varthabharthi


ನೇಸರ ನೋಡು

ಎಚ್ಚೆಸ್ವಿ ಎಪ್ಪತ್ತೈದು

ವಾರ್ತಾ ಭಾರತಿ : 7 Jul, 2019
ಜಿ.ಎನ್.ರಂಗನಾಥ ರಾವ್

ಎಚ್ಚೆಸ್ವಿಯವರ ಕಾವ್ಯ ಮಾರ್ಗ ಮಾನವಾನ್ವೇಷಣೆಯ ಮಾರ್ಗ. ‘ಮೂವತ್ತು ಮಳೆಗಾಲ’ ಸಮಗ್ರ ಕಾವ್ಯದ ಮುನ್ನುಡಿಯಲ್ಲಿ ಎಚ್ಚೆಸ್ವಿ ಹೀಗೆ ಹೇಳುತ್ತಾರೆ: ‘‘ದೇವತೆಗಳಲ್ಲಿ, ರಾಕ್ಷಸರಲ್ಲಿ, ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸ್ಥಾವರಜಗತ್ತಿನಲ್ಲಿ ಕೂಡ ನಾನು ಹುಡುಕುವುದು ಮಾನವೀಯ ಮಿಡಿತಗಳನ್ನು. ದೇವತೆ, ರಾಕ್ಷಸರಿರಲಿ, ಮನುಷ್ಯರಲ್ಲಿ ಕೂಡಾ ಅವಿತುಕೊಂಡಿರಬಹುದಾದ ಮನುಷ್ಯರನ್ನು ಹುಡುಕುವುದೇ ನನ್ನ ಬರವಣಿಗೆಯ ಪುರುಷಾರ್ಥ’’


ಅಂದು(ಜೂನ್ 30) ಬೆಂಗಳೂರು ಮಹಾನಗರದ ಎಲ್ಲ ರಸ್ತೆಗಳೂ ರವೀಂದ್ರ ಕಲಾಕ್ಷೇತ್ರಾಭಿಮುಖವಾಗಿ ಸಾಗಿದ್ದವು. ಪ್ರೀತಿವಾತ್ಸಲ್ಯಗಳ ಮಹಾಪೂರವಾಗಿ ಹರಿದು ಬಂದು ಜನಸಾಗರ ಸೇರಿತ್ತು ಕಲಾಕ್ಷೇತ್ರದಲ್ಲಿ. ಏನು ವಿಶೇಷ ಅಂದಿರ? ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರಿಗೆ ಪ್ರಾಯ ಎಪ್ಪತ್ತೈದು ಆಯಿತು. ಕವಿಯ ಹುಟ್ಟುಹಬ್ಬದ ಸಡಗರ-ಸಂಭ್ರಮಗಳ ಸುಮುಹೂರ್ತ.

ಗೆಳೆಯರು, ಬಂಧುಗಳು, ವಿದ್ಯಾರ್ಥಿ ಶಿಷ್ಯರು, ಕವಿ‘ಶಿಷ್ಯ’ರು, ಹತ್ತಿರದವರು, ದೂರದವರು, ಗೊತ್ತಿದ್ದವರು, ಗುಂಪಿನಲ್ಲಿ ಕಂಡ ಮುಖಗಳು -ಹೀಗೆ ಅಭಿಮಾನಿಗಳಿಂದ ಕಿಕ್ಕಿರಿದ ಪ್ರೀತಿ. ವರ್ಣರಂಜಿತ ಸಭೆಯಲ್ಲಿ ಬಗೆಬಗೆಯ ಅಭಿನಂದನೆ. ಕಾವ್ಯಾಭಿನಂದನೆ, ಸಂಗೀತ ನರ್ತನಗಳ ಅಭಿನಂದನೆ. ಗೆಳೆಯರು ಕವಿಯ ಕಾವ್ಯ ವಾಚನಮಾಡಿ ಕಾವ್ಯಾಭಿನಂದನೆ...ಸುಗಮ ಸಂಗೀತದ ಸುಪ್ರಸಿದ್ಧರು ಕವಿಯ ಗೀತೆಗಳನ್ನು ಹಾಡಿ ಅಭಿನಂದಿಸಿದರು. ಸ್ನೇಹಾ ಕಪ್ಪಣ್ಣ ಬಳಗದ ಕಿಶೋರಿಯರು ಕವಿಕಾವ್ಯವನ್ನು ನರ್ತಿಸಿ ಅಭಿನಂದಿಸಿದರು. ಪುಸ್ತಕ ಪ್ರಕಾಶಕರು ಹತ್ತು ಹನ್ನೊಂದು ಮಂದಿ ಕವಿಯ ಹೊಸ ಪುಸ್ತಕಗಳನ್ನು ಪ್ರಕಟಿಸಿ, ಆ ಪುಸ್ತಕಗಳನ್ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಅರ್ಪಿಸಿ ಅಭಿನಂದಿಸಿದರು. ಒಟ್ಟಾರೆಯಾಗಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರ ಹುಟ್ಟಿದ ಹಬ್ಬ ಒಂದು ಸಂಸ್ಕೃತಿ ಹಬ್ಬದಂತೆ ತೋರಿತು. ನಾಡುನುಡಿಗಳ ಪುಣ್ಯ ಹೀಗೆ ಅಪರೂಪಕ್ಕೊಮ್ಮೆ ಮೈದಾಳುತ್ತದೆ. ಕೆ.ಎಸ್.ನರಸಿಂಹಸ್ವಾಮಿಗಳ ನಂತರ ಕನ್ನಡದಲ್ಲಿ ಅತ್ಯಂತ ಜನಾನುರಾಗಿಳಾಗಿರುವ ಕವಿಗಳೆಂದರೆ ನಿಸಾರ್ ಅಹಮದ್ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿಯವರು. ಸಾಹಿತ್ಯ ವಲಯದಲ್ಲಿ ಎಚ್ಚೆಸ್ವಿ ಎಂದೇ ಖ್ಯಾತರಾಗಿರುವ ವೆಂಕಟೇಶ ಮೂರ್ತಿಯವರು ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯವರು. ಹೋದಿಗ್ಗೆರೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ, ಹದಿಮೂರರ ವಯಸ್ಸಿನಲ್ಲೇ ಷಟ್ಪದಿಯಲ್ಲಿ ಕಾವ್ಯ ರಚನೆಯೊಂದಿಗೆ ಆರಂಭವಾಯಿತು ಪಯಣ. ಯಕ್ಷಗಾನದ ಗೊಂಬೆಯಾಟ, ಕುಮಾರವ್ಯಾಸ ಭಾರತ ಹದಿಹರೆಯದಲ್ಲೇ ಅವರ ಭಾವಕೋಶದಲ್ಲಿ ಸುಪ್ತವಾಗಿ ಸೃಜನಶೀಲ ಪ್ರತಿಭೆಗೆ ಕಾವು ಕೂತವು. ಹೋದಿಗ್ಗರೆಯಿಂದ ಶುರುವಾದ ಪಯಣ ಹೊಳಲ್ಕೆರೆ, ದುರ್ಗ, ಭದ್ರಾವತಿ, ಮಲ್ಲಾಡಿಹಳ್ಳಿಗಳ ಮೂಲಕ ಕಾವ್ಯ ಎಳೆದು ತಂದಿತು ಮಹಾನಗರಿಗೆ. ಮಲ್ಲಾಡಿಹಳ್ಳಿಯ ಕ್ರಾಫ್ಟ್ ಟೀಚರ್ ಕೆಲಸ ಬಿಟ್ಟು ಬೆಂಗಳೂರಿಗೆ ಬಂದರು ಕನ್ನಡದಲ್ಲಿ ಎಂ.ಎ. ಮಾಡಲು. ಇಲ್ಲಿಂದ ಮುಂದೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಅಂದಿನಿಂದ ಇಂದಿನವರೆಗಿನ ಎಚ್ಚೆೆಸ್ವಿ ಪಯಣವೇ ಒಂದು ಕಾವ್ಯ.

‘ಪರಿವೃತ್ತ’(1968) ಎಚ್ಚೆಸ್ವಿ ಮಲ್ಲಾಡಿಹಳ್ಳಿಯಲ್ಲಿದ್ದಾಗಲೇ ಪ್ರಕಟಗೊಂಡ ಅವರ ಮೊದಲ ಕವನ ಸಂಕಲನ. ಇಲ್ಲಿಯವರೆಗೆ ಸುಮಾರ ಮೂವತ್ತು ಕವನ ಸಂಕಲನಗಳನ್ನು ಹೊರ ತಂದಿರುವ ಎಚ್ಚೆಸ್ವಿಯವರು ಕಾವ್ಯರಚನೆ ಪ್ರಾರಂಭಿಸಿದಾಗ ನವ್ಯಕಾವ್ಯದ ಉತ್ಕರ್ಷದ ಕಾಲಾವಧಿಯದು. ಎಚ್ಚೆಸ್ವಿ ನವೋದಯ-ನವ್ಯ-ಬಂಡಾಯ ಇವುಗಳಲ್ಲಿ ಎಲ್ಲಿ ಸಲ್ಲುವವರು ಎಂದು ಕೇಳಿದರೆ ಅವರು ಇಲ್ಲೆಲ್ಲ ಸಲ್ಲುವವರೂ ಹೌದು ಸಲ್ಲದವರೂ ಹೌದು. ನವೋದಯ ಮತ್ತು ನವ್ಯಗಳ ಪ್ರಭಾವಗಳನ್ನು ಅರಗಿಸಿಕೊಂಡು