ಬರೆಯುವ ತಾಂತ್ರಿಕ ಗ್ರಹಿಕೆ
► ಬೆಳೆಯುವ ಪೈರು ► ಅಧ್ಯಯನ ಮತ್ತು ಅರಿವು
ಕಲಿಕೆಯೆಂಬ ಪ್ರಕ್ರಿಯೆ - ಭಾಗ-28
ಬರೆಯುವುದು ಒಂದು ತಂತ್ರ
ನಡೆಯುವ, ಕೂರುವ, ನಿಲ್ಲುವ, ತೋಟದ ಕೆಲಸ ಮಾಡುವ, ಸೈಕಲ್ ತುಳಿಯುವ; ಹೀಗೆ ಯಾವುದೇ ಕೆಲಸ ಮಾಡುವುದು ತಂತ್ರವಾಗಿರುವಂತೆ ಬರೆಯುವುದು ಕೂಡಾ ಒಂದು ತಂತ್ರವೇ. ನಡೆಯುವುದಕ್ಕೆ ಎಡದ ಕಾಲು ಹಿಂದಕ್ಕಿರುವಾಗ ಬಲದ ಕಾಲು ಮುಂದಕ್ಕೆ ಹೋಗುವುದು, ಅದೇ ಹಿಂದೆ, ಮುಂದೆ ಪುನರಾವರ್ತಿತವಾಗುವಂತೆ ನಡೆಯುವ ಕೆಲಸವಾಗುವುದು. ಅದೊಂದು ತಂತ್ರ. ಬಾಲ್ಯದಲ್ಲಿ ಮಗುವಿಗೆ ಬೇಕಾದಷ್ಟು ಟೆಕ್ನಿಕ್‌ಗಳನ್ನು ಅಥವಾ ತಂತ್ರಗಳನ್ನು ಕಲಿಸಿಕೊಡುತ್ತೇವೆ ಮತ್ತು ಅದೇ ಕಲಿಯುತ್ತದೆ. ಹೀಗೆ ಪ್ರತಿಯೊಂದೂ ತಂತ್ರಾಧಾರಿತವಾಗಿರುವಂತಹ ಕೆಲಸಗಳನ್ನು ಮಕ್ಕಳು ಕಲಿಯುತ್ತಾರೆ. ಅದನ್ನು ಜೀವನ ಪೂರ್ತಿ ಮರೆಯುವುದಿಲ್ಲ. ಜ್ಞಾನ, ವಿಚಾರ ಎಂದು ಏನು ಕರೆಯುತ್ತೇವೆಯೋ ಅದನ್ನು ಆಗ್ಗಿಂದಾಗ್ಗೆ ಬಳಸದಿದ್ದರೆ ನಿಧಾನವಾಗಿ ಮರೆಯುವರು. ಆದರೆ ಕೂರುವುದು, ನಿಲ್ಲುವುದು, ನಡೆಯುವುದು, ಬಟನ್ ಹಾಕುವುದು, ಈಜುವುದು, ಸೈಕಲ್ ತುಳಿಯುವುದು, ತಿನ್ನುವುದು; ಹೀಗೆ ಅನೇಕ ತಂತ್ರಗಳನ್ನು ಎಂದಿಗೂ ಮರೆಯುವುದಿಲ್ಲ. ಬರೆಯುವುದೂ ಕೂಡಾ ಇದೇ ಪ್ರಕಾರ ತಂತ್ರದ ವಿಭಾಗಕ್ಕೆ ಸೇರುತ್ತದೆ. ಹಾಗಾಗಿ ಮಗುವಿಗೆ ಇತರ ತಂತ್ರಗಾರಿಕೆಯನ್ನು ಕಲಿಸುವಂತೆ ಬರೆಯುವುದನ್ನು ಕೂಡಾ ಕಲಿಸಬೇಕಾಗುತ್ತದೆ ಅಥವಾ ತರಬೇತಿ ಕೊಡಬೇಕಾಗುತ್ತದೆ. ತಂತ್ರಗಳನ್ನು ಕಲಿಯುವುದು ಮತ್ತು ಅದರಲ್ಲಿ ನೈಪುಣ್ಯವನ್ನು ಪಡೆಯುವುದು ಸತತವಾಗಿ ಮಾಡುವಂತಹ ಅಭ್ಯಾಸದಿಂದ, ತರಬೇತಿಯನ್ನು ಪಡೆಯುವುದರಿಂದ ಎಂಬುದನ್ನು ಮರೆಯದಿರೋಣ. ಮಕ್ಕಳ ಎಳೆಯ ವಯಸ್ಸಿನಲ್ಲಿ ಬರೆಯುವಂತಹ ತಂತ್ರವನ್ನು ಕಲಿಸಿಕೊಟ್ಟಲ್ಲಿ ಅವರೆಂದಿಗೂ ಅದನ್ನು ಮರೆಯುವುದಿಲ್ಲ.
