ಕ್ರಿಪ್ಸ್ ಕೊಡುಗೆ ಯಾಕೆ ತಿರಸ್ಕೃತವಾಯ್ತು?
ಭಾಗ-43
ಇಲ್ಲಿ ಗಾಂಧೀಜಿ ಎಡವಿದರು ಎಂದು ಹೇಳುವಾಗ, ಈ ವಿಭಜನೆಗೆ ಅವರೇ ಪ್ರಮುಖ ಕಾರಣಕರ್ತರು ಎಂದು ಗೋಡ್ಸೆ ಕೃತ್ಯವನ್ನು ಸಮರ್ಥಿಸಲಾಗದು. ಜಗದ್ವಾಪಾರಗಳು ಯಾರಾದರೂ ಒಬ್ಬ ಅಥವಾ ಕೆಲವು ವ್ಯಕ್ತಿಗಳಿಂದಲೇ ನಡೆಯುವುದಿಲ್ಲ. ಅದಕ್ಕೆ ಅನೇಕ ಶಕ್ತಿಗಳು-ಒಮ್ಮಿಮ್ಮೆ ನೈಸರ್ಗಿಕ ಘಟನೆಗಳೂ ಪಾತ್ರವಹಿಸುತ್ತವೆ. ಜಪಾನಿ ಸೈನ್ಯ ಭಾರತದ ಮೇಲೆ ದಂಡೆತ್ತಿ ಬಂದಾಗ ಅಕಾಲ ಮಳೆ ಹೊಯ್ದು ಸೈನ್ಯ ಮುಂದುವರಿಯದಂಥ ಪರಿಸ್ಥಿತಿ ಉಂಟಾಯಿತು! ಜಪಾನ್ ಭಾರತವನ್ನು ಆಕ್ರಮಿಸದಿದ್ದದ್ದು ಬ್ರಿಟಿಷ್ ಸೈನ್ಯದ ಶೌರ್ಯದಿಂದಲ್ಲ. ನಿಸರ್ಗ ಸುರಿಸಿದ ಅಕಾಲ ಭೀಕರ ಮಳೆ! ಈ ದೃಷ್ಟಿಯಿಂದ ಭಾರತದ ವಿಭಜನೆಯನ್ನು ನೋಡಬೇಕು.
ನಮ್ಮ ದೇಶದ ವಿಭಜನೆಗೆ ಬ್ರಿಟಿಷರ ಒಡೆದಾಳುವ ಕುಟಿಲ ನೀತಿಯೂ ಒಂದು ಮುಖ್ಯ ಕಾರಣ ಎಂಬುದಾಗಿ ನಾವು ಬಲವಾಗಿ ನಂಬಿರುವ ಭಾವನೆ. ಇದು ಪೂರ್ಣ ಸತ್ಯವಲ್ಲ ಎಂಬ ಮಾತನ್ನು ಸ್ವಾತಂತ್ರಾ ನಂತರದ ಅರುವತ್ತು ವರ್ಷಗಳಾದ ಮೇಲೆ ನಾವು ಒಪ್ಪಿಕೊಳ್ಳಬೇಕು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಹಿಂದೂ-ಮುಸ್ಲಿಮರಲ್ಲಿ ಏಕತೆಯನ್ನುಂಟುಮಾಡಲು, ಆಳುವವರ ಬಗ್ಗೆ ಆಕ್ರೋಶವನ್ನುಂಟುಮಾಡಲು ಸ್ವಾತಂತ್ರ ಸಮರವನ್ನು ತೀವ್ರಗೊಳಿಸಲು ಬ್ರಿಟಿಷರ ಮೇಲೆ ಈ ಆರೋಪ ಮಾಡಿದ್ದು ಒಂದು ಯುದ್ಧೋಪಾಯವಾಗಿತ್ತು. ಬ್ರಿಟಿಷರು ಇಲ್ಲಿಗೆ ಬರುವುದಕ್ಕೆ ಮೊದಲು ಹಿಂದೂಗಳಲ್ಲೇ ಒಗ್ಗಟ್ಟು ಇರಲಿಲ್ಲ. ಮಹಮ್ಮದೀಯರು ಇಲ್ಲಿಗೆ ದಂಡೆತ್ತಿ ಬರಲು ಇಲ್ಲಿದ್ದ ಅಪ್ಪಟ ಹಿಂದೂಗಳೇ ಕಾರಣ ಎಂಬುದನ್ನು ಮರೆಯಬಾರದು. ಬ್ರಿಟಿಷರು ಇಲ್ಲಿ ನೆಲೆಯೂರಲು ನೆರವಾದವರೂ ಇಲ್ಲಿ ಭರತಮಾತೆಯ ಸತ್ಪುತ್ರರೇ! ಅದರ ಇತಿಹಾಸ ದೊಡ್ಡದು. ಅದನ್ನು ವಿಸ್ತಾರವಾಗಿ ಪ್ರಸ್ತಾವಿಸುವುದು ಸದ್ಯ ಈ ಸಂದರ್ಭದಲ್ಲಿ ಅನಗತ್ಯ. ಇಲ್ಲಿ ಎರಡು ಕೋಮುಗಳ ಮೂಲಭೂತವಾದಿಗಳಲ್ಲಿ ಆಗಲೇ ಬೇರೂರಿದ್ದ ಅನೈಕಮತ್ಯ, ಮತ್ಸರ, ದ್ವೇಷವನ್ನು ಬ್ರಿಟಿಷರು ತಮ್ಮ ಆಳ್ವಿಕೆಯ ಭದ್ರತೆಗಾಗಿ ದುರುಪಯೋಗಪಡಿಸಿಕೊಂಡರು ಎಂದಿಷ್ಟೆ ಹೇಳಿದರೆ ಸಾಕು. ಅವರ ಕುಟಿಲ ರಾಜನೀತಿಗೆ ಬಲಿಯಾದ ನಮ್ಮ ದೌರ್ಬಲ್ಯ, ದುಷ್ಟತನಕ್ಕೆ ನಾವು ಹೊಣೆಗಾರರಾಗಲೇಬೇಕು.
