ಸಾಂಸ್ಕೃತಿಕ ಸ್ಮಾರ್ಟ್ ಸಿಟಿಯಾಗಿ ಅಯೋಧ್ಯೆ
ಮಂದಿರ-ಮಸೀದಿ ವಿವಾದಕ್ಕೊಂದು ಸಂಧಾನ ಪ್ರಸ್ತಾಪ
ಮಾತುಕತೆಗಳಿಂದ ಬಗೆಹರಿಸಲಾಗದ ಯಾವುದೇ ಸಮಸ್ಯೆಯು ಈ ಜಗತ್ತಿನಲ್ಲಿಲ್ಲ. ಸಂಧಾನ ಪ್ರಕ್ರಿಯೆಯ ಮೂಲಕವಾದರೂ ಸರಿಯೇ, ಇಂತಹುದೊಂದು ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಲ್ಲಿ ಪ್ರಕ್ರಿಯೆ ಮುಖ್ಯವೇ ಹೊರತು ಸಂಧಾನದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲ. ಸಂಧಾನಕಾರರು ಬುದ್ಧಿವಂತಿಕೆಯ, ತಾರ್ಕಿಕ ಮತ್ತು ಪ್ರಜಾಸತ್ತಾತ್ಮಕ ಕ್ರಮಗಳನ್ನು ಅನುಸರಿಸುತ್ತಿರುವವರೆಗೆ ಮತ್ತು ಸಂಧಾನದ ಮೂಲಕ ಹೊರಹೊಮ್ಮುವ ಇತ್ಯರ್ಥ ಪ್ರಸ್ತಾವವನ್ನು ಮುಂಗಡಪತ್ರದಲ್ಲಿ ಹಂಚಿಕೆ ಮತ್ತು ಸೂಕ್ತ ಕಾನೂನಿನ ಬೆಂಬಲದೊಂದಿಗೆ ಜಾರಿಗೊಳಿಸಲು ಈಗಿನ ಸರಕಾರವು ಮುಕ್ತ ಮನಸ್ಸು ಹೊಂದಿದ್ದರೆ ಸಂಧಾನವನ್ನು ನಡೆಸುತ್ತಿರುವವರು ಯಾರು ಎನ್ನುವುದು ನಿಜಕ್ಕೂ ಮುಖ್ಯ ಅಲ್ಲವೇ ಅಲ್ಲ.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಲೋಪದೋಷಗಳು ಮತ್ತು ತಮ್ಮ ಪರಿಕಲ್ಪನೆಗಳು ಹಾಗೂ ಸಿದ್ಧಾಂತಗಳನ್ನು ಪ್ರತಿಯೊಬ್ಬರ ಮೇಲೆ ಮತ್ತು ಪ್ರತಿಯೊಂದರ ಮೇಲೆ ಹೇರಲು ರಾಜಕೀಯ ಧಣಿಗಳ ಹುನ್ನಾರಗಳನ್ನು ಪರಿಗಣಿಸಿದರೆ ಕಾನೂನಿನ ಆಡಳಿತದ ತೀರ್ಪುಗಾರನಾಗಿ ತನ್ನ ದೃಢತೆಯನ್ನು ಕಾಯ್ದುಕೊಳ್ಳುವುದು ನ್ಯಾಯಾಂಗಕ್ಕೆ ದೊಡ್ಡ ಸವಾಲು ಆಗಿದೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾನೂನು ಕ್ರಮಗಳು ನನೆಗುದಿಯಲ್ಲಿ ಬಿದ್ದಿವೆಯಾದರೂ ಅಯೋಧ್ಯೆ ವಿವಾದಕ್ಕೆ ಮಧ್ಯಸ್ಥಿಕೆಯ ಮೂಲಕ ಪರಿಹಾರ ಸಾಧ್ಯತೆಯನ್ನು ಕಂಡುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ನಿರ್ಧರಿಸಿತ್ತು. ನ್ಯಾಯಾಲಯವು ಏನೇ ತೀರ್ಪು ನೀಡಲಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವಂತೆ ನೋಡಿಕೊಳ್ಳಲು ಯಾವುದೇ ಕ್ರಮಕ್ಕೂ ತಾವು ಸಿದ್ಧ ಎಂದು ಆಡಳಿತಾರೂಢ ಬಿಜೆಪಿಯ ನಾಯಕರು ಘೋಷಿಸಿದ್ದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ನಿರ್ಧಾರವು ಮಹತ್ವ ಪಡೆದುಕೊಂಡಿತ್ತು.