ತಾಂತ್ರಿಕ ಗ್ರಹಿಕೆ:
ಮಕ್ಕಳಿಗೆ ಬರೆಯುವ ಸಮಸ್ಯೆ ಇದೆಯೇ ಎಂಬುದನ್ನು ಗುರುತಿಸಲು ಅವರ ಬೇರೆ ವಸ್ತುಗಳನ್ನು ನಿರ್ವಹಿಸುವುದನ್ನು ಕೂಡಾ ಗಮನಿಸಬೇಕಾಗುತ್ತದೆ. ಚಮಚವನ್ನು ಸರಿಯಾಗಿ ಹಿಡಿದುಕೊಂಡು ತಿನ್ನುವನೋ ಇಲ್ಲವೋ, ನಲ್ಲಿಯಿಂದ ನೀರನ್ನು ಸರಿಯಾಗಿ ಲೋಟಕ್ಕೆ ಹಿಡಿದುಕೊಳ್ಳುವನೋ ಇಲ್ಲವೋ, ಡಬ್ಬದ ಮುಚ್ಚಳವನ್ನು ಸರಿಯಾಗಿ ತೆಗೆಯುವುದು, ಹಾಕುವುದು ಮಾಡುವನೋ ಇಲ್ಲವೋ; ಹೀಗೆ ತಂತ್ರಗಳು ಪ್ರಧಾನವಾಗಿರುವಂತಹ ಬೇರೆ ಕೆಲಸಗಳನ್ನು ಕೂಡಾ ಗಮನಿಸಬೇಕು. ಏಕೆಂದರೆ, ಬರೆಯಲು ಸಮಸ್ಯೆ ಇದೆಯೆಂದರೆ, ಅದು ವಿದ್ಯಾಭ್ಯಾಸದ ಸಮಸ್ಯೆ, ಕಲಿಕೆಯ ಅಥವಾ ಗ್ರಹಿಕೆಯ ಸಮಸ್ಯೆ ಅಲ್ಲ. ಅದು ತಾಂತ್ರಿಕ ಸಮಸ್ಯೆ. ಅಚ್ಚುಕಟ್ಟುತನ ಬರುವುದು ಉತ್ತಮ ತರಬೇತಿಯ ನಂತರ. ಬಳಪವನ್ನು, ಪೆನ್ಸಿಲನ್ನು ಅಥವಾ ಪೆನ್ನನ್ನು ಸರಿಯಾಗಿ ಹಿಡಿಯುವುದು, ಹದವಾಗಿ ಒತ್ತುತ್ತಾ ಬರೆಯುತ್ತಾ ಹೋಗುವುದು ಇತ್ಯಾದಿಗಳೆಲ್ಲವೂ ತಂತ್ರವೇ. ಆಮೇಲೆ ತಾನು ಏನು ಬರೆಯುತ್ತಿದ್ದೇನೆ ಎಂಬುದನ್ನು ಅಕ್ಷರ, ಪದ, ವಾಕ್ಯಗಳನ್ನು ತಿಳಿಯುತ್ತಾ ಹೋಗುವುದು ಗ್ರಹಿಕೆಯ ಭಾಗ. ಗ್ರಹಿಕೆಯ ತರಬೇತಿ ಸರಿಯಾಗಿ ಆಗುತ್ತಿದ್ದಂತೆ ಜ್ಞಾನಕ್ಕೆ ಅದು ರೂಪಾಂತರಗೊಳ್ಳುತ್ತಾ ಹೋಗುತ್ತದೆ. ತಂತ್ರ, ತರಬೇತಿ, ಜ್ಞಾನ, ಪ್ರತಿಭೆ; ಇವೆಲ್ಲವೂ ಕಲಿಕೆಯಲ್ಲಿ ರೂಪಾಂತರದ ಪ್ರಕ್ರಿಯೆಗಳೇ. ಮೊದಲಿಗೆ ತಾಂತ್ರಿಕ ಗ್ರಹಿಕೆ ಸಿದ್ಧಿಸಿದರೆ, ಇನ್ನುಳಿದಂತೆ ತರಬೇತಿ ಯಶಸ್ವಿಯಾಗಿ ನಡೆಯುತ್ತದೆ ಮತ್ತು ಜ್ಞಾನವು ದೊರಕುತ್ತದೆ, ಜೊತೆಜೊತೆಗೆ ಪ್ರತಿಭೆಯ ಅನಾವರಣವಾಗುತ್ತಾ ಹೋಗುತ್ತದೆ. ಕೆಲವು ಮಕ್ಕಳು ತಾವು ಹಿಡಿಯುವ ವಸ್ತುಗಳನ್ನು ಪದೇಪದೇ ಬೀಳಿಸುತ್ತಿರುತ್ತಾರೆ. ಸರಿಯಾಗಿ ಹಿಡಿಯಲು ಬರುವುದಿಲ್ಲ. ವಸ್ತುಗಳನ್ನು ಒಂದೆಡೆ ಇಡುವಾಗ ಅವರಿಗೆ ತಾವು ಅದನ್ನು ಪೂರ್ತಿಯಾಗಿ ಇಟ್ಟಿದ್ದೇಮೋ ಇಲ್ಲವೋ ಎಂದೇ ಗೊತ್ತಾಗುವುದಿಲ್ಲ. ಇಡಬೇಕಾಗಿರುವ ಜಾಗ ಮತ್ತು ವಸ್ತುವಿನ ತಳ ಸರಿಯಾಗಿ ತಾಳೆಯಾಗಿ ಕೂರಿತೋ ಇಲ್ಲವೋ ನೋಡುವುದಿಲ್ಲ. ಮೊದಲೇ ಕೈ ಬಿಟ್ಟುಬಿಡುತ್ತಾರೆ. ಅಥವಾ ಇಟ್ಟಾದ ಮೇಲೆಯೂ ಇಟ್ಟ ಭಾವ ಇರದೇ ಇಡುವಂತಹ ಇಡುತ್ತಿರುವಂತಹ ಕೆಲಸವನ್ನು ಮುಂದುವರಿಸುತ್ತಿರುತ್ತಾರೆ. ಅದೇ ರೀತಿಯಲ್ಲಿ ಕೆಲವು ಮಕ್ಕಳಿಗೆ ತಿನ್ನಿಸುವಾಗ ಅವರ ತಾಂತ್ರಿಕ ಗ್ರಹಿಕೆಯ ಮಟ್ಟವನ್ನು ಗುರುತಿಸಬಹುದು. ಚಮಚ ಅಥವಾ ಕೈಯಿಂದ ಆಹಾರದ ತುತ್ತನ್ನು ಮಗುವಿನ ತೆರೆದ ಬಾಯಿಯಲ್ಲಿ ಇಟ್ಟಾಗ, ಕೆಲವು ಮಕ್ಕಳಿಗೆ ಅದನ್ನು ಕೂಡಲೇ ಮುಚ್ಚಬೇಕೆಂದೇ ತಿಳಿಯುವುದಿಲ್ಲ. ಅವರು ಬಾಯನ್ನು ನಿಧಾನವಾಗಿ ಮುಚ್ಚುವುದರಿಂದ, ಬಾಯಲ್ಲಿ ಇಟ್ಟದ್ದು ಹೊರಗೆ ಬೀಳಬಹುದು. ತಾಂತ್ರಿಕ ಗ್ರಹಿಕೆಯು ಚೆನ್ನಾಗಿದ್ದ ಪಕ್ಷದಲ್ಲಿ ಅದು ಆಟೋಮ್ಯಾಟಿಕ್ ಆಗಿ ನಡೆಯುತ್ತದೆ. ಬಾಯಲ್ಲಿ ಇಟ್ಟ ಕೂಡಲೇ ತುಟಿಗಳು ಮುಚ್ಚುವ ಕೆಲಸ ಮಾಡಿ ತಿನ್ನುವ ಕೆಲಸ ಆರಂಭವಾಗುತ್ತದೆ. ಹೀಗೆ ಹಲವಾರು ವಿಷಯಗಳಲ್ಲಿ ನಾವು ಮಕ್ಕಳ ತಾಂತ್ರಿಕ ಗ್ರಹಿಕೆಯು ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಗುರುತಿಸಬಹುದು. ಅದೇ ರೀತಿಯಲ್ಲಿ ತಾಂತ್ರಿಕ ಗ್ರಹಿಕೆಯು ಬರವಣಿಗೆಯಲ್ಲಿ ಹೇಗಿದೆ ಎಂಬುದನ್ನು ಮೊದಲು ನೋಡಬೇಕು.
ಬರವಣಿಗೆಯ ತಾಂತ್ರಿಕ ಗ್ರಹಿಕೆಯನ್ನು ಉತ್ತಮಪಡಿಸಲು:
ಬರವಣಿಗೆಯಲ್ಲಿ ತಾಂತ್ರಿಕ ಗ್ರಹಿಕೆಯನ್ನು ಉತ್ತಮಪಡಿಸಲು ಹಲವಾರು ತಂತ್ರಗಳಿವೆ. ಅದರಲ್ಲಿ ಮೊದಲಿಗೆ ಅಕ್ಷರಗಳಲ್ಲದ, ಅರ್ಥವಿಲ್ಲದಂತಹ ಗೆರೆಗಳನ್ನು ಅಡ್ಡ ಸಾಲುಗಳಿರುವ ಪುಸ್ತಕದಲ್ಲಿ ಬರೆಸುವುದು. ನೇರ, ಅಡ್ಡ, ಓರೆ, ಅರ್ಧ ವರ್ತುಲ; ಹೀಗೆ ಹಲವಾರು ರೀತಿಯ ಗೆರೆಗಳನ್ನು ಸತತವಾಗಿ ಬರೆಸುವುದು. ಅವುಗಳ ಕಾಂಬಿನೇಷನ್‌ನಲ್ಲಿಯೂ ಕೂಡಾ ಬರೆಸುವುದು. ಉದಾಹರಣೆಗೆ, ಅಡ್ಡ ಮತ್ತ ಅರ್ಧ ವರ್ತುಲದ ಗೆರೆ, ನೇರ ಮತ್ತು ವಕ್ರಗೆರೆ, ಅಲೆ ಅಲೆಯಾಗಿರುವಂತಹ ರೇಖೆಗಳು ಮತ್ತು ವರ್ತುಲ ವರ್ತುಲವಾಗಿರುವಂತಹ ಸಂಪೂರ್ಣ ಆಕೃತಿಗಳನ್ನು ಬರೆಸುವುದು. ಚೌಕ, ವರ್ತುಲ, ತ್ರಿಕೋನ; ಹೀಗೆ ಹಲವು ಬಗೆಯ ಆಕೃತಿಗಳನ್ನು ಬರೆಸುವುದು. ರಂಗವಲ್ಲಿ ಅಥವಾ ರಂಗೋಲಿಗಳನ್ನು ಬರೆಸುವುದು. ಚುಕ್ಕೆ ಚುಕ್ಕೆಗಳನ್ನು ಸೇರಿಸಿ ಬರೆಯುವ ರಂಗೋಲಿ, ಅಥವಾ ಚುಕ್ಕೆಗಳನ್ನು ಬಳಸಿ ವಕ್ರಾಕಾರವಾಗಿ ಹಾದು ಹೋಗುವಂತಹ ರಂಗೋಲಿಯ ಚಿತ್ರಗಳನ್ನು ಬರೆಯುವುದರಿಂದಲೂ ಬರವಣಿಗೆ ತಾಂತ್ರಿಕ ಗ್ರಹಿಕೆಯು ಉತ್ತಮಗೊಳ್ಳುತ್ತದೆ. ರಂಗೋಲಿೆಯು ಚಿತ್ರಕಲೆಯ ಭಾಗವೂ ಆಗಿರುವುದರಿಂದ ಅದು ಮಕ್ಕಳಿಗೆ ಸಂತೋಷವನ್ನೂ ಕೊಡುತ್ತದೆ. ರಂಗೋಲಿಯಲ್ಲಿ ಚುಕ್ಕೆ ಚುಕ್ಕೆಗಳನ್ನು ಸೇರಿಸಿ ಚಿತ್ತಾರವನ್ನು ಮೂಡಿಸುವ ಹಾಗೆ ಅಕ್ಷರಗಳನ್ನು ಬರೆಯುವಾಗಲೂ ಕೂಡಾ ಚುಕ್ಕೆಗಳನ್ನು ಅಕ್ಷರಾಕೃತಿಯಲ್ಲಿ ಮೂಡಿಸಿ ನಂತರ ಅದನ್ನು ತಿದ್ದುವ ಮೂಲಕ ಬರವಣಿಗೆಯ ಅಭ್ಯಾಸ ಮಾಡಿಸಬಹುದು. ಅದೇ ರೀತಿಯಲ್ಲಿ ಒಂದು ಎರಡು ಮೂರು; ಹೀಗೆ ಅಂಕಿಗಳ ಕ್ರಮಾನುಸಾರವಾಗಿರುವ ಚಿತ್ರಗಳನ್ನು ಮೂಡಿಸುವಂತಹ ಚುಕ್ಕೆಗಳನ್ನು ಅಥವಾ ಸಂಖ್ಯೆಗಳನ್ನು ಸೇರಿಸುವ ಅಭ್ಯಾಸವೂ ಕೂಡಾ ಬರವಣಿಗೆಯ ತಾಂತ್ರಿಕ ಗ್ರಹಿಕೆಯ ಭಾಗವೇ ಆಗಿರುತ್ತದೆ. ಮನೆಯಲ್ಲಿ ಮಕ್ಕಳೊಂದಿಗೆ ಪೋಷಕರು ಬರವಣಿಗೆಯ ಬಗ್ಗೆ ಮಾತಾಡಬೇಕು. ಮಗುವು ತಾನು ಬರೆಯುವುದರ ಬಗ್ಗೆ ಯಾವ ಭಾವವನ್ನು ಹೊಂದಿದೆ ಎಂದು ತಿಳಿದುಕೊಳ್ಳಬೇಕು.
1.ಕಷ್ಟ ಎಂದು ತೋರುವುದೋ.
2.ತಾನು ಸರಿಯಾಗಿ ಬರೆಯಲಾರೆ ಎಂಬ ಭಾವ ಇದೆಯೋ.
3.ತನಗೆ ಬರೆಯಲು ಇಷ್ಟವಿಲ್ಲ ಎನಿಸುತ್ತದೆಯೋ. 4.ತಾನು ಏತಕ್ಕೆ ಬರೆಯಬೇಕು ಪ್ರಶ್ನೆ ಇದೆಯೋ.
5.ತಾನು ಇಂತಹದ್ದನ್ನು ಬರೆಯಬೇಕು ಎಂಬ ಇಚ್ಛೆ ಇದೆಯೋ.
ಹೀಗೆ ಮಗುವಿಗೆ ಬರವಣಿಗೆಯ ಬಗ್ಗೆ ತನ್ನದೇ ಆದ ಪ್ರಶ್ನೆಯನ್ನೋ, ಕುತೂಹಲವನ್ನೋ, ಆಸಕ್ತಿ ಅಥವಾ ಅನಾಸಕ್ತಿಯನ್ನೋ ಹೊಂದಿರಬಹುದು. ಅದನ್ನು ಗುರುತಿಸಿಕೊಂಡು ಅದಕ್ಕೆ ಸೂಕ್ತವಾದ ಉತ್ತರವನ್ನು ನೀಡುತ್ತಾ ಬರೆಯಲು ಪ್ರೇರೇಪಣೆ ನೀಡಬೇಕು. ಹೇಳದಷ್ಟು ಕೇಳು, ಬರಿ ಅಂದ್ರೆ ಬರಿ ಅಷ್ಟೇ ಎನ್ನುವಂತೆ ವರ್ತಿಸಬಾರದು. ಅದೇ ರೀತಿಯಲ್ಲಿ ಶಾಲೆಯಲ್ಲಿಯೂ ಕೂಡಾ ಶಿಕ್ಷಕರಿಗೆ ಬರವಣಿಗೆಯ ಬಗ್ಗೆ ಗುರುತರವಾದಂತಹ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದೇ ರೀತಿಯಾಗಿ ಬರವಣಿಯು ತಾಂತ್ರಿಕ ಗ್ರಹಿಕೆಯ ಭಾಗವಾಗಿ ಮಾತ್ರವಲ್ಲದೇ ಬರೆಯುವುದು ಸಂಸ್ಕಾರವಾಗಿಯೂ ಮತ್ತು ಸಂಸ್ಕೃತಿಯಾಗಿಯೂ ರೂಪುಗೊಳ್ಳುತ್ತದೆ. ಅದರ ಬಗ್ಗೆ ಮುಂದೆ ವಿವರವಾಗಿ ತಿಳಿಯೋಣ.