varthabharthi


ಭೀಮ ಚಿಂತನೆ

ಅಸ್ಪಶ್ಯರಿಗೊಂದು ಎಚ್ಚರಿಕೆ

ವಾರ್ತಾ ಭಾರತಿ : 28 Jun, 2019

ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವುದು, ಬಂಡೇಳುವುದು ಸಹಜ. ಇದು ಎಲ್ಲ ರಾಷ್ಟ್ರಗಳ ಬಡವರ ಚರಿತ್ರೆಯ ಒಂದು ಭಾಗ. ಬಡವರ ಚರಿತ್ರೆಯನ್ನು ಓದುವ ವಿದ್ಯಾರ್ಥಿ, ತಮಗೆ ದೊರೆಯುವ ವಿಜಯದ ಬಗ್ಗೆ ಬಡವರ ಮನಸ್ಸಿನಲ್ಲಿ ಸುಳಿಯುವ ಆಲೋಚನೆಗಳನ್ನು ಕಂಡು ದಂಗುಬಡಿದು ಹೋಗುತ್ತಾನೆ. ಧಾರ್ಮಿಕ ಯುಗದಲ್ಲಿ ಪಾರಮಾರ್ಥಿಕ ಶಕ್ತಿಗಳು, ದುರ್ಬಲರಿಗೆ ಜಗತ್ತನ್ನೇ ತಂದೊಪ್ಪಿಸುತ್ತವೆ ಎಂಬ ಭ್ರಮೆಯೊಳಗೆ ಅವರು ಜೀವಿಸುತ್ತಿದ್ದರು. ಧರ್ಮನಿರಪೇಕ್ಷ ಯುಗ ಅಥವಾ ಆಧುನಿಕ ಯುಗದಲ್ಲಿ ಚಾರಿತ್ರಿಕ ಭೌತಿಕವಾದದ ಶಕ್ತಿಗಳು ಬಲವಾನರ ಶಕ್ತಿಯನ್ನು ಹೀರಿ ಬಲಹೀನರು ಅವರ ಸ್ಥಾನ ಆಕ್ರಮಿಸುವಂತೆ ಮಾಡುತ್ತಾರೆಂಬ ಭ್ರಮೆಯೊಳಗೆ ಜೀವಿಸುತ್ತಿದ್ದಾರೆ.

ಈ ಮನಃಶಾಸ್ತ್ರೀಯ ಅಂಶಗಳ ಬೆಳಕಿನಲ್ಲಿ ಅಸ್ಪಶ್ಯರನ್ನು ಹಿಂದೂ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ದಂಗೆಕೋರರ ಪಾತ್ರದಲ್ಲಿ ನೋಡಿದಾಗ, ಪಾರಮಾರ್ಥಿಕ ಅಥವಾ ಚಾರಿತ್ರಿಕ ಶಕ್ತಿಗಳಾವುವೂ ತಮಗೆ ಸುವರ್ಣ ಯುಗವನ್ನು ದೊರಕಿಸಿಕೊಡುವುದಿಲ್ಲ ಎಂದು ಅರಿತಿರುವುದನ್ನು ನೋಡಿದಾಗ ಅವರನ್ನು ಅಭಿನಂದಿಸಬೇಕೆನಿಸುತ್ತದೆ. ಹಿಂದೂ ಸಾಮಾಜಿಕ ವ್ಯವಸ್ಥೆ ಕೆಳಗುರುಳಲೇಬೇಕೆಂದರೆ ಅದು ಎರಡು ಸಂದರ್ಭಗಳಲ್ಲಿ ಮಾತ್ರ ಸಾಧ್ಯವೆಂದು ಅವರು ತಿಳಿದುಕೊಂಡಿದ್ದಾರೆ. ಮೊದಲನೆಯದು, ಸಾಮಾಜಿಕ ವ್ಯವಸ್ಥೆಯು ದಿನನಿತ್ಯವೂ ಆಘಾತಗಳನ್ನು ಎದುರಿಸುವಂತಾಗಬೇಕು. ಎರಡನೆಯದು, ಆಲೋಚನೆಗಳಲ್ಲಿ ಹಾಗೂ ಕೆಲಸ ಕಾರ್ಯಗಳಲ್ಲಿ ಹಿಂದೂಗಳಿಂದ ಭಿನ್ನ ಹಾಗೂ ಸ್ವತಂತ್ರರಾಗದ ಹೊರತು ದಿನನಿತ್ಯ ಆಘಾತಗಳನ್ನು ಸೃಷ್ಟಿಮಾಡುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಅಸ್ಪಶ್ಯರು ತಮಗೆ ಪ್ರತ್ಯೇಕ ಮತದಾರರ ಸಮೂಹ ಹಾಗೂ ಪ್ರತ್ಯೇಕ ವಾಸಸ್ಥಾನಬೇಕೆಂದು ಆಗ್ರಹಪಡಿಸುತ್ತಿರುವುದು.

