ಸರಕಾರಿ ಶಾಲೆ ಅಂತೀರಾ...ಮತ್ಯಾಕೆ ಇದು ಇಷ್ಟು ಚೆನ್ನಾಗಿದೆ!
ಅಂತೂ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ಆರಂಭವಾಯಿತು. ಬರಪೀಡಿತ ಪ್ರದೇಶದ ಗ್ರಾಮವೊಂದರ ಸರಕಾರಿ ಶಾಲೆಯಲ್ಲಿ ಗ್ರಾಮವಾಸ್ತವ್ಯ ಆರಂಭಿಸುವುದು ಎಂದು ನಿರ್ಧರಿಸಲಾಯಿತು. ನೇರವಾಗಿ ಶಾಲೆಗೆ ಕರೆದುಕೊಂಡು ಹೋಗಲಾಯಿತು. ಸರಕಾರಿ ಶಾಲೆಗಳ ಗೋಡೆಗಳು ತುಂಬಾ ದುರ್ಬಲ ಇರುವುದರಿಂದ ಅಧಿಕಾರಿಗಳು ಗೋಡೆಯನ್ನು ಮೊದಲೇ ಪರೀಕ್ಷಿಸಿದ್ದರು. ಮುಖ್ಯವಾಗಿ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಅದರೊಳಗೆ ಬೃಹತ್ ಹೆಗ್ಗಣಗಳು ಅವಿತುಕೊಂಡಿರುವ ಸಾಧ್ಯತೆಗಳಿರುತ್ತದೆ. ರಾತ್ರಿ ಹೆಗ್ಗಣಗಳು ಸಾಹೇಬರಿಗೆ ತೊಂದರೆ ಕೊಟ್ಟರೆ? ಶಿಕ್ಷಣಾಧಿಕಾರಿಗಳು ತಲೆತುರಿಸತೊಡಗಿದರು.
ಜಿಲ್ಲಾಧಿಕಾರಿಗಳಿಗೆ ಸಿಟ್ಟು ಬಂತು ‘ಅದೇನು ಮಾಡುತ್ತೀರೋ ಮಾಡಿ. ಅವರಿಗೇನಾದರೂ ತೊಂದರೆಯಾದರೆ ನಿಮ್ಮನ್ನು ಬಿಸಿಯೂಟ ಮಾಡುವ ಸೆಕ್ಷನ್‌ಗೆ ವರ್ಗಾಯಿಸಬೇಕಾಗುತ್ತದೆ...’ ಕಡಕ್ಕಾಗಿ ಶಿಕ್ಷಣಾಧಿಕಾರಿಗೆ ಎಚ್ಚರಿಸಿದರು.
‘‘ಸರಕಾರಿ ಶಾಲೆಯ ಗೋಡೆಯನ್ನು ಪರೀಕ್ಷಿಸಲು ನಾನು ಸ್ವಲ್ಪ ಜೋರಾಗಿ ಮುಟ್ಟಿದೆ. ಅರ್ಧ ಗೋಡೆ ಕುಸಿದು ಬಿತ್ತು ಸಾರ್’’ ಇಂಜಿನಿಯರ್ ಹೇಳಿದ.
‘‘ಆದರೆ ಸಾಹೇಬರು ಸರಕಾರಿ ಶಾಲೆಯಲ್ಲೇ ವಾಸ್ತವ್ಯ ಹೂಡುವುದಾಗಿ ಪ್ರೆಸ್‌ಮೀಟ್ ಮಾಡಿದ್ದಾರೆ....’’ ಜಿಲ್ಲಾಧಿಕಾರಿ ಆತಂಕದಿಂದ ಹೇಳಿದರು.
‘‘ಸಾರ್ ಒಂದು ಉಪಾಯ....’’ ಶಿಕ್ಷಣಾಧಿಕಾರಿ ಹೇಳಿದರು.
‘‘ಏನ್ರೀ ಅದು...’’
‘‘ನಮ್ಮೂರಲ್ಲೊಂದು ಹೊಟೇಲ್ ಇದೆ. ದೊಡ್ಡ ಹೊಟೇಲ್....ತಾತ್ಕಾಲಿಕವಾಗಿ ಅದರ ಬೋರ್ಡ್ ತೆಗೆದು ಅಲ್ಲಿಗೆ ಸರಕಾರಿ ಶಾಲೆಯ ಬೋರ್ಡ್ ತೂಗು ಹಾಕೋಣ. ಸಾಹೇಬ್ರು ಅಲ್ಲೇ ವಾಸ್ತವ್ಯ ಮಾಡುವುದರಿಂದ ಸಕಲ ಅನುಕೂಲಗಳು ಇವೆ..’’
