ಮಹುವಾ ಮೊಯಿತ್ರ ಸಂಸತ್ತಿನಲ್ಲಿ ಮಾಡಿದ ಅಪ್ರತಿಮ ಭಾಷಣ
ಟಿಎಂಸಿ ಸಂಸದೆ ಸಂಸತ್ತಿನಲ್ಲಿ ಮಾಡಿದ ಪ್ರಪ್ರಥಮ ಭಾಷಣದ ಪೂರ್ಣ ಪಾಠ
ಸಂವಿಧಾನವನ್ನು ರಕ್ಷಿಸುವುದಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆದರೆ ಈ ಸಂವಿಧಾನಕ್ಕೆ ಇಂದು ಬೆದರಿಕೆ ಎದುರಾಗಿದೆ. ಖಂಡಿತವಾಗಿಯೂ ನೀವು ನನ್ನ ಮಾತನ್ನು ಒಪ್ಪುವುದಿಲ್ಲ. ಅಚ್ಛೇದಿನ ಈಗ ಬಂದಿದೆ, ಈ ಸರಕಾರ ನಿರ್ಮಿಸಲು ಮುಂದಾಗಿರುವ ಭಾರತದ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎಂದು ನೀವು ಹೇಳಬಹುದು. ಆದರೆ, ಆಗ ನೀವು ಸತ್ಯದಿಂದ ದೂರವಾಗುತ್ತೀರಿ. ನಿಮ್ಮ ಕಣ್ಣು ಬಿಟ್ಟು ನೋಡಿದರೆ ಮಾತ್ರ ನಿಮಗೆ ಈ ದೇಶ ಹರಿದುಹೋದ ಚಿಹ್ನೆ, ಲಕ್ಷಣಗಳು ಕಾಣಿಸುತ್ತವೆ.
ಸರ್,
ನಾನು ನಿಲುವಳಿಯನ್ನು ವಿರೋಧಿಸಲು ಹಾಗೂ ನಮ್ಮ ಪಕ್ಷ ಮುಂದಿಟ್ಟಿರುವ ತಿದ್ದುಪಡಿ ಶಿಫಾರಸಿನ ಬಗ್ಗೆ ಮಾತನಾಡಲು ಉದ್ದೇಶಿಸಿದ್ದೇನೆ. ಎಲ್ಲಕ್ಕಿಂತ ಮೊದಲು, ಸರಕಾರ ಪಡೆದಿರುವ ಅದ್ಭುತ ಜನಾದೇಶವನ್ನು ವಿನೀತಳಾಗಿ ಒಪ್ಪಿಕೊಳ್ಳುವ ಮೂಲಕ ನಾನು ಮಾತು ಆರಂಭಿಸುತ್ತೇನೆ. ಆದರೆ, ಈ ರೀತಿಯ ಜನಾದೇಶದ ಅಗಾಧತೆಯು, ಈ ಜನಾದೇಶದ ಸಮಗ್ರತೆಯು ಭಿನ್ನಾಭಿಪ್ರಾಯದ ಧ್ವನಿಯನ್ನು ಕೇಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ಈ ಜನಾದೇಶವು ಸ್ವಲ್ಪ ಕಡಿಮೆಯಾಗಿದ್ದರೆ ಆಗ ಈ ಆಖ್ಯಾನಕ್ಕೆ ಸಹಜ ತಡೆ ಮತ್ತು ಸಮತೋಲನ ಪ್ರಾಪ್ತಿಯಾಗುತ್ತಿತ್ತು. ಆದರೆ ಈ ಪ್ರಕರಣದಲ್ಲಿ ಹೀಗೆ ಆಗಲಿಲ್ಲ. ಸದನವು ವಿಪಕ್ಷಗಳಿಗೆ ಸೇರಿರುವ ಕಾರಣ ನಮಗೆ ಖಾತರಿಪಡಿಸಿರುವ ಈ ಸ್ಥಳವನ್ನು ಮರು ಪಡೆದುಕೊಳ್ಳಲು ನಾನು ಎದ್ದು ನಿಂತಿದ್ದೇನೆ.
