ಭರವಸೆಗೆ ಸೀಮಿತವಾದ ಮಂಗಳೂರು ಹಜ್ ಭವನ
►10 ವರ್ಷ ಕಳೆದರೂ ಈಡೇರದ ಬೇಡಿಕೆ ►ಅನುದಾನ ವಾಪಸಾಗುವ ಭೀತಿ
2018ರಲ್ಲಿ ಮಂಗಳೂರಿನಿಂದ ಹಜ್ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿರುವ ಸಚಿವ ಝಮೀರ್ ಅಹ್ಮದ್ ಖಾನ್(ಸಂಗ್ರಹ ಚಿತ್ರ)
ಮಂಗಳೂರು, ಜು.16: ನಗರ ಹೊರ ವಲಯದ ಬಜ್ಪೆ-ಕೆಂಜಾರು ವಿಮಾನ ನಿಲ್ದಾಣದ ಮೂಲಕ ಪವಿತ್ರ ಹಜ್ ಯಾತ್ರೆ ಆರಂಭಗೊಂಡು 10 ವರ್ಷಗಳೇ ಉರುಳಿವೆ. ಬುಧವಾರದಿಂದ ಮೂರು ದಿನಗಳ ಕಾಲ ನಡೆಯುವ ಹಜ್ ಯಾತ್ರೆ 11ನೇ ವರ್ಷದ್ದಾಗಿದೆ. ಪ್ರತೀ ವರ್ಷವೂ ಹಜ್ ಯಾತ್ರಿಕರನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿ, ಹಜ್ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರುಗಳೆಲ್ಲಾ ‘ಹಜ್ ಭವನ’ ನಿರ್ಮಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಅದರ ಕಾರ್ಯಗತಕ್ಕೆ ಆಸಕ್ತಿ ತೋರುತ್ತಿಲ್ಲ ಎಂಬುದಕ್ಕೆ ಈವರೆಗೆ ನಡೆದ ವಿದ್ಯಮಾನವೇ ಸಾಕ್ಷಿ. ಹಜ್ ಇಲಾಖೆಯ ಹಿರಿಯ ಅಧಿಕಾರಿಗಳೂ ಮಂಗಳೂರಿನಲ್ಲಿ ಸುಸಜ್ಜಿತ ಹಜ್ ಭವನ ತಲೆಯೆತ್ತಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹೀಂರ ವಿಶೇಷ ಮುತುವರ್ಜಿಯಿಂದ ಹಜ್ ಭವನ ನಿರ್ಮಾಣಕ್ಕಾಗಿ ಕೆಂಜಾರು ಗ್ರಾಮದಲ್ಲಿ ಮಂಜೂರಾಗಿದ್ದ ಜಮೀನು ಬಳಿಕ ಕೈತಪ್ಪಿ ಹೋಗಿವೆ. ಕಳೆದ ಜುಲೈ 21 ರಂದು ಹಜ್ ಯಾತ್ರೆಗೆ ಚಾಲನೆ ನೀಡಿದ್ದ ಸಚಿವ ಝಮೀರ್ ಅಹ್ಮದ್ ಖಾನ್ ‘ರಾ.ಹೆ.75ರ ಫರಂಗಿಪೇಟೆಯ ಅಡ್ಯಾರ್ನಲ್ಲಿರುವ ಖಾಸಗಿ ಜಮೀನನ್ನು ಪರಿಶೀಲಿಸಲಾಗಿದೆ. ಇದನ್ನು ಖರೀದಿಸಿ ಅಲ್ಲಿ ಹಜ್ ಭವನ ನಿರ್ಮಿಸುವ ಯೋಜನೆ ಇದೆ’ ಎಂದಿದ್ದರು.
‘ಬಜ್ಪೆ ಬಳಿ ಪರಿಶೀಲಿಸಲಾದ ಜಮೀನು ಹಜ್ ಭವನ ನಿರ್ಮಾಣಕ್ಕೆ ಯೋಗ್ಯವಾದುದಲ್ಲ. ಹಾಗಾಗಿ ತಾನು ಅಡ್ಯಾರ್ ಬಳಿಯ ಖಾಸಗಿ ಜಮೀನನ್ನು ಪರಿಶೀಲಿಸಿದ್ದೇನೆ. ಆ ಜಮೀನಿನ ಮಾಲಕರು ರಿಯಾಯಿತಿ ದರದಲ್ಲಿ ನೀಡಿದರೆ ಅದನ್ನು ಖರೀದಿಸಿ ಅಲ್ಲೇ ಸುಸಜ್ಜಿತ ಹಜ್ ಭವನ ನಿರ್ಮಿ ಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಮತ್ತು ಜನನಿಬಿಡ ಪ್ರದೇಶದಲ್ಲಿ ಹಜ್ ಭವನ ನಿರ್ಮಿಸಿ ಅದನ್ನು ಸಮು ದಾಯದ ಇತರ ಕಾರ್ಯ ಕ್ರಮ ಗಳಿಗೂ ಬಾಡಿಗೆಗೆ ನೀಡಿ ಸದಾ ಚಟು ವಟಿಕೆಯಿಂದಿರುವಂತೆ ಮಾಡಬಹು ದಾಗಿದೆ ಎಂದು ಝಮೀರ್ ಅಹ್ಮದ್ ಹೇಳಿದ್ದರು.