ತಮ್ಮದೇ ಮಾರ್ಗವನ್ನು ರೂಪಿಸಿಕೊಂಡು ಬೆಳೆದ ಕವಿ ಅವರು ಎಂಬುದು ಕನ್ನಡ ವಿಮರ್ಶೆ ಈಗಾಗಲೇ ಗುರುತಿಸಿರುವ ಸಂಗತಿ. ಪರಂಪರೆ ಮತ್ತು ಆಧುನಿಕತೆ ಎರಡರಲ್ಲೂ ಕಳಿತು ಮಾಗಿದ ಪ್ರಜ್ಞೆ ಅವರದು. ಅನಂತ ಮೂರ್ತಿಯವರು ಹೇಳಿರುವಂತೆ ನವ್ಯಕಾವ್ಯದ ಏಕತಾನತೆಗೆ ಪ್ರತಿಯಾಗಿ ಬಂದ ಎಚ್ಚೆಸ್ವಿಯವರ ಕಾವ್ಯ ಥಟ್ಟನೆ ಕಾವ್ಯರಸಿಕರ ಗಮನ ಸೆಳೆದದ್ದು, ಕಾವ್ಯ ಕಬ್ಬಿಣದ ಕಡಲೆಯೇ ಆಗಬೇಕಿಲ್ಲ ಎಂಬಂಥ ಸಂವಹನ ಸುಲಭತೆಯಿಂದ, ಭಾಷಾಪ್ರಯೋಗ, ಛಂದೋವೈವಿಧ್ಯ, ಪರಂಪರೆಯ ಪ್ರಜ್ಞೆ ಮೊದಲಾದ ಅನನ್ಯ ಗುಣಗಳಿಂದ. ಅದೇ ಕಾಲಕ್ಕೆ ಎಚ್ಚೆಸ್ವಿ ಸಮಕಾಲೀನತೆಗೆ ಸ್ಪಂದಿಸುತ್ತಿಲ್ಲ, ಸಮಕಾಲೀನ ವಿಮರ್ಶಾ ಧೋರಣೆಗಳಿಗೆ ತಕ್ಕಂತೆ ತಮ್ಮ ಕಾವ್ಯಮಾರ್ಗವನ್ನು ಬದಲಾಯಿಸಿಕೊಳ್ಳುತ್ತಿಲ್ಲ ಎಂಬ ನಿಷ್ಠುರ ವಿಮರ್ಶೆಗಳೂ ಬಂದದ್ದುಂಟು.

ಅನಂತ ಮೂರ್ತಿಯವರ ಮುನ್ನುಡಿಯೊಂದಿಗೆ ‘ಕ್ರಿಯಾ ಪರ್ವ’(1980) ಪ್ರಕಟವಾದಾಗ ಮತ್ತು ಆನಂತರ ಸಮಕಾಲೀನ ಸೂಕ್ಷ್ಮಗಳನ್ನು ಒಳಗೊಳ್ಳದ ಈ ಸಂಕಲನದ ಕವಿತೆಗಳು ಇಂದಿನವೇ?, ‘‘...ಸಮಕಾಲೀನತೆ ಎಲ್ಲಿಯೋ ಮರೆಯಾಗಿದೆ ಅನ್ನಿಸುತ್ತದೆ. ಈ ಕವಿಯ ಮನಸ್ಸು ರಾಮಾಯಣದ ಕಾಲದಲ್ಲಿ ಪುರಾಣಗಳ ಕಾಲದಲ್ಲಿ, ದಂತಕಥೆಗಳ ಕಾಲದಲ್ಲಿ ಸಹಜವಾಗಿ ಸಂಚಾರಮಾಡುವ ಹಾಗೆ ಆಧುನಿಕ ವರ್ತಮಾನದಲ್ಲಿ ಸಂಚರಿಸುವುದೇ ಇಲ್ಲ’’ ಎನ್ನುವ ನಿಷ್ಠುರ ವಿಮರ್ಶೆಗಳೂ ಬಂದವು. ‘‘ಪುರಾಣವು ಮೂಲವಸ್ತುವಾದರೂ ಪ್ರತ್ಯುತ್ಪನ್ನವಾದ ಭಾವಗಳು ಸಮಕಾಲೀನತೆಗೂ ಪಕ್ಕಾಗುವುದನ್ನು ಇಲ್ಲಿ ಸ್ಪಷ್ಟವಾಗಿ ನೋಡಬಹುದು’’ ಎನ್ನುವ ಪ್ರತಿವಿಮರ್ಶೆಯೂ ಬಂತು. ‘‘ವಸ್ತುವು ಶಾಶ್ವತ ಸ್ಥಿತಿಯಲ್ಲಿದ್ದು ಜೀವನ ಪರಿಕರಗಳು ಬದಲಾಗುವುದರಿಂದ ನೋಡುವ ದೃಷ್ಟಿ ಮತ್ತು ಚಿಕಿತ್ಸಕ ರೀತಿ ಬೇರೆಯಾಗುತ್ತದೆ. ಒಂದು ನಿಶ್ಚಯ ರೂಪ, ಕಾಲ, ದೇಶ, ಸ್ಥಿತಿಗಳ ಬಂಧನದಿಂದ ಕವಿ ವಸ್ತುಗಳನ್ನು ಸ್ವತಂತ್ರಗೊಳಿಸುತ್ತಾ ಹೋಗುತ್ತಾನೆ’’ ಎನ್ನುವುದು ಎಚ್ಚೆಸ್ವಿಯವರದೇ ಮಾತು. ಇಂಥ ಪ್ರಕ್ರಿಯೆಯಿಂದಲೇ ಕಾವ್ಯಕ್ಕೆ ಸಮಕಾಲೀನತೆ ಪ್ರಾಪ್ತವಾಗಬಲ್ಲದು. ಇದಕ್ಕೆ ಎಚ್ಚೆಸ್ವಿಯವರ ಕಾವ್ಯದಲ್ಲೇ ಅನೇಕ ನಿದರ್ಶನಗಳು ಸಿಗುತ್ತವೆ. ಹೀಗೆ, ವಿಮರ್ಶಕರು ಹೇಳುವಂತೆ ‘‘ಸಮಕಾಲೀನ/ವರ್ತಮಾನವಲ್ಲದ’’ ಎಚ್ಚೆಸ್ವಿಯವರ ಕಾವ್ಯಮಾರ್ಗ ನವ್ಯಮಾರ್ಗವಲ್ಲವಾದರೂ ಅವರ ಚಿಂತನಕ್ರಮದಲ್ಲಿ, ವಿಚಾರಧಾರೆಯಲ್ಲಿ ನವ್ಯತೆ ಇದೆ. ಅವರ ಕಾವ್ಯದಲ್ಲಿ ಹೊಸತನವಿರುವುದು ಅವರು ಪರಂಪರೆಯನ್ನು ಪರಿಭಾವಿಸುವ ಕ್ರಮದಲ್ಲಿ, ಕಾವ್ಯ ಕುರಿತ ಅವರ ಪರಿಕಲ್ಪನೆಯಲ್ಲಿ ಹಾಗೂ ಅವರ ಜೀವನ ದೃಷ್ಟಿ ಧೋರಣೆಗಳಲ್ಲಿ.

ಎಚ್ಚೆಸ್ವಿಯವರ ಕಾವ್ಯ ಮಾರ್ಗ ಮಾನವಾನ್ವೇಷಣೆಯ ಮಾರ್ಗ. ‘ಮೂವತ್ತು ಮಳೆಗಾಲ’ ಸಮಗ್ರ ಕಾವ್ಯದ ಮುನ್ನುಡಿಯಲ್ಲಿ ಎಚ್ಚೆಸ್ವಿ ಹೀಗೆ ಹೇಳುತ್ತಾರೆ: ‘‘ದೇವತೆಗಳಲ್ಲಿ, ರಾಕ್ಷಸರಲ್ಲಿ, ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸ್ಥಾವರಜಗತ್ತಿನಲ್ಲಿ ಕೂಡ ನಾನು ಹುಡುಕುವುದು ಮಾನವೀಯ ಮಿಡಿತಗಳನ್ನು. ದೇವತೆ, ರಾಕ್ಷಸರಿರಲಿ, ಮನುಷ್ಯರಲ್ಲಿ ಕೂಡಾ ಅವಿತುಕೊಂಡಿರಬಹುದಾದ ಮನುಷ್ಯರನ್ನು ಹುಡುಕುವುದೇ ನನ್ನ ಬರವಣಿಗೆಯ ಪುರುಷಾರ್ಥ’’
-ಇಂತಹ ಅನ್ವೇಷಣೆಯೊಂದು ಪಯಣ. ಪರಂಪರೆಯಿಂದ ಆಧುನಿಕದತ್ತ, ಆಧುನಿಕದಿಂದ ಪರಂಪರೆಯತ್ತ, ಮನುಷ್ಯರನ್ನು -ಮನುಷ್ಯತ್ವವನ್ನು ಹುಡುಕುವ, ವಸುಧೈವ ಕುಟುಂಬಕದ ಕನಸಿನ ಸಾಕಾರದತ್ತ ಸಾಗಿರುವ ಎಚ್ಚೆಸ್ವಿ ಕಾವ್ಯ ಪಯಣ. ಇಲ್ಲಿ ನಮಗೆ ಪದೇಪದೇ ಎದುರಾಗುವುದು ಆಕಾಶ, ಭೂಮಿ, ಅಗ್ನಿ, ವಾಯು, ರಾಮ, ಕೃಷ್ಣ...ಇವುಗಳ ಮೂಲಕ ಪುರಾಣದ ಸತ್ವಗಳನ್ನೂ ವರ್ತಮಾನದ ನೆಲದ ಸತ್ವಗಳನ್ನೂ ಸಮನ್ವಯಗೊಳಿಸಿ ಪೂರ್ಣ ಮನುಷ್ಯನನ್ನು ಕಾಣಬಯಸುವುದು ಎಚ್ಚೆಸ್ವಿಯವರ ಕಾವ್ಯಾದರ್ಶ. ಇದೇ ರಾಘವೇಂದ್ರ ಪಾಟೀಲರು ಹೇಳುವಂತೆ, ಪೌರಾಣಿಕ ಸ್ಮತಿಯ ಮಂಥನದ ಮೂಲಕ ಆಧುನಿಕಕ್ಕೆ ಪ್ರಸ್ತುತವಾಗುವ ಆರೋಗ್ಯಪೂರ್ಣ ವೈಚಾರಿಕತೆ. ಇದಕ್ಕೆ ನಿದರ್ಶನವಾಗಿ ‘ಶ್ರೀಸಂಸಾರಿ’, ‘ಅಗ್ನಿಸ್ತಂಭ’, ‘ಸೌಗಂಧಿಕಾ’, ‘ಶಿಶಿರದ ಪಾಡು’, ‘ಹರಿಗೋಲು’, ‘ಸೊಳ್ಳೆ’, ‘ಕಣ್ಣಮ್ಮನ ಅಲಂಕಾರ’ ಮೊದಲಾದ ಹಲವಾರು ಕವನಗಳನ್ನು ಗಮನಿಸಬಹುದು.

