6 ಸಾವಿರ ರೂ.ಗೆ ಗುಣಮಟ್ಟದ ಮರಳು: ಸ್ಯಾಂಡ್ ಬಝಾರ್ ಮೂಲಕ ಮರಳು ವಿತರಣೆ ಆರಂಭ
ಮಧ್ಯವರ್ತಿಗಳಿಲ್ಲದೆ ಮನೆ ಬಾಗಿಲಿಗೆ ಮರಳು
ಬಂಟ್ವಾಳ, ಜು.10: ಡ್ರೆಜ್ಜಿಂಗ್ ಮೂಲಕ ತುಂಬೆ ಡ್ಯಾಂ ಸಮೀಪದ ನೇತ್ರಾವತಿ ನದಿಯಿಂದ ಮೇಲೆತ್ತಲ್ಪಟ್ಟ ಮರಳನ್ನು ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಣಾ ಕಾರ್ಯ ಆರಂಭಗೊಂಡಿದೆ. ಇದೀಗ ತುಂಬೆ ಸಮೀಪದ ತಲಪಾಡಿ ಪ್ರದೇಶವು ಸ್ಯಾಂಡ್ ಬಝಾರ್ ಆಗಿ ಮಾರ್ಪಟ್ಟಿದೆ.
ಜಿಲ್ಲಾಧಿಕಾರಿಯ ಅನುಮತಿಯ ಬಳಿಕ ತುಂಬೆ ವೆಂಟೆಡ್ ಡ್ಯಾಂನಿಂದ ಸುಮಾರು 500 ಮೀ. ದೂರದಲ್ಲಿ ತಲಪಾಡಿ ಬಳಿ ನದಿಯಿಂದ ಡ್ರೆಜ್ಜಿಂಗ್ ಮೂಲಕ ಹೂಳೆತ್ತುವ ಕಾರ್ಯಾರಂಭಗೊಂಡಿದೆ. ಇಲ್ಲಿಂದ ಮೇಲೆತ್ತಲ್ಪಟ್ಟ ಮರಳನ್ನು ಪಕ್ಕದ ವಿಶಾಲವಾದ 2 ಯಾರ್ಡ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಬಳಿಕ ಅದನ್ನು ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ.
ದಿಲ್ಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು, ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳ ಕಂಪೆನಿಯೊಂದು ಇದರ ನೇತೃತ್ವದಲ್ಲಿ ವಹಿಸಿದೆ. ಸಾಕಷ್ಟು ಪ್ರಮಾಣದಲ್ಲಿ ಮರಳು ದೊರೆಯುತ್ತಿರುವುದರಿಂದ ಸಿಸಿಟಿವಿಯ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯವರ್ತಿಗಳಿಲ್ಲದೆ ಮನೆ ಬಾಗಿಲಿಗೆ ಮರಳು: ಮಿತ ದರದಲ್ಲಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮನೆ ಬಾಗಿಲಿಗೆ ಮರಳು ತಲುಪಿಸುವ ಕಾರ್ಯ ಸ್ಯಾಂಡ್ ಬಝಾರ್ ಆ್ಯಪ್ ಮಾಡಲಿದೆ. ಆ್ಯಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದೆ. ಆನ್‌ಲೈನ್‌ನಲ್ಲಿ ಮರಳಿಗೆ ಸಂಬಂಧಪಟ್ಟ ದರ ವೀಕ್ಷಿಸಿ ಆನ್‌ಲೈನ್ ಪಾವತಿ ಮಾಡಿದಲ್ಲಿ ಮನೆ ಬಾಗಿಲಿಗೆ ಮರಳು ತಲುಪಲಿದ್ದು, ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ, ತಾವು ಮರಳು ಬುಕ್ ಮಾಡಿದ ಬಳಿಕ ಮರಳು ಲೋಡ್ ಆದ ಬಗ್ಗೆ ಯಾವ ವಾಹನದಲ್ಲಿ ಬರುತ್ತಿದೆ ಎನ್ನುವ ಬಗ್ಗೆ ಪ್ರತಿಯೊಂದು ಸಂದೇಶವು ಮೊಬೈಲ್ ಫೋನ್‌ಮೂಲಕ ಬರಲಿದೆ.
ಯಾರ್ಡ್ ಭದ್ರತೆಗೆ ಸಿಸಿಟಿವಿ ಕಣ್ಗಾವಲು
ಯಾರ್ಡ್ ಒಳಗಿನ ಭದ್ರತೆ ಹಾಗೂ ಲಾರಿಗಳಲ್ಲಿ ಸಾಗಾಟವಾದ ಮರಳಿನ ಲೆಕ್ಕಾಚಾರವನ್ನು ನೋಡಿಕೊಳ್ಳಲು ಸಿಸಿಟಿವಿ ಅಳವಡಿಸಲಾಗಿದೆ.
ಮರಳು ಕಾದಿರಿಸುವುದು ಹೇಗೆ?
ಮರಳು ಬೇಕಾದ ಗ್ರಾಹಕರು ಮೊಬೈಲ್‌ನಲ್ಲಿ ಸ್ಯಾಂಡ್ ಬಝಾರ್ ಆ್ಯಪ್ ಡೌನ್‌ಲೋಡ್ ಮಾಡಬೇಕು. ಬಳಿಕ ಗ್ರಾಹಕರ ಮೊಬೈಲ್ ಸಂಖ್ಯೆ, ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು ಎಂಬ ವಿವರ ನಮೂದಿಸಬೇಕು. ಗ್ರಾಹಕನ ಆಧಾರ್ ನಂಬರ್ ನಮೂದಿಸಿ ಹತ್ತಿರವಿರುವ ಮರಳು ದಕ್ಕೆ ಸ್ಥಳವನ್ನು ಟೈಪ್ ಮಾಡಿ ಕಳುಹಿಸಬೇಕು. ಈ ಸಂದರ್ಭ ಒಟಿಪಿ ಸಂಖ್ಯೆ ಬರಲಿದ್ದು, ಆ್ಯಪ್ ಮುಖೇನ ಮರಳು ಸಾಗಾಟದ ದರ ಸಂದೇಶ ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‌ಬ್ಯಾಂಕಿಂಗ್ ಮುಖೇನ ಸಂದಾಯ ಮಾಡಬೇಕು.
ಹಣ ಸಂದಾಯವಾದ ಕೂಡಲೇ ಮೊಬೈಲ್ ಸಂದೇಶ ಬರಲಿದ್ದು, ಅದನ್ನು ಸಂಬಂಧಪಟ್ಟ ಮರಳು ದಕ್ಕೆಯ ಗಮನಕ್ಕೆ ತರಬೇಕು. ಜೊತೆಗೆ ದಕ್ಕೆಗೆ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ.
ಏನಿದು ‘ಸ್ಯಾಂಡ್ ಬಝಾರ್ ಆ್ಯಪ್’?
ಶೋರ್ ಟು ಎವಿರಿ ಡೋರ್ (ನದಿ ದಡದಿಂದ ಮನೆಬಾಗಿಲಿಗೆ) ಎಂಬ ಸ್ಲೋಗನ್‌ನಲ್ಲಿ ‘ಸ್ಯಾಂಡ್ ಬಝಾರ್ ಆ್ಯಪ್’ ತಯಾರಿಸಲಾಗಿದ್ದು, ಮರಳು ಸಾಗಾಟ ಸುಲಭವಾಗಿ ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಜಿಲ್ಲಾಡಳಿತ ಮರಳಿಗೆ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಇದರ ನಿರ್ವಹಣೆಯನ್ನು ಭೂವಿಜ್ಞಾನ ಮತ್ತು ಗಣಿ ಇಲಾಖೆ ಮಾಡಲಿದೆ.
