ಅವಳು ಕಾಯುವ ಶಬರಿ...!
ಕಥಾ ಸಂಗಮ
ಎರಡು ದಿನಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ಅವಿಭಕ್ತ ಕುಟುಂಬದಿಂದ ವಿಭಕ್ತಳಾಗಿ ಸಣ್ಣದೊಂದು ಮನೆಯಲ್ಲಿ ಬಿಡಾರ ಹೂಡಿದಾಗಿನಿಂದ ನಾನು ಅತ್ತ ಕಡೆ ಹೋಗಿಲ್ಲವೆಂದು ಅಮ್ಮ ಕರೆಮಾಡಿದಾಗಲೆಲ್ಲಾ ಗೊಣಗುತ್ತಿದ್ದಳು. ಅವಳು ಬಾಲ್ಯದಲ್ಲಿ ನಮ್ಮನ್ನು ಅಮ್ಮನಂತೆ ನೋಡಿಕೊಂಡವಳು. ಇದ್ದ ಎರಡೇ ಸಮವಸ್ತ್ರವನ್ನು ಚಂದಗೆ ಒಗೆದು ಇಸ್ತ್ರಿಪೆಟ್ಟಿಗೆ ಇಲ್ಲದಿದ್ದರಿಂದ ಅದನ್ನು ಹಿಂಡದೆ ಆರಲು ಹಾಕಿ ಬಿಡುತ್ತಿದ್ದಳು. ಆಗಾಗ ಕಳಚುತ್ತಿದ್ದ ಅಂಗಿಗುಂಡಿಯನ್ನು ಹೊಲಿದು ಕೊಡುವುದು. ಶಾಲೆಗೆ ಹೊರಟ ನಂತರ ಕಾಲಿನಲ್ಲಿದ್ದ ಚಪ್ಪಲಿಯ ಅವತಾರ ಕಂಡು ಗಡಿಬಿಡಿಯಿಂದ ತೊಳೆದು ಹಳೆಯ ಬಟ್ಟೆಯೊಂದರಲ್ಲಿ ಒರೆಸಿ ಇಡುತ್ತಿದ್ದಳು. ಶಾಲೆಗೆ ಹೋಗುವ ಎಲ್ಲಾ ಮಕ್ಕಳಂತೆ ನಾವೂ ಅಚ್ಚುಕಟ್ಟಾಗಿ ಹೋಗಬೇಕೆಂದು ಹೇಳುತ್ತಿದ್ದಾಗಲೆಲ್ಲಾ ಏಳನೇ ತರಗತಿಗೆ ಶಾಲೆ ಖೈದು ಮಾಡಬೇಕಾಗಿ ಬಂದ ನೋವು ಅವಳ ಮಾತುಗಳಲ್ಲಿ ಎದ್ದು ಕಾಣುತಲಿತ್ತು. ನಿಮ್ಮ ಮಗಳನ್ನು ಶಾಲೆಗೆ ಕಳುಹಿಸಿ, ಚೆನ್ನಾಗಿ ಓದುತ್ತಾಳೆ. ಅವಳಿಗೆ ಪುಸ್ತಕ ನಾನು ಕೊಡಿಸುತ್ತೇನೆಂದು ಜಗನ್ನಾಥ್ ಸರ್ ಹೇಳಿದ್ದು ಹೆಮ್ಮೆಯಿಂದ ನಮ್ಮಲ್ಲಿ ಹೇಳಿಕೊಳ್ಳುತ್ತಿದ್ದಳು. ಈಗಲೂ ಕನ್ನಡ ಮುದ್ದಾಗಿ ಬರೆಯಲು, ಸ್ಫುಟವಾಗಿ ಓದಲು, ಅಕ್ಷರ ತಪ್ಪುಗಳನ್ನು ತಕ್ಷಣ ಗುರುತಿಸಲು ಅವಳು ತೋರುವ ಆಸಕ್ತಿ, ಶ್ರದ್ಧೆ ಡಿಗ್ರಿ ಮುಗಿಸಿದ ನಮ್ಮನ್ನು ಬೆರಗುಗೊಳಿಸುವಂತಹದ್ದು.