 ‘ಶ್ರೀ ಸಂಸಾರಿ’ಯ ರಾಮ ನಮ್ಮ ಸಂಸ್ಕೃತಿಯಲ್ಲಿ ಏಕಾಂಗಿಯಾಗಿ ಪೂಜೆಗೊಂಡವನಲ್ಲ. ರಾಮ ಕುಟುಂಬ ವತ್ಸಲನೂ ಹೌದು ಪ್ರಜಾ ವತ್ಸಲನೂ ಹೌದು. ಎಂದೇ ನಮ್ಮ ಮನೆಗಳಲ್ಲಿ ಕಾಣುವ ರಾಮನ ಪಟದಲ್ಲಿ ಅವನೊಂದಿಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದಾರೆ. ಆದರೆ ಇಷ್ಟಕ್ಕೆ ಪೂರ್ತಿಯಾಯಿತೇ ರಾಮನ ಚಿತ್ರ? ಇಲ್ಲ. ರಾಮನ ಕುಟುಂಬ, ಸಂಸಾರದ ರೇಖೆ ಮೀರಿ ಲಂಕೆ, ಕಿಷ್ಕಿಂದೆ, ಆರ್ಯ ದ್ರಾವಿಡಗಳನ್ನೆಲ್ಲ ವ್ಯಾಪಿಸಿದೆ. ಕವಿಗೆ ರಾಮನ ಈ ಚಿತ್ರದಲ್ಲಿ ಕೊರತೆ ಇರುವುದು ಕಾಣಿಸುತ್ತದೆ. ‘‘ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ:
‘ಹೆಗಲ ಬಿಲ್ಲ ಕೆಳಗಿಳಿರಿಸಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ!’
ಥಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲು ಮರಿ! 
ರಾಮ ಧ್ಯಾನಿಸಿದ: ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ’’
ಆದರ್ಶ ಪುರುಷ ರಾಮನ ಚಿತ್ರ ಪೂರ್ಣಗೊಳ್ಳುವ ಮೇಲಿನ ಪರಿಯಿಂದಾಗಿ ‘ಶ್ರೀ ಸಂಸಾರಿ’ ಗಾಂಧಿಯ ರಾಮರಾಜ್ಯ, ಅಂತ್ಯೋದಯಗಳ ಸಾರ್ಥಕ ರೂಪಕವಾಗಿ ಪರಿಣಾಮಕಾರಿಯಾಗುತ್ತದೆ. ಕವಿ ರಾಮನನ್ನು ಈ ರೀತಿ ವಿಮರ್ಶಿಸಿ ತಿದ್ದುವುದರಲ್ಲಿ ಪುರಾಣ ಪ್ರಸ್ತುತಕ್ಕೂ ಸಂಗತವಾಗುತ್ತದೆ. ಇದೇ ರೀತಿ ಕೃಷ್ಣನನ್ನು ಎಚ್ಚೆಸ್ವಿ ವಿಮರ್ಶಿಸುವುದನ್ನು ‘ಆಪ್ತಗೀತೆ’ಯಲ್ಲಿ ನಾವು ಕಾಣುತ್ತೇವೆ.ಗೀತೋಪದೇಶದಲ್ಲಿ ಅವರ ಕೃಷ್ಣ ಸೇವೆಯ ವಿವಿಧ ಅರ್ಥ ವಿವರಿಸುತ್ತ ಹೀಗೆ ಉಪದೇಶಿಸುತ್ತಾನೆ:

‘‘ಇದೀಗ ಪಂಚಮಾಂಕದ ಸರದಿ. ಒಡ್ಡಿಗೆದೆಯೊಡ್ಡಿ ನಿಂತಿದ್ದೇನೆ/ಬರಿಗೈ ಬಂಟ. ಚಕ್ರವನ್ನಳವಡಿಸಿ ನೂತಿದ್ದಾಯ್ತು......
 ಎತ್ತೆತ್ತಿ ಇಡು ನಿಧಾನಕ್ಕೆ ಸಾವಿರ ಪಾದ/ಇರುವೆ ನೋಯದಹಾಗೆ... ಪಂಚಮದ ಇಂಚರ ಎಷ್ಟು ಮಾತ್ರಕ್ಕೂನೂ ಒಡೆಯದಂತೆ.’’
