ಷಕರ ಸಾಲಿಗೆ ಸೇರಿಸಿ ಅವರನ್ನು ‘ಶ್ವೇತಭವನ’ದ ಉಪ್ಪರಿಗೆಯಲ್ಲಿ ಸ್ಥಾನ ನೀಡಿಲ್ಲ! ಆದರೆ ಭಾರತ ಎಂಬ ಪುರಾತನ ಪುಣ್ಯಭೂಮಿ, ಪಿತೃಭೂಮಿ, ಮಾತೃಭೂಮಿಯಲ್ಲಿ ಮಾತ್ರ ಮಹಾತ್ಮರನ್ನು ಕೊಲ್ಲುವಂಥ ವಿಷಬೀಜವನ್ನು ಬಿತ್ತಿದವರನ್ನು ವೀರ ಯೋಧರ ಪಟ್ಟಕ್ಕೇರಿಸಿದ ದುರಂತ ನೆರವೇರಿತು! ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಕಾಣುತ್ತದೆ. ಹಿಂದೆ ಜೈನ ಬಸದಿಗಳನ್ನು, ಬೌದ್ಧ ಚೈತ್ಯಾಲಯಗಳನ್ನು ಧ್ವಂಸ ಮಾಡಿ ಶೈವ, ವೈಷ್ಣವ ದೇವಾಲಯಗಳನ್ನಾಗಿ ಮಾಡಿಕೊಂಡು ಸನಾತನಿಗಳು ತಮ್ಮ ‘ಧರ್ಮ ವಿಜಯ’ ಪತಾಕೆಯನ್ನು ಹಾರಿಸಿ ಇಂದಿಗೂ ವಿಜೃಂಭಿಸುತ್ತಿದ್ದಾರೆ.
ಭಾರತದ ಇತಿಹಾಸದಲ್ಲಿ ಬೌದ್ಧ, ಜೈನ ಧರ್ಮ ಮಂದಿರಗಳನ್ನು ಧ್ವಂಸ ಮಾಡಿ ಸನಾತನಿಗಳು ದಕ್ಕಿಸಿಕೊಂಡಿದ್ದಾರೆ. ಆದರೆ ಮುಸ್ಲಿಮರ ಪ್ರಾರ್ಥನಾ ಮಂದಿರ ಬಾಬರಿ ಮಸೀದಿಯನ್ನು ಧ್ವಂಸ ಮಾಡಿ ಸುಲಭವಾಗಿ ದಕ್ಕಿಸಿಕೊಳ್ಳುವುದು ಇದುವರೆಗೆ ಸಾಧ್ಯವಾಗಿಲ್ಲ. ಇನ್ನು ಮುಂದೆಯೂ ಸಾಧ್ಯವಾಗಲಿಕ್ಕಿಲ್ಲ ಎಂಬ ಲಕ್ಷಣಗಳು ಕಾಣುತ್ತಿವೆ! ಬಾಬರಿ ಮಸೀದಿ ಧ್ವಂಸದಿಂದ ಸಮಸ್ಯೆ ಮುಗಿಯಲಿಲ್ಲ. ಅದರ ಪರಿಣಾಮ ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಾಗಿಲ್ಲ. ಅಂತಹದ್ದೇ ಮಸೀದಿ, ಚರ್ಚ್‌ಗಳ ಸರಣಿ ಧ್ವಂಸದಲ್ಲಿ ಕಾಣಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ವಿವಾದ, ಬಾಬಾಬುಡಾನ್ ಗಿರಿಯಲ್ಲಿ ದತ್ತಪೀಠ ಸ್ಥಾಪನೆ, ಮಂಗಳೂರು ಮೈಸೂರಿನಲ್ಲಿ ಚರ್ಚ್‌ಗಳ ಧ್ವಂಸದಲ್ಲಿ ವ್ಯಾಪಕವಾಗುತ್ತಿದೆ. ಅದರ ಪ್ರತೀಕಾರವಾಗಿ ಉಗ್ರರ ಸರಣಿ ಸ್ಪೋಟಗಳ, ಆತ್ಮಹತ್ಯಾ ಬಾಂಬುಗಳ ಸ್ಪೋಟದಲ್ಲಿ ಇಡೀ ದೇಶವನ್ನು ದ್ವೇಷಾಗ್ನಿ ಕುಂಡಕ್ಕೆ ಗುರಿಮಾಡಿದೆ. ಅಯೋಧ್ಯೆಯಲ್ಲಾದ ಬಾಬರಿ ಮಸೀದಿ ಧ್ವಂಸದ ಪರಿಣಾಮ ದಿಲ್ಲಿ, ಮುಂಬೈ, ಅಕ್ಷರ ಧಾಮ, ಗೋಧ್ರಾ ಮುಂತಾದ ನಾನಾಕಡೆ ನೂರಾರು ಅಮಾಯಕರ ಸಾವಿನಲ್ಲಿ ಕಂಡು ಬರುತ್ತದೆ. ಅದು ಅಲ್ಲಿಗೇ ಇಂದಿಗೇ ಮುಗಿಯುತ್ತದೆ ಎಂದಲ್ಲ. ಎಂದಿನವರೆಗೆ ಸಂಘಪರಿವಾರ ಕೋಮುದ್ವೇಷದ ಸಂಕೇತವಾದ ಕೇಸರಿ ಧ್ವಜವನ್ನು ಮೇಲೆತ್ತಿ ಹಾರಿಸುವುದೋ, ತ್ರಿಶೂಲದಿಂದ ಅಲ್ಪಸಂಖ್ಯಾತರನ್ನು ಅಂಕೆಯಲ್ಲಿಟ್ಟುಕೊಳ್ಳಲು ಹವಣಿಸುವುದೋ, ಎಂದೂ ಹಿಂದೆ ನೂರಾರು ವರ್ಷಗಳ ಹಿಂದೆ ಮುಸ್ಲಿಮರಿಂದ ಆಗಿರಬಹುದಾದ ಹಿಂದೂ ಮಂದಿರಗಳ ನಾಶಕ್ಕೆ ಇಂದು ಪ್ರತೀಕಾರ ಮಾಡಲು ಸಂಘಪರಿವಾರ ತ್ರಿಶೂಲಧಾರಿಯಾಗಿ ಹೋರಾಡುವುದೊ ಅಲ್ಲಿಯವರೆಗೆ ಸರಣಿ ಸ್ಫೋಟಗಳು ನಿಲ್ಲುವುದಿಲ್ಲ! ಇದು ಶಾಶ್ವತ ಸ್ವತಃ ಸಿದ್ಧ ಸತ್ಯ! ಹಾಗಾದರೆ ಪರಿಹಾರ? ಕೋಮುದ್ವೇಷದ ನಿರ್ಮೂಲನೆ, ಕೋಮುಸೌಹಾರ್ದ, ಸರ್ವಮತ ಸಹಿಷ್ಣುತೆ, ಸರ್ವಧರ್ಮ ಸಮಾನತೆಯೇ ದೇಶದ-ಅಷ್ಟೇಕೆ ಈ ಲೋಕದ ಶಾಂತಿಗೆ ಏಕಮಾತ್ರ ಮಾರ್ಗ. ಪ್ರೇಮವೇ ಗೆಲ್ಲುವುದು, ದ್ವೇಷವಲ್ಲ. ‘ಸತ್ಯಮೇವ ಜಯತೆ’ ಎಂಬುದರ ಜೊತೆಗೆ ‘ಪ್ರೇಮ ಏವ ಜಯತೆ’ ಸಂದೇಶ ನಮ್ಮ ದೇಶದ ಶಾಂತಿ ಮಂತ್ರವಾಗಬೇಕು.
ದೇಶವನ್ನು ಇಬ್ಭಾಗ ಮಾಡುವುದು ಭಾರತೀಯರಲ್ಲಿ ಮುಸ್ಲಿಂ ಲೀಗ್ ಹೊರತಾಗಿ ಬಹುರಾಜಕೀಯ ಪಕ್ಷಗಳಿಗೆ ಬೇಕಾಗಿರಲಿಲ್ಲ ಪ್ರಮುಖ ರಾಜಕೀಯ ಪಕ್ಷವಾಗಿದ್ದ ಕಾಂಗ್ರೆಸಿಗೂ ಬೇಕಾಗಿರಲಿಲ್ಲ. ಆಗಿನ ಇತರ ರಾಜಕೀಯ ಪಕ್ಷಗಳಿಗೂ ರಾಜಕೀಯ ಮುಂದಾಳುಗಳಿಗೂ ಬೇಕಾಗಿರಲಿಲ್ಲ. ವಿದೇಶದಲ್ಲಿದ್ದ ಭಾರತೀಯರಿಗೂ ದೇಶದ ವಿಭಜನೆ ಇಷ್ಟವಿರಲಿಲ್ಲ. ಆದರೂ ಅನಿವಾರ್ಯ ಪರಿಸ್ಥಿತಿ ಉಂಟಾಗಿ, ಅವಿಭಾಜ್ಯ ಭಾರತ ಉಳಿಯಲಾರದೆಂಬ ಕಟುಸತ್ಯ ವಿಭಜನಾ ವಿರೋಧಿ ಕಾಂಗ್ರೆಸ್ ನಾಯಕರಿಗೂ ಸಹಿತ ಮನವರಿಕೆ ಆಯಿತು. ಮೌಲಾನಾ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್‌ಖಾನ್ ಮುಂತಾದ ಅಪ್ರತಿಮ ದೇಶಭಕ್ತರು ದೇಶವಿಭಜನೆಯನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ವಿಭಜನೆಯನ್ನು ತಪ್ಪಿಸುವುದು ಸಾಧ್ಯವಿಲ್ಲದಂಥ ಪರಿಸ್ಥಿತಿ ಬಂದೊದಗಿತು. ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ, ಸಿಖ್ಖರ ಮುಂದಾಳು ಮಾಸ್ಟರ್ ತಾರಾಸಿಂಗ್, ಬಲದೇವ ಸಿಂಗ್, ದಲಿತರ ಮುಖಂಡ ಡಾ.