ನ್ಯಾಯಾಲಯದಿಂದ ನೇಮಕಗೊಂಡಿರುವ ಸಂಧಾನಕಾರರ ಮೂವರು ಸದಸ್ಯರ ಸಮಿತಿಯೊಂದು ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಹಲವಾರು ತಿಂಗಳುಗಳಿಂದ ಪ್ರಕರಣದಲ್ಲಿಯ ಕಕ್ಷಿದಾರರನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸುತ್ತಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಈ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ. ಸಂಧಾನ ಮಾತುಕತೆಗಳ ಪ್ರಗತಿ ಅಥವಾ ಕೊರತೆ ಕುರಿತು ಯಾವುದೇ ಮಾಹಿತಿಯು ಈವರೆಗೆ ಸೋರಿಕೆಯಾಗಿಲ್ಲ.
ಜುಲೈ 18ರೊಳಗೆ ತನಗೆ ವರದಿಯನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಸಂಧಾನ ಸಮಿತಿಗೆ ಸೂಚಿಸಿದೆ. ಇದು ಅಯೋಧ್ಯೆ ಪ್ರಕರಣದಲ್ಲಿ ಹಾಗೂ ನ್ಯಾಯಯುತ ಮತ್ತು ಗೌರವಯುತ ಇತ್ಯರ್ಥದ ಸಂಭಾವ್ಯ ಬಾಹ್ಯರೇಖೆಗಳು ಏನಿರಬಹುದು ಎನ್ನುವ ಬಗ್ಗೆ ಮತ್ತೊಮ್ಮೆ ಕುತೂಹಲವನ್ನು ಹುಟ್ಟುಹಾಕಿದೆ.
ವಾಸ್ತವಗಳು, ನಂಬಿಕೆಗಳು, ಸತ್ಯಗಳು ಮತ್ತು ಸುಳ್ಳುಗಳು ಸಹ, ಏಕಕಾಲದಲ್ಲಿ ಇವೆಲ್ಲವುಗಳ ಕಲಸುಮೇಲೋಗರದ ಫಲಶ್ರುತಿಯೇ ಈ ಜಟಿಲ ಮಂದಿರ-ಮಸೀದಿ ವಿವಾದವಾಗಿದೆ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯು ಧ್ವಂಸಗೊಂಡಿರದಿದ್ದರೆ ಇಂದಿನ ಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಧ್ವಂಸದ ಹಿಂದಿನ ರೂವಾರಿಗಳಿಗೆ ಈವರೆಗೂ ದಂಡನೆಯಾಗಿಲ್ಲ ಮತ್ತು ನ್ಯಾಯಾಲಯದ ನಿರ್ದೇಶಗಳ ಹೊರತಾಗಿಯೂ ಅವರನ್ನೊಳಗೊಂಡ ಪ್ರಕರಣದ ತ್ವರಿತ ವಿಚಾರಣೆಗೆ ಒತ್ತು ನೀಡಲಾಗುತ್ತಿದೆ ಎನ್ನುವುದರ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ದೇಶದ ಘನತೆ ಮತ್ತು ಗೌರವ, ಜಾಗತೀಕರಣಗೊಂಡ ವಿಶ್ವದಲ್ಲಿ ದೇಶದ ಮತ್ತು ಅದರ ಎಲ್ಲ 135 ಕೋಟಿ ಪ್ರಜೆಗಳ ಅನನ್ಯತೆ ಪಣಕ್ಕೊಡ್ಡಲ್ಪಟ್ಟಿವೆ. ಆದರೂ ಅಂದು ನಡೆದಿದ್ದ ಅಪರಾಧದಲ್ಲಿ ರಾಜಕೀಯ, ಮಾಧ್ಯಮ ಮತ್ತು ನ್ಯಾಯಾಂಗದ ಆಸಕ್ತಿಯ ಕೊರತೆಯಿದೆ ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿದೆ.
