ಮಧುಮೇಹಿಗಳೇ, ರಕ್ತದಲ್ಲಿ ಸಕ್ಕರೆ ನಿಯಂತ್ರಿಸಲು 5 ಸುಲಭದ ಹೆಜ್ಜೆಗಳಿಲ್ಲಿವೆ.....
ಮಧುಮೇಹವು ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಕಾಯಿಲೆಯಾಗಿದೆ. ಅದನ್ನು ನಿಯಂತ್ರಿಸದಿದ್ದರೆ ಹೃದಯ ಮತ್ತು ಮೂತ್ರಪಿಂಡಗಳಂತಹ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಅಲ್ಲದೆ ವಂಶಪಾರಂಪರ್ಯವಾಗಿ ಮಧುಮೇಹವಿದ್ದರೆ ಹೆಚ್ಚಿನ ಎಚ್ಚರಿಕೆಯು ಅಗತ್ಯವಾಗುತ್ತದೆ. ಉದಾಹರಣೆಗೆ ನೀವು ದೇಹತೂಕವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಮತ್ತು ಅದು ಹೆಚ್ಚಲು ಅವಕಾಶ ನೀಡಕೂಡದು. ತಜ್ಞರು ಹೇಳುವಂತೆ ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಇವೆರಡರ ಮೂಲಕವೇ ಮಧುಮೇಹವನ್ನು ತಡೆಯಬಹುದು. ಇವೆರಡು ಹೆಜ್ಜೆಗಳು ಮಧುಮೇಹ ಪೂರ್ವ ಹಂತದಲ್ಲಿರುವವರಿಗೂ ಲಾಭದಾಯಕವಾಗುತ್ತವೆ.
ಮಧುಮೇಹ ಪ್ರಕರಣದಲ್ಲಿ ನಿಮ್ಮ ಆಹಾರದ ಸ್ವರೂಪ ಮತ್ತು ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಲು ಕೆಲವು ಸರಳ ಹೆಜ್ಜೆಗಳನ್ನಿರಿಸುವ ಮೂಲಕ ಅದನ್ನು ಸುಲಭವಾಗಿ ನಿಭಾಯಿಸಬಹುದು. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೆಲವು ಟಿಪ್ಸ್ ಇಲ್ಲಿವೆ......
►ವ್ಯಾಯಾಮ
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹಲವಾರು ಲಾಭಗಳಿವೆ. ವ್ಯಾಯಾಮವು ದೇಹತೂಕವನ್ನು ತಗ್ಗಿಸಲು,ರಕ್ತದಲ್ಲಿಯ ಅಧಿಕ ರಕ್ತದ ಮಟ್ಟವನ್ನು ಕಡಿಮೆಗೊಳಿಸಲು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮೇದೋಜ್ಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಡ್ಯಾನ್ಸ್ ವರ್ಕ್‌ಔಟ್ ಮತ್ತು ಅಕ್ವಾಎರೊಬಿಕ್ಸ್ ಕೂಡ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತವೆ.
►ಸಮೃದ್ಧ ನಾರನ್ನೊಳಗೊಂಡ ಆಹಾರ
ಆಹಾರವು ಸಮೃದ್ಧ ನಾರನ್ನು ಒಳಗೊಂಡಿದ್ದರೆ ಅದು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟದ ಅಪಾಯವನ್ನು ತಗ್ಗಿಸಲು ನೆರವಾಗಬಹುದು ಮತ್ತು ಅದನ್ನು ನಿಯಂತ್ರಿಸುತ್ತದೆ ಕೂಡ. ಹೃದಯನಾಳೀಯ ರೋಗಗಳ ಅಪಾಯವನ್ನೂ ಅದು ಕಡಿಮೆ ಮಾಡುತ್ತದೆ. ನಾರಿನಂಶ ಹೆಚ್ಚಿರುವ ಪೌಷ್ಟಿಕಾಂಶಗಳ ಸೇವನೆಯು ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ಇನ್ನಷ್ಟು ತಿನ್ನುತ್ತಲೇ ಇರಬೇಕೆಂಬ ತುಡಿತವಿರುವುದಿಲ್ಲ,ಇದರಿಂದಾಗಿ ಶರೀರವು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ. ಹಸಿರು ತರಕಾರಿಗಳು,ಇಡಿಯ ಧಾನ್ಯಗಳು,ಒಣಹಣ್ಣುಗಳು ಮತ್ತು ಹಣ್ಣುಗಳು ಸಮೃದ್ಧ ನಾರನ್ನು ಹೊಂದಿರುವ ಕೆಲವು ಆಹಾರಗಳಾಗಿವೆ.