ಈ ಸಭಾಂಗಣದ ಹೊರಗೆ ಎತ್ತರದ ಸ್ಥಾನದಲ್ಲಿರುವ ವೌಲಾನಾ ಆಝಾದ್ರ ಹೇಳಿಕೆಯನ್ನು ಉದ್ಧರಿಸಿ ನಾನು ಮಾತು ಆರಂಭಿಸುತ್ತೇನೆ. ಅವರೊಮ್ಮೆ ಹೇಳಿದ್ದರು ‘‘ಇದು ಹಲವಾರು ಮಾನವ ಜನಾಂಗಗಳು ಮತ್ತು ಸಂಸ್ಕೃತಿಗಳು ಹರಿಯುವ, ಗೌರವಾನ್ವಿತ ಮಣ್ಣಿನಲ್ಲಿ ತಮ್ಮ ಮನೆಯನ್ನು ಕಂಡುಕೊಳ್ಳುವ, ಹಾಗೂ ಹಲವು ಯಾತ್ರಿಕರ ತಂಡ ವಿಶ್ರಾಂತಿ ಪಡೆಯಲು ಬಯಸುವ ಭಾರತದ ಚಾರಿತ್ರಿಕ ಗಮ್ಯಸ್ಥಾನವಾಗಿದೆ. ಅಲ್ಲಿ ಸಂಸ್ಕೃತಿಯಿದೆ, ನಮ್ಮ ಕವಿತೆಗಳು, ನಮ್ಮ ಸಾಹಿತ್ಯಗಳು, ನಮ್ಮ ಕಲೆ, ನಮ್ಮ ದೈನಂದಿನ ಬದುಕಿನಲ್ಲಿ ಘಟಿಸುವ ಅಸಂಖ್ಯಾತ ಘಟನೆಗಳು ಇವೆಲ್ಲಾ ನಮ್ಮ ನಿಲುವನ್ನು ಪ್ರತಿನಿಧಿಸುತ್ತವೆ.’’
ಇದೇ ಆದರ್ಶದ ಆಧಾರದಲ್ಲಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಇದೇ ಸಂವಿಧಾನವನ್ನು ರಕ್ಷಿಸುವುದಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆದರೆ ಈ ಸಂವಿಧಾನಕ್ಕೆ ಇಂದು ಬೆದರಿಕೆ ಎದುರಾಗಿದೆ. ಖಂಡಿತವಾಗಿಯೂ ನೀವು ನನ್ನ ಮಾತನ್ನು ಒಪ್ಪುವುದಿಲ್ಲ. ಅಚ್ಛೇದಿನ ಈಗ ಬಂದಿದೆ, ಈ ಸರಕಾರ ನಿರ್ಮಿಸಲು ಮುಂದಾಗಿರುವ ಭಾರತದ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎಂದು ನೀವು ಹೇಳಬಹುದು. ಆದರೆ, ಆಗ ನೀವು ಸತ್ಯದಿಂದ ದೂರವಾಗುತ್ತೀರಿ. ನಿಮ್ಮ ಕಣ್ಣು ಬಿಟ್ಟು ನೋಡಿದರೆ ಮಾತ್ರ ನಿಮಗೆ ಈ ದೇಶ ಹರಿದುಹೋದ ಚಿಹ್ನೆ, ಲಕ್ಷಣಗಳು ಕಾಣಿಸುತ್ತವೆ.
