ಎಚ್ಚರಿಕೆ : ನ್ಯೂಸ್ ಪ್ರಿಂಟ್ ಮೇಲಿನ ತೆರಿಗೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಪಾಯಕಾರಿ !
"ಪತ್ರಿಕೆಗಳಿಲ್ಲದೆ ಸರಕಾರವಿರುವ ಅಥವಾ ಸರಕಾರ ಇಲ್ಲದೆ ಪತ್ರಿಕೆಗಳಿರುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನನಗೆ ಸಿಕ್ಕಿದರೆ ಒಂದು ಕ್ಷಣವೂ ತಡ ಮಾಡದೆ ನಾನು ಎರಡನೆಯದನ್ನೇ ಆಯ್ಕೆ ಮಾಡುತ್ತೇನೆ" ಎಂದು ಹೇಳಿದ್ದರು ಥಾಮಸ್ ಜೆಫರ್ಸನ್" ಪ್ರತಿಯೊಬ್ಬನಿಗೂ ಈ ಪತ್ರಿಕೆಗಳು ತಲುಪಬೇಕು ಮತ್ತು ಅದನ್ನು ಓದುವ ಸಾಮರ್ಥ್ಯ ಪಡೆಯಬೇಕು" ಎಂದೂ ಅವರು ಹೇಳಿದ್ದರು.
ಅಮೇರಿಕಾದ ಅಧ್ಯಕ್ಷರಾಗಿದ್ದ ಜೆಫರ್ಸನ್ ಅವರಿಗೆ ಸರಕಾರದ ಮಹತ್ವದ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಆದರೂ ಮಾಹಿತಿ ನೀಡುವ ಹಾಗು ಉತ್ತರದಾಯಿತ್ವ ಖಾತರಿ ಪಡಿಸುವ ಸಾಮರ್ಥ್ಯವಿರುವ ಪತ್ರಿಕೆಗಳ ನಂತರದ ಸ್ಥಾನವನ್ನಷ್ಟೇ ಅವರು ಸರಕಾರಕ್ಕೆ ನೀಡಿದರು. ಯಾಕೆ ? ಪತ್ರಿಕೆಗಳ ಸ್ಥಾನವನ್ನು ಟಿವಿ ನ್ಯೂಸ್ ಚಾನಲ್ ಗಳು ಹಾಗು ಸೋಷಿಯಲ್ ಮೀಡಿಯಾ ಆಕ್ರಮಿಸಿಕೊಂಡಿವೆ ಎಂದು ನಂಬಲಾಗಿರುವ ಈ ಕಾಲದಲ್ಲಿ ಆ ಮಹತ್ವ ಕಡಿಮೆಯಾಗಿದೆಯೇ ? ಇಲ್ಲ ! ಅದು ಹೇಗೆ ಎಂದು ನೋಡೋಣ.
