ನಿಮ್ಮ ಬೆದರಿಕೆಗಳೇ ನಿಮಗೆ ಮುಳುವಾಗಬಹುದು: ಇರಾನ್‌ಗೆ ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್, ಜು. 4: ನಿಮ್ಮ ಬೆದರಿಕೆಗಳೇ ನಿಮಗೆ ಮುಳುವಾಗಬಹುದು, ಎಚ್ಚರಿಕೆಯಿಂದ ಇರಿ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
2015ರ ಪರಮಾಣು ಒಪ್ಪಂದದಲ್ಲಿ ನಿಗದಿಪಡಿಸಲಾದ ಮಿತಿಯನ್ನು ಮೀರಿ ಯುರೇನಿಯಂ ಸಂವರ್ಧನೆ ಮಾಡುವುದಾಗಿ ಇರಾನ್ ಎಚ್ಚರಿಸಿದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.
‘‘ಇರಾನ್ ಈಗಷ್ಟೇ ಹೊಸ ಎಚ್ಚರಿಕೆಯೊಂದನ್ನು ಹೊರಡಿಸಿದೆ. ಹೊಸ ಪರಮಾಣು ಒಪ್ಪಂದವಿಲ್ಲದಿದ್ದರೆ, ‘ನಮಗೆ ಬೇಕಾದಷ್ಟು ಪ್ರಮಾಣದ ಯುರೇನಿಯಂನ್ನು ಸಂವರ್ಧನೆಗೊಳಿಸುತ್ತೇವೆ’ ಎಂಬುದಾಗಿ (ಇರಾನ್ ಅಧ್ಯಕ್ಷ ಹಸನ್) ರೂಹಾನಿ ಹೇಳುತ್ತಾರೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
‘‘ಬೆದರಿಕೆಗಳ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ, ಇರಾನ್. ಅದು ನಿಮಗೇ ತಿರುಗುಬಾಣವಾಗಿ ಹಿಂದೆಂದೂ ಇಲ್ಲದಷ್ಟು ನಿಮ್ಮನ್ನು ಕಾಡಬಹುದು’’ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಪ್ರಬಲ ದೇಶಗಳೊಂದಿಗೆ 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ವರ್ಷದ ಮೇ ತಿಂಗಳಲ್ಲಿ ಹೊರಗೆ ಬಂದಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ ಅದು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ.
ಇದಕ್ಕೆ ಪ್ರತಿಯಾಗಿ, ಪರಮಾಣು ಒಪ್ಪಂದದ ಕೆಲವು ಅಂಶಗಳನ್ನು ಕೈಬಿಡುವುದಾಗಿ ಈ ವರ್ಷದ ಮೇ 8ರಂದು ಇರಾನ್ ಹೇಳಿತ್ತು.