ಆದರೆ ಹಿಂದೂಗಳು, ಅಸ್ಪಶ್ಯರು ತಮ್ಮ ಉದ್ಧಾರಕ್ಕಾಗಿ ಹಿಂದೂಗಳನ್ನೇ ಅವಲಂಬಿಸಬೇಕು ಎಂದು ಹೇಳುತ್ತಿದ್ದಾರೆ. ಶಿಕ್ಷಣವನ್ನು ಸಾರ್ವಜನಿಕರಿಗೆ ಪಸರಿಸುವುದರಿಂದ ಹಿಂದೂಗಳು ತರ್ಕಬದ್ಧವಾಗಿ ನಡೆದುಕೊಳ್ಳುತ್ತಾರೆಂದು ಅಸ್ಪಶ್ಯರಿಗೆ ಹೇಳಲಾಗುತ್ತಿದೆ. ಅಸ್ಪಶ್ಯತೆಯ ವಿರುದ್ಧ ಸುಧಾರಕರು ಸದಾಕಾಲ ಬೋಧನೆ ಮಾಡುವುದರಿಂದ ಹಿಂದೂಗಳಲ್ಲಿ ನೈತಿಕ ಪರಿವರ್ತನೆ ಉಂಟಾಗಿ ಅವರ ವಿವೇಚನಾ ಶಕ್ತಿಯಲ್ಲಿ ಜಾಗೃತಿ ಉಂಟಾಗುವುದು. ಹಿಂದೂಗಳ ಸದ್ಭಾವನೆ ಮತ್ತು ಕರ್ತವ್ಯಪರತೆಯನ್ನು ಅಸ್ಪಶ್ಯರು ನಂಬಬೇಕು. ಇಂಥ ಟೊಳ್ಳು ಮಾತನ್ನು ಯಾವ ಅಸ್ಪಶ್ಯನೂ ನಂಬುವುದಿಲ್ಲ. ಆ ರೀತಿ ನಂಬುವವರೇನಾದರೂ ಇದ್ದರೆ ಅವರು ಕಪಟಿಗಳು; ತಮಗೆ ಮೀಸಲಾದ ಜಾಗದಲ್ಲಿದ್ದು ಹಿಂದೂಗಳು ಕರುಣೆ ತೋರಿಸಿದರೆ ಮಾತ್ರ ಸಾಕು, ಅವರು ಹೇಳಿದ್ದನ್ನೆಲ್ಲ ಒಪ್ಪಿಬಿಡುತ್ತಾರೆ. ಅಂಥವರು ಯಾವುದೇ ರೀತಿಯಲ್ಲಾದರೂ ಸರಿ, ತಮ್ಮ ಹಾದಿಯನ್ನು ಸುಗಮ ಮಾಡಿಕೊಳ್ಳುವ ಅಸ್ಪಶ್ಯ ದರೋಡೆಕೋರರು.

ಈ ರೀತಿಯ ಹುಸಿ ಪ್ರಚಾರಗಳಿಂದ ಅಸ್ಪಶ್ಯ ಮೋಸಹೋಗುವುದಿಲ್ಲ. ಆದ್ದರಿಂದ ಈ ವಿಚಾರದ ಬಗ್ಗೆ ಟೀಕೆ ಮಾಡುವುದು ಅನವಶ್ಯಕ. ಅಲ್ಲದೆ ಈ ಪ್ರಚಾರ ಎಷ್ಟು ಆಕರ್ಷಕವಾಗಿದೆಯೆಂದರೆ ಅದು ಸ್ವಲ್ಪ ಎಚ್ಚರ ತಪ್ಪಿದ ಅಸ್ಪಶ್ಯನನ್ನೂ ತನ್ನ ಬುಟ್ಟಿಗೆ ಹಾಕಿಕೊಂಡು ಬಿಡುತ್ತದೆ. ಆದ್ದರಿಂದ ಅಸ್ಪಶ್ಯರಿಗೆ ಎಚ್ಚರಿಕೆ ಕೊಡುವುದು ಅನಿವಾರ್ಯವಾಗಿದೆ.

ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಮಾಜಿಕ ಆದರ್ಶವಾದಿಗಳು ಸಾಮಾನ್ಯವಾಗಿ ಎರಡು ಏಜೆನ್ಸಿಗಳ ಮೊರೆ ಹೋಗುತ್ತಾರೆ. ಒಂದು ತರ್ಕ, ಮತ್ತೊಂದು ಧರ್ಮ.

