ದಲಿತ ಚಳವಳಿ ದಿಕ್ಕೆಟ್ಟಿದೆಯೇ?
‘‘ದಿಕ್ಕೆಟ್ಟ ಸ್ಥಿತಿಯಲ್ಲಿ ದಲಿತ ಚಳವಳಿ’’ ಎಂಬ ಶೀರ್ಷಿಕೆಯಡಿಯಲ್ಲಿ ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜಾರಿಯಲ್ಲಿದೆ, ವೈರಲ್ ಆಗಿದೆ. ಖಂಡಿತ, ಈ ಚರ್ಚೆಯನ್ನು ಉಪೇಕ್ಷೆ ಮಾಡಿಬಿಡಬಹುದು. ಆದರೆ ಅದು ಉಂಟುಮಾಡಬಹುದಾದ ಅಪಾಯ? ಈ ನಿಟ್ಟಿನಲ್ಲಿ ‘‘ದಿಕ್ಕೆಟ್ಟ ಸ್ಥಿತಿಯಲ್ಲಿ ದಲಿತ ಚಳವಳಿ’’ ಎಂಬ ಈ ವಿಚಾರಕ್ಕೆ ಉತ್ತರಿಸಲೇಬೇಕಿದೆ. ಹಿನ್ನೆಲೆಯಲ್ಲಿ ಪ್ರಶ್ನಿಸುವುದಾದರೆ ದಲಿತ ಚಳವಳಿ ದಿಕ್ಕೆಟ್ಟಿದೆಯೇ? ಖಂಡಿತ ಇಲ್ಲ. ಹಾಗಿದ್ದರೆ? ಬದಲಾದ ಕಾಲಘಟ್ಟದೊಂದಿಗೆ ಅದು ರೂಪಾಂತರಗೊಂಡಿದೆಯಷ್ಟೆ. ಹಾಗೆ ಹೇಳುವುದಾದರೆ ದಲಿತ ಚಳವಳಿ ವಿಶ್ಲೇಷಿಸುವ ಎಲ್ಲರೂ ದಲಿತ ಚಳವಳಿ ಎಂದರೆ ದೇವನೂರ ಮಹಾದೇವ, ಪ್ರೊ. ಬಿ. ಕೃಷ್ಣಪ್ಪ, ದೇವಯ್ಯ ಹರವೆ, ಸಿದ್ದಲಿಂಗಯ್ಯ... ಹೀಗೆ ಎಪ್ಪತ್ತರ ದಶಕದ ಹೋರಾಟಗಳನ್ನೇ ಇನ್ನೂ ಈಗಿನದೆಂಬಂತೆ ಈಗಲೂ ಮಾತನಾಡುತ್ತಿರುತ್ತಾರೆ. ಆದರೆ ವಾಸ್ತವವೆಂದರೆ ಇದು 21ನೇ ಶತಮಾನದ 2ನೇ ದಶಕ. ದುರಂತವೆಂದರೆ ನಲವತ್ತು ಐವತ್ತು ವರ್ಷಗಳ ಈ ಕಾಲಾನುಕ್ರಮದಲ್ಲಿ ನಡೆದಿರುವ ಸೈದ್ಧಾಂತಿಕ ಮತ್ತು ರಾಜಕೀಯ ಬೆಳವಣಿಗೆಗಳು? ದಲಿತ ಚಳವಳಿಯ ಯಾವುದೇ ಬಗೆಯ ವ್ಯಾಖ್ಯಾನಕಾರರು ಇದನ್ನು ಗುರುತಿಸಲೇ ಹೋಗುವುದಿಲ್ಲ. ಇದು ಜಾಣ ಕುರುಡೋ ಅಥವಾ ಪ್ರಸ್ತುತ ಕಣ್ಣೆದುರೇ ನಡೆದಿರುವ ಬೆಳವಣಿಗೆಗಳ ಬಗ್ಗೆ ಅಸಹನೆಯೋ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಿದು.
ಹಾಗಿದ್ದರೆ ಎಪ್ಪತ್ತರ ದಶಕದಲ್ಲಿ, ಎಂಬತ್ತರ ದಶಕದಲ್ಲಿ ದಲಿತ ಚಳವಳಿ ಹೇಗಿತ್ತು, ಈಗ ಹೇಗಿದೆ? ಈ ಬಗ್ಗೆ ಹೇಳುವುದಾದರೆ 70ರಿಂದ 90ರ ದಶಕದವರೆಗೆ ದಲಿತ ಚಳವಳಿ ಕೇವಲ ಬೀದಿ ಹೋರಾಟದ ರೂಪ ಪಡೆದಿತ್ತಷ್ಟೆ. ಈ ಸಂದರ್ಭದಲ್ಲಿ ಕೆಲವು ಪ್ರಗತಿಪರ ಸ್ಥಳೀಯ ಸಾಹಿತಿಗಳು ಅಂತಹ ಹೋರಾಟಕ್ಕೆ ಬೆಂಬಲ ನೀಡಿರಬಹುದು, ಅದರ ಜೊತೆಯಲ್ಲಿ ಒತ್ತಾಸೆಯಾಗಿ ನಿಂತಿರಬಹುದು. ಖಂಡಿತ ಅದು ಮೆಚ್ಚುವಂತಹದ್ದೆ. ಆದರೆ 90ರ ದಶಕ ಕಳೆಯುತ್ತಲೇ ದಲಿತ ಹೋರಾಟದ ಹಾದಿಯೇ ಬದಲಾಯಿತು. ದೇಶದ ಬೇರೆಡೆ ಆದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಕಾರಣ ಎಂದು ಇಲ್ಲಿ ಬಿಡಿಸಿಹೇಳಬೇಕಿಲ್ಲ. ಅದರಲ್ಲೂ ಕಾನ್ಷೀರಾಮ್‌ರವರ ಬಹುಜನ ಚಳವಳಿ ರಾಜ್ಯದ ಮೇಲೆ ಭಾರೀ ಪ್ರಭಾವ ಬೀರಿತು. ಮತ್ತೊಂದು ಅಂಶವೆಂದರೆ ಎಪ್ಪತ್ತರ ದಶಕದಲ್ಲಿ ಅಂಬೇಡ್ಕರ್‌ರವರ ಬರಹಗಳ ಲಭ್ಯತೆ ಇರಲಿಲ್ಲ. ಆದರೆ ತೊಂಬತ್ತರ ದಶಕದ ನಂತರ ಬಾಬಾಸಾಹೇಬ್ ಅಂಬೇಡ್ಕರ್‌ರವರ ಬರಹಗಳು ಎಲ್ಲರಿಗೂ ಸಿಗಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಎಂದರೆ ಕೇವಲ ದೇಗುಲ ಪ್ರವೇಶ, ಚೌಡರ್ ಕೆರೆ ನೀರು ಕುಡಿಯುವ ಹೋರಾಟ ಎಂದಷ್ಟೆ ತಿಳಿದಿದ್ದ ದಲಿತ ಚಳವಳಿ ಅವರ ಬರಹಗಳ ವ್ಯಾಪಕ ಲಭ್ಯತೆಯ ಪರಿಣಾಮ ಅಂಬೇಡ್ಕರ್‌ರವರ ಆ ಹೋರಾಟದ ಹಿನ್ನೆಲೆಯಲ್ಲಿ ಇದ್ದ ರಾಜಕೀಯ ಮತ್ತು ಧಾರ್ಮಿಕ ಹೂರಣವನ್ನು ಅರಿಯಲಾರಂಭಿಸಿತು. ಪರಿಣಾಮ ಬೀದಿ ಹೋರಾಟವಷ್ಟೇ ಆಗಿದ್ದ ದಲಿತ ಚಳವಳಿ ಕರ್ನಾಟಕದಲ್ಲಷ್ಟೇ ಅಲ್ಲ ದೇಶಾದ್ಯಂತ ಒಂದು ಪ್ರಬಲ ರಾಜಕೀಯ ಹೋರಾಟವಾಗಿ ರೂಪಾಂತರಗೊಂಡಿತು.
