ಇದು ಸಲ್ಲದು
ರಾಜ್ಯದಲ್ಲಿ 1965ರಿಂದ ಗ್ರಂಥಾಲಯ ಸಂಸ್ಕೃತಿ ಬೆಳೆದು ಬಂದಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಏಳು ಸಾವಿರ ಗ್ರಂಥಾಲಯಗಳಿವೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ಈ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು ಸ್ಥಳೀಯ ಸಂಸ್ಥೆಗಳು ಮನೆ ಕಂದಾಯದೊಂದಿಗೆ ವಸೂಲಿಮಾಡುವ ಶೇ. 6 ಗ್ರಂಥಾಲಯ ಕರವನ್ನು ಇವುಗಳಿಗೆ ನೀಡಬೇಕೆಂಬುದು ನಿಯಮ. ಈ ನಿಯಮವನ್ನು ಪೂರ್ತಿಯಾಗಿ ಪಾಲಿಸುತ್ತಿಲ್ಲ. ಬಹುತೇಕ ಸ್ಥಳೀಯ ಸಂಸ್ಥೆಗಳು ವಸೂಲಿಮಾಡಿದ ಕರದಲ್ಲಿ ಅಲ್ಪಸ್ವಲ್ಪಹಣವನ್ನು ಇಲಾಖೆಗೆ ಪಾವತಿಸಿ ಉಳಿದ ಮೊತ್ತವನ್ನು ತಾವೇ ಬಳಸಿಕೊಳ್ಳುತ್ತಿವೆ. ಹೀಗಾಗಿ ಗ್ರಂಥಾಲಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳಿಂದ ದೊಡ್ಡ ಮೊತ್ತದ ಹಣವೇ ಬಾಕಿ ಬರಬೇಕಿದೆ. ಈಗ ಬಿಬಿಎಂಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಂಥಾಲಯಗಳನ್ನೇ ತನ್ನ ಸುಪರ್ದಿಗೆ ಪಡೆಯಲು ಕಾರ್ಯೋನ್ಮುಖವಾಗಿದೆ.
ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲ ಸಾರ್ವಜನಿಕರಿಗೆ, ಕಥಾಸಾಹಿತ್ಯ ಪ್ರಿಯರಿಗೆ-ಹೀಗೆ ಹಲವು ಹನ್ನೊಂದು ಬಗೆಯ ವಾಚನಾಭಿರುಚಿಯ ಜನರಿಗೆ ಈ ಜ್ಞಾನ ಮಂದಿರಗಳು ಪುಸ್ತಕನಿಧಿ ಇದ್ದಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಗ್ರಂಥಾಲಯಗಳು ದೇವರಿಲ್ಲದ ಗುಡಿಗಳಂತೆ ಭಾಸವಾಗುತ್ತಿದೆ. ಏಕೆಂದರೆ ಎಷ್ಟೋ ಗ್ರಂಥಾಲಯಗಳಲ್ಲಿ ಹಳೆಯ-ಇಂದಿನ ಆಕರ ಗ್ರಂಥಗಳು, ನವ ಪ್ರಕಾಶನದ ಪುಸ್ತಕಗಳು, ಪತ್ರಿಕೆಗಳು, ನಿಯತಕಾಲಿಕಗಳು, ವೃತ್ತಿಪರ ಜರ್ನಲ್‌ಗಳು ಲಭ್ಯವಿರುವುದಿಲ್ಲ. ಗ್ರಂಥಾಲಯದಲ್ಲಿ ಕುಳಿತು ಓದಲು, ಟಿಪ್ಪಣಿ ಮಾಡಿಕೊಳ್ಳಲು ಕುರ್ಚಿ, ಮೇಜುಗಳಿರುವುದಿಲ್ಲ, ಇದ್ದರೂ ಕೈಕಾಲು ಮುರಿದುಕೊಂಡವು. ಸ್ಥಳಾವಕಾಶವಿರುವುದಿಲ್ಲ. ಎಷ್ಟೋ ಗ್ರಂಥಾಲಯಗಳು ಒಂದೆರಡು ಕೊಠಡಿಗಳಲ್ಲಿ, ಕಿಕ್ಕಿರಿದ ಕಪಾಟು/ರ್ಯಾಕುಗಳ ಮಧ್ಯೆ ಜೀವಹಿಡಿದುಕೊಂಡಿರುತ್ತವೆ. ರಾಜ್ಯದಲ್ಲಿ ಗ್ರಂಥಾಲಯಗಳನ್ನು ನೋಡಿಕೊಳ್ಳಲು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಇದೆ. ಈ ಇಲಾಖೆಗೆ ಸರ್ವದಾ ಹಣಕಾಸಿನ ಮುಗ್ಗಟ್ಟು. ಈ ಮುಗ್ಗಟ್ಟೇ ಗ್ರಂಥಾಲಯಗಳ ಇಂದಿನ ದುಃಸ್ಥಿತಿಗೆ ಕಾರಣ.
ಪುಸ್ತಕಗಳ ಖರೀದಿ ಮತ್ತು ರಾಜ್ಯದಲ್ಲಿನ ಗ್ರಂಥಾಲಯಗಳ ನಿರ್ವಹಣೆ ಸರಕಾರದ ಗ್ರಂಥಾಲಯ ಇಲಾಖೆಯ ಜವಾಬ್ದಾರಿ. ಕನ್ನಡ ಪುಸ್ತಕಗಳು ಮತ್ತು ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಗಳ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳ ಮೂಲಕ ಓದುಗರಿಗೆ ಒದಗಿಸುವ ಜವಾಬುದಾರಿಯನ್ನು ಇಲಾಖೆ ನಿರ್ವಹಿಸುತ್ತಾ ಬಂದಿದೆಯಾದರೂ ಅದು ತೃಪ್ತಿಕರವಾಗಿಲ್ಲ ಎಂಬ ದೂರು ಯಾವತ್ತಿನಿಂದಲೂ ಇದ್ದದ್ದೇ. ಪ್ರತಿ ವರ್ಷ ಸರಕಾರ ಇತರ ಇಲಾಖೆಗಳಿಗೆ ನೀಡುವಂತೆ ಬಜೆಟ್‌ನಲ್ಲಿ ಈ ಇಲಾಖೆಗೂ ಇಂತಿಷ್ಟು ಹಣವನ್ನು ಒದಗಿಸುತ್ತದೆ. ಆದರೆ ಈ ಹಣ, ‘‘ಅಜ್ಜಿ ನೂತದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ’’ ಎಂಬಂತೆ ಸಿಬ್ಬಂದಿಯ ಸಂಬಳ, ಸಾರಿಗೆ ಮತ್ತು ಸಾದಿಲ್ವಾರು ವೆಚ್ಚಗಳಿಗೆ ಸರಿಹೋಗುತ್ತದೆ. ಇನ್ನು ಪುಸ್ತಕಗಳನ್ನು ಖರೀದಿಸಲು ಹಣವೆಲ್ಲಿಂದ ಬರಬೇಕು? ಇದಕ್ಕಾಗಿ ಸರಕಾರ ನಮ್ಮಿಂದ ಗ್ರಂಥಾಲಯ ಕರವನ್ನು ವಸೂಲಿ ಮಾಡುತ್ತಿದೆ. ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು ಮತ್ತು ನಗರ ಪಾಲಿಕೆಗಳು ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ಮನೆಕಂದಾಯದ ಜೊತೆಗೆ ಪ್ರಜೆಗಳಿಂದ ಶೇ. 6ರಷ್ಟು ಗ್ರಂಥಾಲಯ ಕರವನ್ನು ವಸೂಲಿ ಮಾಡುತ್ತದೆ. ಇದು ಗ್ರಂಥಾಲಯ ಇಲಾಖೆ ಮುಖ್ಯವಾದ ಆದಾಯ ಮೂಲ. ಆದರೆ ಪುರಸಭೆಗಳು, ನಗರಪಾಲಿಕೆಗಳು, ಮಹಾನಗರಪಾಲಿಕೆಗಳು ಪ್ರಜೆಗಳಿಂದ ವಸೂಲಿಮಾಡಿದ ಗ್ರಂಥಾಲಯ ಕರವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸುವುದಿಲ್ಲ. ಅಥವಾ ಅಲ್ಪಸ್ವಲ್ಪ ಕೊಟ್ಟ ಶಾಸ್ತ್ರಮಾಡಿ ಭಾರೀ ಮೊತ್ತವನ್ನು ಬಾಕಿ ಉಳಿಸಿಕೊಳ್ಳುತ್ತವೆ. ಹೀಗೆ ರಾಜ್ಯ ನಗರ ಪಾಲಿಕೆಗಳಿಂದ ಗ್ರಂಥಾಲಯ ಇಲಾಖೆಗೆ ಬಾಕಿ ಉಳಿದಿರುವ ಮೊತ್ತ ನೂರಾರು ಕೋಟಿ ರೂ.ಗಳು. ಸಮಸ್ಯೆಯ ಮೂಲ ಇಲ್ಲಿದೆ.
