varthabharthi


ಫೋಕಸ್

‘ಯುವ ಇಂಡಿಯಾ’ದ ಸಂಸದರು

ಪತಿಯ ಆತ್ಮಹತ್ಯೆಯಿಂದ ಕಂಗೆಡದ ರಕ್ಷಾ ಖಡ್ಸೆ ಎರಡನೇ ಬಾರಿ ಸಂಸದೆ

ವಾರ್ತಾ ಭಾರತಿ : 24 Jun, 2019

ವಿವಾಹವಾಗಿ ಕೆಲ ವರ್ಷಗಳಲ್ಲೇ ಪತಿಯನ್ನು ಕಳೆದುಕೊಂಡರೂ ಕುಗ್ಗದೆ ತನ್ನ ಮಾವನ ನೆರವಿನಿಂದ ರಾಜಕೀಯ ಕ್ಷೇತ್ರಕ್ಕಿಳಿದು, ಜನರ ವಿಶ್ವಾಸ ಗಳಿಸಿ 2ನೆ ಬಾರಿಗೆ ಸಂಸತ್ ಪ್ರವೇಶಿಸಿದವರು ರಕ್ಷಾ ಖಡ್ಸೆ. ಇವರು ಬಿಜೆಪಿಯ ಪ್ರಭಾವಿ ನಾಯಕ ಏಕನಾಥ್ ಖಡ್ಸೆಯವರ ಸೊಸೆ.

2013ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು ಏಕನಾಥ್ ಖಡ್ಸೆ. ಜಲಗಾಂವ್ ಜಿಲ್ಲಾ ಪರಿಷತ್ ನ ಸದಸ್ಯರಾಗಿದ್ದ ಏಕನಾಥ್ ಖಡ್ಸೆಯವರ ಪುತ್ರ ನಿಖಿಲ್ ಖಡ್ಸೆ 2013ರಲ್ಲಿ 16 ಮತಗಳ ಅಂತರದಲ್ಲಿ ಕಾಂಗ್ರೆಸ್ ನ ಮನೀಶ್ ಜೈನ್ ವಿರುದ್ಧ ಸೋಲನುಭವಿಸಿದರು. ಸೋಲಿನ ಆಘಾತದಿಂದ ತತ್ತರಿಸಿದ ನಿಖಿಲ್ 2013ರ ಮೇ 2ರಂದು ತನ್ನ ರಿವಾಲ್ವರ್ ನಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡರು.

ಅಂದು ರಕ್ಷಾ ಖಡ್ಸೆಯವರಿಗೆ 26 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಸಹಿತ ಇಬ್ಬರು ಮಕ್ಕಳಿದ್ದರು. ಸಣ್ಣ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು, ಸಮಾಜದಲ್ಲಿ ವಿಧವೆಯಾಗಿ ಬದುಕಬೇಕಾದ ಅನಿವಾರ್ಯತೆ ಎದುರಾದಾಗ ಕುಗ್ಗದ ರಕ್ಷಾ ಖಡ್ಸೆ ಸಕ್ರಿಯ ರಾಜಕಾರಣಕ್ಕಿಳಿದರು. ಅದಕ್ಕೂ ಮೊದಲು ಅವರು 2010ರಿಂದ 2012ರವರೆಗೆ ಕೊಥಾಲಿ ಗ್ರಾಪಂನ ಸರಪಂಚರಾಗಿ, 2012ರಿಂದ 2014ರವರೆಗೆ ಜಲಗಾಂವ್ ಜಿಲ್ಲಾ ಪರಿಷತ್ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಇವರು ಕಾಂಗ್ರೆಸ್ ನ ಮನೀಶ್ ಜೈನ್ ರನ್ನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಸಂಸದೆಯಾದರು. 2019ರ ಲೋಕಸಭಾ ಚುನಾವಣೆಯಲ್ಲಿ ರೇವರ್ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಡಾ.ಉಲ್ಲಾಸ್ ಪಾಟಿಲ್ ರನ್ನು 3 ಲಕ್ಷ ಮತಗಳ ಅಂತರದಲ್ಲಿ ಮಣಿಸಿ ಮತ್ತೊಮ್ಮೆ ಸಂಸತ್ ಪ್ರವೇಶಿಸಿದ್ದಾರೆ.

1987ರಲ್ಲಿ ಜನಿಸಿದ ಇವರು ಬಿಎಸ್ಸಿ (ಕಂಪ್ಯೂಟರ್ ಸೈನ್ಸ್ ) ಪದವೀಧರರು. ಇವರ ತಂದೆ ರೈತನಾಗಿದ್ದು, ಶಿಕ್ಷಣದ ಸಂದರ್ಭ ಸರಕಾರಿ ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿದ್ದರು. ಬಡ ಕುಟುಂಬವೊಂದರ ಹೆಣ್ಣುಮಗಳು ಪ್ರಸಿದ್ಧ ರಾಜಕಾರಣಿಯ ಮನೆಯ ಸೊಸೆಯಾದರು. ಆದರೆ ಮದುವೆಯಾದ ಕೆಲ ವರ್ಷಗಳಲ್ಲೇ ಪತಿಯನ್ನು ಕಳೆದುಕೊಂಡರೂ, ಧೃತಿಗೆಡದೆ ರಾಜಕೀಯಕ್ಕೆ ಧುಮುಕಿ ಇಂದು ಸಂಸತ್ ಪ್ರವೇಶಿಸಿದ್ದಾರೆ. ತನ್ನ ಪತಿಯನ್ನು ಮಣಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನೂ ಮಣಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)