ಈ ದೇಶದ ಸ್ವಾತಂತ್ರ ಪ್ರಾಪ್ತಿ ತ್ವರೆಗೊಳ್ಳಲು ಬಹುಮುಖ್ಯ ಕಾರಣ ದ್ವಿತೀಯ ಜಾಗತಿಕ ಯುದ್ಧದ ಸನ್ನಿವೇಶ ಮತ್ತು ಬ್ರಿಟಿಷರು ಆ ಯುದ್ಧದಲ್ಲಿ 1939ರಿಂದ 1942ರ ವರೆಗೆ ಮೇಲಿಂದ ಮೇಲೆ ಅನುಭವಿಸಿದ ಸರಣಿ ಸೋಲುಗಳು. ಅವರು ಆ ಯುದ್ಧದಲ್ಲಿ ಗೆಲ್ಲದಿದ್ದರೆ ಅವರ ಸಾಮ್ರಾಜ್ಯ ಅಸ್ತಂಗತವಾಗುವ ಹೆದರಿಕೆ ಒಂದೇ ಅಲ್ಲದೆ ಅವರ ಸ್ವಾತಂತ್ರವೂ ನಷ್ಟವಾಗಿ ಹೋಗುತ್ತಿತ್ತು!! ಬ್ರಿಟಿಷರು ಆ ಯುದ್ಧದಲ್ಲಿ ಗೆಲ್ಲಲೇಬೇಕಾಗಿದ್ದರೆ ಭಾರತೀಯರು, ಭಾರತದ ಸೈನಿಕರು, ಭಾರತದ ವಿಪುಲ ಯುದ್ಧ ಸಾಮಗ್ರಿ ಸಂಪತ್ತು ಹೃತ್ಪೂರ್ವಕವಾಗಿ ಕಾಯಾ ವಾಚಾ ಮನಸಾ ಆ ಯುದ್ಧದಲ್ಲಿ ಸಹಕರಿಸಲೇಬೇಕಾಗಿತ್ತು. ಭಾರತೀಯರ ಹೃತ್ಪೂರ್ವಕ ಸಹಾಯ, ಸಹಕಾರ ಅತ್ಯಗತ್ಯವಾಗಿತ್ತು! ಆ ಸಹಕಾರ ಮತ್ತು ಸಹಾಯ ಸಿಗಬೇಕಾಗಿದ್ದರೆ ಯುದ್ಧಕಾಲದಲ್ಲಿಯೇ ಭಾರತಕ್ಕೆ ಸ್ವ- ಆಡಳಿತೆಯ ಅಧಿಕಾರವನ್ನು ಕೊಡುವುದು ಅನಿವಾರ್ಯವಾಗಿತ್ತು. ಅಂಥ ಪರಿಸ್ಥಿತಿ ಬಂದೊದಗಿತ್ತು. ಅವರಿಗೆ ಬೇರೆ ದಾರಿಯೇ ಇರಲಿಲ್ಲ.