ಬೆಂಗಳೂರು ಮಹಾನಗರ ಪಾಲಿಕೆಯೊಂದೇ (ಬಿಬಿಎಂಪಿ) ಕಳೆದ ಐದಾರು ವರ್ಷಗಳಿಂದ 400 ಕೋಟಿ ಗ್ರಂಥಾಲಯ ಕರ ಹಣವನ್ನು ಇಲಾಖೆಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆಯಂತೆ. ಮನೆ ಕಂದಾಯದ ಜೊತೆ ಆರೋಗ್ಯ ಹಾಗೂ ಶಿಕ್ಷಣಗಳ ಬಾಬ್ತುಗಳಲ್ಲೂ ತೆರಿಗೆ ವಸೂಲಿ ಮಾಡುವ ಬಿಬಿಎಂಪಿ ಈ ಇಲಾಖೆಗಳಿಗೆ ಸಂಗ್ರಹಿಸಿದ ತೆರಿಗೆ ಹಣವನ್ನು ಪಾವತಿಸುತ್ತಿದ್ದು ಗ್ರಂಥಾಲಯ ಇಲಾಖಗೆ ಮಾತ್ರ ಭಾರಿ ಮೊತ್ತದ ಬಾಕಿ ಉಳಿಸಿಕೊಂಡಿದೆ. ಇನ್ನೂ ಅಕ್ಷಮ್ಯವಾದ ಪ್ರಮಾದವೆಂದರೆ ಪ್ರಜೆಗಳಿಂದ ವಸೂಲಿ ಮಾಡಿದ ಗ್ರಂಥಾಲಯ ಕರವನ್ನು ಬಿಬಿಎಂಪಿಯು ಬೇರೆ ಬಾಬ್ತುಗಳಿಗೆ ವೆಚ್ಚಮಾಡಿರುವುದು. ಪ್ರಜೆಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಇಲಾಖೆಗೆ ವರ್ಗಾಯಿಸಿ ನಗರದ ಎಲ್ಲ ಬಡಾವಣೆಗಳಲ್ಲೂ ಗ್ರಂಥಾಲಯ ಸೌಕರ್ಯ ಕಲ್ಪಿಸುವುದು ನಗರ ಪಾಲಿಕೆಗಳ ಕರ್ತವ್ಯ. ಈ ಕರ್ತವ್ಯಕ್ಕೆ ಚ್ಯುತಿ ಎಸಗಿರುವ ಮಹಾನಗರ ಪಾಲಿಕೆ ಈಗ ಈ ನಿಟ್ಟಿನಲ್ಲಿ ಅತಿ ಬುದ್ಧಿವಂತಿಕೆಯನ್ನು ಪ್ರದರ್ಶಿಸುವಂತಹ ಕ್ರಮವೊಂದನ್ನು ಕೈಗೆತ್ತಿಕೊಂಡಿದೆ. ಬೆಂಗಳೂರು ಮಹಾ ನಗರದಲ್ಲಿ ಸುಮಾರು 250 ಗ್ರಂಥಾಲಯಗಳಿವೆ. ಈ ಗ್ರಂಥಾಲಯಗಳನ್ನು ಗ್ರಂಥಾಲಯ ಇಲಾಖೆ ನಡೆಸುತ್ತಿದೆ. ಈ ಗ್ರಂಥಾಲಯಗಳನ್ನು ಸರಕಾರದ ಇಲಾಖೆಯಿಂದ ಬೇರ್ಪಡಿಸಿ ತನ್ನ ವಶಕ್ಕೆ ತಗೆದುಕೊಂಡು ತಾನೇ ನಡೆಸುವ ಹುನ್ನಾರ ಬಿಬಿಎಂಪಿಯದು.