ಪರಿಹಾರ
ಮಾತುಕತೆಗಳಿಂದ ಬಗೆಹರಿಸಲಾಗದ ಯಾವುದೇ ಸಮಸ್ಯೆಯು ಈ ಜಗತ್ತಿನಲ್ಲಿಲ್ಲ. ಸಂಧಾನ ಪ್ರಕ್ರಿಯೆಯ ಮೂಲಕವಾದರೂ ಸರಿಯೇ, ಇಂತಹುದೊಂದು ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಲ್ಲಿ ಪ್ರಕ್ರಿಯೆ ಮುಖ್ಯವೇ ಹೊರತು ಸಂಧಾನದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲ. ಸಂಧಾನಕಾರರು ಬುದ್ಧಿವಂತಿಕೆಯ, ತಾರ್ಕಿಕ ಮತ್ತು ಪ್ರಜಾಸತ್ತಾತ್ಮಕ ಕ್ರಮಗಳನ್ನು ಅನುಸರಿಸುತ್ತಿರುವವರೆಗೆ ಮತ್ತು ಸಂಧಾನದ ಮೂಲಕ ಹೊರಹೊಮ್ಮುವ ಇತ್ಯರ್ಥ ಪ್ರಸ್ತಾವವನ್ನು ಮುಂಗಡಪತ್ರದಲ್ಲಿ ಹಂಚಿಕೆ ಮತ್ತು ಸೂಕ್ತ ಕಾನೂನಿನ ಬೆಂಬಲದೊಂದಿಗೆ ಜಾರಿಗೊಳಿಸಲು ಈಗಿನ ಸರಕಾರವು ಮುಕ್ತ ಮನಸ್ಸು ಹೊಂದಿದ್ದರೆ ಸಂಧಾನವನ್ನು ನಡೆಸುತ್ತಿರುವವರು ಯಾರು ಎನ್ನುವುದು ನಿಜಕ್ಕೂ ಮುಖ್ಯ ಅಲ್ಲವೇ ಅಲ್ಲ.
ನಮ್ಮ ಅಭಿಪ್ರಾಯದಲ್ಲಿ ಯಾವುದೇ ಸಂಧಾನ ಇತ್ಯರ್ಥಕ್ಕೆ ಪೂರ್ವಭಾವಿ ಷರತ್ತುಗಳಲ್ಲಿ ಇವು ಒಳಗೊಂಡಿರಬೇಕು;
♦ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಬೇಕು ಮತ್ತು ‘ಮಧ್ಯಸ್ಥಿಕೆಯ ಮೂಲಕ ರಾಜಿ’ಗೆ ಮುನ್ನ ತೀರ್ಪು ಪ್ರಕಟಗೊಳ್ಳಬೇಕು.
♦ ಈಗಾಗಲೇ ಅಸ್ತಿತ್ವದಲ್ಲಿರುವ ಮಸೀದಿಯನ್ನು ಸಂಘ ಪರಿವಾರವು ಈ ಹಿಂದೆ ಹೇಳಿರುವಂತೆ ಅದು ಮಥುರಾದಲ್ಲಿರಲಿ ಅಥವಾ ವಾರಣಾಸಿಯಲ್ಲಿರಲಿ, ಧ್ವಂಸಗೊಳಿಸುವ ಅಥವಾ ತೆರವುಗೊಳಿಸುವ ಅದೇ ಪ್ರಕ್ರಿಯೆಯ ಯಾವುದೇ ಪುನರಾವರ್ತನೆಯನ್ನು ಕ್ರಿಮಿನಲ್ ಕೃತ್ಯವನ್ನಾಗಿ ಪರಿಗಣಿಸುವ ರಾಷ್ಟ್ರೀಯ ಕಾನೂನೊಂದನ್ನು ತರಬೇಕು.
♦ ರಾಜಿ ಸೂತ್ರವನ್ನು ಸ್ವೀಕರಿಸಿ,ಅದನ್ನು ಅನುಮೋದಿಸಬೇಕು ಮತ್ತು ಕ್ರಿಮಿನಲ್ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಅದರ ಅನುಷ್ಠಾನವನ್ನು ತಡೆಹಿಡಿಯಬೇಕು.
♦ ಬಾಬರಿ ಮಸೀದಿಯ ಧ್ವಂಸಕ್ಕೆ ಸಂಚು ಹೂಡಿದ್ದ ತಪ್ಪು ಸಾಬೀತಾಗಿರುವ ಯಾವುದೇ ವ್ಯಕ್ತಿ ಅಥವಾ ಆತ/ಆಕೆ ಭಾಗವಾಗಿರುವ ಯಾವುದೇ ಸಂಸ್ಥೆ/ಸಂಘಟನೆಯು ಮಂದಿರದ ಅಥವಾ ಈ ಕೆಳಗೆ ವಿವರಿಸಿರುವ ಅಯೋಧ್ಯೆ ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತದಲ್ಲಿ ಯಾವುದೇ ಪಾತ್ರವನ್ನು ವಹಿಸುವಂತಿಲ್ಲ.