►ಧಾನ್ಯಗಳು
ಇಡಿಯ ಧಾನ್ಯಗಳು ಮತ್ತು ಏಕದಳ ಧಾನ್ಯಗಳು ಸಹ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುತ್ತವೆ. ಹೀಗಾಗಿ ನಿಮ್ಮ ಆಹಾರದಲ್ಲಿ ಏಕದಳ ಧಾನ್ಯಗಳಿರಲಿ. ಮಾರುಕಟ್ಟೆಯಲ್ಲಿ ಹಲವಾರು ಏಕದಳ ಧಾನ್ಯ ಉತ್ಪನ್ನಗಳು ಲಭ್ಯವಿವೆ. ನೀವು ಸರಿಯಾದದ್ದನ್ನು ಆಯ್ಕೆ ಮಾಡಿಕೊಂಡರಾಯಿತು. ಅಂದ ಹಾಗೆ ಸಂಸ್ಕರಿತ ಆಹಾರದ ಹತ್ತಿರವೂ ಸುಳಿಯಬೇಡಿ.
►ಹೆಚ್ಚುವರಿ ಕೊಬ್ಬನ್ನು ತೊಲಗಿಸಿ
ನೀವು ಬೊಜ್ಜು ದೇಹಿಯಾಗಿದ್ದರೆ ಮಧುಮೇಹಕ್ಕೆ ಸುಲಭವಾಗಿ ತುತ್ತಾಗುವ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ನೀವು ಸೇವಿಸುವ ಪ್ರತಿ ಗ್ರಾಂ ಆಹಾರವೂ ಮುಖ್ಯವಾಗುತ್ತದೆ. ದೈಹಿಕ ಚಟುವಟಿಕೆಗಳು ಮತ್ತು ನಿಮ್ಮ ಜೀವನಶೈಲಿ ಹಾಗೂ ಶರೀರದ ವಿಧಕ್ಕೆ ಅನುಗುಣವಾದ ಆಹಾರ ಸೇವನೆ ಇವು ನೀವು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೆರವಾಗಬಹುದು.
►ಪಥ್ಯ ಬೇಡ,ಕೇವಲ ಆರೋಗ್ಯಯುತ ಆಹಾರ ಸಾಕು
ಇಂದು ಹಲವಾರು ಡಯಟ್ ವಿಧಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಕೀಟೊ,ಇಂಟರ್ಮಿನೆಂಟ್ ಇತ್ಯಾದಿಗಳು ಇಂತಹ ಕೆಲವು ಸಾಮಾನ್ಯ ಡಯಟ್ ವಿಧಾನಗಳಾಗಿವೆ. ಇವು ಆರಂಭದಲ್ಲೇನೋ ನಿರೀಕ್ಷಿತ ಪರಿಣಾಮಗಳನ್ನು ನೀಡಬಹುದು,ಆದರೆ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭಗಳನ್ನೇನೂ ನೀಡುವುದಿಲ್ಲ. ಮಧುಮೇಹದಂತಹ ಕಾಯಿಲೆಗಳಿದ್ದವರು ಸುಸ್ಥಿರವಾದ ಆಹಾರ ಕ್ರಮವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಮಧುಮೇಹಿಗಳು ಡಯಟ್ ಮಾಡಬೇಕೆಂದು ಯಾವ ವೈದ್ಯರೂ ಶಿಫಾರಸು ಮಾಡುವುದಿಲ್ಲ,ಬದಲಾಗಿ ಆರೋಗ್ಯಕರ ಆಹಾರವನ್ನು ಸೇವಿಸುವಂತೆ ಸೂಚಿಸುತ್ತಾರೆ. ಡಯಟ್ ಮಾಡುವುದರಿಂದ ಮಧ್ಯರಾತ್ರಿಗಳಲ್ಲಿ ಆಗಾಗ್ಗೆ ಹಸಿವೆಯಾಗುತ್ತದೆ ಮತ್ತು ಇನ್ನಷ್ಟು ಆಹಾರ ಸೇವಿಸುವಂತಾಗುತ್ತದೆ,ಇದು ದೇಹತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಪ್ರತಿಯೊಂದನ್ನೂ ತಿನ್ನಿರಿ,ಆದರೆ ಪ್ರಮಾಣವನ್ನು ಕಡಿಮೆ ಮಾಡಿ. ಒಂದೇ ಸಲ ಪೂರ್ಣ ಆಹಾರವನನ್ನು ಸೇವಿಸುವ ಬದಲು ದಿನವಿಡೀ ಒಂದೆರಡು ಗಂಟೆಗಳಿಗೊಮ್ಮೆ ಕಂತುಗಳಲ್ಲಿ ಸೇವಿಸಿ.
ಯಾವಾಗ ವೈದ್ಯರನ್ನು ಕಾಣಬೇಕು?
40ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಕಡ್ಡಾಯವಾಗಿ ವರ್ಷಕ್ಕೆರಡು ಬಾರಿ ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ನಿಮ್ಮ ದೇಹತೂಕ ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಜೀವನಶೈಲಿ ದೈಹಿಕ ಚಟುವಟಿಕೆಗಳಿಂದ ಕೂಡಿರಲಿ. ಜಂಕ್ ಫುಡ್ ಸಹವಾಸ ಬೇಡವೇ ಬೇಡ.