ಅಪ್ಪನಿಗೆ ಅಪೆಂಡಿಕ್ಸ್ ಬಂದು ಅಡ್ಮಿಟ್ ಆದ ದಿನಗಳಲ್ಲಿ ಅಮ್ಮ ಆಸ್ಪತ್ರೆಯಲ್ಲೇ ಉಳಿದು ಬಿಡುತ್ತಿದ್ದಳು. ತೀರಾ ಜೀವನಾನುಭವವಿಲ್ಲದ ಅಕ್ಕ ನೆಟ್ಟಗೆ ಕಸಗುಡಿಸಲೂ ಬಾರದ ಆ ದಿನಗಳಲ್ಲಿ ಅಮ್ಮನ ಅನುಪಸ್ಥಿತಿ ಕಾಡದಂತೆ ನಮ್ಮನ್ನು ನೋಡಿಕೊಂಡಳು. ಶಾಲೆಗೆ ಹೊರಡುವ ಮುನ್ನ ನಾಷ್ಟ ಮಾಡಿಕೊಡುವುದೇ ದೊಡ್ಡ ಸಾಹಸವಾಗಿತ್ತು. ಸ್ವಲ್ಪ ತಡವಾದರೆ ಹೆಗಲಿಗೆ ಚೀಲವೇರಿಸಿಕೊಂಡು ಹೊರಡಲಣಿಯಾಗುತ್ತಿದ್ದ ನಮ್ಮನ್ನು ಖಾಲಿ ಹೊಟ್ಟೆಗೆ ಒಮ್ಮೆಯೂ ಕಳಿಸಿಕೊಟ್ಟವಳಲ್ಲ ಅಕ್ಕ. ವಾರಕ್ಕೊಮ್ಮೆ ಬರುತ್ತಿದ್ದ ‘ಮಂಗಳ’ ಓದಲು ಅದು ಬರುವ ಮುಂಚೆಯೇ ಪಕ್ಕದ ಮನೆಯವರಲ್ಲಿ ಬುಕ್ಕಿಂಗ್ ಮಾಡಿಡುತ್ತಿದ್ದಳು. ಎಲ್ಲರೂ ಓದಿ ಅದರ ಮುಖಪುಟ ಹರಿದು ಕೊನೆಗೆ ಕೈ ಸೇರುತ್ತಿದ್ದರೆ ಜವಾಬ್ದಾರಿಯೆಂಬಂತೆ ಒಂದೇ ದಿನದಲ್ಲಿ ಓದಿ ಮುಗಿಸುವಳು. ಚಂದನ ವಾಹಿನಿಯಲ್ಲಿ ಶುಕ್ರವಾರ ಪ್ರಸಾರವಾಗುತ್ತಿದ್ದ ಚಲನಚಿತ್ರ ಗೀತೆಗಳು ಅವಳ ಆ ವಾರದ ಕನಸು. ಅಪ್ಪನ ಕಣ್ಣು ತಪ್ಪಿಸಿ ಸಾಯಂಕಾಲದ ಹೊತ್ತಿಗೆ ಟಿ.ವಿ. ಮುಂದೆ ಪ್ರತ್ಯಕ್ಷಗಳಾಗಿ ಪಾವನವಾಗುತ್ತಿದ್ದಳು. ಮುಂದಿನ ಒಂದು ವಾರ ಆ ಹಾಡುಗಳು ಅವಳ ನಾಲಗೆಯಲ್ಲಿ ಜೋಗುಳವಾಗುತ್ತಿದ್ದವು. ಟೀನೇಜಿನ ಆ ಹೊತ್ತಿಗೆ ‘ಪ್ರೀತಿಸಿದರೆ ಜಗಕೆ ಹೆದರಬಾರದು’ ಎಂಬ ಸಾಲು ಹೆಚ್ಚಾಗಿ ಹಾಡುತ್ತಿದ್ದ ಅಕ್ಕ ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಳಾ? ಗೊತ್ತಿಲ್ಲ!
