ಸಂವಿಧಾನ-ಮನುಸ್ಮತಿಯ ಮುಖಾಮುಖಿ
ಈ ಹೊತ್ತಿನ ಹೊತ್ತಿಗೆ
‘ಪ್ರಸ್ತುತ-ಅಪ್ರಸ್ತುತ’ ಗಂಗಾರಾಂ ಚಂಡಾಳ ಅವರು ಬರೆದಿರುವ ‘ಸಂವಿಧಾನ ಮತ್ತು ಮನುಸ್ಮತಿ ತೌಲನಿಕ ಅಧ್ಯಯನ’ ಕೃತಿಯಾಗಿದೆ. ಇಲ್ಲಿ ಯಾವುದು ಪ್ರಸ್ತುತ ಮತ್ತು ಯಾವುದು ಅಪ್ರಸ್ತುತ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸ ಬೇಕಾಗಿಲ್ಲ. ಆದರೆ ದೇಶದ ಅತಿ ದೊಡ್ಡ ದುರಂತವೆಂದರೆ, ಸಂವಿಧಾನದ ಪ್ರಸ್ತುತತೆಯನ್ನು ಮರೆಮಾಜಿ ಮನುಸ್ಮತಿಯೇ ವರ್ತಮಾನದ ಪ್ರಸ್ತುತತೆ ಎಂದು ಬಿಂಬಿಸುವ ಭಾರೀ ಸಂಚೊಂದು ನಡೆಯುತ್ತಿದೆ. ಈ ಸಂಚಿಗೆ ಉತ್ತರವಾಗಿ ಈ ತೌಲನಿಕ ಅಧ್ಯಯನವನ್ನು ಲೇಖಕರು ನಡೆಸಿದ್ದಾರೆ. ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸಹಾಯದೊಂದಿಗೆ ಈ ಕೃತಿ ಹೊರಬಂದಿದೆ.
ಈ ಕೃತಿಯಲ್ಲಿ ಒಟ್ಟು 12 ಅಧ್ಯಾಯಗಳಿವೆ. ಭಾರತದ ರಾಜಕೀಯ ಸಂಘರ್ಷಗಳು ಸದಾ ಮನುಸ್ಮತಿಗೆ ಮುಖಾಮುಖಿಯಾಗಿ ನಡೆದಿದೆ. ಬ್ರಿಟಿಷರು ಬರುವ ಮೊದಲೂ ಈ ನೆಲದಲ್ಲಿ ಒಂದು ಸಂವಿಧಾನವಿತ್ತು ಮತ್ತು ಆ ಸಂವಿಧಾನ ಈ ದೇಶದ ಶೂದ್ರರು ಮತ್ತು ದಲಿತರನ್ನು ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿತ್ತು. ಅವರು ಶಿಕ್ಷಣದ ಹಕ್ಕು, ಭೂಮಿಯ ಹಕ್ಕು, ಕುಡಿಯುವ ನೀರಿನ ಹಕ್ಕು ಸೇರಿದಂತೆ ಹಲವು ಮೂಲಭೂತ ಹಕ್ಕುಗಳೇ ಇಲ್ಲದೆ ಈ ನೆಲದ ಜನರಿಂದಲೇ ಶೋಷಣೆಗೊಳಗಾಗುತ್ತಾ ಬರುತ್ತಿದ್ದರು. ಬ್ರಿಟಿಷರ ಆಗಮನದ ಬಳಿಕವೇ ದಲಿತರಿಗೆ ಶಿಕ್ಷಣದ ಹಕ್ಕು ದೊರಕಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಿದರೆ, ಈ ದೇಶದ ಮೇಲ್ಜಾತಿಗಷ್ಟೇ ಸ್ವಾತಂತ್ರ ದೊರಕುತ್ತದೆ, ಕೆಳಜಾತಿಯವರಿಗೆ ಅಲ್ಲ ಎನ್ನುವುದನ್ನು ಅಂಬೇಡ್ಕರ್ ಮನಗಂಡಿದ್ದರು. ಆದುದರಿಂದಲೇ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ಈ ದೇಶದೊಳಗೆ ತಲೆ ತಲಾಂತರಗಳಿಂದ ಇರುವ ಗುಲಾಮಗಿರಿಯ ವಿರುದ್ಧ ಧ್ವನಿಯೆತ್ತಿದ್ದರು. ಅಂದರೆ ಅವರು ಮನುಸ್ಮತಿಯ ವಿರುದ್ಧ ಹೋರಾಟ ನಡೆಸಿದರು. ಮನುಸ್ಮತಿಯ ಸಿದ್ಧಾಂತ ಅಳಿಯದೆ ಶೂದ್ರರು ಮತ್ತು ದಲಿತರು ಈ ನೆಲದಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ ಎನ್ನುವ ವಾಸ್ತವ ವನ್ನು ಅಂಬೇಡ್ಕರ್ ಮನಗಂಡಿದ್ದರು. ಸ್ವಾತಂತ್ರಾನಂತರ ಅಂಬೇಡ್ಕರ್ ಮನುಸ್ಮತಿ ಗೆ ಪ್ರತಿಯಾಗಿ ಸಂವಿಧಾನವನ್ನು ಬರೆದರು. ಇಂದು ಶೂದ್ರರು ಮತ್ತು ದಲಿತರು ಒಂದಿಷ್ಟು ನಿರಾಳವಾಗಿ ಬದುಕುತ್ತಿರುವುದು ಈ ಸಂವಿಧಾನದ ಕಾರಣದಿಂದ. ಇದೇ ಸಂದರ್ಭದಲ್ಲಿ ಮನುಸ್ಮತಿ ಮತ್ತೆ ಬೇರೆ ಬೇರೆ ರೂಪದಲ್ಲಿ ಜನಜೀವನದೊಳಗೆ ಕಾಲಿಡಲು ಹವಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನಕ್ಕಿಂತ ಮನುಸ್ಮತಿ ಹೇಗೆ ಭಿನ್ನ ಎನ್ನು ವುದನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಹೆಚ್ಚು ನಡೆಯಬೇಕು. ಆ ಪ್ರಯತ್ನದ ಭಾಗವಾಗಿದೆ ಚಂಡಾಳರ ‘ಪ್ರಸ್ತುತ-ಅಪ್ರಸ್ತುತ’.
ಈ ಕೃತಿ ಸಂವಿಧಾನದ ಹಿರಿಮೆ ಯನ್ನು ಎತ್ತಿ ಹಿಡಿಯುವುದು, ಮನುಸ್ಮತಿಯೊಳಗಿರುವ ಜೀವವಿರೋಧಿ ನಿಲುವುಗಳನ್ನು ಬಯಲುಗೊಳಿಸುತ್ತದೆ. ಆದುದ ರಿಂದಲೇ ಇಲ್ಲಿ ಸಂವಿಧಾನದ ಕುರಿತಂತೆ ವಿವರಗಳಿಂತ ಹೆಚ್ಚಾಗಿ ಮನುಸ್ಮತಿ ಕೆಳಜಾತಿ ಮತ್ತು ದಲಿತರ ಕುರಿತಂತೆ ಏನನ್ನು ಹೇಳುತ್ತದೆ ಎನ್ನುವುದನ್ನು ವಿವರವಾಗಿ ತೆರೆದಿಡುತ್ತದೆ. ಪಂಡಿತ ಚಕ್ರಕೋಡಿ ಈಶ್ವರ ಶಾಸ್ತ್ರೀ ವಿದ್ವಾನ್ ಅವರು ಸಂಗ್ರಹಿಸಿರುವ ಮನುಸ್ಮತಿಯನ್ನು ಆಕರವಾಗಿಟ್ಟುಕೊಂಡು ಲೇಖಕರು ಆ ಸಿದ್ಧಾಂತದ ಅಪ್ರಸ್ತುತತೆಯನ್ನು ಬಹಿರಂಗಪಡಿಸುತ್ತಾರೆ. ಶೂದ್ರರು ಮತ್ತು ದಲಿತರು ಭಿಕ್ಷೆ ಬೇಡುವುದನ್ನು ಕೂಡ ನಿರಾಕರಿಸುವ ಮನುಸ್ಮತಿಯ ಭೀಕರತೆಯನ್ನು ಈ ಕೃತಿ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ತಳಸ್ತರದ ಯುವ ತಲೆಮಾರು ಅವಶ್ಯವಾಗಿ ಓದಬೇಕಾದ ಕೃತಿ ಇದು.
ಬೆಳಕು ಸಮಾಜ ಪ್ರಕಾಶನ ಮಂಡ್ಯ ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 250 ರೂ. ಮುಖಬೆಲೆ 200 ರೂ. ಆಸಕ್ತರು 94487 53437 ದೂರವಾಣಿಯನ್ನು ಸಂಪರ್ಕಿಸಬಹುದು.