ಗುಳ್ಯಾ: ತುಂಬಿ ಹರಿಯುವ ನದಿ ದಾಟಲು ಗ್ರಾಮಸ್ಥರ ಹರಸಾಹಸ- ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ
ನಕ್ಸಲ್ ಪೀಡಿತ ಕುಗ್ರಾಮದ ಜನರ ಗೋಳು ಕೇಳುವವರೇ ಇಲ್ಲ
ಬೆತ್ತ, ಹಗ್ಗದ ತೂಗು ಸೇತುವೆಯಲ್ಲಿ ಶಾಲಾ ಮಕ್ಕಳ, ನಿವಾಸಿಗಳ ತಪ್ಪದ ಸರ್ಕಸ್
ಚಿಕ್ಕಮಗಳೂರು, ಜು.7: ಸದ್ಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಭಾಗದಲ್ಲಿನ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುವ ನದಿಗಳನ್ನು ದಾಟಲು ಮಲೆನಾಡು ಭಾಗದ ಕೆಲ ಕುಗ್ರಾಮಗಳಲ್ಲಿ ಇಂದಿಗೂ ಸುಸಜ್ಜಿತ ಸೇತುವೆಗಳಿಲ್ಲ. ನದಿಗಳು, ಹಳ್ಳಕೊಳ್ಳಗಳ ಅಂಚಿನಲ್ಲಿರುವ ಇಂತಹ ಗ್ರಾಮಗಳ ಜನರು ಮಳೆಗಾಲದಲ್ಲಿ ಸ್ವತಃ ತಾವೇ ನಿರ್ಮಿಸಿಕೊಂಡ ಹಗ್ಗ ಹಾಗೂ ಬೆತ್ತಗಳ ತೂಗು ಸೇತುವೆಯ ಸಹಾಯದಿಂದ ನದಿ ದಾಟುತ್ತಾ ಹೊರ ಜಗತ್ತಿನ ಸಂಪರ್ಕ ಬೆಳೆಸಿಕೊಳ್ಳುತ್ತಾರೆ.
ಇಂತಹ ತೂಗು ಸೇತುವೆಗಳು ಅಪಾಯಕಾರಿಯಾಗಿದ್ದು, ಕೊಂಚ ಎಚ್ಚರ ತಪ್ಪಿದರೂ ನಿವಾಸಿಗಳು ತುಂಬು ಹರಿಯುವ ನದಿ ನೀರಿನಲ್ಲಿ ಕೊಚ್ಚಿ ಹೋಗಬೇಕಾಗುತ್ತದೆ. ಇಂತಹ ಒಂದು ಗ್ರಾಮ ಜಿಲ್ಲೆಯ ನೂತನ ತಾಲೂಕಾದ ಕಳಸ ತಾಲೂಕು ವ್ಯಾಪ್ತಿಯಲ್ಲಿದ್ದು, ಈ ಗ್ರಾಮದ ನಿವಾಸಿಗಳು ಸಮೀಪದಲ್ಲಿರುವ ನದಿಯನ್ನು ದಾಟಲು ಸುಸಜ್ಜಿತ ಸೇತುವೆ ಇಲ್ಲದ ಕಾರಣಕ್ಕೆ ಹಗ್ಗದಿಂದ ಮಾಡಿದ ತೂಗು ಸೇತುವೆಯಲ್ಲೇ ಸರ್ಕಸ್ ಮಾಡುತ್ತಾ ತುಂಬಿ ಹರಿಯುವ ಅಪಾಯಕಾರಿ ನದಿಯೊಂದನ್ನು ದಾಟಬೇಕಾಗಿದೆ.