ಅಕ್ಕನ ಓರಗೆಯವರು ಪ್ರೌಢ ಶಾಲೆಯಲ್ಲಿರುವ ಹೊತ್ತಿಗೆ ಅವಳ ಮಡಿಲಲ್ಲಿ ಸೂಪು ಇದ್ದಿತು. ನಾಣ್ಯಪ್ಪಣ್ಣನ ಬ್ರೆಂಚಿಯಲ್ಲಿ ಬೀಡಿ ಕಟ್ಟುವವರಲ್ಲಿ ಅತೀ ಕಿರಿಯ ವಯಸ್ಸಿನವಳಾದ ಅಕ್ಕನಲ್ಲಿ ಅವರಿಗೆ ವಿಶೇಷ ಅಕ್ಕರೆ. ಎಲ್ಲರಿಗೂ ನೂರು ಬೀಡಿಗೆ ಆರು ರೂಪಾಯಿ ಕೊಡುತ್ತಿದ್ದರೆ ಇವಳಿಗೆ ಮಾತ್ರ ಒಂದು ರೂಪಾಯಿ ಸೇರಿಸಿ ಕೊಡುತ್ತಿದ್ದರು. ಹಾಗೆ ಸೇರಿಸಿಟ್ಟ ಮಜುರಿಯ ಜೊತೆಗೆ ತಮಿಳುನಾಡಿನಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದ ಸುಮತಿ ಅಕ್ಕನ ಮನೆಯಲ್ಲಿ ಪಾವಡ ಹೊಲಿದು ಸಿಗುತ್ತಿದ್ದ ಪುಡಿಗಾಸನ್ನು ಜೋಪಾನವಾಗಿ ತೆಗೆದಿರಿಸಿ ಆಗಾಗ ಎಣಿಸಿಡುತ್ತಿದ್ದಳು. ಏಳನೇ ತರಗತಿಯ ಕೊನೆಯಲ್ಲಿ ಶಾಲೆಯಿಂದ ಹಮ್ಮಿಕೊಂಡ ಪ್ರವಾಸಕ್ಕೆ ಹೊರಡಲು ದುಡ್ಡಿಲ್ಲದೆ ಪೆಚ್ಚುಮೋರೆ ಹಾಕಿ ಕುಳಿತ ನನ್ನ ಕೈಗಳಿಗೆ ಕೂಡಿಟ್ಟ ಕನಸನ್ನು ಹಸ್ತಾಂತರಿಸಿ ‘ಹೋಗಿ ಬಾ’ ಅಂದಿದ್ದಳು. ಅಂದು ಅದವಳ ಕರ್ತವ್ಯವೆಂದೇ ತಿಳಿದಿದ್ದ ನನಗೆ ಈಗ ಎದೆಭಾರವೆನಿಸುತ್ತದೆ.ಅವಳ ಹೊಟ್ಟೆಯಲ್ಲಿ ಹುಟ್ಟಬಾರದಿತ್ತಾ ಅನಿಸುತ್ತದೆ.