ಭಾರತೀಯರ ಒಪ್ಪಿಗೆ ಇಲ್ಲದೆ ಭಾರತವನ್ನು ದ್ವಿತೀಯ ಜಾಗತಿಕ ಯುದ್ಧದಲ್ಲಿ ದೂಡಿದ ಇಂಡಿಯಾ ಸರಕಾರದ ಧೋರಣೆಯನ್ನು ವಿರೋಧಿಸಿಯೇ ಎಂಟು ಪ್ರಾಂತೀಯ ಕಾಂಗ್ರೆಸ್ ಮಂತ್ರಿ ಮಂಡಲಗಳು ರಾಜೀನಾಮೆ ಕೊಟ್ಟಿದ್ದು. 1940ರಲ್ಲಿ ‘ಯುದ್ಧಕ್ಕೆ ಸಹಾಯ ಮಾಡಬೇಡಿ’ ಎಂಬ ಏಕವಾಕ್ಯ ಘೋಷಣೆಯ ವೈಯಕ್ತಿಕ ಸತ್ಯಾಗ್ರಹವನ್ನು ಹೂಡಿದ್ದು. 1941ರ ಜನವರಿಯಲ್ಲಿ ಸುಭಾಷ್‌ಚಂದ್ರ ಬೋಸರು ಗೃಹಬಂಧನದಿಂದ ತಪ್ಪಿಸಿಕೊಂಡು ಹೋಗಿ ಜರ್ಮನಿಯಲ್ಲಿ ಆಶ್ರಯ ಪಡೆದು ಅವರ ಸಹಾಯಕ್ಕಾಗಿ ಕಾದಿದ್ದರು. 1941 ಬ್ರಿಟಿಷರಿಗೆ ಅತ್ಯಂತ ಸಂಕಟದ ಸಮಯ. ಸೋಲಿನ ಸರಮಾಲೆಗಳನ್ನು ಅನುಭವಿಸಿದ್ದರು. ವಿಳಂಬ ಮಾಡಿದರೆ ಬ್ರಿಟನ್ ಸ್ವಾತಂತ್ರಕ್ಕೆ ಅಪಾಯ ಸನ್ನಿಹಿತವಾಗಿತ್ತು. ಹಿಟ್ಲರ್ ಲಂಡನ್ ಹೆಬ್ಬಾಗಿಲಿನಲ್ಲೇ ಇದ್ದ! ಆಗ ಭಾರತದ ಸಹಕಾರ ಸರ್ವಸಕ್ತಿ ಬ್ರಿಟನ್‌ಗೆ ಬೇಕಾಗಿತ್ತು. ಡಿಸೆಂಬರ್ 4, 1941ರಂದು ನೆಹರೂ, ಆಝಾದ್, ಪಟೇಲ್ ಮುಂತಾದ ನಾಯಕರನ್ನು ಸೆರೆಯಿಂದ ಬಿಡುಗಡೆ ಮಾಡಿದರು. ಡಿಸೆಂಬರ್ 7ರಂದು ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು. ರಂಗೂನ್ ವಶಪಡಿಸಿಕೊಂಡಿತು. ಬ್ರಿಟಿಷರಿಗೆ ಆಘಾತವನ್ನುಂಟು ಮಾಡಿದ ಸಂಗತಿ ಎಂದರೆ ಬರ್ಮಾ ದೇಶದ ಜನ ಜಪಾನ್ ಸೈನ್ಯವನ್ನು ಸ್ವಾಗತಿಸಿ ಬ್ರಿಟಿಷರನ್ನು ಸೋಲಿಸಲು ನೆರವಾದರು. ಒಂದು ವೇಳೆ ಜಪಾನ್ ಭಾರತದ ಮೇಲೆ ದಾಳಿ ಮಾಡಿದರೆ ಭಾರತೀಯರು ಜಪಾನ್ ಸೈನ್ಯಕ್ಕೆ ನೆರವಾಗಬಹುದೆಂದು ವದಂತಿಯೂ ಹಬ್ಬಿತ್ತು. ಪೂರ್ವ ಭಾರತದ ಸೈನಿಕ ನೆಲೆಗಳಿಂದ ಬಂದ ಅಧಿಕೃತ ವರ್ತಮಾನದ ಪ್ರಕಾರ ಬಂಗಾಳ, ಅಸ್ಸಾಮ್, ಬಿಹಾರ್ ಮತ್ತು ಒಡಿಶಾ ಪ್ರಾಂತಗಳಲ್ಲಿ ಅನೇಕ ಪಂಚಮದಳ (Fifth column- ಶತ್ರುಗಳಿಗೆ ಸಹಾಯ ಮಾಡುವ -ದೇಶದ್ರೋಹಿ ದಳ) ಗಳಿವೆ ಎಂಬುದಾಗಿ ವೈಸ್‌ರಾಯರಿಗೆ ಬ್ರಿಟನ್‌ನಲ್ಲಿ ಪ್ರಧಾನಿ ಆ್ಯಂಟ್ಲೆಗೆ ಗುಪ್ತ ವರದಿ ಹೋಗಿತ್ತು. ಈ ಬೆಳವಣಿಗೆ ಬ್ರಿಟಿಷರಿಗೆ ಮಾತ್ರವೆ ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ವೌಲಾನಾ ಅಬುಲ್ ಕಲಾಂ ಮತ್ತು ಚಾಣಾಕ್ಷ ರಾಜಕಾರಣಿ ರಾಜಗೋಪಾಲಾಚಾರಿ ಅವರಿಗೂ ಅಪಾಯಕಾರಿ ಎಂಬುದು ಮನವರಿಕೆ ಆಗಿತ್ತು. ಕಾಂಗ್ರೆಸ್‌ನಲ್ಲಿ ಕೆಲವರಿಗೆ ‘‘ನಮಗೆ ಜಪಾನೀಯರಾದರೆ ಏನು? ಬ್ರಿಟಿಷರಾದರೆ ಏನು?’’ ಎಂಬ ತಾತ್ಸಾರ ಭಾವನೆ, ಹತಾಶೆ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಜಪಾನ್, ಮಲಯ ದೇಶವನ್ನು ಗೆದ್ದು ಸಿಂಗಾಪುರವನ್ನು ಫೆಬ್ರವರಿ 18, 1942ರಲ್ಲಿ ಆಕ್ರಮಿಸಿಬಿಟ್ಟಿತು! ಅಲ್ಲಿ 1,30,000 ಸೈನಿಕರು ಶರಣಾದರು. ಅವರಲ್ಲಿ 60,000 ಭಾರತೀಯ ಸೈನಿಕರಿದ್ದರು. ಇದೇ ಕಾಲಾವಧಿಯಲ್ಲಿ ಸುಭಾಷ್‌ಚಂದ್ರ ಬೋಸರು ಬರ್ಲಿನ್‌ನಿಂದ ಆಝಾದ್ ಹಿಂದ್ ರೇಡಿಯೋ ಮೂಲಕ: ‘‘ಸಿಂಗಾಪುರದ ಪತನ ಎಂದರೆ ಬ್ರಿಟಿಷ್ ಸಾಮ್ರಾಜ್ಯದ ಪತನ ಎಂದೇ. ಬ್ರಿಟಿಷರನ್ನು ಭಾರತದಿಂದ ಉಚ್ಚಾಟಿಸಲು ಇದು ಸುಮೂರ್ತ’’ ಎಂದು ದೇಶಕ್ಕೆ ಕರೆಕೊಟ್ಟರು. ಭಾರತದ ಬಾಗಿಲಿನಲ್ಲಿ ಜಪಾನ್ ಸೈನ್ಯ ಬಂದಿಳಿಯುವ ಸಮಯ ಸನ್ನಿಹಿತವಾಗಿತ್ತು. ಆಗ ಸರ್ ಸ್ಟಾಫೋರ್ಡ್ ಕ್ರಿಪ್ಸ್ ಭಾರತದ ಜನನಾಯಕರೊಡನೆ ಸಂಧಾನ ನಡೆಸಲು ಮಾರ್ಚ್ 7, 1942ರಂದು ದಿಲ್ಲಿಗೆ ಬಂದಿಳಿದರು. ಮರುದಿನವೇ ಮಾರ್ಚ್ 8ರಂದು ಬರ್ಮಾದ ಮುಖ್ಯ ಪಟ್ಟಣ ರಂಗೂನ್ ಶಹರ ಜಪಾನ್ ಕೈವಶವಾಯಿತು. ಮಾರ್ಚ್ 12ರಂದು ಜಪಾನ್ ಚಕ್ರವರ್ತಿ ಟೋಜೋ ಜಪಾನ್ ರೇಡಿಯೋ ಮೂಲಕ ಬರ್ಮಾ ಮತ್ತು ಭಾರತೀಯರಿಗೆ ಸಂದೇಶ ಕಳಿಸುತ್ತಾನೆ:
‘‘ಬರ್ಮಾ, ಬರ್ಮೀಯರಿಗೆ ಸೇರುತ್ತದೆ. ಭಾರತ ಭಾರತೀಯರಿಗೆ ಎಂಬ ಸಿದ್ಧಾಂತವನ್ನು ಸ್ಥಾಪಿಸಲು ಸುಮುಹೂರ್ತ ಸನ್ನಿಹಿತವಾಗಿದೆ. ಭಾರತ ಭಾರತೀಯರಿಗೆ ಎಂಬುದು 40 ಕೋಟಿ ಭಾರತೀಯರ ಬಹುಕಾಲದ ಕನಸು ನನಸಾಗುವುದು. ಗ್ರೇಟ್ ಬ್ರಿಟನ್ ಬಹುಕಾಲದಿಂದ ಭಾರತಕ್ಕೆ ಮೋಸಮಾಡುತ್ತ ಬಂದಿದೆ. ಮತ್ತೆ ಈಗ ಬ್ರಿಟನ್ ಭಾರತವನ್ನು ಮೋಸಮಾಡಲು ಏನೇನೋ ಆಶೆ ಆಮಿಷಗಳನ್ನೊಡ್ಡಲು ಮುಂದಾಗಿದೆ. ಭಾರತೀಯರೇ ಆ ಮೋಸದ ಬಲೆಗೆ ಬೀಳಬೇಡಿ.’’