ಕಳಸ ತಾಲೂಕು ವ್ಯಾಪ್ತಿಯ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಗುಳ್ಯಾ ಗ್ರಾಮದ ಜನರು ಇಂದಿಗೂ ಹರಕು, ಮುರುಕಿನ ಹಗ್ಗ, ಬೆತ್ತಗಳನ್ನು ಜೋಡಿಸಿ ಮಾಡಿದ ತೂಗು ಸೇತುವೆಯಲ್ಲಿ ಅಪಾಯಕಾರಿಯಾದ ನದಿಯನ್ನು ಪ್ರಾಣದ ಹಂಗು ತೊರೆದು ದಾಟಲೇಬೇಕಾದ ಅನಿವಾರ್ಯ ಸಂಕಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಂಸೆ ಗ್ರಾಮದಿಂದ ಸುಮಾರು 7 ಕಿಮೀ ದೂರದಲ್ಲಿರುವ ಗುಳ್ಯಾ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅಲ್ಪಸ್ವಲ್ಪ ಜಮೀನು, ಭತ್ತದ ಗದ್ದೆಗಳನ್ನು ಹೊಂದಿರುವ ಗ್ರಾಮದ ನಿವಾಸಿಗಳು ಕೃಷಿ, ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.
ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ಬರುವ ಸಂಸೆ ಗ್ರಾಮದ ಸಮೀಪದಲ್ಲಿರುವ ನೆಲ್ಲಿಬೀಡು ಚೆಕ್‍ಪೋಸ್ಟ್‍ನಿಂದ ಈ ಗ್ರಾಮ ತಲುಪಲು ಕಚ್ಚಾ ರಸ್ತೆ ಇದೆಯಾದರೂ ಈ ರಸ್ತೆ ಇದುವರೆಗೂ ಡಾಂಬಾರೀಕರಣದ ಭಾಗ್ಯ ಕಂಡಿಲ್ಲ. ಈ ಕಚ್ಚಾ ರಸ್ತೆಯಲ್ಲಿ 7 ಕಿ.ಮೀ ಸಾಗಿದರೆ ಗುಳ್ಯಾ ಗ್ರಾಮದ ಸಿಗುತ್ತದೆ. ಆದರೆ ಈ ಗ್ರಾಮ ತಲುಪಲು ಸಣ್ಣ ನದಿಯೊಂದನ್ನು ದಾಟಬೇಕಿದ್ದು, ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ನದಿಯಲ್ಲಿ ನಡೆದುಕೊಂಡೇ ಗ್ರಾಮ ತಲುಪಬಹುದು. ಆದರೆ ಮಳೆಗಾಲದಲ್ಲಿ ಈ ನದಿ ತುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ನದಿಯೇ ಇಲ್ಲಿನ ನಿವಾಸಿಗಳ ಪಾಲಿಗೆ ಪ್ರಾಣಕ್ಕೆ ಕಂಟಕವಾಗಿ ಪರಿಣಾಮಿಸಿದ್ದು, ಈ ಗ್ರಾಮದ ಸಂಪರ್ಕಕ್ಕೆ ಇಲ್ಲಿನ ನಿವಾಸಿಗಳು ನಿರ್ಮಿಸಿಕೊಂಡಿರುವ ಬೆತ್ತದ ತೂಗು ಸೇತುವೆಯಲ್ಲಿ ಜೀವಪಣಕ್ಕಿಟ್ಟು ಸರ್ಕಸ್ ಮಾಡುತ್ತಾ ನದಿ ದಾಟಬೇಕಿರುವುದು ಇಲ್ಲಿನ ನಿವಾಸಿಗಳ ಪಾಲಿಗೆ ಸಾವಿನೊಂದಿಗೆ ಸರಸವಾಡುವ ಸ್ಥಿತಿಯಂತಾಗಿದೆ.