ಅಕ್ಕ ಅಂದರೆ ಹೆಚ್ಚು ಕಮ್ಮಿ ಅಮ್ಮ. ಅದೇ ಪ್ರೀತಿ, ಕಾಳಜಿ, ಸಿಟ್ಟು, ಸೆಡವು, ಒಪ್ಪ ಓರಣ ಎಲ್ಲವೂ ಥೇಟ್ ಅಮ್ಮನೇ. ಸ್ವಲ್ಪ ಬೆಳೆದು ದೊಡ್ಡವಳಾದಾಗಲೇ ಅಮ್ಮನ ಸೀರೆ ಸುತ್ತಿ ಕನ್ನಡಿ ಮುಂದೆ ನಿಲ್ಲುತ್ತಿದ್ದಳು. ದಾರಿಯಲ್ಲಿ ಹೋಗುವ ನೀಳ ಜಡೆಯವರನ್ನು ಕಿಟಕಿಯಿಂದ ಕದ್ದು ನೋಡಿ ಜೊಲ್ಲು ಸುರಿಸುತ್ತಿದ್ದಳು. ಇಷ್ಟದ ಹೀರೋಗಳ ಚಿತ್ರ ಕತ್ತರಿಸಿ ಅಂಟಿಸಿಟ್ಟ ಪುಸ್ತಕ ಮದುವೆಯಾಗಿ ಹೋಗುವಾಗ ನಮ್ಮ ಕಣ್ಣಿಗೆ ಸಿಗದಂತೆ ಬಚ್ಚಿಟ್ಟಿದ್ದಳು. ಅವಳು ಮನೆಯಲ್ಲಿರದೆ ಮನೆಯೆಲ್ಲಾ ಖಾಲಿ ಖಾಲಿಯಾಗಿ ನೀರವ ಮೌನ ತುಂಬಿಕೊಂಡಿತ್ತು. ದಿನಾಲೂ ನೀರುಣಿಸುತ್ತಿದ್ದ ಗಿಡಗಳ ಒಂದೊಂದೇ ಎಲೆಗಳು ಒಣಗಿ ಉದುರತೊಡಗಿತ್ತು. ಹೂ ಬಿಡುತ್ತಿದ್ದ ಗಿಡಗಳ ಬುಡಗಳಲ್ಲಿ ರಾಶಿ ರಾಶಿ ಹೂಗಳು ಸುವಾಸನೆಯೇ ಇಲ್ಲದೆ ಬಿದ್ದುಕೊಂಡಿತ್ತು. ನಾವು ಎಚ್ಚರಗೊಳ್ಳುವ ಹೊತ್ತಿಗೆ ಬಿಸಿ ಬಿಸಿ ಚಹಾ ತುಂಬಿಕೊಂಡಿರುತ್ತಿದ್ದ ಥರ್ಮಾಸ್ ನಿರುದ್ಯೋಗಿಯಾದದ್ದೆ ಆಗ. ಅವಳ ಪಾಕ ಕ್ರಾಂತಿಯಿಲ್ಲದೆ ಅಡುಗೆ ಮನೆ ನೀರಸವಾಯಿತು. ‘ಮಂಗಳ’ ವಾರಪತ್ರಿಕೆ ಮನೆಯ ದಾರಿಯನ್ನು ಸಂಪೂರ್ಣ ಮರೆತೇ ಬಿಟ್ಟಿತು. ಮುದ್ದಿಸುವುದಿರಲಿ ಜಗಳವಾಡಲೂ ಸಿಗದ ಅಕ್ಕ ದೂರವಾಗುತ್ತಾ ಹೋದಳು. ಹಬ್ಬದ ಹಿಂದಿನ ರಾತ್ರಿ ಮದರಂಗಿ ಹಚ್ಚಿಸಿಕೊಳ್ಳಲು ಬರುತ್ತಿದ್ದ ಪುಟಾಣಿ ಮಕ್ಕಳು ಈಗ ಮನೆ ಕಡೆ ಬರುವುದನ್ನು ಮರೆತು ಬಿಟ್ಟಿದ್ದಾರೆ. ಬೆಲ್ಟ್, ಬನಿಯಾನ್, ಬ್ಯಾಗ್, ಟೋಪಿ ಏನೇ ಕಣ್ಣಿಗೆ ಬೀಳದಿದ್ದಾಗ ಕರೆದು ಕೇಳಿದರೆ ಕರಾರುವಕ್ಕಾಗಿ ಒಂದೆಡೆ ಇದೆ ಎನ್ನಲು ಮನೆಯಲ್ಲಿ ಇವತ್ತು ಯಾರೂ ಇಲ್ಲ. ಇಸ್ತ್ರಿ ಮಾಡದ ಅಂಗಿ ಹಾಕಿಕೊಂಡರೆ ಜಗಳ ಕಾಯುವ ಅಕ್ಕನದು ನಿಷ್ಕಳಂಕ ಪ್ರೀತಿಯಲ್ಲವೇ!?