ಅವರು ಹಾಗೇ ಹೇಳಿ ವರ್ಷವೊಂದು ಕಳೆದಿದ್ದರೂ ಯಾವುದೇ ಪ್ರಗತಿ ಆಗಿಲ್ಲ. ಇದೀಗ ಸರಕಾರಿ ಜಮೀನನ್ನು ತಲಾಶೆ ಮಾಡಲಾಗಿದ್ದರೂ ಹಜ್ ಭವನ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರ ಇನ್ನೂ ಆಗಿಲ್ಲ.
2017ರ ಮಾ.15ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಮಂಗಳೂರು ಹಜ್ ಭವನ ನಿರ್ಮಾಣಕ್ಕೆ 10 ಕೋ.ರೂ. ಘೋಷಿಸಿದ್ದರು. ಅದರಂತೆ ಹಣವೂ ಮಂಜೂರಾಗಿತ್ತು. ಆದರೆ ಎರಡು ವರ್ಷ ಕಳೆದರೂ ಯಾವುದೇ ಪ್ರಗತಿ ಕಾಣದ ಕಾರಣ ಇದೀಗ ಬಿಡು ಗಡೆಗೊಂಡ ಅನುದಾನ ವಾಪಸ್ ಆಗುವ ಭೀತಿ ಎದುರಾಗಿದೆ.
*ರಾ.ಹೆ.75ರ ಅಡ್ಯಾರ್ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಬಳಿ 69.50 ಸೆಂಟ್ಸ್ ಸರಕಾರಿ ಜಮೀನನ್ನು ಇದೀಗ ಹಜ್ ಭವನ ನಿರ್ಮಾಣಕ್ಕೆ ಕಾದಿರಿಸಲಾಗಿದೆ. ಈ ಬಗ್ಗೆ ಈಗಾಗಲೆ ಮಂಗಳೂರು ಸಹಾ ಯಕ ಆಯುಕ್ತರು ಆದೇಶ ಹೊರಡಿಸಿದ್ದು, ಆರ್ಟಿಸಿ ಕಲಂ 11ರಲ್ಲಿ ವಕ್ಫ್ ಹೆಸರಿನಲ್ಲಿ ಜಮೀನು ನೋಂದಣಿ ಆಗಿದೆ.
10 ವರ್ಷಗಳಲ್ಲಿ 3 ಜಮೀನು
ಕೆಂಜಾರು ಗ್ರಾಮದ ಸರ್ವೇ ನಂ. 16ರಲ್ಲಿ 2.18 ಎಕರೆ ಜಮೀನು ಮಂಜೂರು ಮಾಡಲು ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ ಆ ಜಮೀನು ಸರಕಾರಿ ಅನಾಧೀನ ಜಮೀನು, ಕುಮ್ಕಿ ಮಿತಿಯಲ್ಲಿದೆ, ಗ್ರಾಪಂ ಸದಸ್ಯರ ವಿರೋಧ, ಗ್ರಾಪಂ ಅಭಿಪ್ರಾಯ ನೀಡಿಲ್ಲ ಇತ್ಯಾದಿಯಾಗಿ ಕಡತಗಳಲ್ಲಿ ಒಕ್ಕಣೆ ನೀಡಲಾದ ಹಾಗೂ ಸ್ಥಳೀಯರ ವಿರೋಧವಿದ್ದ ಕಾರಣ ಆ ಪ್ರಸ್ತಾವವನ್ನು ಕೈಬಿಡಲಾಯಿತು.ಬಳಿಕ ಅದೇ ಗ್ರಾಮದ ಸರ್ವೇ ನಂಬ್ರ 99/2ಎ1ರಲ್ಲಿ ಸುಮಾರು 5.20 ಎಕರೆ ಜಮೀನು ಇರುವುದನ್ನು ತಿಳಿದುಕೊಂಡ ಹಜ್ ಕಮಿಟಿ ಮತ್ತೊಂದು ಅರ್ಜಿ ಸಲ್ಲಿಸಿ ಜಮೀನು ಮಂಜೂರು ಮಾಡುವಂತೆ ಕೇಳಿಕೊಂಡಿತು. ಅದರಂತೆ 5 ವರ್ಷಗಳ ಹಿಂದೆ ಕಂದಾಯ ಇಲಾಖೆಯು ಕೆಂಜಾರು ಗ್ರಾಮದಲ್ಲಿ ಹಜ್ ಭವನಕ್ಕೆ 1.91 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಪಟ್ಟಾ ಜಮೀನಿನ ಮಾಲಕರು ಇದು ತನ್ನ ಕುಮ್ಕಿ ಭೂಮಿ ಎಂದು ಹೇಳಿಕೊಂಡು ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಅದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೆಟ್ಟಲೇರಿದ್ದರೂ ಈ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇ ರಿದ್ದರು. ಈ ಮಧ್ಯೆ ರಾ.