ಮಧುಮೇಹವು ಹೃದ್ರೋಗ ಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆಯೇ?
ಮಧುಮೇಹ ಪೀಡಿತ ವಿಶ್ವದ ಅಗ್ರ 10 ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ಸುಮಾರು 70 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಭಾರತವು ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಮಧುಮೇಹವು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ ಹೌದು ಎಂದಾದರೆ ಮುಂದೆ ಏನಾಗುತ್ತದೆ? ಇದು ರಕ್ತದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಕ್ಕರೆಯನ್ನು ಹೊಂದಿರುವ ಹಲವಾರು ಮಧುಮೇಹಿಗಳು ಕೇಳುವ ಅತ್ಯಂತ ಸಾಮಾನ್ಯ ಪ್ರಶ್ನೆಯಾಗಿದೆ. ಇದಕ್ಕೆ ಹೌದು ಎನ್ನುವುದೇ ಉತ್ತರವಾಗಿದೆ. ರಕ್ತದಲ್ಲಿಯ ಅಧಿಕ ಸಕ್ಕರೆ ಮಟ್ಟವು ವಿವಿಧ ಹೃದಯನಾಳೀಯ ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಧುಮೇಹಿಗಳು ನಿಯಮಿತ ಆರೋಗ್ಯ ತಪಾಸಣೆ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಜೊತೆಗೆ ಆರೋಗ್ಯಯುತ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ.
ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಷನ್ನ ಡಯಾಬಿಟಿಸ್ ಅಟ್ಲಾಸ್ ಸೂಚಿಸಿರುವಂತೆ ಭಾರತದಲ್ಲಿ ಸುಮಾರು ಏಳು ಕೋಟಿ ಜನರು ಮಧುಮೇಹಪೀಡಿತರಾಗಿದ್ದಾರೆ. ಈ ಸಂಖ್ಯೆಯೇ ಅಂತಿಮವಲ್ಲ,ಏಕೆಂದರೆ 3.5 ಕೋಟಿಗೂ ಅಧಿಕ ಜನರು ಮಧುಮೇಹ ಪೂರ್ವ (ಪ್ರಿ-ಡಯಾಬಿಟಿಸ್)ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ರಕ್ತನಾಳಗಳನ್ನು ನಾಶಗೊಳಿಸುತ್ತದೆ ಮತ್ತು ಅಂತಿಮವಾಗಿ ವ್ಯಕ್ತಿಯನ್ನು ಹಲವಾರು ಹೃದ್ರೋಗಗಳಿಗೆ ಸುಲಭ ಗುರಿಯನ್ನಾಗಿಸುತ್ತದೆ. ಹೀಗಾಗಿ ಮಧುಮೇಹಿಗಳು ಹೃದ್ರೋಗಗಳ ಅಪಾಯದ ಅಂಶಗಳ ಮೇಲೆ ನಿಗಾಯಿರಿಸಬೇಕು. ವಿಶೇಷವಾಗಿ ಈಗಾಗಲೇ ಹೃದಯಾಘಾತ ಅನುಭವಿಸಿರುವವರು ಹೆಚ್ಚಿನ ಅಪಾಯದ ವಲಯದಲ್ಲಿರುತ್ತಾರೆ.
ರಕ್ತದಲ್ಲಿ ಅಧಿಕ ಸಕ್ಕರೆಯ ಮಟ್ಟವಿರುವವರು ಹೃದಯನಾಳೀಯ ರೋಗಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಹಲವಾರು ಸಂಶೋಧನೆಗಳೂ ದೃಢಪಡಿಸಿವೆ. ತಮಗೆ ಮಧುಮೇಹ ಇದೆ ಎನ್ನುವುದರ ಅರಿವೇ ಇಲ್ಲದ ವ್ಯಕ್ತಿಗಳು ಹೃದಯಾಘಾತಕ್ಕೆ ಗುರಿಯಾಗುವ ಭಾರೀ ಅಪಾಯವನ್ನು ಎದುರಿಸುತ್ತಾರೆ. ಹೀಗಾಗಿ ಇಂತಹ ಅಪಾಯಗಳನ್ನು ತಗ್ಗಿಸಲು ನಿಯಮಿತ ಆರೋಗ್ಯ ತಪಾಸಣೆಯು ಅಗತ್ಯವಾಗಿದೆ.
ಗರ್ಭಿಣಿಯರಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿದ್ದರೆ ಭ್ರೂಣದಲ್ಲಿ ಹೃದಯನಾಳೀಯ ದೋಷಗಳು,ಮೂತ್ರನಾಳ ಸೋಂಕುಗಳು ಮತ್ತು ಇತರ ಹಲವಾರು ವೈಕಲ್ಯಗಳನ್ನುಂಟು ಮಾಡುವ ಜನ್ಮದತ್ತ ವಿರೂಪಗಳುಂಟಾಗುವ ಅಪಾಯವು ಹೆಚ್ಚಾಗಿರುತ್ತದೆ. ಗರ್ಭಿಣಿಯರಲ್ಲಿ ಮಧುಮೇಹವು ಭ್ರೂಣದ ಸಾವಿಗೂ ಕಾರಣವಾಗಬಹುದು. ಅಲ್ಲದೆ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯಾ ಮಧುಮೇಹ ಪೀಡಿತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಅಲ್ಲದೆ ಹೃದಯ ವೈಫಲ್ಯದ ಸಾಧ್ಯತೆಯೂ ಇರುತ್ತದೆ. ಆದರೆ ನಿಯಮಿತ ಪ್ರಸವಪೂರ್ವ ಕಾಳಜಿ,ಸಕ್ಕರೆಯ ಕಟ್ಟುನಿಟ್ಟಿನ ನಿಯಂತ್ರಣ,ಆರೋಗ್ಯಯುತ ಬದುಕು,ಜೀವನಶೈಲಿಯಲ್ಲಿ ಬದಲಾವಣೆ,ಪ್ರಸವದ ಸಂದರ್ಭದಲ್ಲಿ ಸೂಕ್ತ ಕಾಳಜಿ ಇವುಗಳ ಮೂಲಕ ಗರ್ಭಾವಸ್ಥೆಯ ಮಧುಮೇಹದಿಂದ ಭ್ರೂಣಕ್ಕೆ ಅಪಾಯವನ್ನು ಕಡಿಮೆ ಮಾಡಬಹುದು.
ಕೆಲವು ಟಿಪ್ಸ್
ನಿಗದಿತವಾಗಿ ವೈದ್ಯಕೀಯ ತಪಾಸಣೆ,ನಿಯಮಿತ ದೈಹಿಕ ಚಟುವಟಿಕೆಗಳು, ಆರೋಗ್ಯಕರ ಆಹಾರ ಸೇವನೆ, ದಿನಕ್ಕೆರಡು ಬಾರಿ ಬಿರುಸಿನ ವಾಕಿಂಗ್, ಧೂಮಪಾನ ಮತ್ತು ಮದ್ಯಪಾನ ವರ್ಜನೆಯಂತಹ ಕೆಲವು ಕ್ರಮಗಳ ಮೂಲಕ ಮಧುಮೇಹದಿಂದ ದೂರವಿರಲು ಸಾಧ್ಯ ಎನ್ನುತ್ತಾರೆ ಆರೋಗ್ಯ ತಜ್ಞರು.