ಈಗ ಆ ಪ್ರೀತಿಯೆಲ್ಲಾ ಅವಳಿಬ್ಬರ ಮಕ್ಕಳ ಪಾಲಾಗಿದೆ. ಅವರು ಪುಣ್ಯವಂತರು. ಮುಖ, ಕೈ ಕಾಲು ರೂಪವೆಲ್ಲಾ ಅಕ್ಕನದೇ ಇರುವ ಆ ಮುದ್ದುಗಳ ಸ್ವಭಾವವೂ ಅವಳದೇ ಅಚ್ಚು.ಅವರು ತೊದಲುತ್ತಾ ‘ಟ್ವಿಂಕಲ್ ಟ್ವಿಂಕಲ್’ ಹಾಡಿದರೆ ಇವಳ ಮುಖ ಅರಳುತ್ತದೆ. ತುತ್ತು ತಿನಿಸುವ ವೇಳೆ ಅವರ ಜೊತೆಗೆ ಇವಳ ಬಾಯಿಯೂ ತೆರೆಯಲ್ಪಡುತ್ತದೆ. ನೋಡುಗರ ಕಣ್ಣಿಗೆ ಅದೊಂದು ತಮಾಷೆಯಂತೆ ಕಂಡರೂ ನಿಜವಾದ ಕರುಳ ಬಳ್ಳಿಯ ಸಂಬಂಧವದು. ಆ ಮಕ್ಕಳಿಗೆ ಟಿಫನ್ ತುಂಬಿಕೊಟ್ಟು ಕಳುಹಿಸುವ ಅಕ್ಕ ಅವರು ಸಂಜೆ ಮರಳುವವರೆಗೂ ಕಾಯುವ ಶಬರಿ.
ಅಕ್ಕನಿಗೆ ಅವಳೇ ರೂಪಿಸಿಕೊಂಡಿದ್ದ ಕೆಲವೊಂದು ನಿಯಮಗಳಿರುತ್ತಿತ್ತು. ನೆಲ ಒರೆಸುವ ವೇಳೆ ಪ್ರಾಣಪಕ್ಷಿ ಹಾರಿ ಹೋಗುವುದಿದ್ದರೂ ಒಂದು ತೊಟ್ಟು ನೀರು ಕುಡಿಯಲು ಒದ್ದೆ ನೆಲದಲ್ಲಿ ನಡೆದುಹೋಗಲು ಅನುಮತಿಸದ ಅಕ್ಕ ಹಾಗೊಂದು ವೇಳೆ ನಮ್ಮ ಹೆಜ್ಜೆಗುರುತು ನೆಲದಲ್ಲಿ ಪ್ರತಿಷ್ಠಾಪನೆಗೊಂಡರೆ ಅವಳ ಎದೆಯಲ್ಲಿ ಲಾವರಸ ಉಕ್ಕಿ ಮನೆಯೇ ಸ್ಫೋಟವಾಗುತ್ತಿತ್ತು. ಅವಳಿಗೊಂದು ಬೇರೆಯೇ ಸಾಬೂನು ಇರುತ್ತಿತ್ತು. ಕದ್ದು ಶ್ಯಾಂಪು ಉಪಯೋಗಿಸಿದ್ದು ಗಮನಕ್ಕೆ ಬಂದರೆ ಬೇರೊಂದು ವಿಷಯದಲ್ಲಿ ನಿರಪರಾಧಿಗಳಾದ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸೇಡು ತೀರಿಸಿಕೊಳ್ಳುತ್ತಿದ್ದಳು.ಮನೆಯಲ್ಲಿ ನೆಂಟರು ತುಂಬಿದ್ದರೂ ಅದೇ ತಲೆದಿಂಬು, ಬದಲಾಗದಂತೆ ಬಳಸುತ್ತಿದ್ದ ಹೊದಿಕೆ ಅವಳಿಗಿರುತ್ತಿತ್ತು. ನಾವು ಮುಟ್ಟಿ ನೋಡಲು ಹೆದರುತ್ತಿದ್ದ ಅವಳು ಗೀಚಿದ್ದ ಒಂದಿಷ್ಟು ಪ್ರಾಸಕ್ಕೆ ಜೋತುಬಿದ್ದ ಕವಿತೆ, ಹಳೆಯ ಜುಮುಕಿ, ಕಿತ್ತು ಹೋದ ಸರಗಳ ಮಣಿಗಳ ಸಂಗ್ರಹವಿರುತ್ತಿದ್ದ ಸಣ್ಣ ಸೂಟುಕೇಸು ಆ ದಿನಗಳಲ್ಲಿ ನಮ್ಮ ಕಣ್ಣಿಗೆ ಭೇದಿಸಲಾಗದ ಚಿದಂಬರ ರಹಸ್ಯ.
