ಈ ಮಾಜಿ ಶಿಕ್ಷಕಿ ಈಗ 10.5 ಶತಕೋಟಿ ಡಾಲರ್‌ನ ಒಡತಿ !
ಏಶ್ಯದ ನಂ.1 ಸ್ವಯಂಸಾಧನೆಯ ಶ್ರೀಮಂತ ಮಹಿಳೆ
ಬೀಜಿಂಗ್,ಜೂ.15: ಚೀನಾದ ಮಾಜಿ ರಸಾಯನಶಾಸ್ತ್ರ ಶಿಕ್ಷಕಿಯೊಬ್ಬರು 10.5 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿಗೆ ಒಡತಿಯಾಗಿದ್ದು, ಏಶ್ಯದಲ್ಲೇ ನಂ.1 ಸ್ವಯಂ ಸಾಧನೆಯ ಸಿರಿವಂತ ಮಹಿಳೆಯೆನಿಸಿಕೊಂಡಿದ್ದಾರೆ.
ಆಕೆಯ ಬಹುತೇಕ ಸಂಪತ್ತು ಚೀನಾದ ಅತಿ ದೊಡ್ಡ ಮನೋರೋಗ ಚಿಕಿತ್ಸೆಯ ಔಷಧಿಗಳ ತಯಾರಿಕಾ ಸಂಸ್ಥೆಯ ಶೇರುಗಳಿಂದಾಗಿ ಬಂದಿದೆ. ಹಾಂಗ್‌ಕಾಂಗ್ ಶೇರುಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಹನ್ಶೋ ಫಾರ್ಮಾಸ್ಯೂಟಿಕಲ್ ಗ್ರೂಪ್‌ನ ಶೇರುಮೌಲ್ಯದಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಆಕೆ ಏಶ್ಯದ ನಂ.1 ಸ್ವಯಂ ಸಾಧನೆಯ ಸಿರಿವಂತ ಮಹಿಳೆಯೆಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಾಜಿ ರಸಾಯನಶಾಸ್ತ್ರ ಪ್ರಾಧ್ಯಾಪಕಿಯಾದ ಝೊಂಗ್ 1995ರಲ್ಲಿ ಹಾನ್ಶೊ ಸಂಸ್ಥೆಯನ್ನು ಸ್ಥಾಪಿಸಿದ್ದರು, ಝೊಂಗ್ ಅವರು, ಏಶ್ಯದ ನಂ.1 ಸ್ವಯಂಸಾಧನೆಯ ಸಿರಿವಂತೆಯಾಗಿರುವರಾದರೂ, ಏಶ್ಯದ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಕಂಟ್ರಿ ಗೋಲ್ಡನ್ ಹೋಲ್ಡಿಂಗ್ಸ್ ಸಂಸ್ಥೆಯ ಸಹ ಅಧ್ಯಕ್ಷೆಯಾಗಿರುವ ಯಾಂಗ್ ಹುಯಾನ್ ಏಶ್ಯದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಆಕೆ ಪಿತ್ರಾರ್ಜಿತವಾಗಿ ಬಂದ ಸಂಪತ್ತಿನಿಂದಾಗಿ ಏಶ್ಯದ ನಂ.1 ಶ್ರೀಮಂತ ಮಹಿಳೆಯೆನಿಸಿಕೊಂಡಿದ್ದಾರೆ.
ಝೊಂಗ್ ಅವರು ಸಂಪತ್ತು, ತನ್ನ ಪತಿ ಸುನ್ ಪಿಯಾವೊಯಾಂಗ್ ಅವರ ಆದಾಯವನ್ನು ಮೀರಿದೆ. 9.4 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿಗೆ ಒಡೆಯನಾದ ಸುನ್ ಪಿಯೊಂಗ್ ಅವರು ಜಿಯಾಂಗ್ ಹೆಂಗ್ರುಯಿ ಔಷಧಿ ಸಂಸ್ಥೆ ಯ ಮಾಲಕರಾಗಿದ್ದಾರೆ.
ಝೊಂಗ್ ಅವರು 1982ರ ಜುಲೈನಲ್ಲಿ ಜಿಯಾಂಗ್ಸು ವಿವಿಯಲ್ಲಿ ರಾಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣದಲ್ಲಿ ತೇರ್ಗಡೆಗೊಂಡಿದ್ದರು. ಆನಂತರ ಅವರು 1990ರ ದಶಕದ ಆರಂಭದಲ್ಲಿ ಯಾನ್‌ನ ಮಾಧ್ಯಮಿಕ ಶಾಲೆಯಲ್ಲಿ ರಾಸಾಯನ ಶಾಸ್ತ್ರ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.