‘‘ಅಲ್ರೀ...ಅಲ್ಲಿ ಕೋಣೆ....ಟೇಬಲ್ ಕುರ್ಚಿಗಳನ್ನು ನೋಡಿ ಸಾಹೇಬರಿಗೆ ಅನುಮಾನ ಬರುವುದಿಲವೇ?’’
‘‘ಸಾರ್...ಅಡುಗೆ ಕೋಣೆಯನ್ನು ಬಿಸಿಯೂಟ ಮಾಡುವ ಕೋಣೆ ಎಂದರಾಯಿತು. ಅವರಿಗೆ ಬಿಸಿಬಿಸಿಯಾಗಿ ಬಡಿಸುವುದಕ್ಕೂ ಅನುಕೂಲ....ಅಪರೂಪದ ಸರಕಾರಿ ಶಾಲೆಯನ್ನು ನೋಡಿ ಸಾಹೇಬರಿಗೂ ಖುಷಿಯಾಗಬಹುದು...’’
‘‘ಅಲ್ರೀ...ಹೊಟೇಲನ್ನು ಸರಕಾರಿ ಶಾಲೆ ಎಂದು ತಿಳಿದು ಕೊಳ್ಳಲು ಸಾಹೇಬರಿಗೆ ಬುದ್ಧಿ ಇಲ್ಲ ಎಂದು ತಿಳಿದುಕೊಂಡಿದ್ದೀರಾ? ಶಾಲಾ ಮಕ್ಕಳನ್ನೆಲ್ಲ ಹೊಟೇಲಲ್ಲಿ ಕೂರಿಸುವುದಕ್ಕಾಗುತ್ತಾ....ಲಾಡ್ಜ್ ಬೇರೆ....’’ ಜಿಲ್ಲಾಧಿಕಾರಿ ಕಿಡಿಯಾದರು.
‘‘ಹಾಗಾದರೆ ಮತ್ತೊಂದು ಐಡಿಯಾ....’’ ಶಿಕ್ಷಣಾಧಿಕಾರಿಗಳು ಹೇಳಿದರು.
‘‘ಹೇಳ್ರೀ....’’
‘‘ಅದೇ ಸಾರ್...ನಮ್ಮೂರಲ್ಲಿ ಒಂದು ಖಾಸಗಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದೆ. ಎಲ್ಲ ವ್ಯವಸ್ಥೆ ಚೆನ್ನಾಗಿದೆ....ಕಟ್ಟಡ ಸೂಪರ್. ಗ್ರೌಂಡ್‌ಕೂಡ ಚೆನ್ನಾಗಿದೆ....’’
‘‘ಆದ್ರೆ ಅವರು ಒಪ್ಪುತ್ತಾರೇನ್ರೀ...’’
‘‘ಒಪ್ಪದೆ ಎಲ್ಲಿ ಹೋಗ್ತಾರೆ ಸಾರ್? ಆ ಇಂಗ್ಲಿಷ್ ಮೀಡಿಯಂ ಶಾಲೆಗೆ ನಾನೂ ದುಡ್ಡು ಹಾಕಿದ್ದೀನಿ....ಸದ್ಯಕ್ಕೆ ಅದನ್ನೇ ಸರಕಾರಿ ಶಾಲೆ ಮಾಡಿ ಬಿಡೋಣ...’’ ಶಿಕ್ಷಣ ಅಧಿಕಾರಿಗಳು ಹೇಳಿದರು.
‘‘ಸರಿ ಹಾಗಾದರೆ’’ ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿತು.
****
ಗ್ರಾಮವಾಸ್ತವ್ಯಕ್ಕೆಂದು ಸರಕಾರಿ ಶಾಲೆಗೆ ಬಂದ ಮುಖ್ಯಮಂತ್ರಿ ಆಘಾತಗೊಂಡರು ‘‘ಏನ್ರೀ...ಇದು ಸರಕಾರಿ ಶಾಲೆ ಅಂತೀರಾ? ಆದರೆ ಗೋಡೆಗಳಲ್ಲಿ ಬಿರುಕಿಲ್ಲ. ಕಟ್ಟಡ ತುಂಬಾ ಚೆನ್ನಾಗಿದೆ...’’ ಅಧಿಕಾರಿಯನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು.
‘‘ಸಾರ್...ನೀವು ಅಧಿಕಾರಕ್ಕೆ ಬಂದ ಬಳಿಕ ಆದ ಅಭಿವೃದ್ಧಿ ಸಾರ್....’’ ಜಿಲ್ಲಾಧಿಕಾರಿ ಉತ್ತರಿಸಿದರು.
‘‘ಏನ್ರೀ...ಗೋಡೆಯ ಮೇಲೆ ಎಲ್ಲ ಇಂಗ್ಲಿಷ್ ಕಾಣ್ತಾ ಇದೆ....’’
‘‘ಸಾರ್...ಇದು ಸರಕಾರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಾರ್....’’ ಶಿಕ್ಷಣಾಧಿಕಾರಿಗಳು ಸರಿಪಡಿಸಿದರು.
‘‘ಅದಿರ್ಲಿ...ಪತ್ರಿಕೆಗಳಿಗೆ ಕಳಿಸೋದಕ್ಕೆ ಫೋಟೋ ತೆಗೆಯೋದು ಹೇಗೆ?’’
‘‘ಇಲ್ಲೇ ಮಲಗಿ ಸಾರ್....ತೆಗೆಯೋಣ....’’ ಜಿಲ್ಲಾಧಿಕಾರಿಗಳು ಹೇಳಿದರು.
‘‘ಅಲ್ಲರೀ...ಈ ಶಾಲೆ ನೋಡಿದರೆ ಮಾರ್ಬಲ್ ಹಾಕಿದೆ. ಇಲ್ಲಿ ಮಲಗಿ ಪೋಟೊ ತೆಗೆದ್ರೆ ಯಾವುದೋ ಐಶಾರಾಮ ಹೊಟೇಲಲ್ಲಿ ಮಲಗಿದ್ದಾರೆ ಎಂದು ಜನ ತಪ್ಪು ತಿಳ್ಕೋ ಬಹುದು....ಹಳೆ ನೆಲ, ಗೋಡೆ ಇವೆಲ್ಲದರ ನಡುವೆ ಮಲಗಿದ್ರೆ ಅದಕೊಂದು ನೇಟಿವ್ ಇರತ್ತೆ....’’
ಈಗ ಶಿಕ್ಷಣಾಧಿಕಾರಿಗಳು ತಲೆ ಓಡಿಸಿದರು ‘‘ಸಾರ್...ಇಲ್ಲಿ ಕಳಪೆ ಖಾಸಗಿ ಶಾಲೆಯೊಂದಿದೆೆ. ಅಲ್ಲಿ ಹೋಗಿ ಪೋಟೋ ತೆಗೆಸ್ಕೊಂಡು ಬರೋಣ ಸಾರ್...ಯಾರಿಗೂ ಗೊತ್ತಾಗಲ್ಲ’’
‘‘ಸರಿ, ಹಾಗೆ ಮಾಡಿ....’’ ಸಾಹೇಬರು ಸಂತೃಪ್ತರಾದರು.
ಪಕ್ಕದಲ್ಲೇ ಬೀಳುವ ಸ್ಥಿತಿಯಲ್ಲಿದ್ದ ಸರಕಾರಿ ಶಾಲೆಯನ್ನೇ ಖಾಸಗಿ ಶಾಲೆ ಎಂದು ಹೇಳಿ ಅಲ್ಲೇ ಬೇರೆ ಬೇರೆ ಮಲಗಿರುವ ಭಂಗಿಗಳಲ್ಲಿ ಫೋಟೊ ತೆಗೆಯಲಾಯಿತು. ಅಲ್ಲಿಂದ ನೇರವಾಗಿ ಸರಕಾರಿ ಶಾಲೆ ಎಂದು ನಂಬಿಸಲಾದ ಖಾಸಗಿ ಶಾಲೆಯಲ್ಲಿ ಕುಮಾರಸ್ವಾಮಿಯವರಿಗೆ ಮಲಗುವ ವ್ಯವಸ್ಥೆ ಮಾಡಲಾಯಿತು.
ಮುಖ್ಯಮಂತ್ರಿಯವರಿಗೆ ಗಟ್ಟಿ ನಿದ್ದೆ. ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಬಾರೀ ಸಿಡಿಲಿನ ಸದ್ದು. ಬೆಚ್ಚಿ ಎದ್ದು ಕುಳಿತರು ‘‘ಅದೇನ್ರೀ...ಸಿಡಿಲು! ಮಳೆ ಬರ್ತಾ ಇದೆಯಾ?’’
‘‘ಇಲ್ಲ ಸಾರ್...ನಿಮ್ಮ ಅಪ್ಪಾಜಿಯವರು ಪ್ರೆಸ್ ಮೀಡ್ ಮಾಡ್ತಾ ಇದ್ದಾರೆ. ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಕರೆ ನೀಡಿರುವ ಸದ್ದು ಸಾರ್...’’
‘‘ಹೊರಡ್ರೀ...ಮಳೆಯ ಕಾರಣದಿಂದ ವಾಸ್ತವ್ಯ ಮುಂದೂಡಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿ. ತಕ್ಷಣ ಬೆಂಗಳೂರಿಗೆ ಹೋಗುವ ಏರ್ಪಾಡು ಮಾಡಿ....’’ ಎಂದವರೆ ಮುಖ್ಯಮಂತ್ರಿಯವರು ಎದ್ದೆನೋ ಬಿದ್ದೆನೋ ಎಂದು ಬೆಂಗಳೂರಿಗೆ ದೌಡಾಯಿಸಿದರು.