ಅಕ್ಕನ ಮನೆಯಲ್ಲಿ ಎರಡು ದಿನ ಉಳಿದು, ಆ ಮಕ್ಕಳೊಂದಿಗೆ ಆಟವಾಡಿ, ಸ್ವಯಂ ನಿರ್ಮಿತ ಒಂದಿಷ್ಟು ಜಾದುಗಳನ್ನು ತೋರಿಸಿ, ಅವರ ಆಗ್ರಹದಂತೆಯೇ ಬೇಕಾಬಿಟ್ಟಿ ಸೆಲ್ಫಿ ಕ್ಲಿಕ್ಕಿಸಿ, ಅಮ್ಮನ ಕುತ್ತಿಗೆ ಹಿಸುಕಿದಂತೆ ನಾಟಕವಾಡಿ ಆ ಮಕ್ಕಳನ್ನು ಗಾಬರಿಗೊಳಿಸಿ, ಅವರ ವಿದೇಶದಲ್ಲಿರುವ ತಂದೆಯನ್ನು ಸುಳ್ಳನೆಂದು ಕರೆದು ರೊಚ್ಚಿಗೆಬ್ಬಿಸಿ, ಕೆಲವೊಂದು ಪ್ರೇತದ ಕಥೆಗಳನ್ನು ಹೇಳಿ ಮಲಗಿಸಿ, ಕೈಯಲ್ಲಿದ್ದ ವಾಚೊಂದನ್ನು ನನಗೆ ಕೊಡಬೇಕೆಂದು ಹಠಹಿಡಿದು ಗಲಿಬಿಲಿಗೊಳಿಸಿ, ಕೆರಳಿಸಿ, ನಗಿಸಿ, ಅಳಿಸಿ, ಓಡಿಸಿ, ಕಾಡಿಸಿ, ಹೆದರಿಸಿ, ಮುದ್ದಿಸಿ, ಇತ್ಯಾದಿ ಇತ್ಯಾದಿಗಳೆಲ್ಲವೂ ಮುಗಿದು ಬಸ್ಸು ಹತ್ತಿ ಕುಳಿತವನ ಮನಸ್ಸು ಅಕ್ಕನ ಬಾಲ್ಯ ಮತ್ತವಳ ಮಕ್ಕಳ ಬಾಲ್ಯಗಳೆರಡನ್ನು ತಾಳೆ ಹಾಕುತಲಿತ್ತು. ಕಿಟಕಿಯ ಹೊರ ಪ್ರಪಂಚ ಹಸಿರು ಹಸಿರಾಗಿ ಚಂದಗೆ ಕಂಡಿತು.ಮನೆಗೆ ತಲುಪುವ ಹೊತ್ತಿಗಾಗಲೇ ಮೂರು ಬಾರಿ ಕರೆಮಾಡಿ ‘ಎಲ್ಲಿದ್ದೀಯಾ? ಮನೆಗೆ ತಲುಪಿದ್ದೀಯಾ?’ ಎಂದು ಕೇಳಿದ್ದಳು ಅಕ್ಕ. ನಾನು ಓದಿ ಮುಗಿಸಬೇಕೆಂಬ ದೃಢ ನಿರ್ಧಾರದೊಂದಿಗೆ ಕೊಂಡೊಯ್ದ ತೇಜಸ್ವಿಯ ‘ಅಣ್ಣನ ನೆನಪು’ ಪುಸ್ತಕದ ಮುನ್ನುಡಿ ಮಾತ್ರ ಓದಿಯಾಗಿತ್ತು. ಮತ್ತು ಅದನ್ನು ಅಲ್ಲೇ ಮರೆತು ಬಂದಿದ್ದೆ.