ಸಾರ್ವಜನಿಕರಿಂದ ಸಂಗ್ರಹಿಸಿರುವ ಗ್ರಂಥಾಲಯ ತೆರಿಗೆ ಹಣವನ್ನು ಗ್ರಂಥಾಲಯ ಇಲಾಖೆಗೆ ವರ್ಗಾಯಿಸುವಂತೆ ಇಲಾಖೆ ಹಾಗೂ ಸಾಹಿತಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದಲ್ಲಿರುವ ಗ್ರಂಥಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ನಗರದಲ್ಲಿನ ಗ್ರಂಥಾಲಯಗಳು ಹಾಗೂ ಸರಕಾರಿ ಶಾಲೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವೆಂದು ಸಾರ್ವಜನಿಕರಿಂದ ತಮಗೆ ದೂರುಗಳು ಬರುತ್ತಿವೆ ಎಂಬುದು ಮಹಾನಗರಪಾಲಿಕೆ ಸದಸ್ಯರ ಅಂಬೋಣವಂತೆ. ಶಾಲೆಗಳು ಮತ್ತು ಗ್ರಂಥಾಲಯಗಳ ಮೇಲೆ ತನಗೆ ಆಡಳಿತಾತ್ಮಕ ಹತೋಟಿ ಇಲ್ಲವಾದ್ದರಿಂದ ತಾವು ಅಸಹಾಯಕರು ಎಂಬುದು ಸದಸ್ಯರ ಕೊರಗು. ಈ ಅಸಹಾಯಕ ಪರಿಸ್ಥಿತಿ ನಿವಾರಿಸಿ ಸ್ವಯಂ ತಾನೆ ತೆರಿಗೆದಾರರಿಗೆ ಉತ್ತಮ ಸೇವೆ ಸಲ್ಲಿಸುವ ದೃಷ್ಟಿಯಿಂದ ನಗರದಲ್ಲಿನ ಸರಕಾರಿ ಶಾಲೆಗಳು ಮತ್ತು ಗ್ರಂಥಾಲಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಆಯುಕ್ತರು ಈಗಾಗಲೇ ಈ ವಿಚಾರದ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಯವರ ಜೊತೆ ಮಾತುಕತೆ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿಯವರು ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು ಸರಕಾರಕ್ಕೆ ವಿಧ್ಯುಕ್ತ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆಯೆಂದು ವರದಿಯಾಗಿದೆ. ಮಹಾನಗರ ಪಾಲಿಕೆಯ ಈ ಕ್ರಮಕ್ಕೆ ಸಾಹಿತಿಗಳು ಮತ್ತು ವಾಚಕರಿಂದ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ.
ತಾನೇ ವಶಪಡಿಸಿಕೊಳ್ಳುವ ಮೂಲಕ ಗ್ರಂಥಾಲಯಗಳನ್ನು ಮೂಲೆಗುಂಪುಮಾಡಿ ಜನರಿಂದ ವಸೂಲಿ ಮಾಡಿದ ಕೋಟಿಗಟ್ಟಲೆ ಹಣವನ್ನು ನುಂಗಿಹಾಕುವ ಹುನ್ನಾರ ಬಿಬಿಎಂಪಿಯದು ಎನ್ನುವ ಆತಂಕ ಇವರದು. ಸರಕಾರ ಇದಕ್ಕೆ ಅವಕಾಶ ಕಲ್ಪಿಸಬಾರದು. ನಗರದ ಗ್ರಂಥಾಲಯಗಳು ಈಗಿರುವಂತೆ ಗ್ರಂಥಾಲಯ ಇಲಾಖೆ ಅಧೀನದಲ್ಲೇ ಕೆಲಸಮಾಡಬೇಕು ಹಾಗೂ ಬಿಬಿಎಂಪಿ ಗ್ರಂಥಾಲಯ ತೆರಿಗೆ ಹಣವನ್ನು ಇಲಾಖೆಗೆ ನಿಯತವಾಗಿ ವರ್ಗಾಯಿಸಬೇಕು ಎಂದು ಸಾಹಿತಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಆಗ್ರಹಪಡಿಸಿದ್ದಾರೆ. ರಾಜ್ಯದಲ್ಲಿ 1965ರಿಂದ ಗ್ರಂಥಾಲಯ ಸಂಸ್ಕೃತಿ ಬೆಳೆದು ಬಂದಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಏಳು ಸಾವಿರ ಗ್ರಂಥಾಲಯಗಳಿವೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ಈ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು ಸ್ಥಳೀಯ ಸಂಸ್ಥೆಗಳು ಮನೆ ಕಂದಾಯದೊಂದಿಗೆ ವಸೂಲಿಮಾಡುವ ಶೇ. 6 ಗ್ರಂಥಾಲಯ ಕರವನ್ನು ಇವುಗಳಿಗೆ ನೀಡಬೇಕೆಂಬುದು ನಿಯಮ. ಈ ನಿಯಮವನ್ನು ಪೂರ್ತಿಯಾಗಿ ಪಾಲಿಸುತ್ತಿಲ್ಲ. ಬಹುತೇಕ ಸ್ಥಳೀಯ ಸಂಸ್ಥೆಗಳು ವಸೂಲಿಮಾಡಿದ ಕರದಲ್ಲಿ ಅಲ್ಪಸ್ವಲ್ಪಹಣವನ್ನು ಇಲಾಖೆಗೆ ಪಾವತಿಸಿ ಉಳಿದ ಮೊತ್ತವನ್ನು ತಾವೇ ಬಳಸಿಕೊಳ್ಳುತ್ತಿವೆ.
ಹೀಗಾಗಿ ಗ್ರಂಥಾಲಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳಿಂದ ದೊಡ್ಡ ಮೊತ್ತದ ಹಣವೇ ಬಾಕಿ ಬರಬೇಕಿದೆ. ಈಗ ಬಿಬಿಎಂಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಂಥಾಲಯಗಳನ್ನೇ ತನ್ನ ಸುಪರ್ದಿಗೆ ಪಡೆಯಲು ಕಾರ್ಯೋನ್ಮುಖವಾಗಿದೆ. ಇದಕ್ಕೆ ಬಿಬಿಎಂಪಿ ನಿಯಮ-ನಿಬಂಧನೆ(ಬೈಲಾ)ಗಳಲ್ಲೂ ಅವಕಾಶವಿಲ್ಲ ಎನ್ನುತ್ತಾರೆ ತಜ್ಞರು. ಮಹಾನಗರದಲ್ಲಿರುವ ಗ್ರಂಥಾಲಯಗಳ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮಹಾನಗರ ಪಾಲಿಕೆಯ ಪ್ರಸ್ತಾವದಲ್ಲಿ ಒಂದೇ ಕಲ್ಲಿನಂದ ಎರಡು ಹಕ್ಕಿಯನ್ನು ಹೊಡೆಯುವ ಚಾಣಕ್ಯ ತಂತ್ರವಿರುವಂತೆ ತೋರುತ್ತದೆ. ಗ್ರಂಥಾಲಯಗಳ ಆಡಳಿತ ತನ್ನ ವಶಕ್ಕೆ ಬಂದರೆ ಪ್ರಜೆಗಳಿಂದ ಸಂಗ್ರಹಿಸಿದ ಕೋಟಿಗಟ್ಟಲೆೆ ತೆರಿಗೆ ಹಣ ತನ್ನ ಖಜಾನೆಯಲ್ಲೇ ಉಳಿಯುತ್ತದೆ. ಆ ಹಣವನ್ನು ಖರ್ಚುಮಾಡುವ ವಿವೇಚನೆಯೂ ತನ್ನದೇ ಆಗಿರುತ್ತದೆ. ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಇತ್ಯಾದಿ ಬಾಬ್ತುಗಳಿಗಾಗಿ ಅಷ್ಟೋ ಇಷ್ಟೋ ಖರ್ಚುಮಾಡಿ ತುರ್ತು ಕಾರಣಗಳ ನೆಪ ಒಡ್ಡಿ ಗ್ರಂಥಾಲಯ ತೆರಿಗೆ ಹಣವನ್ನು ಬೇರೆ ಬಾಬ್ತುಗಳಿಗೆ ಖರ್ಚುಮಾಡುವ ಸ್ವಾತಂತ್ರ್ಯವೂ ಅನುಕೂಲ ಸಿಂಧುವಾಗಿ ಮಹಾನಗರಪಾಲಿಕೆಗೆ ಒದಗಿಬರುತ್ತದೆ. ಮಹಾನಗರಪಾಲಿಕೆಯ ಈ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮೋದನೆ ನೀಡಬಾರದು.
ಒಂದು ವೇಳೆ ಅನುಮೋದನೆ ನೀಡಿದಲ್ಲಿ ಇದೊಂದು ಮೇಲ್ಪಂಕ್ತಿಯಾಗಿ ಉಳಿದ ಸ್ಥಳೀಯ ಸಂಸ್ಥೆಗಳೂ ತಮ್ಮ ವ್ಯಾಪ್ತಿಯೊಳಗಣ ಗ್ರಂಥಾಲಯಗಳನ್ನು ವಶಪಡಿಸಿಕೊಳ್ಳಲು ಮುಂದಾಗಬಹುದು. ಆಗ ಗ್ರಂಥಾಲಯಗಳ ನಿರ್ವಹಣೆ, ಪುಸ್ತಕ ಖರೀದಿ ಇತ್ಯಾದಿಗಳು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮರ್ಜಿಯನುಸಾರ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಹಾಗಾದಲ್ಲಿ ತಮ್ಮ ಓದಿಗೆ, ಅಧ್ಯಯನಕ್ಕೆ ಸಾರ್ವಜನಿಕ ಗ್ರಂಥಾಲಯಗಳನ್ನೇ ನೆಚ್ಚಿಕೊಂಡಿರುವ ಪುಸ್ತಕ ಪ್ರಿಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ಸಿಗದೇ ಹೋಗಬಹುದು. ಪುಸ್ತಕ ಖರೀದಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಗೊಳಪಟ್ಟಲ್ಲಿ ಸ್ವಜನಪಕ್ಷಪಾತ, ಕಳಪೆ ಪುಸ್ತಕಗಳ ಖರೀದಿ ಮೊದಲಾದ ಅವ್ಯವಹಾರಗಳಿಗೆ ಹಾದಿ ಸುಗಮಮಾಡಿಕೊಟ್ಟಂತಾಗುತ್ತದೆ. ಇದೆಲ್ಲದರಿಂದಾಗಿ ಗ್ರಂಥಾಲಯ ಚಳವಳಿಯ ಮೂಲ ಧ್ಯೇಯ ಉದ್ದೇಶಗಳಿಗೆ ಹೊಡೆತ ಬೀಳಬಹುದು. ಓದುವ ಸಂಸ್ಕೃತಿಗೆ ವ್ಯತ್ಯಯವಾಗಬಹುದು. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ಇಂತಹ ಕ್ರಮಕ್ಕೆ ಅಸ್ತು ಎನ್ನಬಾರದು. ಮುಖ್ಯ ಕಾರ್ಯದರ್ಶಿಯವರು ಯಾವ ಆಲೋಚನೆಯಿಂದ ಮಹಾನಗರ ಪಾಲಿಕೆಯ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೋ ತಿಳಿಯದು. ಅದೇನೇ ಇದ್ದರೂ ಇಂತಹ ಒಂದು ತೀರ್ಮಾನಕ್ಕೆ ಬರುವ ಮೊದಲು ಇದರ ಸಾಧಕ ಬಾಧಕಗಳನ್ನು ಸರಕಾರ ಕೂಲಂಕಷವಾಗಿ ಪರಾಮರ್ಶಿಸಬೇಕು.
ಗ್ರಂಥಾಲಯ ಇಲಾಖೆ ಸಗಟು ಖರೀದಿ ಯೋಜನೆ, ರಾಜಾರಾಮ್ ಮೋಹನರಾಯ್ ಯೋಜನೆ ಹೀಗೆ ಹಲವಾರು ಯೋಜನೆಗಳಡಿಯಲ್ಲಿ ಲೇಖಕ/ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುತ್ತಿದೆ. ಪುಸ್ತಕ ಪ್ರಾಧಿಕಾರವೂ ಪುಸ್ತಕಗಳನ್ನು ಖರೀದಿಸುತ್ತದೆ. ಈ ಖರೀದಿಗಳ ಬಗ್ಗೆ, ಅನುಸರಿಸುವ ಮಾನದಂಡಗಳ ಬಗ್ಗೆ ಅಗಿಂದಾಗ್ಗೆ ದೂರುಗಳು ಕೇಳಿಬರುತ್ತಿರುತ್ತದೆ. ಸರಕಾರ ಈ ಸಗಟು ಖರೀದಿಗಳನ್ನು ದೋಷಮುಕ್ತವಾಗಿಸಿ ಗ್ರಂಥಾಲಯ ಇಲಾಖೆಯನ್ನು ಶುಚಿಗೊಳಿಸಿ ಬಲಪಡಿಸಬೇಕು. ಪ್ರಜೆಗಳಿಂದ ಸಂಗ್ರಹಿಸುವ ಗ್ರಂಥಾಲಯ ತೆರಿಗೆ ಹಣವನ್ನು ಆಯಾ ವರ್ಷವೇ ಆ ಇಲಾಖೆಗೆ ತಲುಪಿಸುವಂತೆ ಮಹಾನಗರ ಪಾಲಿಕೆಗಳಿಗೆ, ನಗರ ಪಾಲಿಕೆಗಳಿಗೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನಿಂದ ತಾಕೀತು ಮಾಡಬೇಕು. ತಪ್ಪುವ ಸ್ಥಳೀಯ ಸಂಸ್ಥೆಗಳಿಗೆ ದಂಡ/ಶಿಕ್ಷೆ ವಿಧಿಸುವ ಕಾನೂನು ಆಗಬೇಕು. ಗ್ರಂಥಾಲಯ ತೆರಿಗೆ ಹಣ ಸದುಪಯೋಗವಾಗುವಂತೆ ಆ ಇಲಾಖೆಯ ಮೇಲೂ ತೀವ್ರ ನಿಗಾವಹಿಸಬೇಕು.
ಬೆಂಗಳೂರು ಮಹಾನಗರಪಾಲಿಕೆಗೆ ತನ್ನದೇ ಕಾರ್ಯಭಾರ ಸಾಕಷ್ಟಿದೆ. ಅದರ ಜೊತೆಗೆ ಗ್ರಂಥಾಲಯಗಳ ನಿರ್ವಹಣೆಯ ಹೆಚ್ಚುವರಿ ಹೊರೆಯನ್ನು ಹೊತ್ತಿಕೊಳ್ಳುವ ಉಸಾಬರಿ ಅದಕ್ಕೆ ಬೇಡ. ಮೂಲಭೂತ ಕರ್ತವ್ಯಗಳಾದ ನಾಗರಿಕ ಸೌಲಭ್ಯಗಳು, ನಗರ ನೈರ್ಮಲ್ಯದಂಥ ಕೆಲಸಗಳಿಗೆ ಅದು ಆದ್ಯಗಮನ ನೀಡಲಿ. ಜನರಿಂದ ಸಂಗ್ರಹಿಸಿದ ಗ್ರಂಥಾಲಯ ತೆರಿಗೆ ಹಣವನ್ನು ತನ್ನ ಖಜಾನೆಯಲ್ಲೇ ಉಳಿಸಿಕೊಂಡು ಬೇರೆ ಬಾಬ್ತುಗಳಿಗೆ ಖರ್ಚುಮಾಡುವ ಬದಲು ಕೂಡಲೇ ಗ್ರಂಥಾಲಯ ಇಲಾಖೆಗೆ ಪಾವತಿಸುವ ಹೊಣೆಗಾರಿಕೆಯನ್ನು ದಕ್ಷತೆಯಿಂದ ಪೂರೈಸಿದಲ್ಲಿ ಅದು ಪುಸ್ತಕ ಪ್ರಿಯ ನಾಗರಿಕರಿಗೆ ಸಲ್ಲಿಸುವ ದೊಡ್ಡ ಸೇವೆಯಾದೀತು.