ನನಗೆ ನಿಗದಿಗೊಳಿಸಿದ ಅಲ್ಪ ಸಮಯದಲ್ಲೇ ಈ ಅಪಾಯಕಾರಿ ಚಿಹ್ನೆಗಳ ಪಟ್ಟಿ ಮಾಡುತ್ತೇನೆ. ಪ್ರಥಮ ಲಕ್ಷಣ-ಇಲ್ಲಿ ಬಲಿಷ್ಠ ಮತ್ತು ಮುಂದುವರಿಯುತ್ತಿರುವ ರಾಷ್ಟ್ರೀಯತೆಯು ನಮ್ಮ ದೇಶದ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಇದು ತೋರಿಕೆಯ, ವಿದೇಶಿ ಜನರನ್ನು ಒಪ್ಪದ, ಸಂಕುಚಿತವಾದ ಲಕ್ಷಣ. ಈ ಲಕ್ಷಣಕ್ಕೆ ಒಗ್ಗೂಡಿಸುವ ಆಶಯವಿಲ್ಲ. ಜನರನ್ನು ಅವರ ಮನೆಯಿಂದ ಹೊರಗೆಸೆಯಲಾಗುತ್ತಿದೆ ಮತ್ತು ಅವರನ್ನು ಅಕ್ರಮ ವಲಸಿಗರೆನ್ನಲಾಗುತ್ತಿದೆ. ಈ ದೇಶದಲ್ಲಿ 50 ವರ್ಷದಿಂದ ಬದುಕುತ್ತಿದ್ದ ಜನರೂ ತಾವು ಭಾರತೀಯರೆಂದು ಸಾಬೀತುಪಡಿಸಲು ಕಾಗದದ ಚೂರೊಂದನ್ನು ತೋರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ತಾವು ಯಾವ ಕಾಲೇಜಿನಿಂದ ಪದವಿ ಪಡೆದಿದ್ದು ಎಂಬುದನ್ನು ಸಚಿವರು ತೋರಿಸಲು ಅಸಾಧ್ಯವಾಗಿರುವ ದೇಶದಲ್ಲಿ, ಜನತೆ ತಾವು ಈ ದೇಶದ ನಿವಾಸಿಗಳೆಂದು ಸಾಬೀತುಪಡಿಸಲು ಕಾಗದದ ಚೂರನ್ನು ತೋರಿಸಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರಿ?
ಧರ್ಮವನ್ನು ಪರೀಕ್ಷಿಸಲು ಘೋಷಣೆ ಹಾಗೂ ಚಿಹ್ನೆಗಳನ್ನು ಬಳಸಲಾಗುತ್ತಿದೆ. ದೇಶಪ್ರೇಮಿಗಳೆಂದು ಭಾರತೀಯರು ಖಾತರಿಪಡಿಸಲು ಯಾವುದೇ ಚಿಹ್ನೆಗಳು ಅಥವಾ ಘೋಷಣೆಗಳಿಲ್ಲ, ಸರ್, ಇದಕ್ಕೆ ಯಾವುದೇ ಪರೀಕ್ಷೆ, ಚಿಹ್ನೆಗಳಿಲ್ಲ.
ಎರಡನೇ ಲಕ್ಷಣ- ಮಾನವಹಕ್ಕುಗಳ ಕುರಿತ ಉಪೇಕ್ಷೆ, ತಿರಸ್ಕಾರದ ಭಾವನೆ ಆಡಳಿತದ ಎಲ್ಲಾ ಹಂತದಲ್ಲೂ ವ್ಯಾಪಿಸಿದೆ. 2014ರಿಂದ 2019ರ ಅವಧಿಯಲ್ಲಿ ದ್ವೇಷಾಪರಾಧದ ಘಟನೆಗಳು 10 ಪಟ್ಟು ಹೆಚ್ಚಿವೆ. ಇ-ಕಾಮರ್ಸ್ ಸ್ಟಾರ್ಟ್ಅಪ್ಗಳ ವೌಲ್ಯಮಾಪನದಂತೆ, ಇದೂ ಕೂಡಾ ಸರ್. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲೆಂದೇ ಈ ದೇಶದಲ್ಲಿ ಹಲವು ಶಕ್ತಿಗಳು ಕಾದು ಕುಳಿತಿವೆ. ಹಾಡ ಹಗಲಲ್ಲೇ ನಾಗರಿಕರ ಮೇಲೆ ಗುಂಪು ದಾಳಿ, ಹಲ್ಲೆ ಮತ್ತು ಹತ್ಯೆಯ ಪ್ರಕರಣ ಹೆಚ್ಚುತ್ತಿದೆ. ಕಳೆದ ವರ್ಷ ರಾಜಸ್ಥಾನದಲ್ಲಿ ಪೆಹ್ಲೂಖಾನ್ನಿಂದ ನಿನ್ನೆ ಜಾರ್ಖಂಡ್ನಲ್ಲಿ ಅನ್ಸಾರಿಯವರೆಗೆ.. ಈ ಪಟ್ಟಿ ಕೊನೆಯಾಗದೆ ಮುಂದೆ ಸಾಗುತ್ತಿದೆ.