-ಇಲ್ಲಿ ಪಂಚಮ ಧ್ವನಿಸುವ ನಿಮ್ನಸ್ಥಿತಿಯಿಂದಾಗಿ ಕವನದಲ್ಲಿ ಸೇವೆಯ ನೆಲೆಬೆಲೆ ವಿಸ್ತಾರಗೋಡು ಹೊಸ ಅರ್ಥದ ಹೊಳಹು ಸ್ಪಷ್ಟವಾಗುತ್ತದೆ. ‘ಶಿಶಿರದ ಪಾಡು’ ಕವಿತೆಯಲ್ಲಿ ಸೀತೆಯ ಬದುಕಿನ ಶಿಶಿರಗಳ ಚಿಂತನಮಂಥನದಿಂದಾಗಿ ಶ್ಲೋಕಗಳಾಚೆ ಜೀವಂತವಾಗಿರುವ ಸೀತೆಯ ದರ್ಶನವಾಗುತ್ತದೆ. ಬದುಕಿನ ಅನಿರೀಕ್ಷಿತ ಸಂಭವಗಳ ಸಾಧ್ಯತೆಯಿಂದಾಗಿ ಈ ಕವಿತೆ ಇವತ್ತಿನದೂ ಆಗುತ್ತದೆ. ‘ಅಗ್ನಿಸ್ತಂಭ’ದಲ್ಲಿ ಪುರಾಣದ ಪ್ರಹ್ಲಾದನ ತಬ್ಬಲಿತನ ಇವತ್ತಿನ ಮಾನವನ ತಬ್ಬಲಿತನವನ್ನೂ ಧ್ವನಿಸುತ್ತದೆ. ‘ಸೌಗಂಧಿಕ’, ಜಿ.ಎಸ್.ಎಸ್. ಹೇಳುವಂತೆ ಭೀಮನ ಅಹಂಕಾರಕ್ಕೆ ಒದಗುವ ಆಘಾತದ ಜೊತೆಗೆ ಇವತ್ತಿನ ಮನುಷ್ಯನ ಅಹಂಕಾರಕ್ಕೆ ಒದಗುವ ಆಘಾತವನ್ನೂ, ಅದರಿಂದ ಅದೃಷ್ಟವಶಾತ್ ದೊರೆಯುವ ವಿವೇಕವನ್ನು ಧ್ವನಿಸಿದರೆ, ‘ಹರಿಗೋಲು’, ‘ಸೊಳ್ಳೆಗಳು’, ‘ಕಣ್ಣಮ್ಮನ ಅಲಂಕಾರ’ ದಂತಹ ಕವಿತೆಗಳು ಅಪ್ಪಟ ವರ್ತಮಾನಕ್ಕೆ ಸ್ಪಂದಿಸುತ್ತಲೇ ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಧ್ವನಿಸುತ್ತವೆ. ಸ್ವಾತಂತ್ರ್ಯಾನಂತರದ ದೇಶದಲ್ಲಿನ ಸಾಮಾಜಿಕ ವಿಘಟನೆ, ಮೌಲ್ಯಗಳ ಅಧಃಪತನವನ್ನು ನಿರೂಪಿಸುವ ‘ಹರಿಗೋಲು’ ಖಂಡಕಾವ್ಯ ಪ್ರಳಯದ ಭೋರ್ಗರೆತದಲ್ಲಿ ಸಾರ್ವತ್ರಿಕವಾದ ಅಸಹಾಯಕತೆಗೆ ಚಾಚಿಕೊಳ್ಳುವ ಪರಿ ಮಾರ್ಮಿಕವಾದದ್ದು.

 ಕಾವ್ಯದೊಟ್ಟಿಗೆ ಸಾಹಿತ್ಯದ ಇತರ ಪ್ರಕಾರಗಳಲ್ಲೂ ಕನ್ನಡಕ್ಕೆ ಎಚ್ಚೆಸ್ವಿಯವರ ಕೊಡುಗೆ ಗಣನೀಯವಾದುದು. 16 ನಾಟಕಗಳು, 16 ಕಥೆ-ಕಾದಂಬರಿಗಳು, 11ವಿಮರ್ಶಾ ಸಂಗ್ರಹಗಳು ಸೇರಿದಂತೆ ಎಚ್ಚೆಸ್ವಿಯವರ ಕೃತಿಗಳ ಸಂಖ್ಯೆ ನೂರರ ಸಮೀಪ. ನಾಟಕದಲ್ಲೂ ಎಚ್ಚೆಸ್ವಿಯವರ ಸಾಧನೆ ಅನನ್ಯವಾದುದು. ಅವರ ಏಳು ಕಿರು ನಾಟಕಗಳು ಗದ್ಯರೂಪದಲ್ಲಿದ್ದರೆ ಉಳಿದವು ಕಾವ್ಯ ನಾಟಕಗಳು. ಚಿತ್ರಪಟ, ಅಗ್ನಿವರ್ಣ, ಉರಿಯ ಉಯ್ಯಿಲೆ, ಕಂಸಾಯಣ, ಊರ್ಮಿಳಾ, ಮಂಥರಾ-ರಂಗಪ್ರಯೋಗ ಹಾಗೂ ಕಾವ್ಯಾತ್ಮಕತೆ ಎರಡೂ ದೃಷಿಯಿಂದಲೂ ಗಮನಾರ್ಹವಾದುವು, ಬಿ.