ರಾಜಿ ಸೂತ್ರ
ಇಡೀ ಅಯೋಧ್ಯೆ ನಗರವನ್ನು ‘ರಾಷ್ಟ್ರೀಯ ಸಾಂಸ್ಕೃತಿಕ ಸ್ಮಾರ್ಟ್ ಸಿಟಿ’ ಎಂದು ಘೋಷಿಸಬೇಕು ಮತ್ತು ಕೇಂದ್ರ ಸರಕಾರವು ಅದಕ್ಕೆ ನೇರವಾಗಿ ಆರ್ಥಿಕ ನೆರವು ಒದಗಿಸಬೇಕು ಮತ್ತು ನಿರ್ವಹಿಸಬೇಕು. ರಾಜ್ಯ ಸರಕಾರವು ಅದರ ಆಡಳಿತವನ್ನು ನೋಡಿಕೊಳ್ಳಬೇಕು. ಇತರ ಕೆಲವು ಸಲಹೆಗಳು ಇಲ್ಲಿವೆ:
♦ ಅಯೋಧ್ಯೆ ಸ್ಮಾರ್ಟ್ ಸಿಟಿಯ ವ್ಯವಸ್ಥಾಪನೆಗಾಗಿ ಕೇಂದ್ರ ಸಚಿವಾಲಯವು ಗೃಹ ಸಚಿವಾಲಯದಲ್ಲಿ ಪ್ರತ್ಯೇಕ ವಿಭಾಗವೊಂದನ್ನು ರಚಿಸಬೇಕು.
♦ ಸ್ಮಾರ್ಟ್ ಸಿಟಿಯ ಯೋಜನಾ ರೂಪುರೇಷೆಗಳು ಭಾರತ ಮತ್ತು ವಿದೇಶಗಳ ಅತ್ಯುತ್ತಮ ನಗರ ಯೋಜಕರು ಮತ್ತ್ತು ವಾಸ್ತುಶಿಲ್ಪಿಗಳ ಉಸ್ತುವಾರಿಯಲ್ಲಿ ಅಂತಿಮಗೊಳ್ಳಬೇಕು.
♦ ದಿಲ್ಲಿಯಲ್ಲಿನ ರಾಜಪಥ್‌ನಂತಹ ಸ್ಥಳವನ್ನು ಸೃಷ್ಟಿಸಲು ಯೋಜನೆಯಲ್ಲಿ ಅವಕಾಶವಿರಬೇಕು.
♦ ಈಗ ರಾಮ ಲಲ್ಲಾನ ವಿಗ್ರಹವು ಪೂಜೆಗೊಳ್ಳುತ್ತಿರುವ ಸ್ಥಳದಲ್ಲಿಯೇ ರಾಮಮಂದಿರದ ನಿರ್ಮಾಣ ನಡೆಯಬಹುದಾಗಿದೆ. ಈಗ ‘ಹಿಂದೂ’ ಪಕ್ಷ, ‘ಮುಸ್ಲಿಂ’ ಪಕ್ಷ ಮತ್ತು ನಿರ್ಮೋಹಿ ಅಖಾಡಾಕ್ಕೆ ಹಂಚಿಕೆಯಾಗಿರುವ ವಿವಾದಿತ ನಿವೇಶನದ ಮೂರೂ ಭಾಗಗಳನ್ನು ಮಂದಿರಕ್ಕೆ ಒಪ್ಪಿಸಬೇಕು.
* ಉದ್ಯಾನವನಗಳು,ಸರೋವರಗಳು,ಮ್ಯೂಸಿಯಮ್‌ಗಳು, ಗ್ರಂಥಾಲಯಗಳು, ಆಟದ ಮೈದಾನಗಳು, ಸಂದರ್ಶಕರ ಕೇಂದ್ರಗಳು ಹಾಗೂ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉತ್ಪನ್ನಗಳಿಗಾಗಿ ಮಾರುಕಟ್ಟೆಗಳು ಇತ್ಯಾದಿಗಳ ರೂಪದಲ್ಲಿ ವಿಶಾಲ ಮುಕ್ತ ಪ್ರದೇಶವನ್ನು ಸುಂದರಗೊಳಿಸಬೇಕು.
♦ ಈ ಮುಕ್ತ ಪ್ರದೇಶದ ಇನ್ನೊಂದು ಕಡೆಯ ಕೊನೆಯಲ್ಲಿ ಸ್ಮಾರ್ಟ್ ಸಿಟಿಯ ವಾಸ್ತುಶಿಲ್ಪಕ್ಕೆ ಹೊಂದಿಕೆಯಾಗುವ ವಿನ್ಯಾಸದಲ್ಲಿ ಸುಂದರವಾದ ಮಸೀದಿಯನ್ನು ನಿರ್ಮಿಸಬೇಕು. ಅದು ಆಧುನಿಕ ಕಲಾತ್ಮಕ ಸ್ವರೂಪದ್ದಾಗಿರಬಹುದು.