ದುರಂತವೆಂದರೆ ದಲಿತ ಚಳವಳಿ ತಲುಪಿದ ಇಂತಹ ರಾಜಕೀಯ ದಿಕ್ಕನ್ನು ಇಲ್ಲಿಯ ದಲಿತೇತರ ಪ್ರಗತಿಪರ ಮನಸ್ಸುಗಳು ಅಲಕ್ಷಿಸಿದವು! ಆಶ್ಚರ್ಯವೆಂದರೆ ಇಂತಹ ಅಲಕ್ಷ್ಯದ ಹೊರತಾಗಿಯೂ ಈಚೆಗೆ ಮುಗಿದ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಅಂತಹ ದಲಿತ ಹೋರಾಟದ ರಾಜಕೀಯ ರೂಪವಾದ ಬಿಎಸ್ಪಿ 4 ಲಕ್ಷಕ್ಕೂ ಮಿಕ್ಕಿ ಮತ ಪಡೆದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ನಂತರ 4ನೇ ಶಕ್ತಿಯಾಗಿ ಹೊರಹೊಮ್ಮಿದೆ. ದುರಂತವೆಂದರೆ ದಲಿತ ಚಳವಳಿಯ ವ್ಯಾಖ್ಯಾನಕಾರರು ದಲಿತ ಚಳವಳಿ ಪಡೆದುಕೊಂಡ ಇಂತಹ ರಾಜಕೀಯ ರೂಪಾಂತರ ಮತ್ತು ಸಾಧಿಸಿದ ಭಾಗಶಃ ಯಶಸ್ಸನ್ನು ಗಮನಿಸುವಲ್ಲಿ ವಿಫಲವಾಗಿರುವುದು! ಇನ್ನು ದಲಿತ ಚಳವಳಿ ಅದು ಕೇವಲ ರಾಜಕೀಯ ಚಳವಳಿ ಮಾತ್ರವೇ? ಖಂಡಿತ ಇಲ್ಲ. ವಾಸ್ತವವೆಂದರೆ ಅದಕ್ಕೆ ಧಾರ್ಮಿಕ ರೂಪವೂ ಇದೆ, ಆರ್ಥಿಕ ಆಯಾಮವೂ ಇದೆ. ಅಂದಹಾಗೆ ಅದರ ಧಾರ್ಮಿಕ ರೂಪದ ಪರಿಣಾಮ ಬಹುತೇಕ ದಲಿತರು ಇಂದು ಬೌದ್ಧ ಧರ್ಮದತ್ತ ಒಲವು ತೋರುತ್ತಿದ್ದಾರೆ. ಅದರ ಪ್ರಸಾರ, ಪ್ರಚಾರ, ಭಾಗವಹಿಸುವಿಕೆ ಹೀಗೆ ದಲಿತರ ಬೌದ್ಧ ಧಾರ್ಮಿಕ ಚಳವಳಿ ಸದ್ದಿಲ್ಲದೆ ನಡೆಯುತ್ತಿದೆ. ಉದಾಹರಣೆಗಳನ್ನು ಉಲ್ಲೇಖಿಸುವುದಾದರೆ ‘ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ’, ‘ಕರ್ನಾಟಕ ಬೌದ್ಧ ಸಮಾಜ’, ‘ಬೌದ್ಧ ಸಾಹಿತ್ಯ ಸಂಘ’... ಇತ್ಯಾದಿ ಸಂಘಗಳಡಿಯಲ್ಲಿ ಅಂಬೇಡ್ಕರ್‌ರವರು ತೋರಿದ ಧಾರ್ಮಿಕ ಹಾದಿಯಲ್ಲಿ ಬೌದ್ಧ ಧರ್ಮದ ಹಾದಿಯಲ್ಲಿ ದಲಿತರು ಚಳವಳಿಯ ಮಾದರಿಯಲ್ಲಿ ನಡೆದಿದ್ದಾರೆ. ದಲಿತ ಚಳವಳಿಯ ಮತ್ತೊಂದು ರೂಪ ಅದು ಆರ್ಥಿಕ ಸಬಲೀಕರಣದ ರೂಪ. ಸರಕಾರಿ ನೌಕರಿಯಲ್ಲಿನ ಮೀಸಲಾತಿ ಕಾರಣಕ್ಕಾಗಿ ದಲಿತರು ಅಲ್ಲಲ್ಲಿ ಆರ್ಥಿಕವಾಗಿ ಮುಂದೆ ಬಂದಿರಬಹುದಾದರೂ ಜಾಗತೀಕರಣದ ಪ್ರಕ್ರಿಯೆಯಲ್ಲಿ ಅಂತಹ ಅವಕಾಶಗಳು ಈಗೀಗ ವಿರಳವಾಗುತ್ತಿವೆ. ಈ ದಿಸೆಯಲ್ಲಿ ವ್ಯಾಪಾರ-ವ್ಯವಹಾರದತ್ತ ಚಿತ್ತ ಹರಿಸಿರುವ ದಲಿತರು ದಲಿತ ಸಮುದಾಯದ ಆರ್ಥಿಕ ಚಿಂತಕ ಚಂದ್ರಭಾನ್‌ಪ್ರಸಾದ್‌ರವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ‘ದಲಿತ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್’ (ಈಐಇಇಐ) ಅಡಿಯಲ್ಲಿ ಪ್ರೇರಣೆಗೊಂಡು ಸ್ವಂತ ಅಂಗಡಿ, ಮುಂಗಟ್ಟು, ಸಣ್ಣ ಕೈಗಾರಿಕೆ, ಆಸ್ಪತ್ರೆ... ಇತ್ಯಾದಿ ರೂಪದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಚಳವಳಿಯ ಮಾದರಿಯಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದಾರೆ. ದುರಂತವೆಂದರೆ ಇದನ್ನು ಕೂಡ ದಲಿತ ಚಳವಳಿಯ ವ್ಯಾಖ್ಯಾನಕಾರರು ಗುರುತಿಸುವಲ್ಲಿ ವಿಫಲರಾಗಿರುವುದು.
ಮುಂದುವರಿದು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಬಗ್ಗೆ ಹೇಳುವುದಾದರೆ ಈಗಂತೂ ದಲಿತ ಯುವಕ ಯುವತಿಯರು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಇಂದು ಸಾಧನೆಯಲ್ಲಿ ತೊಡಗಿದ್ದಾರೆ. ಉನ್ನತ ಹುದ್ದೆಗಳಲ್ಲಿ ಸದ್ದಿಲ್ಲದೆ ವಿರಾಜಮಾನರಾಗಿದ್ದಾರೆ. ಹೇಗೆಂದರೆ ಅತಿ ಹೆಚ್ಚು ಪಿಎಚ್‌ಡಿ ಪದವಿ ಪಡೆದಿರುವವರು ದಲಿತ ಸಮುದಾಯದಲ್ಲಿಯೇ ಎಂಬ ಒಂದು ಮಾಹಿತಿ ಇದೆ ಆ ರೀತಿಯಲ್ಲಿ. ಅಂದಹಾಗೆ ಸಾಹಿತ್ಯದಲ್ಲಿಯೂ ಅಷ್ಟೆ. ಹಿಂದೆಲ್ಲ ಕೇವಲ ಕಮ್ಮೂನಿಸ್ಟ್ ಸಾಹಿತ್ಯ ಪ್ರೇರಿತವಾಗಿ ರೂಪಿತವಾಗುತ್ತಿದ್ದ ದಲಿತ ಸಾಹಿತ್ಯ ಇಂದು ಅಂಬೇಡ್ಕರ್‌ರವರ ಬರಹಗಳನ್ನು ಆಧರಿಸಿ ಸ್ಥಾಪಿತ ಹಿತಾಸಕ್ತಿಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆದು ನಿಂತಿದೆ. ಆ ಮೂಲಕ ಮತ್ತೂ ಗಟ್ಟಿಯಾಗಿ ಹೊಸಯುಗಕ್ಕೆ ಹೊಸ ಸ್ಪಷ್ಟತೆಯೊಂದಿಗೆ ಮುನ್ನುಗ್ಗುತ್ತಿದೆ.
