varthabharthi


ಫೋಕಸ್

‘ಯುವ ಇಂಡಿಯಾ’ದ ಸಂಸದರು

ಹಾಡುತ್ತಲೇ ಎಡರಂಗದ ಭದ್ರಕೋಟೆ ಗೆದ್ದು ದಿಲ್ಲಿಗೆ ಹೋದ ರಮ್ಯಾ ಹರಿದಾಸ್

ವಾರ್ತಾ ಭಾರತಿ : 25 Jun, 2019

ಎಡರಂಗದ ಭದ್ರಕೋಟೆಯಾದ ಕೇರಳದ ಅಳತೂರಿನಲ್ಲಿ ರಮ್ಯಾ ಹರಿದಾಸ್ ಎಂಬ ಯುವತಿ ಲೋಕಸಭಾ ಚುನಾವಣೆಯಲ್ಲಿ ವಿಜಯಿಯಾಗಿ ಹೊರಹೊಮ್ಮುತ್ತಾರೆ ಎಂದು ಯಾರೂ ಎಣಿಸಿರಲಿಲ್ಲ. ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಷಣ ಮಾತ್ರವಲ್ಲದೆ, ತನ್ನ ಹಾಡುಗಳ ಮೂಲಕವೂ ರಮ್ಯಾ ಮತದಾರರ ಹೃದಯ ಗೆದ್ದರು. ಕೆಲವೊಂದು ಸಂದರ್ಭಗಳಲ್ಲಿ ಹಾಡುಗಳ ಕಾರಣಕ್ಕಾಗಿಯೇ ರಾಜಕೀಯ ವಿರೋಧಿಗಳು ಅವರನ್ನು ಟೀಕಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನ ಪ್ರಬಲ ಅಭ್ಯರ್ಥಿ ಪಿ.ಕೆ. ಬಿಜು ಅವರನ್ನು ರಮ್ಯಾ ಹರಿದಾಸ್ 1,58,968 ಮತಗಳಿಂದ ಮಣಿಸಿದರು. ಈ ಮೂಲಕ ಕೇರಳದಿಂದ ಆಯ್ಕೆಯಾದ 2ನೆ ದಲಿತ ಸಂಸದೆಯಾಗಿ ಹೊರಹೊಮ್ಮಿದರು. 1971ರಲ್ಲಿ ಸಿಪಿಐಯ ಅಭ್ಯರ್ಥಿ ಭಾರ್ಗವಿ ತಂಗಪ್ಪನ್ ಸಂಸತ್ ಪ್ರವೇಶಿಸಿದ ರಾಜ್ಯದ ಮೊದಲ ಮಹಿಳೆ.

ಇದಕ್ಕೂ ಮೊದಲು ಅಳತೂರು ಸಿಪಿಎಂ ವಶದಲ್ಲಿತ್ತು. ಈ ಕ್ಷೇತ್ರದಲ್ಲಿ ಬಿಜು ವಿಜಯ ಬಹುತೇಕ ಖಚಿತ ಎಂದೇ ಹೇಳಲಾಗಿತ್ತು. ಆದರೆ ಮತದಾರರು ನಿರ್ಧಾರ ಬೇರೆಯದ್ದೇ ಆಗಿತ್ತು. ಕೋಝಿಕ್ಕೋಡ್ ಜಿಲ್ಲೆಯ ಕುನ್ನಮಂಗಲಂ ಬ್ಲಾಕ್ ಪಂಚಾಯತ್ ಅಧ್ಯಕ್ಷೆಯಾಗಿದ್ದ 32 ವರ್ಷದ ರಮ್ಯಾ ಮತದಾನದ ನಂತರ ಎಪ್ರಿಲ್ 23ರಂದು ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅದಾಗಲೇ ಅವರಿಗೆ ತನ್ನ ಗೆಲುವಿನ ಬಗ್ಗೆ ಖಾತರಿಯಾಗಿತ್ತು.

2011ರಲ್ಲಿ ರಾಹುಲ್ ಗಾಂಧಿ ನಡೆಸಿದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ರಮ್ಯಾರನ್ನು ಪಕ್ಷವು ಗುರುತಿಸಿತ್ತು. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ರಮ್ಯಾರನ್ನು ಸ್ವತಃ ರಾಹುಲ್ ಗಾಂಧಿಯವರೇ ಆಯ್ಕೆ ಮಾಡಿದ್ದರು. ಏಕ್ತಾ ಪರಿಷತ್ ನಡೆಸಿದ್ದ ಆದಿವಾಸಿ ಹೋರಾಟಗಳಲ್ಲಿ ರಮ್ಯಾ ಸಕ್ರಿಯವಾಗಿ ಭಾಗವಹಿಸಿದ್ದರು.