ಮೂರನೇ ಲಕ್ಷಣ- ಇಂದಿನ ದಿನಗಳಲ್ಲಿ ಸಮೂಹ ಮಾಧ್ಯಮದ ನಿಗ್ರಹ ಮತ್ತು ನಿಯಂತ್ರಣ ಊಹಿಸಲಾಗದ ಮಟ್ಟದಲ್ಲಿದೆ. ದೇಶದ ಐದು ಬೃಹತ್ ಮಾಧ್ಯಮ ಸಂಸ್ಥೆಗಳು ಪರೋಕ್ಷವಾಗಿ ಓರ್ವ ಮನುಷ್ಯನ ಋಣದಲ್ಲಿದೆ ಅಥವಾ ಪರೋಕ್ಷ ನಿಯಂತ್ರಣದಲ್ಲಿವೆ.
ಆಡಳಿತ ಪಕ್ಷದ ಪರವಾದ ಚರ್ಚೆ, ಸುದ್ದಿ, ಸಂವಾದದಲ್ಲೇ ಟಿವಿ ಚಾನೆಲ್ಗಳು ಹೆಚ್ಚಿನ ಸಮಯವನ್ನು ಕಳೆಯುತ್ತವೆ. ವಿರೋಧ ಪಕ್ಷಗಳ ಕುರಿತ ಸುದ್ದಿಯನ್ನು ಕತ್ತರಿಸಿ ಪ್ರಸಾರ ಮಾಡಲಾಗುತ್ತದೆ. ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಜಾಹೀರಾತಿನ ಮೊತ್ತದ ಬಗ್ಗೆ ಸರಕಾರ ಅಂಕಿ ಅಂಶ ಸಹಿತ ವಿವರಿಸಲಿ. ಯಾವುದಕ್ಕೆ ತಾವು ಹಣ ವೆಚ್ಚ ಮಾಡುತ್ತಿದ್ದೇವೆ ಮತ್ತು ಯಾವ ಮಾಧ್ಯಮ ಸಂಸ್ಥೆಯನ್ನು ತಾವು ನಿರ್ಬಂಧಿಸುತ್ತಿದ್ದೇವೆ ಎಂಬುದನ್ನು ಸರಕಾರ ತಿಳಿಸಲಿ. ಸರಕಾರಿ ವಿರೋಧಿ ಸುದ್ದಿ, ಮಾಹಿತಿ ಪ್ರಸಾರವಾಗದಂತೆ ನೋಡಿಕೊಳ್ಳಲೆಂದೇ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು 120ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.
ಸುಳ್ಳು ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಈ ಚುನಾವಣೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ವಿಷಯವೇ ಆಗಿರಲಿಲ್ಲ, ನಿರುದ್ಯೋಗದ ವಿಷಯದಲ್ಲೂ ಚುನಾವಣೆಯಲ್ಲಿ ಹೋರಾಟ ನಡೆದಿಲ್ಲ. ಈ ಬಾರಿಯ ಚುನಾವಣೆಯ ಹೋರಾಟ ವಾಟ್ಸ್ ಆ್ಯಪ್ನ ಮೇಲೆ, ಸುಳ್ಳು ಸುದ್ದಿಯ ಮೇಲೆ, ಜನರ ಮನಸ್ಸನ್ನು ಕುಶಲತೆಯಿಂದ ನಿಭಾಯಿಸುವ ಮೂಲಕ ನಡೆದಿದೆ. ಈ ಸರಕಾರ ಪ್ರಸಾರ ಮಾಡಿರುವ ಪ್ರತೀ ಸುದ್ದಿಯ ಚೂರು, ನೀವು ಮುಂದಿಟ್ಟಿರುವ ಪ್ರತೀ ಸುಳ್ಳು ಕೂಡಾ- ಸುಳ್ಳನ್ನು ಹಲವು ಬಾರಿ ಹೇಳಿದರೆ ಆಗ ಸತ್ಯವಾಗುತ್ತದೆ ಎಂಬಂತಾಗಿದೆ. ಇದು ಗಾಬೆಲ್ನ ಸಿದ್ಧಾಂತವಾಗಿದೆ.
ನೀವು ನಾಮ್ದಾರ್ ಮತ್ತು ಕಾಮ್ದಾರ್ ಬಗ್ಗೆ ಮಾತನಾಡುತ್ತೀರಿ. ಕಾಂಗ್ರೆಸ್ ಪಕ್ಷ 1999ರಲ್ಲಿ 36 ಸದಸ್ಯರನ್ನು ಕುಟುಂಬ ರಾಜಕಾರಣದ ಮೂಲಕ ಸಂಸತ್ತಿಗೆ ತಂದಿರಬಹುದು, ಆದರೆ ಬಿಜೆಪಿ 31 ಕುಟುಂಬ ರಾಜಕಾರಣಿಗಳನ್ನು ಸಂಸತ್ತಿಗೆ ತಂದಿದೆ. ಪ್ರತೀ ಬಾರಿ ನೀವು ಅಸತ್ಯವನ್ನು ನುಡಿಯುವಾಗ ಭಾರತದ ಚೌಕಟ್ಟು, ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದೀರಿ. ನಿನ್ನೆ ಕಾಂಗ್ರೆಸ್ನ ಸದನ ನಾಯಕರು ಬಂಗಾಳದಲ್ಲಿ ಸಹಕಾರಿ ಅಭಿಯಾನ ವಿಫಲವಾಗಿದೆ ಎಂದು ಹೇಳಿದಾಗ ನಾನವರಿಗೆ ಅಂಕಿ ಅಂಶಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದೆ. ಅವರು ಉಲ್ಲೇಖಿಸಿದ್ದು ಮುರ್ಷಿದಾಬಾದ್ನಲ್ಲಿರುವ ಭಾಗೀರಥಿ ಸಹಕಾರಿ ಸಂಘದ ಬಗ್ಗೆ. ಅದು ಈಗ ಲಾಭದಲ್ಲಿ ನಡೆಯುತ್ತಿದೆ. ನಾವು ಮುಂದಿರಿಸುವ ಪ್ರತೀ ಸಣ್ಣ ತಪ್ಪು ಮಾಹಿತಿಯೂ ದೇಶದ ನಾಶಕ್ಕೆ ಕೊಡುಗೆ ನೀಡುತ್ತದೆ.
ನಾಲ್ಕನೇ ಲಕ್ಷಣ- ರಾಷ್ಟ್ರೀಯ ಭದ್ರತೆಯ ಭ್ರಾಂತಿ. ಶತ್ರುಗಳನ್ನು ಗುರುತಿಸುವುದು. ನಾವು ಚಿಕ್ಕವರಿದ್ದಾಗ ನಮಗೆ ತಾಯಿ, ಇದನ್ನು ಮಾಡದಿದ್ದರೆ ಭೂತ ಬರುತ್ತದೆ ಎಂದು ಭಯ ಹುಟ್ಟಿಸುತ್ತಿದ್ದರು. ಈಗ ಇದೇ ರೀತಿ, ಈಗ ನಮಗೆಲ್ಲಾ ಹೆಸರಿಲ್ಲದ, ನಾಚಿಗೆಯಿಲ್ಲದ ಕರಿಭೂತದ ಹೆದರಿಕೆ ಹುಟ್ಟಿಸಲಾಗುತ್ತಿದೆ. ಸೇನಾಪಡೆಯು ಮಾಡಿದ ಸಾಹಸದ ಕೆಲಸವನ್ನು ಒಬ್ಬ ವ್ಯಕ್ತಿಯ ಹೆಸರಿಗೆ ಅರ್ಪಿಸಲಾಗುತ್ತಿದೆ. ಇದು ಸರಿಯೇ? ಪ್ರತೀ ದಿನ ಹೊಸ ಹೊಸ ಶತ್ರುಗಳನ್ನು ಸೃಷ್ಟಿಸಲಾಗುತ್ತಿದೆ. ದುರಂತವೆಂದರೆ, ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದಕರ ದಾಳಿಯ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಕಾಶ್ಮೀರದಲ್ಲಿ ಯೋಧರ ಸಾವಿನ ಪ್ರಮಾಣ ಶೇ.106ರಷ್ಟು ಹೆಚ್ಚಾಗಿದೆ.