ಇಂಥ ಸನ್ನಿವೇಶದಲ್ಲಿ ತಡಮಾಡಿದರೆ ಭಾರತ ಕೈಬಿಟ್ಟುಹೋಗುತ್ತದೆ ಎಂಬುದು ಬ್ರಿಟನ್‌ಗೆ ದಿಟವಾಗಿ ಹೋಗಿತ್ತು. ಭಾರತವನ್ನು ಉಳಿಸಿಕೊಳ್ಳಲೇಬೇಕು. ಅವರ ಸ್ವಾತಂತ್ರಾಕಾಂಕ್ಷೆಯನ್ನು ಈಡೇರಿಸಲೇ ಬೇಕು ಎಂದು ಚರ್ಚಿಲ್ ಮಂತ್ರಿಮಂಡಲ ನಿರ್ಧರಿಸಿತು. ಕ್ರಿಪ್ಸ್ ಅವರನ್ನು ಸಂಧಾನಕ್ಕೆ ರಾಯಭಾರಿಯನ್ನಾಗಿ ಕಳಿಸಿತು. ಕ್ರಿಪ್ಸ್ ಕೊಡುಗೆ ಎಂದು ಪ್ರಸಿದ್ಧವಾದ (Crips offer) ಯೋಜನೆಯ ಪ್ರಕಾರ, ಇಂಡಿಯಾ ಸಕ್ರಿಯವಾಗಿ ಯುದ್ಧದಲ್ಲಿ ಪಾಲ್ಗೊಳ್ಳಬೇಕು.
(1) ತಕ್ಷಣವೇ ಇಂಡಿಯಾ ಸರಕಾರದ ವೈಸ್‌ರಾಯ್ ಕಾರ್ಯಕಾರಿ ಮಂಡಲ(Executive council) ಕೇಂದ್ರ ಸರಕಾರದ ಮಂತ್ರಿಮಂಡಲದಂತೆ ಕೆಲಸ ಮಾಡುವ ಏರ್ಪಾಟು ಮಾಡಲಾಗುವುದು.
(2) ಯುದ್ಧಾನಂತರ ಭಾರತಕ್ಕೆ ಸ್ವಯಂ-ಆಡಳಿತೆಯ ಸರಕಾರ (Self government)ವನ್ನು ರಚಿಸಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಡೊಮಿನಿಯನ್ ಸ್ಟೇಟಸ್ ಸ್ವತಂತ್ರ ಸ್ವಾಯತ್ತ ರಾಜ್ಯವನ್ನು ಸ್ಥಾಪಿಸಲಾಗುವುದು.
(3) ಯುದ್ಧಾನಂತರ ಚುನಾವಣೆಗಳ ಮೂಲಕ ತಮಗೆ ಬೇಕಾದ ಸಂವಿಧಾನವನ್ನು ರಚಿಸಿಕೊಂಡು, ಬೇಕಾದರೆ ಬ್ರಿಟನ್‌ನಿಂದ ಪ್ರತ್ಯೇಕವಾಗಿ ಹೋಗಬಹುದು, ಸಂವಿಧಾನ ಸಭೆಯಲ್ಲಿ ಭಾರತೀಯ ಅರಸರ ಆಳ್ವಿಕೆಯ ಪ್ರಜೆಗಳ ಪ್ರತಿನಿಧಿಗಳೂ ಇರತಕ್ಕದ್ದು.
(4) ಹಾಗೆ ಸ್ಥಾಪನೆಯಾದ ಸ್ವತಂತ್ರ ಭಾರತದ ರಾಜ್ಯಗಳು ತಮಗಿಷ್ಟ ಬಂದರೆ ಭಾರತ ಒಕ್ಕೂಟ(Indian union - union of india) ದಿಂದ ಹೊರಗೆ ಹೋಗಲು ಆಯಾ ರಾಜ್ಯಗಳಿಗೆ ಸ್ವಾತಂತ್ರ ಇರತಕ್ಕದ್ದು.
