6 ಬಾರಿಯ ಸಂಸದ, ಮಾಜಿ ಕೇಂದ್ರ ಸಚಿವರನ್ನು ಮಣಿಸಿದ 26 ವರ್ಷದ ಗೊಡ್ಡೇಟಿ ಮಾಧವಿ
‘ಯುವ ಇಂಡಿಯಾ’ದ ಸಂಸದರು
ಈ ಚುನಾವಣೆಯಲ್ಲಿ 6 ಬಾರಿಯ ಸಂಸದ, ಮಾಜಿ ಕೇಂದ್ರ ಸಚಿವರೊಬ್ಬರನ್ನು 26 ವರ್ಷದ ಯುವತಿಯೊಬ್ಬರು ಮಣಿಸುತ್ತಾರೆ ಎಂದು ಮೇ 23ರ ಫಲಿತಾಂಶ ಪ್ರಕಟಗೊಳ್ಳುವವರೆಗೆ ಯಾರೂ ಊಹಿಸಿರಲಿಲ್ಲ. ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿ 2,24,098 ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಎಲ್ಲರ ಹುಬ್ಬೇರಿಸಿದ ಇವರ ಹೆಸರು ಗೊಡ್ಡೇಟಿ ಮಾಧವಿ.
ಆಂಧ್ರ ಪ್ರದೇಶದ ಅರಕು ಲೋಕಸಭಾ ಕ್ಷೇತ್ರದಿಂದ ಜಗನ್ ಮೋಹನ್ ರೆಡ್ಡಿಯ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಅವರು ಕಣಕ್ಕಿಳಿದರು. ಮಾಧವಿ ವಿರುದ್ಧ ಟಿಡಿಪಿಯಿಂದ ಕಣಕ್ಕಿಳಿದವರು ಬೇರ್ಯಾರೂ ಅಲ್ಲ 6 ಬಾರಿಯ ಸಂಸದ, ಮಾಜಿ ಕೇಂದ್ರ ಸಚಿವ ಕಿಶೋರ್ ಚಂದ್ರ ದಿಯೋ.
ತನ್ನ 26ನೆ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದ ಮಾಧವಿ ಆಂಧ್ರ ಪ್ರದೇಶದ ಅತಿ ಕಿರಿಯ ಸಂಸದರು. ಇವರ ತಂದೆ ಗೊಡ್ಡೇಟಿ ದೇಮುಡು ಕಮ್ಯುನಿಸ್ಟ್ ನಾಯಕರು ಮತ್ತು ಮಾಜಿ ಶಾಸಕರು. ಕಳೆದ ವರ್ಷವಷ್ಟೇ ಮಾಧವಿ ವೈಎಸ್ ಆರ್ ಕಾಂಗ್ರೆಸ್ ಸೇರಿದ್ದರು. ಮಾಧವಿ ವಿರುದ್ಧ ಸ್ಪರ್ಧಿಸಿದ್ದ ಕಿಶೋರ್ ಚಂದ್ರ ಕಾಂಗ್ರೆಸ್ ತೊರೆದು ಟಿಡಿಪಿ ಸೇರಿದ್ದರು.
ತಾನು ಗೆಲುವಿನ ಬಗ್ಗೆ ವಿಶ್ವಾಸ ಹೊಂದಿದ್ದೆ. ಆದರೆ ಭಾರೀ ಅಂತರದ ಗೆಲುವು ಸಿಗುತ್ತದೆ ಎಂದು ಎಣಿಸಿರಲಿಲ್ಲ ಎಂದು ಚುನಾವಣೆಯ ಗೆಲುವಿನ ಬಳಿಕ ಮಾಧವಿ ಹೇಳಿದ್ದರು. ಮಾಧವಿಯವರ ಗೆಲುವಿನ ಅಂತರ ಆಂಧ್ರದಲ್ಲಿ ನಾಲ್ಕನೆ ಅತಿ ದೊಡ್ಡ ಗೆಲುವಿನ ಅಂತರವಾಗಿತ್ತು. “ನಾನು ವೈಎಸ್ ಜಗನ್ ಮೋಹನ್ ರೆಡ್ಡಿಯವರನ್ನು ಭೇಟಿಯಾಗಿದ್ದೆ. ಅರಕುವಿನ ಜನರ ಅಭಿವೃದ್ಧಿಗಾಗಿ ಕಠಿಣ ಶ್ರಮ ವಹಿಸುವಂತೆ ಅವರು ಹೇಳಿದರು. ನನ್ನ ಕ್ಷೇತ್ರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಸರಿಯಾದ ಸೌಲಭ್ಯಗಳು, ಆಸ್ಪತ್ರೆಗಳಿಲ್ಲ. ನಾನು ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ” ಎಂದವರು ಹೇಳಿದ್ದರು.
ಸಂಸದೆಯಾಗುವುದಕ್ಕೂ ಮೊದಲು ಮಾಧವಿ ಪಡೇರು ಎಂಬಲ್ಲಿರುವ ಬುಡಕಟ್ಟು ಶಾಲೆಯೊಂದರ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 1.41 ಲಕ್ಷ ರೂ. ಮೊತ್ತದ ಆಸ್ತಿಯನ್ನು ಅವರು ಘೋಷಿಸಿದ್ದು, ಅತೀ ಕಡಿಮೆ ಆಸ್ತಿ ಹೊಂದಿದ ಅಭ್ಯರ್ಥಿಗಳಲ್ಲಿ ಮಾಧವಿಯೂ ಒಬ್ಬರಾಗಿದ್ದಾರೆ.
ಮಾಧವಿಯವರು ಪ್ರತಿನಿಧಿಸುತ್ತಿರುವ ಅರಕು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಕುಡಿಯುವ ನೀರಿನ ಕೊರತೆ, ಅಸಮರ್ಪಕ ಶೈಕ್ಷಣಿಕ ಮತ್ತು ವೈದ್ಯಕೀಯ ವ್ಯವಸ್ಥೆ, ನಿರುದ್ಯೋಗ, ಹಳ್ಳ-ದಿಣ್ಣೆಗಳಿಂದ ಕೂಡಿದ ರಸ್ತೆಗಳು ಇಲ್ಲಿನ ಪ್ರಾಥಮಿಕ ಮತ್ತು ಸಾಮಾನ್ಯ ಸಮಸ್ಯೆಗಳು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಪಣತೊಟ್ಟಿದ್ದಾರೆ ಮಾಧವಿ.
“ಪಡೇರು ಮತ್ತು ಅರಕುವಿನಲ್ಲಿ ಶಾಸಕರಾಗಿದ್ದಾಗ ನನ್ನ ತಂದೆ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಆದ್ದರಿಂದ ನಾನು ಜನರ ಬಳಿ ತೆರಳಿದಾಗ ಅವರು ನನ್ನನ್ನು ಬೇಗನೇ ಗುರುತು ಹಿಡಿದರು. ದಿಯೋ ಸೇರಿದಂತೆ ಈ ಹಿಂದಿನ ಯಾವೊಬ್ಬ ಸಂಸದರೂ ಬುಡಕಟ್ಟು ಜನರಿಗಾಗಿ ಏನೂ ಮಾಡಿಲ್ಲ. ವೈಎಸ್ ಆರ್ ಸಿ ಕೂಡ ಕ್ಷೇತ್ರದಲ್ಲಿ ಆಳವಾಗಿ ಬೇರೂರಿತ್ತು. ಹೀಗಾಗಿ ನನ್ನ ಗೆಲುವು ಸುಲಭವಾಯಿತು” ಎಂದವರು ಹೇಳುತ್ತಾರೆ.