ಐದನೇ ಲಕ್ಷಣ- ಸರಕಾರ ಮತ್ತು ಧರ್ಮ ಈಗ ದೇಶದಲ್ಲಿ ಸಮ್ಮಿಳಿತಗೊಂಡಿದೆ. ಈ ಬಗ್ಗೆ ಮಾತನಾಡುವ ಅಗತ್ಯವಿದೆಯೇ? ಎನ್ಆರ್ಸಿ ಮತ್ತು ಪೌರತ್ವ ಕಾಯ್ದೆ ಮಸೂದೆಯ ನೆರವಿನಿಂದ ಕೇವಲ ಒಂದು ಸಮುದಾಯವನ್ನು ಮಾತ್ರ ವಲಸೆ ವಿರೋಧಿ ಕಾನೂನಿನ ಗುರಿಯಾಗುವುದನ್ನು ಖಾತರಿಗೊಳಿಸುತ್ತಿದ್ದೇವೆ. ಈಗಿನ ಸಂಸದರಿಗೆ ದೇಶದ 812 ಮಿಲಿಯನ್ ಎಕರೆ ಭೂಮಿಗಿಂತ 2.77 ಎಕರೆ ಜಮೀನಿನ ಭವಿಷ್ಯವೇ ಹೆಚ್ಚು ಪ್ರಾಮುಖ್ಯದ ವಿಷಯವಾಗಿದೆ.
ಹೌದು ಸರ್, ಕೇವಲ 2.77 ಎಕರೆ ರಾಮಜನ್ಮಭೂಮಿಯ ವಿವಾದವಲ್ಲ, ಇದು ಇಡೀ ದೇಶದ, ಸುಮಾರು 80 ಕೋಟಿ ಎಕರೆ ಪ್ರದೇಶವನ್ನು ಅಖಂಡವಾಗಿರಿಸಿಕೊಳ್ಳುವ ವಿಷಯವಾಗಿದೆ.
ಆರನೆಯದು ಅತ್ಯಂತ ಅಪಾಯಕಾರಿ ಲಕ್ಷಣ- ಬುದ್ಧಿಜೀವಿಗಳನ್ನು ಮತ್ತು ಕಲಾವಿದರನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಮುಕ್ತ ಶಿಕ್ಷಣಕ್ಕೆ, ಸಂವಿಧಾನದ 51ನೇ ಪರಿಚ್ಛೇದದಲ್ಲಿ ತಿಳಿಸಲಾಗಿರುವ ವೈಜ್ಞಾನಿಕ ಕಲಿಕೆಗೆ ನೀಡಲಾಗುತ್ತಿದ್ದ ಅನುದಾನವನ್ನು ನಿಲ್ಲಿಸಲಾಗಿದೆ. ನಾವು ಈಗ ಭಾರತವನ್ನು ಕಗ್ಗತ್ತಲಿನ ಯುಗದತ್ತ ನೂಕುತ್ತಿದ್ದೇವೆ. ಎರಡನೆಯದಾಗಿ ಶಾಲೆಯ ಪಠ್ಯಪುಸ್ತಕಗಳನ್ನೂ ತಿರುಚಲಾಗುತ್ತಿದೆ. ಭಿನ್ನಾಭಿಪ್ರಾಯ ಹಾಗಿರಲಿ, ಪ್ರಶ್ನಿಸುವುದನ್ನೂ ನೀವು ಸಹಿಸುವುದಿಲ್ಲ.
ಮಹಾನ್ ಹಿಂದಿ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಸಾಲುಗಳನ್ನು ನಾನಿಲ್ಲಿ ಉದ್ಧರಿಸಲು ಬಯಸುತ್ತೇನೆ.
ಹೌದು.. ಹೌದು... ದುರ್ಯೋಧನ ನನ್ನನ್ನು ಬಂಧಿಸು
ನನ್ನನ್ನು ಬಂಧಿಸಲೆಂದು ನೀನು ಬಂದಿರುವಿ
ಸಾಕಷ್ಟು ದೊಡ್ಡದಾದ ಸಂಕೋಲೆಯನ್ನೇ ತಂದಿರುವಿಯಾ?
ಯಾಕೆಂದರೆ ನನ್ನನ್ನು ಬಂಧಿಸಲು ಬಯಸುವಿಯಾದರೆ
ಮೊದಲಿಗೆ ಅನಂತವಾದ ಆಕಾಶವನ್ನು ಬಂಧಿಸು.
ನಿನಗೆ ಅನಂತವಾದ ಆಕಾಶವನ್ನು ಅಳೆಯಲು ಸಾಧ್ಯವಿಲ್ಲದಿರುವಾಗ
ನನ್ನನ್ನು ನೀನು ಹೇಗೆ ಬಂಧಿಸಲು ಸಾಧ್ಯ
ಭಿನ್ನಾಭಿಪ್ರಾಯದ ಮನೋಭಾವ ಭಾರತದ ಸಮಗ್ರತೆಗೆ ಪೂರಕವಾಗಿದೆ. ನೀವು ನಮ್ಮನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ.