ನ್ಯೂಸ್ ಪ್ರಿಂಟ್ ಮೇಲಿನ ಕಸ್ಟಮ್ಸ್ ತೆರಿಗೆಯನ್ನು 10% ಕ್ಕೆ ಏರಿಸಲಾಗಿದೆ ಎಂದು ಈ ಬಜೆಟ್ ನಲ್ಲಿ ಪ್ರಕಟಿಸಲಾಯಿತು. ಈ ಹೆಚ್ಚಳದಿಂದ ಯಾವುದೇ ಗಮನಾರ್ಹ ಮೊತ್ತವೇನೂ ಸಂಗ್ರಹವಾಗುವುದಿಲ್ಲ. ನನ್ನ ಲೆಕ್ಕಾಚಾರದ ಪ್ರಕಾರ ಈ ಹೊಸ ತೆರಿಗೆಯಿಂದ ವರ್ಷಕ್ಕೆ ಸರಕಾರಕ್ಕೆ ಬರುವ ಆದಾಯ 1000 ಕೋಟಿ ರೂ. ಗಿಂತ ಕಡಿಮೆ. ನಮ್ಮ ಬಜೆಟ್ ನ ಗಾತ್ರ 27.8 ಲಕ್ಷ ಕೋಟಿ ರೂ. ಮತ್ತು ಈ ತೆರಿಗೆಯ ಪ್ರಮಾಣ ಅದರ 0.03% ಮಾತ್ರ. ಹೀಗಿರುವಾಗ ಇಂತಹ ಮಹತ್ವದ ಕ್ಷೇತ್ರವೊಂದಕ್ಕೆ ಈ ಹೊರೆ ಹಾಕಿದ್ದು ಯಾಕೆ ? ಈ ಬಗ್ಗೆ ನನಗೆ ನನ್ನದೇ ಆದ ಕೆಲವು ಗುಮಾನಿಗಳಿವೆ, ಅವು ಇಲ್ಲಿ ಮುಖ್ಯವಲ್ಲ. ಆದರೆ ಈ ಹೊಸ ತೆರಿಗೆಯಿಂದ ಏನಾಗಲಿದೆ ಎಂದು ಪರಿಶೀಲಿಸೋಣ.
ಈ ನ್ಯೂಸ್ ಪ್ರಿಂಟ್ ಎಂದರೆ ಪತ್ರಿಕೆಗಳನ್ನು ಮುದ್ರಿಸಲು ಬಳಸುವ ಕಾಗದ. ಹೆಚ್ಚಿನ ದೊಡ್ಡ ಪತ್ರಿಕೆಗಳು ಈ ನ್ಯೂಸ್ ಪ್ರಿಂಟ್ ಕಾಗದವನ್ನು ಆಮದು ಮಾಡಿಕೊಳ್ಳುತ್ತವೆ. ಇದಕ್ಕೆ ಕಾರಣ ದೇಶೀಯ ನ್ಯೂಸ್ ಪ್ರಿಂಟ್ ಗಳಿಗಿಂತ ಈ ಆಮದಿತ ನ್ಯೂಸ್ ಪ್ರಿಂಟ್ ಗುಣಮಟ್ಟದಲ್ಲಿ ಬಹಳ ಉತ್ತಮವಾಗಿರುತ್ತದೆ. ಇದರ ಬೆಲೆ ನಾಲ್ಕು ಪುಟಗಳಿಗೆ ಸುಮಾರು 1 ರೂ. ಇವತ್ತು ನೀವು ಓದುವ ಪತ್ರಿಕೆಯಲ್ಲಿ 48 ಪುಟಗಳಿದ್ದರೆ ಅದಕ್ಕೆ 12 ರೂ. ಖರ್ಚಾಗಿದೆ ಎಂದರ್ಥ. ಆದರೆ ಇದು ಕೇವಲ ಕಾಗದದ ಖರ್ಚು ಮಾತ್ರ. ಪತ್ರಿಕೆ ಮಾಡಲು ತಗಲುವ ಬೇರೆಲ್ಲ ಖರ್ಚುಗಳು ಇದರಲ್ಲಿ ಸೇರಿಲ್ಲ. ಉದ್ಯೋಗಿಗಳ ಸಂಬಳ ಹಾಗು ಇತರ ಖರ್ಚುಗಳೆಲ್ಲ ಬೇರೆಯೇ ಇವೆ.