ವೈಚಾರಿಕತೆಯ ಪವಿತ್ರ ಉದ್ದೇಶವನ್ನು ಎತ್ತಿಹಿಡಿಯುವ ವಿಚಾರವಾದಿಗಳು ಬುದ್ಧಿಶಕ್ತಿಯನ್ನು ಹೆಚ್ಚು ಮಾಡುವುದರಿಂದ ಅನ್ಯಾಯವನ್ನು ಹೋಗಲಾಡಿಸಬಹುದೆಂದು ನಂಬಿದ್ದಾರೆ. ಮಧ್ಯಯುಗದಲ್ಲಿ ಸಾಮಾಜಿಕ ಅನ್ಯಾಯ ಹಾಗೂ ಮೂಢನಂಬಿಕೆಗಳು ಪರಸ್ಪರ ಸಂಬಂಧ ಹೊಂದಿದ್ದವು. ಆದ್ದರಿಂದ ಮೂಢನಂಬಿಕೆಯ ನಾಶದಿಂದ ಅನ್ಯಾಯವನ್ನು ನಿವಾರಿಸಬಹುದೆಂದು ವಿಚಾರವಾದಿಗಳು ನಂಬಿರುವುದು ಸ್ವಾಭಾವಿಕವೇ. ಅದರ ಪರಿಣಾಮಗಳಿಂದಾಗಿ ಈ ನಂಬಿಕೆಗಳು ಮತ್ತಷ್ಟು ಗಾಢವಾದವು. ಇವತ್ತು ಇದು ಶಿಕ್ಷಣತಜ್ಞರು, ತತ್ವಜ್ಞಾನಿಗಳು ಮನಶ್ಯಾಸ್ತ್ರಜ್ಞರು ಹಾಗೂ ಸಮಾಜ ವಿಜ್ಞಾನಿಗಳ ನಂಬಿಕೆಯಾಗಿಬಿಟ್ಟಿದೆ; ಸಾರ್ವತ್ರಿಕ ಶಿಕ್ಷಣ ಹಾಗೂ ಮುದ್ರಣ ಮತ್ತು ಪತ್ರಿಕೆಗಳನ್ನು ಉತ್ತಮಪಡಿಸುವುದರಿಂದ ಆದರ್ಶ ಸಮಾಜ ಸೃಷ್ಟಿಯಾಗಿ ಅದರಲ್ಲಿ ಪ್ರತಿವ್ಯಕ್ತಿಗೂ ಸಾಮಾಜಿಕ ಅನ್ಯಾಯಗಳು ಎಂದಿಗೂ ಇರಬಾರದೆಂಬ ಜ್ಞಾನೋದಯವಾಗಿರುತ್ತದೆ.

ಈ ಅಂಧ ವಿಶ್ವಾಸಕ್ಕೆ ಭಾರತದ ಅಥವಾ ಯುರೋಪಿನ ಚರಿತ್ರೆ ಸಂಪೂರ್ಣ ಬೆಂಬಲ ಕೊಡುವುದಿಲ್ಲ. ಯೂರೋಪಿನಲ್ಲಿ 18ನೆಯ ಶತಮಾನಕ್ಕೆ ಸೇರಿರುವಂಥ ಹಳೆ ಸಂಪ್ರದಾಯಗಳು ಮತ್ತು ಮೂಢನಂಬಿಕೆಗಳೇ ಅನ್ಯಾಯಕ್ಕೆ ಮೂಲವೆಂದು ಅವುಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಆದರೂ ಕೂಡ ಸಾಮಾಜಿಕ ಅನ್ಯಾಯಗಳು ಎಲ್ಲ ಕಡೆ ತಾಂಡವವಾಡುತ್ತಲೇ ಇವೆ, ನಿಮಿಷ ನಿಮಿಷಕ್ಕೂ ಭೂತಾಕಾರವಾಗಿ ಬೆಳೆಯುತ್ತಲೇ ಇವೆ. ಭಾರತದಲ್ಲಿ ಪ್ರತಿಯೊಬ್ಬ ಬ್ರಾಹ್ಮಣನೂ- ಹೆಂಗಸರು, ಗಂಡಸರು, ಮಕ್ಕಳು ಮೊದಲಾಗಿ ಎಲ್ಲರೂ ಶಿಕ್ಷಿತರಾಗಿದ್ದಾರೆ. ಆದರೆ ಎಷ್ಟು ಜನ ಬ್ರಾಹ್ಮಣರು ಅಸ್ಪಶ್ಯತೆ ನಂಬಿಕೆಯಿಂದ ಮುಕ್ತರಾಗಿದ್ದಾರೆ? ಎಷ್ಟು ಜನರು ಅಸ್ಪಶ್ಯತೆ ವಿರುದ್ಧ ಸಮರಕ್ಕೆ ಮುಂದೆ ಬಂದಿದ್ದಾರೆ? ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಅಸ್ಪಶ್ಯರ ಜೊತೆ ಎಷ್ಟು ಜನರು ಬೆಂಬಲಿಗರಾಗಿ ನಿಲ್ಲಲು ಸಿದ್ಧರಿದ್ದಾರೆ? ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಸ್ಪಶ್ಯರ ಹಿತವೇ ತಮ್ಮ ಹಿತವೆಂದು ನಂಬಿರುವವರು ಎಷ್ಟು ಜನರಿದ್ದಾರೆ? ಬಹುಶಃ ಇಂಥ ಜನರ ಸಂಖ್ಯೆ ನೋಡಿ ದಿಗಿಲಾಗಬಹುದು.