ಈ ಮುಖ್ಯ ಸೂತ್ರಗಳನ್ನೊಳಗೊಂಡ ಒಂದು ಯೋಜನೆಯನ್ನು ಭಾರತೀಯರ ಜನನಾಯಕರ ಮುಂದಿಟ್ಟರು. ಕಾಂಗ್ರೆಸ್, ಮುಸ್ಲಿಂ ಲೀಗ್, ಹಿಂದೂ ಮಹಾಸಭೆ, ಅಕಾಲಿ ದಳ, ದೇಶೀರಾಜರ ಸಂಘ (Chamber of princes), ಡಾ. ಅಂಬೇಡ್ಕರರ ದಲಿತ ಸಂಘಟನೆ ಮುಂತಾದ ನಾಯಕರೊಡನೆ ಕ್ರಿಪ್ಸ್ ಸಮಾಲೋಚನೆ ನಡೆಸಿದರು. ಎಪ್ರಿಲ್ ಮಧ್ಯಭಾಗದವರೆಗೆ ಭಾರತೀಯ ಮುಖಂಡರೊಡನೆ ಆರೇಳು ಸುತ್ತಿನ ಮಾತುಕತೆ ನಡೆಸಿದರು. ಭಿನ್ನ ಭಿನ್ನ ಅಭಿಪ್ರಾಯಗಳನ್ನು ಸಂಗ್ರಹಿಸಿ ಭಿನ್ನಾಭಿಪ್ರಾಯಗಳನ್ನು ಸಾಮರಸ್ಯಗೊಳಿಸಿ ಸ್ಥೂಲವಾಗಿ ಎಲ್ಲರಿಗೂ ಒಪ್ಪಿಗೆಯಾಗುವ ಒಂದು ಯೋಜನೆಯನ್ನು ಸಿದ್ಧಪಡಿಸಿದರು. ಆ ಯೋಜನೆ ತತ್‌ಕ್ಷಣ ಪೂರ್ಣ ಸ್ವರಾಜ್ಯವನ್ನು ಭಾರತೀಯರಿಗೆ ಪ್ರದಾನ ಮಾಡದಿದ್ದರೂ, ಯುದ್ಧಾನಂತರ ಆ ಗುರಿ ತಲುಪುವ ಎಲ್ಲ ಸಾಧ್ಯತೆಯನ್ನು ಒಳಗೊಂಡಿತ್ತು. ಕಾಂಗ್ರೆಸ್‌ನಲ್ಲಿಯೇ ಮೂರು ಭಿನ್ನಾಭಿಪ್ರಾಯಗಳಿದ್ದುವು: (1) ಆಝಾದ್, ರಾಜಾಜಿಯವರ ಅಭಿಪ್ರಾಯದಂತೆ ಕ್ರಿಪ್ಸ್ ಕೊಡುಗೆಯನ್ನು ಒಪ್ಪಿಕೊಳ್ಳುವುದು. (2) ಸರ್ದಾರ್ ಪಟೇಲ್, ಕೃಪಲಾನಿ ಗುಂಪಿನವರು ಅದನ್ನು ತಿರಸ್ಕರಿಸುವುದು. (3) ಸಂಪೂರ್ಣವಾಗಿ ಅಲ್ಲದಿದ್ದರೂ ಆಂಶಿಕವಾಗಿ ಒಪ್ಪಿಕೊಂಡು ಪ್ರಯೋಗ ಮಾಡಿನೋಡುವುದು. ಮುಖ್ಯವಾಗಿ ಜಪಾನ್‌ಗೆೆ ಸಹಕರಿಸಲೇಬಾರದು. ಬ್ರಿಟನ್ ಯುದ್ಧದಲ್ಲಿ ಗೆಲ್ಲಲು ಸಹಕರಿಸಬೇಕು. ಇದು ನೆಹರೂ ನಿಲುಮೆ.