ಅಂಬೇಡ್ಕರ್ ಮುಂತಾದವರೂ ಆ ಅನಿವಾರ್ಯ ದುರ್ಘಟನೆಗೆ ತಲೆಬಾಗಬೇಕಾಯಿತು. ಗಾಂಧೀಜಿ ಮಾತ್ರ ಕೊನೆತನಕ ದೇಶ ವಿಭಜನೆಯನ್ನು ಒಪ್ಪಿಕೊಳ್ಳಲಿಲ್ಲ. ದೇಶ ವಿಭಜನೆಯಾಗದಿದ್ದರೆ ಅವಿಭಾಜ್ಯ ಭಾರತದಿಂದ ಬ್ರಿಟಿಷರು ನಿರ್ಗಮಿಸದಿದ್ದರೆ ಆಗಬಹುದಾಗಿದ್ದ ಭೀಕರ ಮಾನವ ಮಾರಣಹೋಮದ ಲಕ್ಷಪಟ್ಟು ಪುನರಾವರ್ತನೆ ಆಗುತ್ತಿತ್ತೆಂಬುದರಲ್ಲಿ ಲವಲೇಶವೂ ಸಂಶಯವಿಲ್ಲ. ಅದರ ಮುನ್ಸೂಚನೆಗಳು 1945-46ರಿಂದಲೂ ಬಂಗಾಳ, ಬಿಹಾರ, ದಿಲ್ಲಿ, ಪಂಜಾಬ್‌ಗಳಲ್ಲಿ ಭೀಕರವಾಗಿ ಕಂಡುಬಂದವು! ‘‘ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಇಲ್ಲಿಂದ ನೀವು ತೊಲಗಿ. ಹಿಂದೂ-ಮುಸ್ಲಿಮರು ಈ ದೇಶದ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ’’ ಎಂಬ ಗಾಂಧೀಜಿಯ ಪರಿಹಾರ ಮಾರ್ಗ ವ್ಯಾವಹಾರಿಕವಾಗಿರಲಿಲ್ಲ. ದ್ವಿತೀಯ ಜಾಗತಿಕ ಮಹಾಯುದ್ಧದಲ್ಲಿ ಯುದ್ಧವನ್ನು ತಪ್ಪಿಸಲು, ನಿಲ್ಲಿಸಲು ಗಾಂಧೀಜಿ ಬ್ರಿಟಿಷರು ತಮ್ಮ ದೇಶವನ್ನು ಹಿಟ್ಲರ್‌ನಿಗೆ ಒಪ್ಪಿಸಬೇಕೆಂದು ಸೂಚಿಸಿದಂತಹ, ಯಾರ್ಯಾರೂ ಒಪ್ಪಲಾಗದ ವ್ಯವಹಾರ ಶೂನ್ಯ ಮಾತಾಗುತ್ತಿತ್ತು. ಅವರು ಎಷ್ಟೇ ದೊಡ್ಡ ಮಹಾತ್ಮರಾದರೂ ಅವರ ಸೂಚನೆಯನ್ನು ಅಂಗೀಕರಿಸುವುದು ವ್ಯಾವಹಾರಿಕವಾಗಿರಲಿಲ್ಲ ಹಾಗೆಯೇ ಸಂಘಪರಿವಾರದವರು ಸಾವರ್ಕರ್, ಗೋಳ್ವಾಲ್ಕರ್, ಡಾ.ಶಾಮಪ್ರಸಾದ ಮುಖರ್ಜಿ ಅವರು ಪ್ರತಿಪಾದಿಸಿದ್ದಂತೆ ಭಾರತವನ್ನು ಅಖಂಡವಾಗಿ ಉಳಿಸಬೇಕಾಗಿದ್ದರೆ ಬ್ರಿಟಿಷ್ ಆಳ್ವಿಕೆಯ ಮುಂದುವರಿಯಬೇಕಾಗುತ್ತಿತ್ತು! ಇಲ್ಲವೇ ಈ ದೇಶ ಹಾಳಾದರೆ ಆಗಲಿ ಎಂದು ಅಧಿಕಾರವನ್ನು ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ನಿರ್ಗಮಿಸಬೇಕಾಗಿತ್ತು. ಆಗ ಭಾರತೀಯ ಸೈನ್ಯವೇ ಯಾದವಿ ಯುದ್ಧದಲ್ಲಿ ತೊಡಗಿ ಇಡೀ ರಕ್ತದಿಂದ ತೊಯ್ದು ಹೋಗುತ್ತಿತ್ತು!! ಅದರ ಪರಿಣಾಮವನ್ನು ಊಹಿಸುವುದೂ ಅಸಾಧ್ಯ!