ಸಾಮಾಜಿಕ ನ್ಯಾಯವನ್ನು ತಂದು ಕೊಡಲು ತರ್ಕವು ಯಾಕೆ ಅಸಮರ್ಥವಾಗಿದೆ? ಇದಕ್ಕೆ ಉತ್ತರ; ತನ್ನ ಹಿತಾಸಕ್ತಿಗೆ ಎಲ್ಲಿಯವರೆಗೆ ತೊಂದರೆ ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ತರ್ಕ ಕೆಲಸ ಮಾಡಬಲ್ಲದು. ಸ್ವಹಿತಾಸಕ್ತಿಗಳ ಜೊತೆ ಸಂಘರ್ಷವುಂಟಾದಾಗ ಅದು ಸೋಲುತ್ತದೆ. ಅಸ್ಪಶ್ಯತೆ ವಿಷಯದಲ್ಲಿ ಅನೇಕ ಹಿಂದೂಗಳಿಗೆ ಒಂದಲ್ಲ ಒಂದು ಸ್ವಹಿತಾಸಕ್ತಿ ಇದ್ದೇ ಇರುತ್ತದೆ. ಈ ಹಿತಾಸಕ್ತಿಯು ಸಾಮಾಜಿಕ ಮೇಲರಿಮೆ ಭಾವನೆಗಳ ಅಥವಾ ಆರ್ಥಿಕ ಶೋಷಣೆಯ ರೂಪ ತಾಳುತ್ತದೆ; ಇದರಿಂದ ಹಿಂದೂಗಳು ಅಸ್ಪಶ್ಯತೆ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿರುವುದು ಸಾಬೀತಾಗುತ್ತದೆ. ಈ ಹಿತಾಸಕ್ತಿಗಳು ತರ್ಕದ ಆದೇಶಗಳಿಗೆ ಶರಣಾಗದಿರುವುದು ಸ್ವಾಭಾವಿಕವೇ. ಆದ್ದರಿಂದ ತರ್ಕದ ಸಾಧ್ಯತೆಗಳಿಗೂ ಮಿತಿಯೆಂಬುದಿದೆ ಎನ್ನುವುದನ್ನು ಅಸ್ಪಶ್ಯರು ತಿಳಿದಿರಬೇಕು.

ಧರ್ಮದ ಯಶಸ್ಸನ್ನು ನಂಬಿರುವ ಧರ್ಮಾನುಯಾಯಿ ನೀತಿವಾದಿಗಳು, ಧರ್ಮವು ಮಾನವನಲ್ಲಿ ಬಿತ್ತುವ ನೈತಿಕ ಒಳನೋಟವು ಅವನಲ್ಲಿರುವ ಪಾಪಮಯ ಅಂಶಗಳನ್ನು ಅರಿತುಕೊಳ್ಳುವಂತೆ ಮಾಡಿ ನ್ಯಾಯದ ಪರ ಅವನ ಕರ್ತವ್ಯವನ್ನು ಪ್ರಚೋದಿಸುತ್ತದೆ. ಇವೇ ಧರ್ಮದ ಕೆಲಸವೆನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಈ ಕಾರ್ಯದಲ್ಲಿ ಸ್ವಲ್ಪಮಟ್ಟಿಗೆ ಧರ್ಮವು ಸಫಲವೂ ಆಗಬಹುದು. ಆದರೆ ಇಲ್ಲಿ ಕೂಡ ಧರ್ಮದ ಕಾರ್ಯವ್ಯಾಪ್ತಿಗೆ ಸೀಮೆ ಉಂಟು. ಒಂದು ಜನಾಂಗದ ಒಳಗೆ ನ್ಯಾಯವನ್ನು ಕಲ್ಪಿಸಿಕೊಡುವುದು ಧರ್ಮಕ್ಕೆ ಸಾಧ್ಯವಾಗಬಹುದು. ಆದರೆ ಜನಾಂಗಗಳ ನಡುವೆ ನ್ಯಾಯವನ್ನು ಸ್ಥಾಪಿಸುವುದು ಧರ್ಮದಿಂದ ಸಾಧ್ಯವಿಲ್ಲ. ಧರ್ಮವು ಸಂಯುಕ್ತ ರಾಷ್ಟ್ರಗಳಲ್ಲಿ ನೀಗ್ರೋಗಳ ಹಾಗೂ ಬಿಳಿಯರ ನಡುವೆ ನ್ಯಾಯ ಸ್ಥಾಪಿಸಲು ಅಸಮರ್ಥವಾಗಿದೆ. ಧರ್ಮವು ಜರ್ಮನರ ಮತ್ತು ಫ್ರೆಂಚರ ನಡುವೆ ಮತ್ತು ಇತರ ದೇಶಗಳ ನಡುವೆ ನ್ಯಾಯ ಸ್ಥಾಪಿಸಲು ಅಸಮರ್ಥವಾಗಿದೆ. ನ್ಯಾಯಕ್ಕಾಗಿ ರಾಷ್ಟ್ರದ ಕರೆ ಮತ್ತು ಜನಾಂಗದ ಕರೆಯೇ ಧರ್ಮದ ಕರೆಗಿಂತ ಹೆಚ್ಚು ಪ್ರಬಲವಾಗಿದೆ.