ಈ ಸಂದರ್ಭದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ಅಂಶವನ್ನು ಅನೇಕರು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಅದೆಂದರೆ ಈ ಬಾರಿಯ ಚುನಾವಣೆ ದಲಿತರು / ದಲಿತೇತರರು ಎಂಬಂತೆ ನಡೆದಿದೆ ಎಂಬುದು. ದಲಿತೇತರರು, ಅದರಲ್ಲೂ ಹಿಂದುಳಿದ ವರ್ಗದವರು(ಒಬಿಸಿಗಳು) ಸಾರಾಸಗಟಾಗಿ ಈ ಬಾರಿ ಮೇಲ್ವರ್ಗದವರ ಜೊತೆ ಗುರುತಿಸಿಕೊಂಡರು. ಬಿಜೆಪಿ ಬೆಂಬಲಿಸಿದರು. ಈ ನಿಟ್ಟಿನಲ್ಲಿ ಕೋಮುವಾದದ ಅಂತಹ ರಾಜಕೀಯ ದಾಂಗುಡಿಗೆ ಸ್ವಲ್ಪವಾದರೂ ಪ್ರತಿರೋಧ ತೋರಿದ್ದು ಅದು ದಲಿತ ರಾಜಕಾರಣ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಕೋಮುವಾದಿಗಳಿಗೆ ಅಕ್ಷರಶಃ ಆತಂಕ ಸೃಷ್ಟಿಮಾಡಿದ್ದು ಸುಳ್ಳಲ್ಲ. ಇದು ದಲಿತ ನಾಯಕಿ ಮಾಯಾವತಿಯವರ ರಾಜಕೀಯ ತಂತ್ರಗಾರಿಕೆಯ ಫಲ ಎಂದು ಇಲ್ಲಿ ಬಿಡಿಸಿಹೇಳುವ ಅಗತ್ಯವಿಲ್ಲ. ಹಾಗೆಯೇ ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್‌ರವರ ನೇತೃತ್ವದ ‘ವಂಚಿತ್ ಬಹುಜನ್ ಅಗಾಡಿ’ಯೂ ಅಷ್ಟೆ ಆ ರಾಜ್ಯದಲ್ಲಿ 17ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿತು. ಇನ್ನು ತಮಿಳುನಾಡಿನಲ್ಲಿ ದಲಿತರ ನೇತೃತ್ವದ ‘ವಿಡುದಲೈ ಚಿರುತೈಗಳ್ ಕಚ್ಚಿ’ (ವಿಸಿಕೆ) ಮತ್ತದರ ನೇತಾರ ತೊಳ್ ತಿರುಮಾವವಳವನ್ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಕೋಮವಾದಿಗಳ ಬಲವರ್ಧನೆಗೆ ತಡೆಯಾದುದು ಎಲ್ಲರಿಗೂ ತಿಳಿದಿದೆ. ದುರಂತವೆಂದರೆ ದಲಿತರ ಇಂತಹ ಮಾದರಿಯ ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಶಕ್ತಿಯನ್ನು ಹಿಂದುಳಿದ ವರ್ಗಗಳು(ಒಬಿಸಿ) ರೂಢಿಸಿಕೊಳ್ಳಲಿಲ್ಲ ಅಥವಾ ಬೆಂಬಲಿಸಲಿಲ್ಲ.