ಭಾರತ ವಿಭಜನೆ ಬ್ರಿಟಿಷರ ಕುಟಿಲ ರಾಜನೀತಿಯ ಫಲ ಎಂದು ಆಪಾದಿಸುವವರು ಆಗಲೂ ಇದ್ದರು. ಈಗಲೂ ಇದ್ದಾರೆ. ಆದರೆ ಬ್ರಿಟಿಷರಿಗೆ ಅಂಥ ದುರುದ್ದೇಶ ಇದ್ದೇ ಇತ್ತು ಎಂಬುದು ಪೂರ್ಣಸತ್ಯವಲ್ಲ ಎಂದೇ ಕಾಣುತ್ತದೆ. ಶಸ್ತ್ರಬಲದಿಂದ ಇಲ್ಲಿರಲು ಸಾಧ್ಯವಿಲ್ಲ ಎಂಬುದು ಅವರಿಗೆ 1945ರಲ್ಲಿಯೇ ದಿಟವಾಗಿ ಹೋಗಿತ್ತು. ಇಲ್ಲಿಂದ ನಿರ್ಗಮಿಸುವುದು ಅನಿವಾರ್ಯವೆಂಬುದು ಚರ್ಚಿಲ್‌ನಂಥ ಕಡು ಸಾಮ್ರಾಜ್ಯಶಾಹಿ ವಾದಿಗೂ ಸಂಪೂರ್ಣ ಮನವರಿಕೆಯಾಗಿತ್ತು. ಆಗ ಅವರಿಗಿದ್ದ ಏಕಮಾತ್ರ ಆಸಕ್ತಿ ಇಲ್ಲಿಂದ ಬ್ರಿಟಿಷ್ ಜನ- ನಾಗರಿಕರು, ಅಧಿಕಾರಿಗಳು, ಸೈನಿಕರು, ವ್ಯಾಪಾರಿಗಳು, ಉದ್ದಿಮೆಗಳನ್ನು ಸ್ಥಾಪಿಸಿಕೊಂಡಿದ್ದವರು, ಆರ್ಥಿಕ ಹಿತಾಸಕ್ತಿವುಳ್ಳವರು ಕ್ರಿಶ್ಚಿಯನ್ ವಿದೇಶೀ ಪಾದ್ರಿಗಳು ಈ ದೇಶದಿಂದ ಜೀವಸಹಿತ ಕ್ಷೇಮದಿಂದ ಗಡಿದಾಟುವುದು ಹೇಗೆ ಎಂಬುದೇ ಪ್ರಮುಖವಾಗಿತ್ತು. ಬಂಡೆದ್ದ ಭಾರತೀಯ ಸೈನಿಕರನ್ನು ಆಯುಧದಿಂದ ಎದುರಿಸಿದರೆ ಬ್ರಿಟಿಷರ ಜೀವಕ್ಕೆ ಎಂಥ ಘೋರ ವಿಪತ್ತು ಬರಬಹುದೆಂಬುದರ ಅನುಭವವನ್ನು -1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಾದ ಘಟನೆಗಳನ್ನು ಅವರು ಮರೆತಿರಲಿಲ್ಲ. ಏನೂ ಮಾಡಿದರೂ ಉಳಿಸಿಕೊಳ್ಳಲಾಗದ ಸಾಮ್ರಾಜ್ಯಕ್ಕಾಗಿ ಹೋರಾಡಿ ಎಷ್ಟೋ ಲಕ್ಷ ಬ್ರಿಟಿಷ್ ಜೀವಗಳನ್ನು ನಿರರ್ಥಕವಾಗಿ ಬಲಿಕೊಡಲು ಬ್ರಿಟಿಷರಿಗೆ ಕಿಂಚಿತ್ ಇಷ್ಟವಿರಲಿಲ್ಲ. ಜಾಗತಿಕ ಯುದ್ಧದಲ್ಲಿ ಲಕ್ಷ ಲಕ್ಷ ಜೀವಗಳನ್ನು ಬಲಿತೆತ್ತ ಬ್ರಿಟನ್ ಬೇಸತ್ತು ಬಸವಳಿದು ಹಣ್ಣಾಗಿತ್ತು. ಇಲ್ಲಿಯ ಮಾರಣಹೋಮಕ್ಕೆ ಆ ದೇಶ ಸಿದ್ಧವಿರಲಿಲ್ಲ. ಈ ದೇಶವನ್ನು ತುಂಡರಿಸಿಯೆ ಹೋಗಬೇಕೆಂಬ ಛಲ, ಕುಟಿಲ ನೀತಿ ಅವರಿಗೆ ಇರಲಿಲ್ಲ. ಈ ದೇಶವನ್ನು ಅಖಂಡವಾಗಿ ಊಹಿಸಬೇಕೆಂದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆಂಬುದು 1997ರಿಂದ ಈಚೆಗೆ ಬೆಳಕಿಗೆ ಬಂದ ಬ್ರಿಟಿಷ್ ರಹಸ್ಯ ದಾಖಲೆಗಳಿಂದ ವ್ಯಕ್ತವಾಗುತ್ತದೆ. ಅವರಿಗೂ ಬೇಡವಾಗಿದ್ದ ವಿಭಜನೆ ಆಗಿಹೋಯಿತು ಅದು ಭರತಖಂಡದ ‘ಹಣೆಬರಹ’ದಲ್ಲಿ ಬರೆದಿದ್ದ ವಿಧಿಲಿಖಿತ.
ಈಗ ವಿಭಜಿತ ಭಾರತ ಶಾಶ್ವತ ಸತ್ಯ. ಪಾಕಿಸ್ತಾನದೊಡನೆ, ನಮ್ಮಲ್ಲಿಯೆ ಇರುವ ಮುಸ್ಲಿಮರೊಡನೆ, ಕ್ರಿಶ್ಚಿಯನ್ನರೊಡನೆ ನಾವು ಹೊಂದಿಕೊಂಡು ಹೇಗೆ ಬದುಕಬೇಕು ಎಂಬುದು ಮುಖ್ಯ. ಅದಕ್ಕೆ ಅನ್ಯೋನ್ಯ ಪ್ರೇಮವೇ ಪರಮೋತ್ಕೃಷ್ಟ ಪರಿಹಾರ ಮಾರ್ಗ ಎಂಬುದು ಜಾತ್ಯತೀತ ಶಕ್ತಿಗಳ ಆಕಾಂಕ್ಷೆ. ಅದರಿಂದ ಮಾತ್ರ ವಿಭಜನೆಯ ಅಪ್ರಿಯ ಘಟನೆಯ ದುಷ್ಪರಿಣಾಮದಿಂದ ಪಾರಾಗಲು ಸಾಧ್ಯ. ಬೇರೆಯಾದರೂ ಒಂದಾಗಿರಲು ಸಾಧ್ಯ.
ಈ ಸತ್ಯವನ್ನು ಪಾಕಿಸ್ತಾನವೂ ಈಗ ಇತ್ತಿತ್ತಲಾಗಿ ಒಪ್ಪಿಕೊಳ್ಳುವ ಸೂಚನೆಗಳು ಕಂಡು ಬರುತ್ತಿವೆ. ಅದು ಶುಭಲಕ್ಷಣ. ಸ್ವಾಗತಾರ್ಹ. ಇಂದ್ರಜಿತ್ ಗುಜ್ರಾಲ್ ಭಾರತದ ಪ್ರಧಾನಿ ಆಗಿದ್ದಾಗ, ಮನಮೋಹನ್ ಸಿಂಗ್ 2004ರಲ್ಲಿ ಪ್ರಧಾನಿ ಆದ ಮೇಲೆ ಪಾಕಿಸ್ತಾನದೊಡನೆ ಸಖ್ಯವನ್ನು ಬೆಳೆಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಪಾಕಿಸ್ತಾನ-ಭಾರತದ ನಡುವಿನ ವಿರಸ, ವೈಷಮ್ಯಕ್ಕೆ ಮುಖ್ಯ ಕಾರಣವಾಗಿರುವ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪಾಕಿಸ್ತಾನವೂ ಹಾತೊರೆಯುತ್ತಿದೆ.