ಅಸ್ಪಶ್ಯರು ಎರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು. ಅಂಥ ಕೆಲಸವನ್ನು ಬೇಕಾದರೆ ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಅಥವಾ ಬೌದ್ಧ ಧರ್ಮಗಳು ಮಾಡಬಲ್ಲವು. ಹಿಂದೂ ಧರ್ಮವು ಸ್ವತಃ ಅಸ್ಪಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೆ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ, ಪವಾಡಕ್ಕೆ ಕಾಯುವುದೂ ಒಂದೇ. ಎರಡನೆಯದಾಗಿ ಹಿಂದೂ ಧರ್ಮವು ಈ ಕೆಲಸವನ್ನು ಕೈಗೆತ್ತಿಕೊಂಡಿದ್ದರೂ ಕೂಡ ಇದನ್ನು ಸಾಧಿಸುವುದು ಮಾತ್ರ ಅಸಾಧ್ಯದ ಮಾತಾಗಿದೆ. ಹಿಂದೂಗಳ ಮತ್ತು ಅಸ್ಪಶ್ಯರ ನಡುವಿನ ಸಾಮಾಜಿಕ ವ್ಯತ್ಯಾಸಗಳು ಹಿಂದೂಗಳು ಹಾಗೂ ಅವರ ಜನರ ನಡುವಿನ ವ್ಯತ್ಯಾಸಕ್ಕಿಂತ ಹೆಚ್ಚಾಗಿದೆ. ಒಂದು ಜನಾಂಗ ಅಥವಾ ರಾಷ್ಟ್ರದ ಮಿತಿಯೊಳಗೆ ಧರ್ಮವು ಎಷ್ಟೇ ಅಚ್ಚುಕಟ್ಟಾಗಿದ್ದರೂ ಕೂಡ ಅದು ಈ ವ್ಯತ್ಯಾಸಗಳೆಂಬ ಅಡ್ಡಗೋಡೆಗಳನ್ನು ಉರುಳಿಸಿ ಎರಡನ್ನೂ ಒಂದು ಮಾಡುವಲ್ಲಿ ಅಶಕ್ತವಾಗಿದೆ.

ಅಸ್ಪಶ್ಯರು ಧರ್ಮ ಹಾಗೂ ತರ್ಕವೆನ್ನುವ ಏಜೆನ್ಸಿಗಳನ್ನಷ್ಟೇ ಅಲ್ಲದೆ, ಹಿಂದೂಗಳ ವಿಶೇಷ ಹಕ್ಕು ಪಡೆದ ವರ್ಗಗಳ ಸ್ವಹಿತಾಸಕ್ತಿಗಳನ್ನು ಮತ್ತು ಬಡಪಾಯಿ ಹಿಂದೂಗಳ ಪಿತೃತ್ವವನ್ನು ಗೌರವಿಸಬೇಕೆಂದು ಬಯಸುತ್ತಾರೆ.

