ದೇಶದ ಗಮನ ಸೆಳೆದ ಬೀದರ್ ಶಾಹೀನ್ ಸಮೂಹದ ನೀಟ್ ಕೋಚಿಂಗ್
ಬೀದರ್ , ಜು. 15 : ಈ ಬಾರಿಯ ನೀಟ್ ಪರೀಕ್ಷೆಗೆ ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಒಟ್ಟು ಸುಮಾರು 1200 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆ ಪೈಕಿ ಕನಿಷ್ಠ 435 ವಿದ್ಯಾರ್ಥಿಗಳು ದೇಶದ ವಿವಿಧೆಡೆ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣದ ಸೀಟು ಪಡೆಯಲಿದ್ದಾರೆ ಎಂದು ಶಾಹೀನ್ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಸಾಹೇಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಹೀನ್ ವಿದ್ಯಾರ್ಥಿಗಳು ಈ ಬಾರಿ ಕರ್ನಾಟಕದ ಸುಮಾರು 10% ಹಾಗು ದೇಶದ 0.7 % ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಪಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಕಳೆದ ವರ್ಷ ಸಂಸ್ಥೆಯ ಬೀದರ್ ಶಾಖೆಯೊಂದರಿಂದಲೇ 304 ವಿದ್ಯಾರ್ಥಿಗಳು ಹಾಗು 2017 ರಲ್ಲಿ 201 ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಸೀಟುಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಎಂದು ಅಬ್ದುಲ್ ಖದೀರ್ ಸಾಹೇಬ್ ಅವರು ತಿಳಿಸಿದ್ದಾರೆ.
ನೀಟ್ - ವೈಜ್ಞಾನಿಕ ತರಬೇತಿ
" ನಮ್ಮಲ್ಲಿ ಪ್ರಥಮ ಹಾಗು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ವೈಜ್ಞಾನಿಕ ನೀಟ್ ತರಬೇತಿ ನೀಡಲಾಗುತ್ತದೆ. ಪ್ರತಿವಾರ ಒಂದು ಟೆಸ್ಟ್ ಮಾಡಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ. ಅಲ್ಲಿ ಸಿಕ್ಕಿದ ಅಂಕಗಳ ಆಧಾರದಲ್ಲಿ ಪ್ರತಿ ವಿದ್ಯಾರ್ಥಿಗೆ ಹೇಗೆ ತರಬೇತಿ ಮುಂದುವರಿಸಬೇಕು ಎಂದು ನಿರ್ಧರಿಸಿ ಮುಂದುವರೆಯುತ್ತೇವೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. 15 ವರ್ಷಗಳಿಗೂ ಹೆಚ್ಚು ಅನುಭವ ವಿರುವ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಸತಿ ವ್ಯವಸ್ಥೆ ಹಾಗು ಪ್ರತಿದಿನ ಬಂದು ಹೋಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಒಟ್ಟಾರೆ ವಿದ್ಯಾರ್ಥಿಗಳಿಂದ ಅತ್ಯುತ್ತಮ ನಿರ್ವಹಣೆ ದಾಖಲಾಗುವಂತೆ ಅವರಿಗೆ ವೈಜ್ಞಾನಿಕವಾಗಿ ತರಬೇತಿ ನೀಡುತ್ತೇವೆ " ಎಂದು ಶಾಹೀನ್ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೌಸೀಫ್ ಮಡಿಕೇರಿ ಹೇಳಿದ್ದಾರೆ.
ವಿನೂತನ ಕೋರ್ಸ್ - ವಿಶಿಷ್ಟ ದಾಖಲೆ
ವಿನೂತನ ಹಿಫ್ಝುಲ್ ಕುರ್ ಆನ್ ಪ್ಲಸ್ ಕೋರ್ಸ್ ಪ್ರಾರಂಭಿಸಿದ ಹೆಗ್ಗಳಿಕೆ ಶಾಹೀನ್ ಸಮೂಹದ ಅಬ್ದುಲ್ ಖದೀರ್ ಸಾಹೇಬ್ ಅವರದ್ದು. ಇದರಲ್ಲಿ ಮದ್ರಸಾ ಕಲಿತ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಎಸೆಸೆಲ್ಸಿ ಪರೀಕ್ಷೆ ಬರೆಸುವುದು, ಮತ್ತೆ ಅವರಿಗೆ ಪಿಯುಸಿಗೆ ಹಾಗು ಸಿಇಟಿ ( ಈಗ ನೀಟ್ ) ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತದೆ. ಆವರೆಗೆ ವಿಜ್ಞಾನ, ಗಣಿತ ಇತ್ಯಾದಿ ಯಾವುದೇ ವಿಷಯಗಳನ್ನು ಏನೂ ಕಲಿತಿಲ್ಲದ ಮದ್ರಸ ವಿದ್ಯಾರ್ಥಿಗಳಿಗೆ ಇಲ್ಲಿ ಸಮಗ್ರ ತರಬೇತಿ ನೀಡಲಾಗುತ್ತದೆ. ಇತ್ತೀಚಿಗೆ ನಡೆದ ನೀಟ್ ಪರೀಕ್ಷೆಯಲ್ಲಿ ಈ ಹಿಫ್ಝುಲ್ ಕುರ್ ಆನ್ ಪ್ಲಸ್ ಕೋರ್ಸ್ ನ 17 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸಿಇಟಿ, ನೀಟ್ ಟಾಪರ್ ಗಳು
ಶಾಹೀನ್ ಶಿಕ್ಷಣ ಸಂಸ್ಥೆಯ ವಚನಶ್ರೀ ಪಾಟೀಲ್ 2016 ರಲ್ಲಿ ಹಾಗು 2017 ರಲ್ಲಿ ನಾಸಿರ್ ಹುಸೇನ್ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದರೆ , 2018 ರಲ್ಲಿ ವಿನೀತ್ ಮೇಗೂರು ನೀಟ್ ಪರೀಕ್ಷೆಯಲ್ಲಿ 8ನೇ ರಾಂಕ್ ಹಾಗು ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ ( ಏಮ್ಸ್ ) ಪರೀಕ್ಷೆಯಲ್ಲಿ 64ನೇ ರಾಂಕ್ ಪಡೆದಿದ್ದಾರೆ.