ಏಳನೆಯ ಮತ್ತು ಕೊನೆಯ ಲಕ್ಷಣ- ನಮ್ಮ ಮತದಾನ ವ್ಯವಸ್ಥೆಯಲ್ಲಿ ಸ್ವಾತಂತ್ರದ ಸವಕಳಿ. ಪ್ರಮುಖ ಅಧಿಕಾರಿಗಳನ್ನು ವರ್ಗಾಯಿಸಲು ಚುನಾವಣಾ ಆಯೋಗವನ್ನು ಬಳಸಲಾಗುತ್ತಿದೆ. ಈ ಬಾರಿಯ ಚುನಾವಣೆಗೆ 60,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಇದರಲ್ಲಿ ಒಂದು ಪಕ್ಷವೇ ಸುಮಾರು 27,000 ಕೋಟಿ ರೂ. ಅಂದರೆ ಅರ್ಧಾಂಶದಷ್ಟು ಖರ್ಚು ಮಾಡಿದೆ.
ದೇಶದಲ್ಲಿ ಪ್ಯಾಶಿಸಂ ಹೆಚ್ಚುವ ಅಪಾಯವಿದೆ. ಇದರ ವಿರುದ್ಧ ನಾವೆಲ್ಲಾ ಒಗ್ಗೂಡಿ ನಿಲ್ಲಬೇಕಿದೆ. ದೇಶದ ಸಂವಿಧಾನವನ್ನು ಎತ್ತಿಹಿಡಿಯಬೇಕೇ ಅಥವಾ ಅದರ ಶವಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೇ ಎಂಬುದನ್ನು 17ನೇ ಲೋಕಸಭೆಯ ಸದಸ್ಯರೇ ತೀರ್ಮಾನಿಸಲಿ.
ಸರಕಾರಕ್ಕೆ ದೊರೆತ ಅದ್ಭುತ ಜನಾದೇಶಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ - ನನಗಿಂತ ಮೊದಲು ಯಾರೂ ಇಲ್ಲ, ನನ್ನ ನಂತರವೂ ಯಾರೂ ಇರಲಾರರು ಎಂಬ ನಿಮ್ಮ ಯೋಚನೆಯನ್ನು ವಿರೋಧಿಸುವ ಅಧಿಕಾರ ನನಗಿದೆ.
ಕವಿ ರಾಹತ್ ಇಂದೋರಿ ಅವರ ಕವನವನ್ನು ಉಲ್ಲೇಖಿಸಿ ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ.
ವಿರೋಧ ಇದ್ದರೆ ಇರಲಿ ಬಿಡಿ, ಅದೇನು ಜೀವ ಅಲ್ಲ
ಇದೆಲ್ಲ ಹೊಗೆ ಮಾತ್ರ, ಆಕಾಶವೇನೂ ಅಲ್ಲ
ಇಲ್ಲಿ ಬೆಂಕಿ ಬಿದ್ದರೆ ಎಲ್ಲರ ಮನೆಗಳೂ ಸುಡಲಿವೆ
ಇಲ್ಲಿ ನಮ್ಮ ಮನೆ ಮಾತ್ರ ಇರುವುದಲ್ಲ
ನನಗೆ ಗೊತ್ತು, ಶತ್ರುಗಳೇನು ಕಮ್ಮಿ ಇಲ್ಲ
ಆದರೆ ನಮ್ಮ ಹಾಗೆ ಅವರು ಅಂಗೈಯಲ್ಲಿ
ಜೀವ ಇಟ್ಟುಕೊಂಡಿಲ್ಲ
ನಮ್ಮ ಬಾಯಿಂದ ಹೊರಟಿದ್ದೇ ಸತ್ಯ
ನಮ್ಮ ಬಾಯಲ್ಲಿ ನಿಮ್ಮ ನಾಲಗೆ ಇಲ್ಲ
ಇವತ್ತು ಆಳುವವರು ನಾಳೆ ಇರುವುದಿಲ್ಲ
ಬಾಡಿಗೆದಾರರು ಅವರು, ಮಾಲಕರೇನೂ ಅಲ್ಲ
ಇಲ್ಲಿನ ಮಣ್ಣಲ್ಲಿ ಎಲ್ಲರ ರಕ್ತ ಇದೆ