ವಿಶೇಷ ಹಕ್ಕು ಪಡೆದ ವರ್ಗದವರು ಕರುಣೆಯಿಂದ ಕೂಡಿದ ಸರ್ವಾಧಿಕಾರವನ್ನು ಚಲಾಯಿಸುವರೆನ್ನುವುದು ಅವರ ಬಗ್ಗೆ ನಂಬಲರ್ಹವಾದ ಏಕೈಕ ವಿಷಯವಾಗಿದೆ. ಅವರಿಗೆ ಅವರದೇ ಆದ ವರ್ಗಹಿತಾಸಕ್ತಿಗಳಿರುತ್ತವೆ. ಅವನ್ನು ಅವರು ಸಾಮಾನ್ಯರ ಹಿತಾಸಕ್ತಿಗಾಗಿ ಅಥವಾ ಸಾರ್ವತ್ರಿಕ ವೌಲ್ಯಗಳಿಗಾಗಿ ಬಿಟ್ಟುಕೊಡಲು ಸಿದ್ಧರಿರುವುದಿಲ್ಲ. ಬದಲಾಗಿ, ಸಾಮಾನ್ಯರ ಹಿತಾಸಕ್ತಿ ಮತ್ತು ತಮ್ಮ ವರ್ಗ ಹಿತಾಸಕ್ತಿಗಳನ್ನು ಒಂದು ಮಾಡಿ, ತಮಗೆ ಸಿಕ್ಕಿರುವ ವಿಶೇಷ ಹಕ್ಕುಗಳೇನಿದ್ದರೂ, ತಮ್ಮ ಉಪಯುಕ್ತ ಹಾಗೂ ಬೆಲೆಬಾಳುವ ಕಾರ್ಯಕ್ಕಾಗಿ ಸಿಕ್ಕ ಸಂಭಾವನೆ ಎಂದು ಪರಿಗಣಿಸುತ್ತಾರೆ. ಅವರು ಅಸ್ಪಶ್ಯರೊಂದಿಗೆ ಜೊತೆಗಾರರಾಗಿರುವರೆಂಬುವುದು ಕಷ್ಟ ಸಾಧ್ಯ ಅನ್ನುವುದನ್ನೂ ಅಸ್ಪಶ್ಯರು ತಮ್ಮ ಮತ್ತು ಅವರ ಸಂಘರ್ಷದಲ್ಲಿ ಕಂಡುಕೊಂಡಿದ್ದಾರೆ.

ಹಿಂದೂ ಕಾರ್ಮಿಕ ವರ್ಗಗಳ ಸಹಾಯವಾದರೂ ತಮಗೆ ಸಿಗುತ್ತದೆ ಎಂಬುದು ಅಸ್ಪಶ್ಯರ ಒಂದು ಭ್ರಮೆ ಮಾತ್ರ. ಭಾರತದ ಕಮ್ಯುನಿಸ್ಟರು ‘ಹಿಂದೂ ಕಾರ್ಮಿಕ ವರ್ಗಗಳ ಜೊತೆ ಒಂದಾಗಿ’ ಎಂದು ಅಸ್ಪಶ್ಯರಿಗೆ ಮನವಿ ಮಾಡಿಕೊಂಡಿದ್ದಾರೆ ; ಆದರೆ ಇದು ತಾನು ಬೇರೆಯವರ ಜೊತೆ ಹಂಚಿಕೊಳ್ಳಲಾಗದ ಯಾವುದೇ ಅನುಕೂಲಗಳನ್ನು ಬಯಸುವುದಿಲ್ಲ ಎಂಬ ಅನಿಸಿಕೆಯನ್ನು ಆಧಾರವಾಗಿಟ್ಟುಕೊಂಡಿದೆ. ಈ ಅನಿಸಿಕೆ ನಿಜವೇ? ಯುರೋಪಿನಲ್ಲಿ ಕೂಡಾ ಕಾರ್ಮಿಕರದು ಒಂದೇ ತೆರನಾದ ವರ್ಗವಾಗಿಲ್ಲ. ಅವರಲ್ಲೂ ವರ್ಗ ರಚನೆಯ ಆಧಾರದ ಮೇಲೆ ಉಚ್ಚರು, ನೀಚರು ಎಂಬ ಭೇದಗಳಿವೆ. ಸಾಮಾಜಿಕ ಬದಲಾವಣೆಗಳ ಮೇಲಿನ ಅವರ ಅಭಿಪ್ರಾಯಗಳನ್ನು ನೋಡಿದಾಗ ಈ ವಿಷಯ ತಿಳಿಯುತ್ತದೆ: ಉಚ್ಚರು ಸುಧಾರಕರು ನೀಚರು ಕ್ರಾಂತಿಕಾರಿಗಳು, ಆದ್ದರಿಂದ ಈ ಅನಿಸಿಕೆ ಸರಿಯಲ್ಲ. ಭಾರತದ ವಿಷಯದಲ್ಲಂತೂ ಇದು ಖಂಡಿತವಾಗಿ ತಪ್ಪು. ಇವರಿಗೆ ಸಾಮಾನ್ಯವಾದ ಅಂಶ ಬಹಳ ಕಡಿಮೆ. ಸಾಮಾಜಿಕವಾಗಿ ಇವರಿಬ್ಬರ ನಡುವೆ ಘರ್ಷಣೆ ಆಗಿಯೇ ಆಗುವುದು. ಆರ್ಥಿಕವಾಗಿ ನೋಡಿದರೆ ಮೈತ್ರಿ ಕೂಟಕ್ಕೆ ಇದರಲ್ಲಿ ಆಸ್ಪದವಿದ್ದಂತಿಲ್ಲ.