ಜಗತ್ತಿನಲ್ಲೇ ಪತ್ರಿಕೆಗಳು ಅತ್ಯಂತ ಅಗ್ಗದ ಬೆಲೆಗೆ ಸಿಗುವುದು ಭಾರತದಲ್ಲಿ. ಲಂಡನ್ ನ ಗಾರ್ಡಿಯನ್ ಗೆ 150 ರೂ . ಆದರೆ ನ್ಯೂಯಾರ್ಕ್ ಟೈಮ್ಸ್ ಗೆ 175 ರೂ. ಈ ಎರಡೂ ಪತ್ರಿಕೆಗಳಷ್ಟೇ ಸಂಖ್ಯೆಯ ಪುಟಗಳಿರುವ ಭಾರತದ ಪತ್ರಿಕೆಗೆ ಎಷ್ಟು ಕಡಿಮೆ ಬೆಲೆ ಇದೆ ? ನಮ್ಮ ಪಕ್ಕದ ಶ್ರೀಲಂಕಾ ಹಾಗು ಬಾಂಗ್ಲಾದೇಶಗಳಲ್ಲೂ ಇಲ್ಲಿಗಿಂತ ಅರ್ಧದಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಪುಟಗಳಿರುವ ಪತ್ರಿಕೆಗಳಿಗೆ ಇಲ್ಲಿಗಿಂತ ದುಪ್ಪಟ್ಟು ಬೆಲೆಯಿದೆ. ನಾನು ಅಂಕಣ ಬರೆಯುತ್ತಿದ್ದ ಪಾಕಿಸ್ತಾನಿ ಪತ್ರಿಕೆಯೊಂದರ ಬೆಲೆ 40 ರೂ. ಪಾಕಿಸ್ತಾನದ ರೂಪಾಯಿಗೆ ಭಾರತದ ರೂಪಾಯಿಯ ಅರ್ಧದಷ್ಟೂ ಬೆಲೆಯಿಲ್ಲ. ಆದರೂ ಲಾಹೋರ್ ಅಥವಾ ಕರಾಚಿಯ ಓದುಗ ಡೆಲ್ಲಿ ಅಥವಾ ಮುಂಬೈಯ ಓದುಗನಿಗಿಂತ ನಾಲ್ಕು ಪಟ್ಟು ಹೆಚ್ಚು ಹಣ ಪಾವತಿಸಿ ಪತ್ರಿಕೆ ಖರೀದಿಸುತ್ತಾನೆ. ಇವತ್ತು ಜಾಹೀರಾತಿಗೆ ಮಾಧ್ಯಮಗಳು ಹೆಚ್ಚಿವೆ, ಆದರೆ ಜಾಹೀರಾತಿನ ಪ್ರಮಾಣ ಅಷ್ಟೇ ಇದೆ. ಇದಕ್ಕಾಗಿ ಪತ್ರಿಕೆಗಳು ಇನ್ನೂ ಹಲವು ಮಾಧ್ಯಮಗಳ ಜೊತೆ ಇಂದು ಸ್ಪರ್ಧಿಸಬೇಕಾಗಿದೆ.
ಇಂತಹ ಮಾರುಕಟ್ಟೆಯಲ್ಲಿ ಸರಕಾರ ಈಗ ವಿಧಿಸಿರುವ ಹೊಸ ತೆರಿಗೆ ಎಲ್ಲ ಪತ್ರಿಕೆಗಳ ತಯಾರಿಕಾ ವೆಚ್ಚದ ಮೇಲೆ ಇನ್ನಷ್ಟು ಹೊರೆ ಹೆಚ್ಚಿಸಲಿದೆ. ಇದರ ಹಿಂದೆ ಬೇರೆ ಏನಾದರೂ ಉದ್ದೇಶ ... ... ಬೇಡ ಬಿಡಿ , ಯಾಕೆ ಈ ಹೊಸ ತೆರಿಗೆ ಹಾಕಿದರು ಎಂದು ನಾನು ಊಹಾಪೋಹಕ್ಕೆ ಇಳಿಯುವುದಿಲ್ಲ. ಈ ಲೇಖನದ ಉದ್ದೇಶವೇ ಬೇರೆ.