ಯಾರೇ ಏನೇ ಹೇಳಿದರೂ ಗಾಂಧೀಜಿಯ ಒಪ್ಪಿಗೆ ಇಲ್ಲದಿದ್ದರೆ ಯಾವುದೂ ಯಶಸ್ವಿಯಾಗದು ಎಂಬುದು ಕ್ರಿಪ್ಸ್ ಅವರಿಗೆ ಗೊತ್ತಿತ್ತು. ಮಾರ್ಚ್ 27ರಂದು ಗಾಂಧೀಜಿ ವಾರ್ಧಾದಿಂದ ಹೊಸದಿಲ್ಲಿಗೆ ಇಳಿದು, ಕ್ರಿಪ್ಸ್ ಅವರನ್ನು ಭೇಟಿಯಾಗಲು ಬಂದಾಗ ಕ್ರಿಪ್ಸ್ ಖಾದಿ ಜುಬ್ಬಾ, ಪೈಜಾಮಾ ತೊಟ್ಟುಕೊಂಡು ಪೋರ್ಟಿಕೋದಲ್ಲಿ ನಿಂತು ಗಾಂಧೀಜಿ ಕಾರಿನ ಬಾಗಿಲನ್ನು ತಾವೇ ತೆಗೆದು ಅವರನ್ನು ಸ್ವಾಗತಿಸಿದ ಸುದ್ದಿ ಚಿತ್ರಸಹಿತ ಪ್ರಕಟವಾಗಿತ್ತು! ಅಂದರೆ ಬ್ರಿಟಿಷರಿಗೆ ಈ ಯುದ್ಧದಲ್ಲಿ ಭಾರತ ಉತ್ಸಾಹದಿಂದ ಭಾಗಿಯಾಗಿ ಯುದ್ಧವನ್ನು ಗೆಲ್ಲಲೇ ಬೇಕೆಂಬುದರಲ್ಲಿ ಎಷ್ಟು ಕಳಕಳಿಯಿತ್ತು ಎಂಬುದರ ಸಂಕೇತ ಕ್ರಿಪ್ಸ್ ನಡವಳಿಕೆಯಲ್ಲಿ ತೋರಿತು. ಗಾಂಧೀಜಿಯೊಡನೆ ಮೂರು ನಾಲ್ಕು ಸುತ್ತಿನ ಮಾತುಕತೆ ನಡೆಯಿತು. ಆದರೂ ಸಂಧಾನ ಮುರಿದು ಬಿತ್ತು! ‘ ಈ ಕೊಡುಗೆ A post - dated cheque on a failing bank’ ಎಂದು ಗಾಂಧೀಜಿ ಅದನ್ನು ಅನಾಮತ್ತಾಗಿ ತಿರಸ್ಕರಿಸಿಬಿಟ್ಟರು. ಅದಕ್ಕೆ ಮುಖ್ಯ ಕಾರಣ - ಸಶಸ್ತ್ರ ಯುದ್ಧ ಹಿಂಸಾತ್ಮಕ ಹೋರಾಟ ಯುದ್ಧದಲ್ಲಿ ರಕ್ತಪಾತ ಗಾಂಧೀಜಿಯ ಅಹಿಂಸಾತತ್ವಕ್ಕೆ ವಿರುದ್ಧವಾಗಿತ್ತು. ನೆಹರೂ, ಮಂತ್ರವಾದಿಯ ನಾದಕ್ಕೆ ಹೆಡೆ ತಗ್ಗಿಸುವ ಸರ್ಪದಂತೆ ತಲೆಬಾಗಿ ಮೂಕರಾದರು. ಇನ್ನುಳಿದವರು ಆಗ ದೇಶದಲ್ಲಿ ಎದ್ದಿದ್ದ ಬ್ರಿಟಿಷರ ವಿರುದ್ಧದ ಜ್ವಾಲೆಯನ್ನು ಶಮನಗೊಳಿಸಲು ಶಕ್ತರಾಗಲಿಲ್ಲ. ಸಕ್ರಿಯ ರಾಜಕೀಯದಿಂದ ಸಂಪೂರ್ಣ ನಿವೃತ್ತಿ ಹೊಂದಿ ಪಾಂಡಿಚೇರಿ ಆಶ್ರಮದಲ್ಲಿ ತಪೋನಿರತರಾಗಿದ್ದ ಶ್ರೀ ಅರವಿಂದರು, ಕ್ರಿಪ್ಸ್ ಕೊಡುಗೆಯನ್ನು ಒಪ್ಪಿಕೊಂಡು ಫ್ಯಾಶಿಸ್ಟ್ ದುಶ್ಶಕ್ತಿಯನ್ನು ದಮನ ಮಾಡಬೇಕು. ಬ್ರಿಟಿಷ್ ಸರಕಾರಕ್ಕೆ ಸಹಾಯ ಮಾಡಬೇಕೆಂದು ರಾಜಕೀಯ ಮುಖಂಡರಿಗೆ ತಿಳಿಸಲು ತಮ್ಮ ಆಪ್ತರೊಬ್ಬರನ್ನು ದಿಲ್ಲಿಗೆ ಕಳುಹಿಸಿದರು. ಅವರಲ್ಲಿಗೆ ಮುಟ್ಟಿ ಶ್ರೀ ಅರವಿಂದರ ಸಂದೇಶವನ್ನು ತಲುಪಿಸುವ ಮುನ್ನ ಸಂಧಾನ ಮುರಿದುಬಿದ್ದಿತು !