ಅಸ್ಪಶ್ಯರು ಯಾವುದಕ್ಕಾಗಿ ಹೋರಾಡಬೇಕು? ಶಿಕ್ಷಣ ಹಾಗೂ ಜ್ಞಾನದ ಪ್ರಸಾರ -ಇವೆರಡಕ್ಕಾಗಿ ಅವರು ಹೋರಾಡಬೇಕು. ವಿಶೇಷ ಹಕ್ಕು ಪಡೆದ ವರ್ಗದವರ ಶಕ್ತಿ ಜನರ ನಡುವೆ ಎಡೆಬಿಡದೆ ಪ್ರಚಾರಗೊಂಡಿರುವ ಸುಳ್ಳುಗಳ ಮೇಲೆ ನಿಂತಿದೆ. ಆ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವ ಸುಳ್ಳುಗಳ ವಿರೋಧವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮೊದಲ ಮತ್ತು ಪ್ರಮುಖ ಸಂರಕ್ಷಣಾಸ್ತ್ರವಾದ ಸುಳ್ಳುಗಳು ಆರೋಗ್ಯಪೂರ್ಣವಾಗಿರುವಾಗ ಇದರ ವಿರುದ್ಧದ ದಂಗೆ ಸಾಧ್ಯವಿಲ್ಲವಾಗಿದೆ. ಯಾವುದೇ ಅನ್ಯಾಯ, ಅನರ್ಥ ಅಥವಾ ಅನಾಚಾರಗಳನ್ನು ವಿರೋಧಿಸುವುದಕ್ಕೆ ಮುಂಚೆ ಅದರ ಆಧಾರವಾದ ಸುಳ್ಳನ್ನು ಬಯಲು ಮಾಡಿ, ಅದು ವಾಸ್ತವವಾಗಿ ಏನೆಂದು ಅರಿತುಕೊಳ್ಳಬೇಕು. ಇದು ಶಿಕ್ಷಣದ ಮೂಲಕ ಮಾತ್ರ ಸಾಧ್ಯ. ಎರಡನೆಯದಾಗಿ, ಅವರು ಅಧಿಕಾರಕ್ಕಾಗಿ ಹೋರಾಡಬೇಕು. ನಿಜವಾದ ಹಿತಾಸಕ್ತಿಗಳಿಗಾಗಿ ಹಿಂದೂಗಳ ಹಾಗೂ ಅಸ್ಪಶ್ಯರ ನಡುವೆ ಘರ್ಷಣೆಯಿದೆ ಮತ್ತು ತರ್ಕದಿಂದ ಘರ್ಷಣೆ ನಿವಾರಣೆಯಾಗುವುದಿದ್ದರೂ ಅದು ಘರ್ಷಣೆೆಯ ಅನಿವಾರ್ಯತೆಯನ್ನು ನಿವಾರಿಸಲು ಅಸಮರ್ಥ ಎಂಬುದನ್ನು ಮರೆಯಬಾರದು. ಒಂದು ಹಿತಾಸಕ್ತಿಯು ಇನ್ನೊಂದು ಹಿತಾಸಕ್ತಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಯಾಕೆ ಬಯಸುತ್ತದೆ?.