ಈಗ ಮತ್ತೆ ಜೆಫರ್ಸನ್ ವಿಷಯಕ್ಕೆ ಬರೋಣ. ಮಾಧ್ಯಮ ಎಂಬುದು ಈಗ ಬೇರೆ ಹಲವು ಆಯಾಮಗಳನ್ನು ಪಡೆದಿರುವ ಈ ಸಂದರ್ಭದಲ್ಲಿ ಯಾಕೆ ಪತ್ರಿಕೆಗಳು ನಮ್ಮ ಸಮಾಜಕ್ಕೆ ಅಷ್ಟು ಮುಖ್ಯ ಎಂದು ಸ್ವಲ್ಪ ಚರ್ಚಿಸೋಣ. ಈ ಪತ್ರಿಕೆಗಳ ಪತ್ರಕರ್ತರು ಎರಡು ತರದವರಿರುತ್ತಾರೆ : ಸಂಪಾದಕರು ಹಾಗು ವರದಿಗಾರರು / ಫೋಟೋಗ್ರಾಫರ್ ಗಳು. ಈ ವರದಿಗಾರರಲ್ಲೂ ಬೀಟ್ ( ವಿಭಾಗವಾರು ) ವಿಭಜನೆ ಇರುತ್ತದೆ. ಕಾಲು ಶತಮಾನ ಹಿಂದೆ ನಾನೂ ಇಂತಹ ಒಂದು ಬೀಟ್ ರಿಪೋರ್ಟರ್ ಆಗಿದ್ದೆ. ನನ್ನ ಬೀಟ್ ಬಾಂಬೆ ಸೆಷನ್ಸ್ ಕೋರ್ಟ್ ಆಗಿತ್ತು.
ಬಾಂಬೆ ಸೆಷನ್ಸ್ ಕೋರ್ಟ್ ನಲ್ಲಿ 40 ವಿವಿಧ ಕೋರ್ಟ್ ರೂಮ್ ಗಳಿದ್ದವು. ಅದರ ವರದಿ ಮಾಡಲು ಪ್ರತಿದಿನ 4 ಬಾರಿ - ಬೆಳಗ್ಗೆ ಎರಡು ಬಾರಿ , ಮಧ್ಯಾಹ್ನ ಎರಡು ಬಾರಿ - ಪ್ರತಿ ಕೋರ್ಟ್ ರೂಮ್ ಗೆ ಹೋಗಿ ಅಲ್ಲಿ ಏನಾಗುತ್ತಿದೆ ಎಂದು ನೋಡಬೇಕು. ವಕೀಲರನ್ನು, ಕಕ್ಷಿದಾರರನ್ನು, ಅಪರಾಧಿಗಳನ್ನು, ಕೊಲೆಗಡುಕರನ್ನು , ವಂಚಕರನ್ನು , ಸೆಲೆಬ್ರಿಟಿಗಳನ್ನು ಮಾತಾಡಿಸಿ ಯಾವ್ಯಾವ ಪ್ರಕರಣಗಳು ನಡೆಯುತ್ತಿವೆ ಎಂದು ತಿಳಿದುಕೊಳ್ಳಬೇಕು. ನಂತರ ಸಂಜೆ ಕಚೇರಿಗೆ ಬಂದು ಕೂತು ಈ ಎಲ್ಲರೊಂದಿಗೆ ಮಾತಾಡಿದ್ದರಿಂದ ಸಿಕ್ಕಿದ ವಿಷಯಗಳನ್ನು ಪರಿಶೀಲಿಸಿ ಮೂರು ಅಥವಾ ನಾಲ್ಕು ಸುದ್ದಿಗಳನ್ನು ಬರೆಯಬೇಕು.
ಸುಮಾರು 5000 ದಿಂದ 7000 ಪೂರ್ಣಕಾಲಿಕ ಪತ್ರಿಕಾ ವರದಿಗಾರರು ಮತ್ತು ಫೋಟೋಗ್ರಾಫರ್ ಗಳು ದೇಶಾದ್ಯಂತ ಶಿಕ್ಷಣ , ಅರೋಗ್ಯ , ಅಪರಾಧ ಹೀಗೆ ವಿವಿಧ ಕ್ಷೇತ್ರಗಳ ವರದಿಗಾರಿಗೆ ಮಾಡುತ್ತಿದ್ದಾರೆ. ಒಟ್ಟಾರೆ ಅವರ ಕೆಲಸ - ( ಸರಕಾರಿ ) ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂದು ದಾಖಲಿಸುವುದು.
