ಸಂಜೀವ್ ಭಟ್ ಬಿಡುಗಡೆಗೆ ಒಕ್ಕೊರಲ ಒತ್ತಾಯ
ಹೊಸದಿಲ್ಲಿ, ಜು.8: ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಿಡುಗಡೆಗೆ ಆಗ್ರಹಿಸಿ ದೇಶದಿಂದ ಒಕ್ಕೊರಲ ಆಗ್ರಹ ಕೇಳಿಬಂದಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಒಕ್ಕೂಟ ಕೂಡಾ ದಿಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದೆ.
"ಇದು ತ್ವರಿತಗತಿ ಅನ್ಯಾಯದ ಪ್ರಕರಣ" ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಭಟ್ ಪತ್ನಿ ಶ್ವೇತಾ ಭಟ್ ದೂರಿದರು.
"2002ರ ಗುಜರಾತ್ ಹತ್ಯಾಕಾಂಡದ ಸಂಚುಕೋರರ ವಿರುದ್ಧ ಅವರು ನಾನಾವತಿ ಆಯೋಗದ ಮುಂದೆ ಸತ್ಯವನ್ನು ಮಾತನಾಡಿದರು. ಈ ಏಕೈಕ ಕಾರಣದಿಂದ ಮೋದಿ ಆಡಳಿತ ಅವರನ್ನು ಗುರಿ ಮಾಡಿದೆ" ಎಂದು ಶ್ವೇತಾ ಗಂಭೀರ ಆರೋಪ ಮಾಡಿದರು.
"ಸಂಜೀವ್ ಮತ್ತೆ ಮನೆಗೆ ಬರಬೇಕು. ಭಿನ್ನ ಧ್ವನಿಯನ್ನು ದಮನಿಸಲು ಅವರು ರಾಜಕೀಯ ಅಧಿಕಾರ ಹೊಂದಿದ್ದಾರೆ. ನ್ಯಾಯ ಪಡೆಯಲು ಜನಶಕ್ತಿಯನ್ನು ನಾವು ಬಯಸಿದ್ದೇವೆ. ಇದು ಕೇವಲ ಸಂಜೀವ್ ಕುಟುಂಬದ ವಿಷಯವಲ್ಲ. ಇದು ಎಲ್ಲರದ್ದು; ಇಂದು ಸಂಜೀವ್; ನಾಳೆ ನಿಮ್ಮಲ್ಲೂ ಯಾರಾದರೂ ಆಗಬಹುದು. ಬೀದಿಗೆ ಬನ್ನಿ, ನ್ಯಾಯಕ್ಕಾಗಿ ಧ್ವನಿ ಎತ್ತಿ" ಎಂದು ಅವರು ದೇಶಕ್ಕೆ ಕರೆ ನೀಡಿದ್ದಾರೆ.
ಬಾಬು ಬಜರಂಗಿ, ಮಾಯಾ ಕೊಂಡಾನಿಯವರಂಥ ಗಣ್ಯ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಆದರೆ ದೇಶಕ್ಕಾಗಿ ಸೇವೆ ಮಾಡಿದ ನನ್ನ ತಂದೆಗೆ ಯಾಕಿಲ್ಲ? ಎಲ್ಲ ಹಂತಗಳಲ್ಲೂ ಉದ್ದೇಶಪೂರ್ವಕ ಅನ್ಯಾಯವಾಗುವುದಾದರೆ ನಾವೆಲ್ಲಿ ಹೋಗಬೇಕು? ಆದ್ದರಿಂದ ನಾವು ಜನರ ಬಳಿ ಬಂದಿದ್ದೇವೆ. ಮಾಧ್ಯಮದ ಬಳಿ ಬಂದಿದ್ದೇವೆ. ನ್ಯಾಯ ವಿತರಣಾ ವ್ಯವಸ್ಥೆಯಿಂದ ನಮಗೆ ಯಾವುದೇ ಫೇವರ್ ಆಗಬೇಕಿಲ್ಲ; ನಮಗೆ ನ್ಯಾಯ ಸಮ್ಮತ ರೀತಿಯಲ್ಲಿ ನ್ಯಾಯ ಸಿಕ್ಕಿದರೆ ಸಾಕು" ಎಂದು ಮಗ ಶಂತನು ಹೇಳಿದರು.
"ಸಂಜೀವ್‌ಗೆ ಶಿಕ್ಷೆ ವಿಧಿಸಲು ಸಣ್ಣ ಪುರಾವೆ ಕೂಡಾ ಇಲ್ಲ. ಪ್ರಕರಣವನ್ನು ಬೇಕಾಬಿಟ್ಟಿ, ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಹಾಗೂ ಪಕ್ಷಪಾತರಹಿತವಾಗಿ ನಿರ್ವಹಿಸಿಲ್ಲ" ಎಂದು ಎನ್‌ಸಿಎಚ್‌ಆರ್‌ಓ ಉಪಾಧ್ಯಕ್ಷ ಕೆ.ಪಿ.ಮುಹಮ್ಮದ್ ಶರೀಫ್ ಹೇಳಿದ್ದಾರೆ.
ಶ್ರೀನಗರ ಆಸಿಫಾ ಪ್ರಕರಣದ ವಕೀಲರಾದ ದೀಪಿಕಾ ಎಸ್. ರಾಜಾವತ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಹೀದ್ ಸೇಟ್, ದಿಲ್ಲಿ ವಿವಿಯ ನಂದಿತಾ ನಾರಾಯಣ್ ಸುದ್ದಿಗೋಷ್ಠಿಯಲ್ಲಿದ್ದರು.
ಇದಕ್ಕೂ ಮುನ್ನ ಎನ್‌ಸಿಎಚ್‌ಆರ್‌ಓ ವತಿಯಿಂದ ಹೋರಾಟಗಾರರ ಸಮಾವೇಶ ನಡೆಯಿತು.