ವಿ.ಕಾರಂತರು ಹೇಳಿರುವಂತೆ ನಾಟಕ ಮತ್ತು ಕಾವ್ಯ ಸಹಜವಾಗಿ ಹೆಣೆದುಕೊಂಡಿರುವ ಸಾಧನೆಯನ್ನು ಈ ಕೃತಿಗಳಲ್ಲಿ ನಾವು ಕಾಣುತ್ತೇವೆ. ‘ಅಗ್ನಿವರ್ಣ’ ರಾಮರಾಜ್ಯದ ಪರಿಕಲ್ಪನೆಯ ಏರುಗತಿ ಅಧೋಗತಿಗಳನ್ನು ಚಿತ್ರಿಸುವ ಕಲಾತ್ಮಕ ದೃಶ್ಯಕಾವ್ಯವಾದರೆ, ‘ಚಿತ್ರಪಟ’ ರಾಮಾಯಣದ ಒಂದು ಜಾನಪದ ರೂಪ. ‘ಉರಿವ ಉಯ್ಯಿಲೆ’ ಮತ್ತು ‘ಊರ್ಮಿಳಾ’ ಏಕಪಾತ್ರಾಭಿನಯದ ಏಕಾಂಕ ನಾಟಕಗಳು. ‘ಉರಿಯ ಉಯ್ಯಾಲೆ’ ಮಹಾಭಾರತದ ದ್ರೌಪದಿಯ ಅಂತರಂಗಕ್ಕೆ ಹಿಡಿದ ಕನ್ನಡಿ. ಅಗ್ನಿ ಸಂಜಾತೆ ದ್ರೌಪದಿಯ ಸ್ವಗತದಲ್ಲಿ ತೆರೆದುಕೊಳ್ಳುವ ಅವಳ ಅಂತರಂಗದ ಕಾವ್ಯಸ್ಫೋಟವಿದು. ‘ಉರಿವ ಉಯ್ಯೋಲೆ’ ಜೀಕಿದಂತೆ ಹೊಮ್ಮುವ ಒಂದೊಂದು ಕಿಡಿಯಲ್ಲೂ ಅವಳ ವ್ಯಕ್ತಿತ್ವದ ವಿವಿಧ ಆಯಾಮಗಳು, ಅಂತರಂಗದ ಆಕ್ರೋಶಗಳು ಉಜ್ವಲವಾಗಿ ಪ್ರಕಾಶಗೊಂಡು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. 

ಲಕ್ಷ್ಮಣ ಅಣ್ಣನೊಂದಿಗೆ ವನವಾಸಕ್ಕೆ ಹೋದ ನಂತರದ ಹದಿನಾಲ್ಕು ವರ್ಷಗಳ ಏಕಾಂತದಲ್ಲಿ ಊರ್ಮಿಳೆ ಕಂಡುಕೊಳ್ಳುವ, ‘‘ಗಂಡಿನ ಹಂಗೇ ಇಲ್ಲದೆ ಹೆಣ್ಣು ಗ್ರಹಸ್ಥಧರ್ಮ ನಡೆಸಬಹುದು’’ ಎಂಬ ಸತ್ಯವನ್ನು ಅನಾವರಣಗೊಳಿಸುವುದರಲ್ಲಿ ಕೃತಿ ಇಂದಿನ ಸ್ತ್ರೀ ಪರ ಚಿಂತನೆಯ ಅಭಿವ್ಯಕ್ತಿಯೂ ಆಗುತ್ತದೆ. ‘ಮಂಥರೆ’ ಹೆಣ್ಣಿನ ಅಂತರಂಗದ ಇನ್ನೊಂದು ಬಗೆಯ ಚಿತ್ರ. ‘ಉರಿವ ಉಯ್ಯೊಲೆ’ ಮತ್ತು ‘ಊರ್ಮಿಳೆ’ ರಂಗದ ಮೇಲೆ ಯಶಸ್ವಿಯಾಗಿ ಹಲವಾರು ಪ್ರದರ್ಶನಗಳನ್ನು ಕಂಡಿವೆ. ‘ತಾಪಿ’, ‘ಕದಿರನ ಕೋಟೆ’, ‘ಅಗ್ನಿಮುಖಿ’ ಯಂಥ ಕಾದಂಬರಿಗಳು ಹಾಗೂ‘ಪುಟ್ಟಾರಿಯ ಮತಾಂತರ’ದಂಥ ಸಣ್ಣಕತೆಗಳಲ್ಲದೆ ಗದ್ಯದಲ್ಲಿ ಎಚ್ಚೆಸ್ವಿಯವರ ಸಾಧನೆ ಇರುವುದು, ಈ ಪ್ರಕಾರವನ್ನು ಅವರು ಕಥಾನಕವಾಗಿ ದುಡಿಸಿಕೊಂಡಿರುವ ಪರಿಯಲ್ಲಿ.