ಎಚ್ಚರಿಕೆ....ಅತಿಯಾದ ಕ್ಯಾಲ್ಸಿಯಂ ಸೇವನೆ ‘ಹೈಪರ್‌ಕ್ಯಾಲ್ಸಿಮಿಯಾ’ಕ್ಕೆ ಕಾರಣವಾಗುತ್ತದೆ
ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ಅದರಿಂದುಂಟಾಗುವ ಅನಾರೋಗ್ಯಗಳ ಬಗ್ಗೆ ನೀವು ಕೇಳಿರಬಹುದು. ಆದರೆ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದರೂ ಅದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಕ್ಯಾಲ್ಸಿಯಂ ನಮ್ಮ ಮೂಳೆಗಳು,ಸ್ನಾಯುಗಳು ಮತ್ತು ಹಲ್ಲುಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬಂತೆ ರಕ್ತದಲ್ಲಿ ಕ್ಯಾಲ್ಸಿಯಂ ಅತಿಯಾದರೂ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಜನರು ಹೆಚ್ಚಾಗಿ ಕ್ಯಾಲ್ಸಿಯಂ ಕೊರತೆಯ ಸಮಸ್ಯೆಯನ್ನೇ ಎದುರಿಸುತ್ತಾರೆ ಎನ್ನುವುದು ತಪ್ಪು ಗ್ರಹಿಕೆ. ಇತ್ತೀಚಿನ ದಿನಗಳಲ್ಲಿ ಶರೀರದಲ್ಲಿ ಅತಿಯಾದ ಕ್ಯಾಲ್ಸಿಯಂ ಕಾರಣವಾಗಿರುವ ಹೈಪರ್‌ಕ್ಯಾಲ್ಸಿಮಿಯಾ ಪ್ರಕರಣಗಳು ಹೆಚ್ಚುತ್ತಿವೆ.
ನಮ್ಮ ಶರೀರದಲ್ಲಿ 8.8ರಿಂದ 10.4 ಎಂಜಿ/ಡಿಎಲ್ ಕ್ಯಾಲ್ಸಿಯಂ ಇದ್ದರೆ ಅದನ್ನು ಸಹಜ ಮಟ್ಟ ಎಂದು ಪರಿಗಣಿಸಲಾಗಿದೆ. ಇದು 10.4 ಎಂಜಿ/ಡಿಎಲ್‌ಗಿಂತ ಹೆಚ್ಚಾದರೆ ರೋಗಿಯು ಹೈಪರ್‌ಕ್ಯಾಲ್ಸಿಮಿಯಾದಿಂದ ಬಳಲುತ್ತಿರುತ್ತಾನೆ. ಹೈಪರ್‌ಕ್ಯಾಲ್ಸಿಮಿಯಾದಿಂದ ದೂರವಿರಬೇಕಾದರೆ ನಾವು ನಮ್ಮ ಆಹಾರದಲ್ಲಿ ಅತಿಯಾದ ಕ್ಯಾಲ್ಸಿಯಂ ಇಲ್ಲದಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಹೈಪರ್‌ಕ್ಯಾಲ್ಸಿಮಿಯಾಕ್ಕೆ ಕಾರಣಗಳು
ಅತಿಯಾಗಿ ಕ್ಯಾಲ್ಸಿಯಂ ಮಾತ್ರೆಗಳು,ಸಿರಪ್‌ನಂತಹ ಪೂರಕಗಳ ಸೇವನೆಯು ಹೈಪರ್‌ಕ್ಯಾಲ್ಸಿಮಿಯಾಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಅಲ್ಲದೆ ಹೆಚ್ಚಿನ ಪ್ಯಾರಾಥೈರಾಯ್ಡ್ ಹೈಪರ್‌ಪ್ಲಾಸಿಯಾ(ಪಿಟಿಎಚ್) ಉತ್ಪಾದಿಸುವ ಔಷಧಿಗಳು ಶರೀರವು ಅಗತ್ಯಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳುವಂತೆ ಮಾಡುತ್ತವೆ ಮತ್ತು ಇದು ಹೈಪರ್‌ಕ್ಯಾಲ್ಸಿಮಿಯಾಕ್ಕೆ ಕಾರಣವಾಗುತ್ತದೆ. ವೈದ್ಯರೊಂದಿಗೆ ಸಮಾಲೋಚಿಸದೆ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸಬಾರದು.
ಎಲ್ಲ ನಾಲ್ಕೂ ಪ್ಯಾರಾಥೈರಾಯ್ಡ್ ಗ್ರಂಥಿಗಳು ಅತಿಯಾದ ಪಿಟಿಎಚ್‌ನ್ನು ಅಥವಾ ಥೈರಾಯ್ಡ್ ಗ್ರಂಥಿಯು ಅತಿಯಾಗಿ ಹಾರ್ಮೋನ್‌ನ್ನು ಉತ್ಪಾದಿಸಿದಾಗ ಹೈಪರ್‌ಕ್ಯಾಲ್ಸಿಮಿಯಾ ಉಂಟಾಗುತ್ತದೆ. ಅಲ್ಲದೆ ಅತಿಯಾದ ಕ್ಯಾಲ್ಸಿಯಂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈಪರ್‌ಕ್ಯಾಲ್ಸಿಮಿಯಾ ಮಾರಣಾಂತಿಕವಾಗಬಲ್ಲುದು ಎನ್ನುತ್ತಾರೆ ತಜ್ಞರು.