ದೇಶ ವಿದೇಶಗಳ ವಿದ್ಯಾರ್ಥಿಗಳು !
ಶಹೀನ್ ಶಿಕ್ಷಣ ಸಂಸ್ಥೆಯಲ್ಲಿ ದೇಶದ 19 ರಾಜ್ಯಗಳಿಂದ ಮಾತ್ರವಲ್ಲದೆ ನೇಪಾಳ, ಗಲ್ಫ್ ದೇಶಗಳಿಂದಲೂ ವಿದ್ಯಾರ್ಥಿಗಳು ದಾಖಲಾತಿ ಪಡೆದು ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಈ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿಯುಸಿಗೆ 2600 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಈ ಬಾರಿ ನೀಟ್ ನಲ್ಲಿ 1397 ನೇ ರಾಂಕ್ ಗಳಿಸಿರುವ ಸಮೀಹ ಮಹರೀನ್ ಅವರು ಕತರ್ ನಲ್ಲಿ ನೆಲೆಸಿದ್ದವರು. ಪೋಷಕರು ಅಲ್ಲಿಂದ ಕೊಪ್ಪಳಕ್ಕೆ ಬಂದಾಗ ಮಗಳನ್ನು ಶಾಹೀನ್ ಗೆ ಸೇರಿಸಿದರು. " ಇಲ್ಲಿಯ ತರಬೇತಿ ಅತ್ಯುತ್ತಮವಾಗಿದೆ . ನನಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವೈದ್ಯಕೀಯ ಸೀಟು ಸಿಗುವ ನಿರೀಕ್ಷೆಯಿದೆ " ಎನ್ನುತ್ತಾರೆ ಸಮೀಹ. ಬೀದರ್ ನಲ್ಲಿ ವಿದ್ಯಾರ್ಥಿನಿಯರಿಗೆ ಎರಡು ಹಾಗು ವಿದ್ಯಾರ್ಥಿಗಳಿಗೆ ಒಂದು ಸುಸಜ್ಜಿತ ಕ್ಯಾಂಪಸ್ ಇದೆ.
ಮತ್ತೊಮ್ಮೆ ದೇಶದ ವಿದ್ಯಾಕೇಂದ್ರವಾಗಿ ಬೀದರ್
ಬಹಮನಿ ಆಡಳಿತದ ಕಾಲದಲ್ಲಿ ಬೀದರ್ ವಿಶ್ವದ ಜ್ಞಾನ ಕೇಂದ್ರಗಳಲ್ಲಿ ಒಂದಾಗಿತ್ತು. ಜಗತ್ತಿನ ವಿವಿಧೆಡೆಗಳಿಂದ ಇಲ್ಲಿಗೆ ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. ಕ್ರಮೇಣ ಬೀದರ್ ಶೈಕ್ಷಣಿಕವಾಗಿ ಹಿಂದೆ ಬಿದ್ದು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಗಳಿಸಿತು. ಇಂದು ಮತ್ತೆ ಬೀದರ್ ದೇಶದ ಪ್ರಮುಖ ವಿದ್ಯಾಕೇಂದ್ರವಾಗಿ ಗುರುತಿಸಿಕೊಳ್ಳುವಂತೆ ಶಾಹೀನ್ ಶಿಕ್ಷಣ ಸಂಸ್ಥೆಗಳನ್ನು ರೂಪಿಸುತ್ತಿದ್ದೇವೆ. ದೇಶದ ಒಟ್ಟು 9 ರಾಜ್ಯಗಳಲ್ಲಿ ಇಂದು ಶಾಹೀನ್ ನ 43 ಶಾಖೆಗಳಿದ್ದು, 400 ಕ್ಕೂ ಹೆಚ್ಚು ಅಧ್ಯಾಪಕರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ.
ಅಬ್ದುಲ್ ಖದೀರ್ ಸಾಹೇಬ್, ಅಧ್ಯಕ್ಷರು