ಮರಳು ಬುಕಿಂಗ್ ನೋಂದಣಿಯಿಂದ ಹಿಡಿದು ಹಣಪಾವತಿ, ಮರಳು ಬುಕಿಂಗ್, ವಾಹನ ಬುಕಿಂಗ್, ಮರಳು ಲಾರಿ ಸಾಗಾಟವಾಗುವ ಟ್ರಾಕಿಂಗ್ ಸ್ಟೇಟಸ್ ಹಂತಹಂತವಾಗಿ ಸ್ಯಾಂಡ್ ಬಝಾರ್ ಆ್ಯಪ್‌ನಲ್ಲಿ ದೊರೆಯಲಿದ್ದು, ಇದು ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ. ಜೊತೆಗೆ, ಬುಕಿಂಗ್ ಮಾಹಿತಿ, ಗ್ರಾಹಕರ ಮಾಹಿತಿ, ‘ಗೂಗಲ್ ಮ್ಯಾಪ್ ವಿವ್’ ಮುಖೇನ ಮರಳು ದಕ್ಕೆಯ ವಿವರವೂ ಸಿಗಲಿದೆ ಎಂದು ಆ್ಯಪ್ ಡೆವಲಪ್‌ನ ಇಂಜಿನಿಯರ್ ನವೀನ್ ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲೆಯ ಮರಳುಗಾರಿಕೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸುಲಭ ನಿರ್ವಹಣೆಗೆ ಸ್ಯಾಂಡ್ ಬಝಾರ್ ಆ್ಯಪ್ ತಯಾರಿಸಲಾಗಿದೆ. ಯಾವುದೇ ಪ್ರಚಾರ ಮಾಡದೇ ‘ಸ್ಯಾಂಡ್ ಬಝಾರ್’ ಆ್ಯಪ್‌ನ್ನು ಪ್ರಾಯೋಗಿಕವಾಗಿ ಲೋಕಾರ್ಪಣೆ ಮಾಡಲಾಗಿದೆ. ಲೀಜ್‌ದಾರರು, ಟ್ರಾನ್ಸ್‌ಪೋರ್ಟ್ ಹಾಗೂ ನಾಗರಿಕರು ಹೀಗೆ ಮೂರು ವಿಭಾಗದಲ್ಲಿ ಆ್ಯಪ್ ಕಾರ್ಯ ನಿರ್ವಹಿಸಲಿದೆ. ತನ್ನ ಅಧೀನದಲ್ಲಿರುವ ಭೂವಿಜ್ಞಾನ ಮತ್ತು ಗಣಿ ಇಲಾಖೆಯು ಇದರ ನಿರ್ವಹಣೆ ಮಾಡುತ್ತಿದೆ. ನಾಗರಿಕರು ಎಲ್ಲಿಂದ ಬೇಕಾದರೂ ಆರ್ಡರ್ ಮಾಡಿದರೂ ಅವರ ಮನೆಬಾಗಿಲಿಗೆ ಮರಳು ಬಂದು ಬೀಳುತ್ತದೆ. ಒಂದು ಟನ್ ಮರಳಿಗೆ 480 ರೂ. ಬೆಲೆ ನಿಗದಿಪಡಿಸಲಾಗಿದೆ. 10 ಟನ್‌ಗೆ 4 ಸಾವಿರ ರೂ. ಮತ್ತು ಸಾಗಾಟ ವೆಚ್ಚ 2 ಸಾವಿರ ರೂ. ಸೇರಿ ಒಟ್ಟು 6 ಸಾವಿರ ರೂ. ವೆಚ್ಚದಲ್ಲಿ ಮರಳು ಸಿಗಲಿದೆ. ಬುಕಿಂಗ್‌ನಿಂದ ನೆಟ್ ಬ್ಯಾಂಕಿಂಗ್ ಎಲ್ಲವೂ ಆನ್‌ಲೈನ್ ಮೂಲಕ ಪಾರದರ್ಶಕತೆಯಿಂದ ನಡೆಯುತ್ತವೆ. ಇದೀಗ ತಲಪಾಡಿ ದಕ್ಕೆಯಲ್ಲಿ ಮಾತ್ರ ಮರಳು ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇತರ ಕಡೆಗಳಲ್ಲಿ ಆರಂಭಿಸಲಾಗುವುದು.
-ಶಶಿಕಾಂತ್ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ
ಹೆಚ್ಚಿನ ಮಾಹಿತಿಗಾಗಿ : http://www.dksandbazaar.com