ಟಿವಿ ಮಾಧ್ಯಮ ಇದನ್ನು ಮಾಡುವುದಿಲ್ಲ. ಏಕೆಂದರೆ ಈ ವರದಿಗಾರಿಕೆಯಲ್ಲಿ ಬಹುತೇಕ ಶೂಟ್ ಮಾಡಿದ ದೃಶ್ಯಗಳಿರುವುದಿಲ್ಲ. ಟಿವಿ ಚಾನೆಲ್ ಗಳು ಹೆಚ್ಚಾಗಿ ಮಾಡುವುದು ಪತ್ರಿಕೆಗಳು ಮಾಡಿರುವ ವರದಿಗಳ ಫಾಲೋ ಅಪ್ ಗಳು. ಹಾಗಾದರೆ ಪತ್ರಿಕೆಗಳ ಬಗ್ಗೆ ಜೆಫರ್ಸನ್ ಹೇಳಿದ್ದೇನು ? ಅವರು ಇಂತಹ ಲೇಖನಗಳ ಬಗ್ಗೆಯಂತೂ ಹೇಳಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಏಕೆಂದರೆ ಎಲ್ಲ ರೀತಿಯ ಅಭಿಪ್ರಾಯಗಳ ಲೇಖನಗಳು ಈಗಲೂ, ಮುಂದೆಯೂ ಧಾರಾಳವಾಗಿ ಬೇರೆ ಎಲ್ಲ ಕಡೆ ಸಿಗಲಿವೆ.
ಆದರೆ ಪತ್ರಿಕೆ ಎಂದರೆ ವರದಿಗಾರಿಕೆ. ಒಂದು ಮುಕ್ತ ಸಮಾಜದಲ್ಲಿ ಪತ್ರಿಕೆಗೆ ಮಹತ್ವ ಬರುವುದೂ ಈ ವರದಿಗಾರಿಕೆಯಿಂದಲೇ. ಇವತ್ತು ನಮ್ಮ ಹಾಗು ಈ ಜಗತ್ತಿನ ಬೇರೆಲ್ಲ ಪ್ರಜಾಪ್ರಭುತ್ವ ದೇಶಗಳಿಗೆ ಈ ಸೇವೆ ಸಲ್ಲಿಸುತ್ತಿರುವುದು ಪತ್ರಿಕೆಗಳು ಮಾತ್ರ. ಸೋಷಿಯಲ್ ಮೀಡಿಯಾ ಎಂದೂ ಪೂರ್ಣಕಾಲಿಕ ವರದಿಗಾರರು ಮಾಡುವ ಕೆಲಸಕ್ಕೆ ಪರ್ಯಾಯವಾಗಲಾರದು. ನಿಜವಾದ ಪತ್ರಿಕೋದ್ಯಮ ಎಂದರೆ ವಿವರವಾದ ವರದಿಗಾರಿಕೆ. ಹಾಗಾಗಿ ಈಗ ನ್ಯೂಸ್ ಪ್ರಿಂಟ್ ಮೇಲೆ ಹಾಕಿರುವ ತೆರಿಗೆ ಸರಕಾರದ ದಕ್ಷತೆಯನ್ನು ಪರಿಶೀಲಿಸುವ ಹಾಗು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಜನರ ಸಾಮರ್ಥ್ಯದ ಮೇಲಿನ ನೇರ ದಾಳಿಯಾಗಿದೆ.
ಕೃಪೆ : timesofindia.indiatimes.com