ಕಾವ್ಯದಂತೆ ಗದ್ಯದಲ್ಲೂ ಕಥನ ಎಚ್ಚೆಸ್ವಿಯವರಿಗೆ ಪ್ರಿಯವಾದದ್ದು. ಆತ್ಮ ಚರಿತ್ರೆಯಿರಲಿ,ವ್ಯಕ್ತಿಚಿತ್ರವಿರಲಿ,ಪತ್ರ ವ್ಯವಹಾರವಿರಲಿ ಮಹಾಭಾರತವಿರಲಿ,ಭಗವದ್ಗೀತೆ, ಋಗ್ವೇದಗಳಿರಲಿ ಅವರ ಕಥಾನಕ ಶೈಲಿ ಓದುಗರನ್ನು ಥಟ್ಟನೆ ಕೃತಿಯ ಅಂತರಂಗಕ್ಕೆ ಸೆಳೆದುಬಿಡುತ್ತದೆ. ಈ ಮಾತಿಗೆ ನಿದರ್ಶನವಾಗಿ, ಮೂರು ಸಂಪುಟಗಳ ‘ಕುಮಾರವ್ಯಾಸ ಕಥಾಂತರ’,‘ಅಕ್ಕಚ್ಚುವಿನ ‘ಅರಣ್ಯಪರ್ವ’ ಮತ್ತೆರಡು ಅನಾತ್ಮಕಥನಗಳು,‘ಮರೆಯುವ ಮೊದಲು’ ಪತ್ರಕಥನ, ತಿಳಿಗನ್ನಡ ಅವತರಣಗಳಾದ ‘ಆದಿಪುರಾಣ’,‘ಯಶೋಧರ ಚರಿತೆ’, ‘ಆಪ್ತಗೀತೆ’, ‘ಋಗ್ವೇದಸ್ಫುರಣ’, ವ್ಯಕ್ತಿಚಿತ್ರಗಳ ‘ಬೆಳಗಾಗಿ ನಾನೆದ್ದು’ ಇವುಗಳನ್ನು ಗಮನಿಸಬಹುದು. ‘ಆಕಾಶದ ಹಕ್ಕು’, ‘ಪುತಿನ ಪರಿಕ್ರಮ’, ‘ಕಥನ ಕವನ’, ‘ಮೇಘದೂತ’ ಎಚ್ಚೆಸ್ವಿಯವರ ಪ್ರಮುಖ ವಿಮರ್ಶಾ ಕೃತಿಗಳು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ‘ಋತುವಿಲಾಸ’ ಅನುವಾದಗಳಲ್ಲಿ ಎದ್ದುಕಾಣುವ ಕೃತಿ. ಚಲನಚಿತ್ರ ಮತ್ತು ಸುಗಮ ಸಂಗೀತ ಕ್ಷೇತ್ರಗಳಲ್ಲ್ಲೂ ಎಚ್ಚೆಸ್ವಿಯವರ ಕೊಡುಗೆ ಗಮನಾರ್ಹವಾದುದು. ಎಚ್ಚೆಸ್ವಿಯವರಿಗೆ ವಿಮರ್ಶೆಯ ಗೌರವವೂ ಧಾರಾಳವಾಗಿ ಸಂದಿದೆ ಎಂದರೆ ಉತ್ಪ್ರೇಕ್ಷೆಯಾಗದು. ಕುರ್ತಕೋಟಿಯವರಿಂದ ಸಿ.ಎನ್. ರಾಮಚಂದ್ರನ್‌ವರೆಗೆ ಕನ್ನಡದ ಪ್ರಮುಖ ವಿಮರ್ಶಕರೆಲ್ಲ ಅವರ ಕಾವ್ಯದಲ್ಲಿನ ವಸ್ತು ವೈಶಿಷ್ಟ್ಯ-ವೈವಿಧ್ಯ, ಛಂದೋವೈಶಿಷ್ಟ್ಯ, ಸ್ವೋಪಜ್ಞತೆ, ಪರಂಪರೆ-ವರ್ತಮಾನಗಳ ಪ್ರಜ್ಞೆ ಇತ್ಯಾದಿಗಳನ್ನು ಕುರಿತು ಬರೆದಿದ್ದಾರೆ, ಅವರನ್ನು ನವ್ಯೋತ್ತರದ ಪ್ರಮುಖ ಕವಿ, ವಿಶಿಷ್ಟ ಕವಿ ಎಂದು ಗುರುತಿಸಿದ್ದಾರೆ. ಇದು ಅವರಿಗೆ ಕಾವ್ಯೋಚಿತವಾದ ಗೌರವವೇ ಸರಿ. ಎಚ್ಚೆಸ್ವಿಗೆ ಎಪ್ಪತ್ತೈದಾದರೂ ಅವರದು ಸದಾ ಸೃಜನಶೀಲವಾದ ಪ್ರಾಯ. ಅವರೀಗ ಅಕ್ಕನ ವಚನಗಳ ತಿಳಿಗನ್ನಡ ಅವತರಣ ಮತ್ತು ‘ಬುದ್ಧಸ್ಮಿತ’ ಮಹಾಕಾವ್ಯ ರಚನೆಯಲ್ಲಿ ನಿರತರು. ಹೇಳೋಣ ಎಚ್ಚೆಸ್ವಿಗೆ ಹುಟ್ಟುಹಬ್ಬದ-

ಸ್ವಸ್ತಿ ಸ್ವಸ್ತಿ ಸ್ವಸ್ತಿ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)