ಇತಿಹಾಸವನ್ನು ಲಕ್ಷ ಇಟ್ಟು ಗಮನಿಸಿದರೆ ಬ್ರಿಟಿಷರು ಇಲ್ಲಿಯ ಹಿಂದೂ-ಮುಸ್ಲಿಮರಲ್ಲಿ ಒಡಕು ಹುಟ್ಟಿಸಿ ಒಡೆದಾಳುವ ಧೋರಣೆಯನ್ನು ಅನುಸರಿಸಿ ದೇಶ ವಿಭಜನೆ ಮಾಡಿದರೇ? ಆಗ ಬ್ರಿಟಿಷ್ ಆಳ್ವಿಕೆಯ ಬಗ್ಗೆ ಬ್ರಿಟಿಷ್ ಸಾಮ್ರಾಜ್ಯದ ಬಗ್ಗೆ, ಒಟ್ಟು ಬ್ರಿಟಿಷ್ ಜನಾಂಗದ ಬಗ್ಗೆ ನಮಗಿದ್ದ ದ್ವೇಷ, ಆಕ್ರೋಶ, ರೋಷ, ಅಸಮಾಧಾನದ ಹಿನ್ನೆಲೆಯಲ್ಲಿ ಈ ದೇಶ ವಿಭಜನೆಗೆ ಅವರು ಕಾರಣರೆಂದು ಭಾವಿಸಿದರೂ ಇಂದು ಹಾಗೆ ಅನಿಸುವುದೇ? ಕ್ರಿಪ್ಸ್ ಕೊಡುಗೆಯನ್ನು ಅಹಿಂಸಾತತ್ತ್ವದ ಆಧಾರದ ಮೇಲೆ ಗಾಂಧೀಜಿ ತಿರಸ್ಕರಿಸಿದ್ದು ತಪ್ಪುಹೆಜ್ಜೆ ಎಂದೇ ಕಾಣುತ್ತದೆ. ಆಗ ಆ ಕೊಡುಗೆಯನ್ನು ಅಂಗೀಕರಿಸಿ ಆ ಯೋಜನೆಯನ್ನು ಪ್ರಯೋಗ ಮಾಡಿ ಅನುಷ್ಠಾನದಲ್ಲಿ ತಂದಿದ್ದರೆ ಬಹುಶಃ Union of india/indian union ಸ್ಥಾಪನೆ ಆಗಬಹುದಿತ್ತು. ವಿಭಜನೆ ತಪ್ಪಬಹುದಿತ್ತು!
ಇಲ್ಲಿ ಗಾಂಧೀಜಿ ಎಡವಿದರು ಎಂದು ಹೇಳುವಾಗ, ಈ ವಿಭಜನೆಗೆ ಅವರೇ ಪ್ರಮುಖ ಕಾರಣಕರ್ತರು ಎಂದು ಗೋಡ್ಸೆ ಕೃತ್ಯವನ್ನು ಸಮರ್ಥಿಸಲಾಗದು. ಜಗದ್ವಾಪಾರಗಳು ಯಾರಾದರೂ ಒಬ್ಬ ಅಥವಾ ಕೆಲವು ವ್ಯಕ್ತಿಗಳಿಂದಲೇ ನಡೆಯುವುದಿಲ್ಲ. ಅದಕ್ಕೆ ಅನೇಕ ಶಕ್ತಿಗಳು-ಒಮ್ಮಿಮ್ಮೆ ನೈಸರ್ಗಿಕ ಘಟನೆಗಳೂ ಪಾತ್ರವಹಿಸುತ್ತವೆ. ಜಪಾನಿ ಸೈನ್ಯ ಭಾರತದ ಮೇಲೆ ದಂಡೆತ್ತಿ ಬಂದಾಗ ಅಕಾಲ ಮಳೆ ಹೊಯ್ದು ಸೈನ್ಯ ಮುಂದುವರಿಯದಂಥ ಪರಿಸ್ಥಿತಿ ಉಂಟಾಯಿತು! ಜಪಾನ್ ಭಾರತವನ್ನು ಆಕ್ರಮಿಸದಿದ್ದದ್ದು ಬ್ರಿಟಿಷ್ ಸೈನ್ಯದ ಶೌರ್ಯದಿಂದಲ್ಲ. ನಿಸರ್ಗ ಸುರಿಸಿದ ಅಕಾಲ ಭೀಕರ ಮಳೆ! ಈ ದೃಷ್ಟಿಯಿಂದ ಭಾರತದ ವಿಭಜನೆಯನ್ನು ನೋಡಬೇಕು. ಅರವತ್ತು ವರ್ಷಗಳಿಂದ ಅಸ್ತಿತ್ವದಲ್ಲಿರುವ ಪಾಕಿಸ್ತಾನವನ್ನು ಭೂಪಟದಿಂದ ಅಳಿಸಬೇಕೆಂಬ ಸಂಘಪರಿವಾರದ ಸಾಹಸ ಹಾಸ್ಯಾಸ್ಪದ; ಅಪಾಯಕಾರಿ ! ಆ ನೆವದಿಂದ ಮುಸ್ಲಿಮರನ್ನು ದ್ವೇಷಿಸುವುದು ಕ್ಷೇಮವಲ್ಲ.