ಹಾಗಿದ್ದ ಮೇಲೆ ಒಂದು ಶಕ್ತಿಯನ್ನು ನಾಶಗೊಳಿಸಲು ಇನ್ನೊಂದು ಶಕ್ತಿಯ ಅವಶ್ಯಕತೆಯಿದೆ ಎಂದಾಯಿತು. ನೈತಿಕ ಶಕ್ತಿಯನ್ನು ಯಾವ ರೀತಿ ಬಳಸಬೇಕೆನ್ನುವ ಸಮಸ್ಯೆ ಇದೆ. ಆದರೆ, ಆ ಕಡೆಯ ಅಧಿಕಾರವನ್ನು ನಾಶಪಡಿಸಲು ಈ ಕಡೆಯೂ ಅಧಿಕಾರದ ಅವಶ್ಯಕತೆಯಿದೆ ಎನ್ನುವುದರ ಬಗ್ಗೆ ಸಂಶಯವಿಲ್ಲ. ಅಧಿಕಾರವು ರಾಜಕೀಯ ಅಥವಾ ಆರ್ಥಿಕ ಸ್ವರೂಪದ್ದಾಗಿರುತ್ತದೆ. ಮಿಲಿಟರಿ ಶಕ್ತಿ ಇಂದು ಶಕ್ತಿಯೇ ಅಲ್ಲ. ಯಾಕೆಂದರೆ ಅದು ಒಂದು ಸ್ವತಂತ್ರ ಶಕ್ತಿಯಲ್ಲ. ದುಡಿಯುವ ವರ್ಗದವರ ಆರ್ಥಿಕ ಶಕ್ತಿಯೇ ಮುಷ್ಕರದಲ್ಲಿ ಕಂಡುಬರುವ ನಿಜವಾದ ಶಕ್ತಿ, ದುಡಿಯುವ ವರ್ಗದವರಲ್ಲಿ ಅಸ್ಪಶ್ಯರು ಒಂದಾದರೆ ಅವರಿಗೆ ಆರ್ಥಿಕ ಶಕ್ತಿ ಬಿಟ್ಟು ಇನ್ಯಾವ ಶಕ್ತಿಯು ಸಿಗುವುದಿಲ್ಲ. ಈ ಶಕ್ತಿಯು ದುಡಿಯುವ ವರ್ಗದವರ ಹಿತಾಸಕ್ತಿಗಳನ್ನು ರಕ್ಷಿಸುವಷ್ಟು ಹೆಚ್ಚಿನದಾಗಿರುವುದಿಲ್ಲ. ಕಾನೂನುಗಳಿಂದ ಇದು ಕುಂಠಿತಗೊಂಡಿರುತ್ತದೆ. ಅಲ್ಲದೆ ಆಜ್ಞೆ, ತೀರ್ಪು, ಯುದ್ಧನೀತಿಗಳಿಗೆ ಮತ್ತು ಸೈನ್ಯಕ್ಕೂ ಬದ್ಧವಾಗಿರಬೇಕು.

ಅಸ್ಪಶ್ಯರ ಮುಷ್ಕರ ಮಾಡುವ ಅಧಿಕಾರವಂತೂ ಯಾವ ಕೆಲಸಕ್ಕೂ ಸಾಲದಾಗುತ್ತದೆ. ಹೀಗಾಗಿ ಆದಷ್ಟು ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳುವುದು ಅಸ್ಪಶ್ಯನಿಗೆ ಅತ್ಯಗತ್ಯವಾಗಿದೆ. ಕೆಲಸಕ್ಕೆ ಬಾರದ ಈ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿಯ ಏರುತ್ತಿರುವ ಕೊರತೆಯನ್ನು ಗಮನದಲ್ಲಿಟ್ಟುಕೊಂಡ ಅಸ್ಪಶ್ಯ ಸಾಕಷ್ಟು ರಾಜಕೀಯ ಶಕ್ತಿಯನ್ನು ಪಡೆಯಲಾರ. ಎಷ್ಟೇ ರಾಜಕೀಯ ಶಕ್ತಿ ಸಂಪಾದಿಸಿದರೂ, ಹಿಂದೂಗಳಿಗಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿಯ ಅಗಾಧತೆಯ ಮುಂದೆ ಅಲ್ಪವೇ ಅನಿಸುತ್ತದೆ. ಅಸ್ಪಶ್ಯನಿಗೆ ಎಷ್ಟೇ ಅನಂತವಾದ ರಾಜಕೀಯ ಶಕ್ತಿ ಸಿಕ್ಕಿದರೂ ಕೂಡಾ, ಅವನು ಶಾಸಕಾಂಗದಲ್ಲಿ ತನ್ನ ಪ್ರಾತಿನಿಧ್ಯಕ್ಕೆ ಹಿಂದೂಗಳನ್ನೇ ಅವಲಂಬಿಸಿದ್ದರೆ, ಅದೆಲ್ಲ ಯಾವ ಉಪಯೋಗಕ್ಕೂ ಬರುವುದಿಲ್ಲ; ಯಾಕೆಂದರೆ, ಹಿಂದೂಗಳ ರಾಜಕೀಯ ಜೀವನ ಅಸ್ಪಶ್ಯರ ಆರ್ಥಿಕ ಹಾಗೂ ಸಾಮಾಜಿಕ ಹಿತಾಸಕ್ತಿಗಳಿಗೆ ತದ್ವಿರುದ್ಧವಾದ ಆಸಕ್ತಿಗಳನ್ನು ಅವಲಂಬಿಸಿದೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)                  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)