ವಿಶ್ವಸಂಸ್ಥೆ ನಿಷ್ಕ್ರಿಯತೆಯಿಂದ ಖಶೋಗಿ ಹತ್ಯೆಗೆ ನ್ಯಾಯ ವಿಳಂಬ: ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ
ಜಿನೇವ, ಜೂ. 27: ವಿಶ್ವಸಂಸ್ಥೆಯ ನಿಷ್ಕ್ರಿಯತೆಯಿಂದಾಗಿ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಉತ್ತರದಾಯಿತ್ವವನ್ನು ನಿಗದಿಪಡಿಸುವಲ್ಲಿ ವಿಳಂಬವಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆ್ಯಗ್ನೆಸ್ ಕ್ಯಾಲಮಾರ್ಡ್ ಬುಧವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟನಿ ಗುಟೆರಸ್ ನ್ಯಾಯದ ಪರವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ಖಶೋಗಿ ಹತ್ಯೆಯ ಬಗ್ಗೆ ತನಿಖೆ ನಡೆಸಿದ್ದ ಆ್ಯಗ್ನೆಸ್, ಹತ್ಯೆಯಲ್ಲಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ನೇರ ಪಾತ್ರವಿದೆ ಹಾಗೂ ಅವರ ವಿರುದ್ಧ ನ್ಯಾಯಾಲಯದ ವಿಚಾರಣೆ ನಡೆಯಬೇಕು ಎಂಬುದಾಗಿ ಶಿಫಾರಸು ಮಾಡುವ ಕಟು ವರದಿಯನ್ನು ಸ್ವಿಟ್ಸರ್‌ಲ್ಯಾಂಡ್‌ನ ಜಿನೇವದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.
ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್ 2ರಂದು ನಡೆದ ಖಶೋಗಿ ಹತ್ಯೆಯು ‘ನ್ಯಾಯಾಂಗೇತರ ಹತ್ಯೆ’ಯಾಗಿದೆ ಹಾಗೂ ಇದಕ್ಕೆ ಸೌದಿ ಅರೇಬಿಯವು ಹೊಣೆಗಾರನಾಗಿದೆ ಎಂಬುದಾಗಿ ಅವರು ತನ್ನ ವರದಿಯಲ್ಲಿ ಹೇಳಿದ್ದರು. ಹತ್ಯೆಯಲ್ಲಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಶಾಮೀಲಾಗಿರುವುದನ್ನು ತೋರಿಸುವ ಹಲವಾರು ಪುರಾವೆಗಳಿವೆ ಎಂಬುದಾಗಿಯೂ ಅವರು ಹೇಳಿದ್ದರು.
ಅಂತರ್‌ರಾಷ್ಟ್ರೀಯ ಕ್ರಿಮಿನಲ್ ತನಿಖೆಯನ್ನು ಆರಂಭಿಸುವಂತೆ ಆ್ಯಗ್ನೆಸ್ ಗುಟೆರಸ್‌ಗೆ ಕರೆ ನೀಡಿದ್ದರು. ಆದರೆ, ಹೀಗೆ ಮಾಡುವ ಅಧಿಕಾರ ವಿಶ್ವಸಂಸ್ಥೆ ಮುಖ್ಯಸ್ಥರಿಗಿಲ್ಲ ಹಾಗೂ ಸದಸ್ಯ ದೇಶವೊಂದು ತನಿಖೆಯನ್ನು ಆರಂಭಿಸಬೇಕು ಎಂದು ಮಹಾಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದ್ದರು.
ಮಹಾಕಾರ್ಯದರ್ಶಿ ವಕ್ತಾರರ ಪ್ರತಿಕ್ರಿಯೆ ಕೇಳಿ ತನಗೆ ನಿರಾಶೆಯಾಗಿದೆ ಎಂಬುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಲಮಾರ್ಡ್ ಹೇಳಿದ್ದಾರೆ.