ಮಳೆಗಾಲದಲ್ಲಿ ಈ ಸೇತುವೆ ಮಳೆ ನೀರಿನಿಂದ ತೊಯ್ದು ಶಿಥಿಲಗೊಳ್ಳುವದರಿಂದ ಗ್ರಾಮಕ್ಕೆ ಬರುವ ಯಾರೇ ಆದರೂ ತೂಗು ಸೇತುವೆಯ ದುಸ್ಥಿತಿಗೆ ಭಯಭೀತರಾಗಿ ನದಿ ದಾಟುವ ಸಾಹಸಕ್ಕೆ ಕೈ ಹಾಕದೇ ಹಿಂದಿರುಗುವುದು ಸಾಮಾನ್ಯವಾಗಿದೆ. ಆದರೆ ಗುಳ್ಯಾ ಗ್ರಾಮದ ನಿವಾಸಿಗಳು ಹಾಗೂ ಶಾಲಾ ಕಾಲೇಜುಗಳ ಮಕ್ಕಳ ಪಾಲಿಗೆ ನದಿ ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದ ಪರಿಣಾಮ ಮಳೆಗಾಲದಲ್ಲಿ ಈ ತೂಗು ಸೇತುವೆಯಲ್ಲಿ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ನಿವಾಸಿಗಳು ಪ್ರಾಣದ ಹಂಗು ತೊರೆದು ನದಿಗೆ ಅಡ್ಡಲಾಗಿ ನಿರ್ಮಿಸಿಕೊಂಡಿರುವ ತೂಗು ಸೇತುವೆ ಮೂಲಕ ಇಂದಿಗೂ ನದಿ ದಾಟುತ್ತಿದ್ದಾರೆ. ಸದ್ಯ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗುಳ್ಯಾ ಗ್ರಾಮದ ಸಮೀಪದಲ್ಲಿ ಹರಿಯುವ ಈ ಸಣ್ಣ ನದಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ಇಂತಹ ನದಿಯನ್ನು ದಾಟಲು ತೂಗು ಸೇತುವೆಯೊಂದೇ ಸಾಧನವಾಗಿದೆ. ಈ ಕಾರಣಕ್ಕೆ ವಿಧಿ ಗ್ರಾಮ ನಿವಾಸಿಗಳು, ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳು, ಮಹಿಳೆಯರು ಮಳೆಗಾಲದಲ್ಲೂ ಪ್ರಾಣದ ಹಂಗು ತೊರೆದು ನದಿ ದಾಟಿಕೊಂಡು ಹೊರ ಜಗತ್ತಿನ ಸಂಪರ್ಕ ಪಡೆಯುತ್ತಿದ್ದಾರೆ. ಈ ತೂಗು ಸೇತುವೆ ಇಲ್ಲದಿದ್ದಲ್ಲಿ ಈ ಗ್ರಾಮದ ಜನರು ಮಳೆಗಾಲದ ಆರು ತಿಂಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳಬೇಕಿತ್ತು.
ಗುಳ್ಯಾ ಗ್ರಾಮದ ನಿವಾಸಿಗಳು ಪ್ರತೀ ಮಳೆಗಾಲದಲ್ಲೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಪಾಯಕಾರಿ ತೂಗು ಸೇತುವೆ ಬದಲಿಗೆ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂದು ಕಳೆದ 10 ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ಗ್ರಾಪಂ, ತಾಪಂ, ಜಿಪಂ, ತಹಶೀಲ್ದಾರ್, ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು ಹಾಗೂ ರಾಜ್ಯ ಸರಕಾರಕ್ಕೂ ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಈ ಜನರ ಬೇಡಿಕೆಯ ಕೂಗಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ನಕ್ಸಲ್ ಪೀಡಿತ ಗ್ರಾಮ: ಸಂಸೆ ಗ್ರಾಮ ಹೇಳಿ ಕೇಳಿ ನಕ್ಸಲ್ ಪೀಡಿತ ಗ್ರಾಮ ಪಂಚಾಯತ್ ಆಗಿದ್ದು, ಗುಳ್ಯಾ ಗ್ರಾಮವೂ ನಕ್ಸಲ್ ಪೀಡಿತ ಗ್ರಾಮಗಳ ಪಟ್ಟಿಯಲ್ಲಿದೆ. ಈ ಹಿಂದೆ ಇಲ್ಲಿಗೆ ನಕ್ಸಲರು ಭೇಟಿ ನೀಡಿದ್ದರು ಎಂದು ಪುಕಾರು ಹಬ್ಬಿತ್ತು. ಈ ವೇಳೆ ಪೊಲೀಸರು, ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನ ಆಲಿಸಿಕೊಂಡು ಪರಿಹಾರ ಒದಗಸುವ ಭರವಸೆ ನೀಡಿದ್ದರು. ಈ ವೇಳೆ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವ ಭರವಸೆಯೂ ನಿವಾಸಿಗಳಿಗೆ ಸಿಕ್ಕಿತ್ತು. ಆದರೆ ಭರವಸೆಗಳು ಸುಳ್ಳಾಗಿದ್ದು, ನಿವಾಸಿಗಳಿಗೆ ಮಳೆಗಾಲದಲ್ಲಿ ಅಪಾಯಕಾರಿ ತೂಗು ಸೇತುವೆಯಲ್ಲಿ ನಿತ್ಯ ಸರ್ಕಸ್ ಮಾಡುವ ಗೋಳು ಮಾತ್ರ ತಪ್ಪಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.