ಬಡ ಕುಟುಂಬದ ಹಿನ್ನೆಲೆಯವರಾದ ರಮ್ಯಾ ಅವರು ಜನರೊಂದಿಗೆ ಆತ್ಮೀಯವಾಗಿ ಬೆರೆತರು. ಸಾರ್ವಜನಿಕರೊಂದಿಗೆ ಇದ್ದ ಅವರು ತಳಮಟ್ಟದ ಸಮಸ್ಯೆಗಳನ್ನು ಬೇಗನೇ ಅರಿತುಕೊಂಡರು. ರ್ಯಾಲಿಗಳನ್ನು ನಡೆಸುವ ವೇಳೆ ಅವರು ಹಾಡುಗಳನ್ನು ಹಾಡಿ ರಂಜಿಸುತ್ತಿದ್ದರು. ಇದಕ್ಕಾಗಿ ಕಮ್ಯುನಿಸ್ಟ್ ಪಕ್ಷದ ನಾಯಕರು ಹಲವು ಬಾರಿ ಅವರನ್ನು ಗೇಲಿ ಮಾಡಿದ್ದರು. ಒಮ್ಮೆ ಅವರ ಬಗ್ಗೆ ಸಿಪಿಎಂ ನಾಯಕರೊಬ್ಬರು ಕೀಳುಮಟ್ಟದ ಹೇಳಿಕೆ ನೀಡಿದ್ದರು. ಆದರೆ ರಮ್ಯಾ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರಚಾರದಲ್ಲಿ ತೊಡಗಿದರು.

“ಈ ಹೇಳಿಕೆಯಿಂದ ನಾನು ಮಾನಸಿಕ ಒತ್ತಡವನ್ನು ಎದುರಿಸಬೇಕಾಯಿತು. ಇಂತಹ ಹೇಳಿಕೆಯನ್ನು ನಾನು ಸಹಿಸುವುದಿಲ್ಲ. ಲಿಂಗ ತಾರತಮ್ಯವನ್ನು ಎದುರಿಸುವ ರಾಜಕೀಯ ಪ್ರವೇಶಿಸುವ ಕೊನೆಯ ಮಹಿಳೆ ನಾನಾಗಬೇಕು” ಎಂದು ರಮ್ಯಾ ಹರಿದಾಸ್ ಸಿಪಿಎಂ ನಾಯಕನ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ್ದರು.

ಕೈಹಿಡಿದ ಹಾಡು

ಸಂಗೀತ ಕ್ಷೇತ್ರದಲ್ಲಿ ಪದವೀಧರೆಯಾಗಿರುವ ರಮ್ಯಾ ತನ್ನ ಪ್ರಚಾರ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಆಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದರು. ದಿನಗೂಲಿ ಕಾರ್ಮಿಕನ ಪುತ್ರಿಯಾಗಿರುವ ರಮ್ಯಾ ಕರ್ನಾಟಕ ಸಂಗೀತ ಅಭ್ಯಸಿಸಿದ್ದರಾದರೂ ಸಂಗೀತ ಕ್ಷೇತ್ರದ ಬದಲಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಮುಂದುವರಿದರು.

ದೇಶದಲ್ಲಿ ಅತಿ ಕಡಿಮೆ (22,816 ರೂ.) ಆಸ್ತಿ ಹೊಂದಿದವರಲ್ಲಿ ಒಬ್ಬರಾಗಿದ್ದಾರೆ ರಮ್ಯಾ. ಇದೇ ಕಾರಣದಿಂದ ಅವರು ತನ್ನ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿದ್ದರು. ಇದರಲ್ಲೂ ಜನರು ರಮ್ಯಾರಿಗೆ ಹೆಗಲುಕೊಟ್ಟು 10 ಲಕ್ಷ ರೂ. ಸಂಗ್ರಹವಾಗಿತ್ತು. ಇಂದಿರಾ ಆವಾಸ್ ಯೋಜನೆಯಡಿ ನಿರ್ಮಾಣವಾದ ಮನೆಯಲ್ಲಿ ರಮ್ಯಾ ಕುಟುಂಬ ವಾಸವಾಗಿದೆ.

ಹಲವು ಅಡೆತಡೆಗಳನ್ನು, ಟೀಕೆಗಳನ್ನು, ಕೀಳುಮಟ್ಟದ ಹೇಳಿಕೆಗಳನ್ನು ಮತ್ತು ಸವಾಲುಗಳನ್ನು ಮೀರಿ ಸಿಪಿಎಂನ ಭದ್ರಕೋಟೆಯಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ ರಮ್ಯಾ ಹರಿದಾಸ್ ರ ಸಾಧನೆ ಎಲ್ಲರೂ ಮೆಚ್ಚುವಂತದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು