ಪೊಳ್ಳು ಸಂಸ್ಕೃತಿಗೆ ಪ್ರತಿರೋಧ ‘ದ್ರಾವಿಡರು ನಾವು ದ್ರಾವಿಡರು’
ಈ ಹೊತ್ತಿನ ಹೊತ್ತಿಗೆ
ಸುಮಾರು ನಾಲ್ಕು ದಶಕಗಳಿಂದ ಕಾವ್ಯಕ್ರಿಯೆಯಲ್ಲಿ ತೊಡಗಿರುವ ಬಿಸಿಲ ನಾಡಿನ ಕವಿಯೆನಿಸಿದ ಅಲ್ಲಮಪ್ರಭು ಬೆಟ್ಟದೂರರ ಕವಿತೆಗಳ ಹಿರಿಮೆಯೇ ಸೂರ್ಯ ಬಿಸಿಲಿನ ಝಳದಂತಹ ವೈಚಾರಿಕ ಪ್ರಖರತೆ. ಇದು ನನ್ನ ಭಾರತ, ಕುದುರಿಮೋತಿ ಮತ್ತು ನೀಲಗಿರಿ, ಕೆಡಹಬಲ್ಲರು ಅವರು-ಕಟ್ಟಬಲ್ಲೆವು ನಾವು ಮತ್ತು ಗುಲಗಂಜಿ ಎಂಬ ನಾಲ್ಕು ಕವನ ಸಂಕಲನಗಳನ್ನು ಅವರು ಹೊರತಂದಿದ್ದಾರೆ. ಕವನಸಂಕಲನಗಳ ತಲೆಬರಹಗಳೇ, ತಳಮೂಲ ಸಂಸ್ಕೃತಿಯ ಪ್ರತಿರೋಧದ ಭಾಗವಾಗಿ ಹುಟ್ಟಿಕೊಂಡಿರುವ ಅವರ ಕವಿತೆಗಳ ಕುರಿತಂತೆ ಅವರ ಕವನ ಸಂಕಲನಗಳ ತಲೆಬರಹಗಳೇ ಹೇಳುತ್ತವೆ. ಕಲೆಗಾಗಿ ಕಲೆಯಲ್ಲ ಅವರ ಕವಿತೆ. ಬದಲಿಗೆ ವರ್ತಮಾನದ ಸಾಂಸ್ಕೃತಿಕ ರಾಜಕಾರಣಗಳನ್ನು ಪ್ರತಿಭಟಿಸುತ್ತಾ, ಅವುಗಳಿಗೆ ಪರಿಹಾರವಾಗಿ ಮೂಲ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಮಹತ್ತರ ಉದ್ದೇಶವನ್ನು ಕವಿತೆಗಳು ಹೊಂದಿವೆ. ಜಂಬಣ್ಣ ಅಮರ ಚಿಂತ ಅವರು ಹೇಳುವಂತೆ ‘‘ಬೆಟ್ಟದೂರರಿಗೆ ಕಾವ್ಯ ಎನ್ನುವುದು ಮಾನವತೆಯ ಮಾತೃಭಾಷೆಯಾಗಿದೆ. ಜೀವನದ ಪ್ರತಿನಿಧಿಯಾಗಿದೆ. ಜೀವನದ ಉನ್ನತ ಧ್ಯೇಯಕ್ಕಾಗಿ ಹೋರಾಟದ ನೆಲೆಯಾಗಿದೆ. ಅಮಾನವೀಯ ಸ್ಥಿತಿಗತಿಗಳಲ್ಲಿ ಮಾನವೀಯ ಸಂಬಂಧಗಳ ಕುರಿತು ಮಾತನಾಡುತ್ತದೆ. ಜೀವನದ ವಿವಿಧ ಅನುಭವಗಳ ಸಾರಸ್ವತವಾಗಿರುವ ಬೆಟ್ಟದೂರರ ಕಾವ್ಯದ ವಿಶೇಷತೆ ಅಂದರೆ ಆತ್ಮವಿಶ್ವಾಸ. ಸಮಾನತೆ, ನಿರ್ಭಯತೆಯನ್ನು ಮೂಡಿಸುವುದಾಗಿದೆ. ಜೀವನದ ನವ ನಿರ್ಮಾಣಕ್ಕೆ ಬುನಾದಿ ಹಾಕುವುದಾಗಿದೆ’’
ದಂಗೆ ಪ್ರಕಾಶನ ಕೊಪ್ಪಳ ಅವರು ಅಲ್ಲಮಪ್ರಭು ಅವರ ಕವಿತೆಗಳನ್ನು ಒಂದಾಗಿಸುವ ಪ್ರಯತ್ನ ಮಾಡಿದ್ದಾರೆ.ಎಲ್ಲ ಕವಿತೆಗಳನ್ನು ಒಂದು ಕೃತಿಯಾಗಿಸಿ ಅದಕ್ಕೆ ‘ದ್ರಾವಿಡರು ಮತ್ತು ದ್ರಾವಿಡರು’ ಎಂದು ಹೆಸರು ಕೊಟ್ಟಿದ್ದಾರೆ. ದಕ್ಷಿಣ ಭಾರತದ ದ್ರಾವಿಡ ಚಿಂತನೆ ಮತ್ತು ಚಳವಳಿಯ ಅರಿವಿರುವವರಿಗೆ ಈ ಹೆಸರು, ಕವಿತೆಯ ಅಂತರಾಳವನ್ನು ವಿವರಿಸಿ ಬಿಡುತ್ತದೆ. ಸದ್ಯಕ್ಕೆ ಮುನ್ನೆಲೆಯಲ್ಲಿರುವ ವೈದಿಕ ಸಂಸ್ಕೃತಿಯನ್ನು ವಿರೋಧಿಸುತ್ತಾ ತನ್ನ ಅಸ್ಮಿತೆಯನ್ನು ಸ್ಪಷ್ಟ ಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿದೆ ಈ ಸಂಕಲನ. ಅವರ ನಾಲ್ಕೂ ಸಂಕಲನಗಳ ಕವಿತೆಗಳು ಈ ಕೃತಿಯಲ್ಲಿ ಒಟ್ಟು ಸೇರುವ ಮೂಲಕ, ಒಂದು ಚಿಂತನಾ ಪ್ರಕಾರವನ್ನೇ ಸೃಷ್ಟಿಸಿದೆ. ಆದುದರಿಂದಲೇ, ಕಾವ್ಯ ಇಲ್ಲಿ ನಿಜವಾದ ಅರ್ಥದಲ್ಲಿ ಹೋರಾಟದ ಖಡ್ಗವಾಗಿದೆ. ‘ಕಟ್ಟಿದರೆ ನಾವು ಏಕತೆಯ ಕಟ್ಟುವೆವು/ಕೆಡಹಿದರೆ ಅನೈಕ್ಯತೆಯ ಕೆಡಹುವೆವು’ ಎನ್ನುವ ಕವಿಯ ಸಾಲು, ವರ್ತಮಾನದ ಕೆಡಹುವ, ಒಡೆಯುವ, ದ್ವೇಷ ಬಿತ್ತುವ ರಾಜಕಾರಣಕ್ಕೆ ಪ್ರತ್ಯುತ್ತರವಾಗಿದೆ. ದಶಕಗಳ ಹಿಂದೆ ಬರೆದ ಕವಿತೆಗಳಾದರೂ, ವರ್ತಮಾನದ ಒಡೆಯುವ ರಾಜಕಾರಣದ ಜೊತೆಗೆ ಹೊಚ್ಚ ಹೊಸದಾದ ಚೈತನ್ಯದೊಂದಿಗೆ ಈ ಕವಿತೆಗಳು ಹೋರಾಡುತ್ತವೆ. ಬರಗೂರು ಅವರು ಈ ಕವಿತೆಗಳ ಕುರಿತಂತೆ ಬರೆಯುತ್ತಾ ‘‘...ಇಲ್ಲಿ ಚರಿತ್ರೆಯ ಪ್ರಸ್ತಾಪವಿದೆ. ಚರಿತ್ರಾರ್ಹರ ವ್ಯಕ್ತಿ ಚಿತ್ರಗಳಿವೆ. ದೊಡ್ಡವರನ್ನು ಕುರಿತ ವ್ಯಂಗ್ಯ ವಿಡಂಬನೆಗಳಿವೆ. ಆತ್ಮವಂಚಕರ ಟೀಕೆಯಿದೆ. ಸಮಾನತೆಯ ಸ್ಥಾಯೀ ಆಶಯವಿದೆ. ಒಟ್ಟಾರೆ ಯಾವತ್ತೂ ತಮ್ಮ ಅರಿವಿನ ಪ್ರಗತಿಪರ ಆಶಯವನ್ನು ಬಿಟ್ಟುಕೊಡದ ಬದ್ಧತೆಯಿದೆ...’’ ಎನ್ನುತ್ತಾರೆ. 232 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 98440 49205 ದೂರವಾಣಿಯನ್ನು ಸಂಪರ್ಕಿಸಬಹುದು.