ಗುಳ್ಯಾ ಗ್ರಾಮಕ್ಕೆ ಯಾವ ಸವಲತ್ತು ನೀಡದಿದ್ದರೂ ಪರವಾಗಿಲ್ಲ. ನಮ್ಮ ಗ್ರಾಮದ ಸಂಪರ್ಕಕ್ಕೆ ಒಂದೇ ಒಂದು ಸುಸಜ್ಜಿತ ಸೇತುವೆ ನಿರ್ಮಿಸಿಕೊಟ್ಟರೆ ಸಾಕು. ಈ ಸೌಲಭ್ಯಕ್ಕಾಗಿ ನಾವು ಅರ್ಜಿ ನೀಡದ ಕಚೇರಿಗಳೇ ಇಲ್ಲ. ಸೇತುವೆ ಕಲ್ಪಿಸುವ ಭರವಸೆ ಸಿಗುತ್ತಿದೆಯೇ ಹೊರತು ಸೌಲಭ್ಯ ಸಿಗುತ್ತಿಲ್ಲ. ಸೇತುವೆ ಇಲ್ಲದಿರುವದರಿಂದ ಮಳೆಗಾಲದಲ್ಲಿ ಗ್ರಾಮ ತಲುಪಲು ರಸ್ತೆಗೆ ಅಡ್ಡವಾಗಿರುವ ನದಿ ದಾಟಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆ ಇರುತ್ತದೆ. ಆಗ ನಡೆದುಕೊಂಡು ನದಿ ದಾಟಬಹುದು. ಮಳೆಗಾಲದಲ್ಲಿ ಈ ನದಿ ತುಂಬಿ ಹರಿಯುತ್ತದೆ. ಈ ವೇಳೆಯಲ್ಲಿ ನಾವೇ ನಿರ್ಮಿಸಿಕೊಂಡ ಬೆತ್ತದ ಸೇತುವೆಯಲ್ಲಿ ಕಷ್ಟಪಟ್ಟು ನದಿ ದಾಟುತ್ತೇವೆ. ಈ ಸೇತುವೆಗೆ ಬಳಸುವ ಹಗ್ಗ ಗಟ್ಟಿ ಇರುವುದಿಲ್ಲ. ತುಂಡಾದರೆ ನಿವಾಸಿಗಳು ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಾರೆ. ಈ ಹಿಂದೆ ಇಬ್ಬರು ಗ್ರಾಮಸ್ಥರು ನದಿಗೆ ಬಿದ್ದಿದ್ದಾರೆ. ಈಜು ಬಲ್ಲವರಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಕಾರ ನಕ್ಸಲ್ ಪೀಡಿತ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಕೋಟ್ಯಾಂತರ ರೂ. ಅನುದಾನ ನೀಡುತ್ತಿದೆಯಂತೆ, ಈ ಹಣ ಎಲ್ಲಿ ಹೋಗುತ್ತಿದೆಯೋ ಗೊತ್ತಿಲ್ಲ. ನಮ್ಮ ದಶಕಗಳ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ.
- ವಾಸುದೇವ್, ಗುಳ್ಯಾ ಗ್ರಾಮದ ನಿವಾಸಿ