♦ 100 ಸದಸ್ಯರ ಆಡಳಿತ ಸಮಿತಿಯೊಂದು ಇಡೀ ಸ್ಮಾರ್ಟ್ ಸಿಟಿಯ ವ್ಯವಸ್ಥಾಪನೆಯನ್ನು ನಿರ್ವಹಿಸಬೇಕು ಮತ್ತು ಈ ಪೈಕಿ ಶೇ.33ರಷ್ಟು ಮಹಿಳಾ ಸದಸ್ಯರಿರಬೇಕು. ಸಮಿತಿಯ 70ರಷ್ಟು ಸದಸ್ಯರು ಹಿಂದೂ ಸಮುದಾಯವನ್ನು ಪ್ರತಿನಿಧಿಸಬೇಕು. 25 ಸದಸ್ಯರು ಮುಸ್ಲಿಮರಾಗಿದ್ದು ಅವರು ಸ್ಥಳೀಯ ಪ್ರದೇಶಗಳನ್ನು ಮತ್ತು ಭಾರತದ ಎಲ್ಲ ಪ್ರಮುಖ ರಾಜ್ಯಗಳನ್ನು ಪ್ರತಿನಿಧಿಸಬೇಕು. ಈ ಸದಸ್ಯರ ಪೈಕಿ ಕನಿಷ್ಠ ಮೂರನೇ ಒಂದು ಪಾಲು ಮಹಿಳೆಯರಾಗಿರಬೇಕು. ಉಳಿದ ಐದು ಸದಸ್ಯರು ಮುಸ್ಲಿಮೇತರ, ಮಾನ್ಯತೆ ಪಡೆದ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿರಬೇಕು.
♦ ಭಾರತದ ಸಾಂಸ್ಕೃತಿಕ ರಾಜಧಾನಿಯಾಗಿ ಅಯೋಧ್ಯೆ ಸ್ಮಾರ್ಟ್ ಸಿಟಿಯ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಮುಸ್ಲಿಮರು ತಮ್ಮ ಕೊಡುಗೆಯನ್ನು ಸಲ್ಲಿಸುತ್ತಾರೆ. ದೇಶಾದ್ಯಂತದ ಎಲ್ಲ ಮುಸ್ಲಿಮರು ಸ್ಮಾರ್ಟ್ ಸಿಟಿಯಲ್ಲಿನ ಎಲ್ಲ ಸಮುದಾಯಗಳಿಗೆ ತಮ್ಮ ಸೇವೆಯನ್ನು ಒದಗಿಸುತ್ತಾರೆ.
* ದೇಶಾದ್ಯಂತದ ಪ್ರಜೆಗಳಿಗೆ ಮತ್ತು ವಿದೇಶಗಳಲ್ಲಿ ಇರುವವರಿಗೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಲು ತಜ್ಞರು ಮತ್ತು ಸಲಹಾಕಾರರ ಇನ್ನೊಂದು ಸಮಿತಿಯನ್ನು ರಚಿಸಬೇಕು. ಅಯೋಧ್ಯೆ ಸ್ಮಾರ್ಟ್ ಸಿಟಿ ಮಾದರಿಯು ಎಲ್ಲ ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳು ಅನುಸರಿಸಲು ಆದರ್ಶಪ್ರಾಯ ಉದಾಹರಣೆಯಾಗಿರಬೇಕು. ಭಾರತೀಯ ಗುಣಲಕ್ಷಣಗಳ ಔನ್ನತ್ಯ ರಕ್ಷಣೆಗಾಗಿ ಅದರ ಪ್ರಜೆಗಳು ಪರಸ್ಪರ ಕೈಜೋಡಿಸುವುದಕ್ಕಿಂತ ಉತ್ತಮ ಆಡಳಿತ ಬೇರೊಂದಿಲ್ಲ.
(ಲೇಖಕರು ಯುಎಸ್-ಇಂಡಿಯಾ ಪಾಲಿಸಿ ಇನ್‌ಸ್ಟಿಟ್ಯೂಟ್ನಲ್ಲಿ ಚೀಫ್ ಸ್ಕಾಲರ್ ಆಗಿದ್ದಾರೆ.)
ಕೃಪೆ: thewire