ಅತಿಯಾದ ವಿಟಾಮಿನ್ ಡಿ ಮಾತ್ರೆಗಳ ಸೇವನೆಯೂ ಹೈಪರ್‌ಕ್ಯಾಲ್ಸಿಮಿಯಾಕ್ಕೆ ಕಾರಣವಾಗುತ್ತದೆ. ನಿರ್ಜಲೀಕರಣದ ಸಂದರ್ಭದಲ್ಲಿ ರಕ್ತದಲ್ಲಿ ದ್ರವದ ಕಡಿಮೆ ಮಟ್ಟದಿಂದಾಗಿಕ್ಯಾಲ್ಸಿಯಂ ಮಟ್ಟವು ಹೆಚ್ಚುವುದರಿಂದ ಅದು ಕೂಡ ಸ್ವಲ್ಪ ಮಟ್ಟಿಗೆ ಹೈಪರ್‌ಕ್ಯಾಲ್ಸಿಮಿಯಾಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ 30ರಿಂದ 60 ವರ್ಷ ವಯೋಮಾನದವರು ಹೈಪರ್‌ಕ್ಯಾಲ್ಸಿಮಿಯಾಕ್ಕೆ ಗುರಿಯಾಗುವುದು ಹೆಚ್ಚು.
ಹೈಪರ್‌ಕ್ಯಾಲ್ಸಿಮಿಯಾದ ಲಕ್ಷಣಗಳು:
ಮಲಬದ್ಧತೆ,ಪದೇಪದೇ ಮೂತ್ರ ವಿಸರ್ಜನೆ,ಅತಿಯಾದ ಬಾಯಾರಿಕೆ,ಬಳಲಿಕೆ,ಅಗ್ನಿಮಾಂದ್ಯ ಅಥವಾ ಹಸಿವಿಲ್ಲದಿರುವಿಕೆ,ಹೊಟ್ಟೆನೋವು,ವಾಕರಿಕೆ ಮತ್ತು ವಾಂತಿ,ಅಸಹಜ ವರ್ತನೆ ಇವು ಹೈಪರ್‌ಕ್ಯಾಲ್ಸಿಮಿಯಾದ ಲಕ್ಷಣಗಳಾಗಿವೆ.
ಹೈಪರ್‌ಕ್ಯಾಲ್ಸಿಮಿಯಾದ ದುಷ್ಪರಿಣಾಮಗಳು
ಹೈಪರ್‌ಕ್ಯಾಲ್ಸಿಮಿಯಾ ಹಲವಾರು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ಕೋಮಾ ಸ್ಥಿತಿಗೂ ಕಾರಣವಾಗಬಲ್ಲುದು. ಕ್ಯಾಲ್ಸಿಯಂ ನಮ್ಮ ಮಿದುಳು ಮತ್ತು ನರಮಂಡಲದ ಕಾರ್ಯನಿರ್ವಹಣೆಗೆ ನೆರವಾಗುತ್ತದೆ. ಆದರೆ ಅತಿಯಾದ ಕ್ಯಾಲ್ಸಿಯಂ ನರಮಂಡಳಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅತಿಯಾದ ಮೂತ್ರ ವಿಸರ್ಜನೆ,ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಶೇಖರಣೆ, ಮೂತ್ರಪಿಂಡ ಕಲ್ಲುಗಳು,ಮೂತ್ರನಾಳ ಸೋಂಕು,ಸಂವೇದನಾಶೀಲತೆಯಲ್ಲಿ ಬದಲಾವಣೆ,ಸೆಳವುಗಳು ಮತ್ತು ಅಧಿಕ ರಕ್ತದೊತ್ತಡ ಇವು ಹೈಪರ್‌ಕ್ಯಾಲ್ಸಿಮಿಯಾದ ದುಷ್ಪರಿಣಾಮಗಳಲ್ಲಿ ಸೇರಿವೆ.
ಮುನ್ನೆಚ್ಚರಿಕೆ ಕ್ರಮಗಳು
ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದರಿಂದ ಹೈಪರ್‌ಕ್ಯಾಲ್ಸಿಮಿಯಾವನ್ನು ತಡೆಗಟ್ಟಬಹುದು. ನಮ್ಮ ಶರೀರವನ್ನು ಸೇರುವ ಕ್ಯಾಲ್ಸಿಯಂ ಪ್ರಮಾಣದ ಮೇಲೆ ನಿಗಾಯಿರಿಸುವುದು ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಶರೀರದಲ್ಲಿ ಇಂತಹ ಎಲ್ಲ ಘಟಕಗಳು ಸಮತೋಲನದಲ್ಲಿರುತ್ತವೆ.
ಯಥೇಚ್ಛ ನೀರಿನ ಸೇವನೆ, ಮೂತ್ರಪಿಂಡಗಳು ಮತ್ತು ಮೂಳೆಗಳಿಗೆ ಏಟು ಬೀಳದಂತೆ ರಕ್ಷಣೆ,ಧೂಮ್ರಪಾನ ವರ್ಜನೆ,ಮೂಳೆಗಳನ್ನು ಸದೃಢ ಮತ್ತು ಆರೋಗ್ಯಯುತವಾಗಿರಿಸುವ ಸೂಕ್ತ ವ್ಯಾಯಾಮ ಇವು ಇಂತಹ ಕೆಲವು ಮುನ್ನೆಚ್ಚರಿಕೆ ಕ್ರಮಗಳಾಗಿವೆ.