ಪರಿಣಾಮ ಕೋಮುವಾದಿಗಳನ್ನು ಬೆಂಬಲಿಸಿದ ಅವರು ರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ ಬರಲು ಕಾಣರಾದರು. ಪ್ರಶ್ನೆ ಎಂದರೆ ಇಲ್ಲಿ ದಲಿತ ಚಳವಳಿ ಅದೆಲ್ಲಿ ವಿಫಲವಾಗಿದೆ? ವಾಸ್ತವವಾಗಿ ಕೋಮುವಾದಕ್ಕೆ ಒಂದು ಪ್ರಬಲ ಚಾಲೆಂಜ್ ಅದು ಒಡ್ಡಿದೆಯಲ್ಲವೇ? ಕಡೆಯದಾಗಿ, ನಮ್ಮ ರಾಜ್ಯದ ವಿಚಾರದಲ್ಲೂ ಇಂದು ದಲಿತರ ಬೀದಿ ಹೋರಾಟ ಮೊದಲೇ ಹೇಳಿದ ಹಾಗೆ ರಾಜಕೀಯ ಹೋರಾಟದ ರೂಪ ಪಡೆದು ಬಿಎಸ್ಪಿ ರೂಪದಲ್ಲಿ ನಿಂತಿದೆ. ಅದರ ಹಿಂದಿನ ಅಧ್ಯಕ್ಷ ಎನ್.ಮಹೇಶ್ ಗೆದ್ದು ಶಾಸಕರೂ ಆಗಿದ್ದಾರೆ. ಭಡ್ತಿ ಮೀಸಲಾತಿ ಹೋರಾಟದಲ್ಲಿ ದಾಸ್‌ಪ್ರಕಾಶ್, ನಾಗಸಿದ್ಧಾರ್ಥ ಹೊಲೆಯಾರ್, ಶಿವಶಂಕರ್ ಮತ್ತಿತರರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಜಯ ಸಾಧಿಸಿರುವುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ದಲಿತರಲ್ಲಿನ ಕೆಲವು ಒಳಪಂಗಡಗಳಿಗೆ ಅನ್ಯಾಯ ಆಗುತ್ತಿರುವುದರಿಂದ ಸದಾಶಿವ ಆಯೋಗದ ವರದಿ ಜಾರಿ ಪರವೂ ಹೋರಾಟ ತೀವ್ರ ರೂಪದಲ್ಲಿ ನಡೆದಿರುವುದನ್ನು ನಾವು ಗಮನಿಸಬಹುದು.
ಹೀಗಿರುವಾಗ ಇಲ್ಲಿ ದಲಿತ ಚಳವಳಿ ಅದೆಲ್ಲಿ ದಿಕ್ಕು ತಪ್ಪಿದೆ ಎಂಬುದು? ಒಟ್ಟಾರೆ ದಲಿತ ಚಳವಳಿ ಅದು ದಿಕ್ಕು ತಪ್ಪಿಲ್ಲ. ಬದಲಿಗೆ ಅದು ಈ ಕಾಲದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ರೂಪ ಪಡೆದಿದೆ. ಹೊಸ ರೂಪದಲ್ಲಿ ಮುಂದುವರಿದಿದೆ. ಜಾಗತೀಕರಣದ ಈ ಯುಗದಲ್ಲಿ ಹೊಸ ಬಗೆಯ ಆಲೋಚನೆಗಳ ಅಂಶದೊಂದಿಗೆ ಮುನ್ನುಗ್ಗಿದೆ, ಮುನ್ನುಗ್ಗುತ್ತಿದೆ. ಇಲ್ಲಿ ಬೀದಿ ಹೋರಾಟಗಳು ಕಡಿಮೆಯಾಗಿರಬಹುದು. ಆದರೆ ಧಾರ್ಮಿಕ, ರಾಜಕೀಯ, ಆರ್ಥಿಕ ಚಟುವಟಿಕೆಗಳು ಚಿಂತನ-ಮಂಥನಗಳ ರೂಪದಲ್ಲಿ, ಪ್ರಾಯೋಗಿಕ ರೂಪದಲ್ಲಿ, ಶಿಬಿರಗಳ ರೂಪದಲ್ಲಿ ನಡೆಯುತ್ತಿರುವುದನ್ನು ಯಾರಾದರೂ ದಲಿತ ಚಳವಳಿಯ ಒಳಹೊಕ್ಕು ಈ ದಿನಗಳಲ್ಲಿ ಖಂಡಿತ ಗಮನಿಸಬಹುದು. ಈ ನಿಟ್ಟಿನಲ್ಲಿ ಈ ದಿಸೆಯಲ್ಲಿ ನೋಡದೆ ಬದಲಿಗೆ ದಿಕ್ಕೆಟ್ಟಿದೆ ಎಂದರೆ? ಖಂಡಿತ, ಅಂತಹವರು ಕಾಲದ ಜೊತೆ ಜೊತೆಗೆ ದಲಿತ ಚಳವಳಿ ಬದಲಾಗುತ್ತಿರುವುದನ್ನು, ರೂಪಾಂತರ ಗೊಳ್ಳುತ್ತಿರುವುದನ್ನು, ವಿವಿಧ ರೂಪದಲ್ಲಿ ಅಸ್ತಿತ್ವದಲ್ಲಿರುವುದನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಅರ್ಥ.