ಹೆ.75ರ ಅಡ್ಯಾರ್ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಬಳಿ 69.50 ಸೆಂಟ್ಸ್ ಸರಕಾರಿ ಜಮೀನನ್ನು ಕಾದಿರಿಸಲಾ ಗಿದೆ. ಇದರೊಂದಿಗೆ ಕಳೆದ 10 ವರ್ಷಗಳಲ್ಲಿ ಹಜ್ ಭವನ ನಿರ್ಮಾಣಕ್ಕೆ 3 ಜಮೀನನ್ನು ತಲಾಶೆ ಮಾಡಲಾಗಿದೆ. ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಕೆಲವರ ಪ್ರಕಾರ ಮಂಗಳೂರಿನಲ್ಲಿ ಹಜ್ ಭವನ ತಲೆ ಎತ್ತುವುದು ಬೆಂಗಳೂರು ಮೂಲದ ಸಚಿವರು, ಹಜ್ ಇಲಾಖಾಧಿಕಾರಿಗಳಿಗೆ ಮನಸ್ಸಿಲ್ಲ. ಆ ಇಚ್ಛಾಶಕ್ತಿಯ ಕೊರತೆ ಯಿಂದ ಸಮಸ್ಯೆ ಹಾಗೇ ಉಳಿದಿದೆ.
10 ವರ್ಷಗಳ ಹಿಂದಿನ ಕನಸು
ಈ ಹಿಂದೆ ಕರಾವಳಿ ಮತ್ತು ಪಶ್ಚಿಮ ಘಟ್ಟದ ಹಜ್ ಯಾತ್ರಾರ್ಥಿಗಳು ಪವಿತ್ರ ಮಕ್ಕಾ ಯಾತ್ರೆಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಶ್ರಯಿಸಬೇಕಾಗಿತ್ತು. ಆದರೆ 2009ರಲ್ಲಿ ಅದರ ಚಿತ್ರಣವೇ ಬದಲಾಯಿತು. ಉದ್ಯಮಿ ವೈ.ಮುಹಮ್ಮದ್ ಕುಂಞಿ ಅಧ್ಯಕ್ಷತೆಯಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿ ರಚಿಸಲಾಯಿತಲ್ಲದೆ ಸ್ವಯಂಸೇವಕರ ಸಹಕಾರದಿಂದ ಬಜ್ಪೆಯ ಅನ್ಸಾರುಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಜ್ ಕ್ಯಾಂಪ್ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.
ಈ ಹಿಂದೆ ಕರಾವಳಿ ಮತ್ತು ಪಶ್ಚಿಮ ಘಟ್ಟದ ಹಜ್ ಯಾತ್ರಾರ್ಥಿಗಳು ಪವಿತ್ರ ಮಕ್ಕಾ ಯಾತ್ರೆಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಶ್ರಯಿಸಬೇಕಾಗಿತ್ತು. ಆದರೆ 2009ರಲ್ಲಿ ಅದರ ಚಿತ್ರಣವೇ ಬದಲಾಯಿತು. ಉದ್ಯಮಿ ವೈ.ಮುಹಮ್ಮದ್ ಕುಂಞಿ ಅಧ್ಯಕ್ಷತೆಯಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿ ರಚಿಸಲಾಯಿತಲ್ಲದೆ ಸ್ವಯಂಸೇವಕರ ಸಹಕಾರದಿಂದ ಬಜ್ಪೆಯ ಅನ್ಸಾರುಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಜ್ ಕ್ಯಾಂಪ್ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.
ಇಂದಿನಿಂದ ಹಜ್ ಯಾನ ಆರಂಭ
ಕೇಂದ್ರ ಹಜ್ ಸಮಿತಿಯ ಮೂಲಕ ಮಂಗಳೂರು ವಿಮಾನ ನಿಲ್ದಾಣ ದಿಂದ ಜು.17, 18 ಮತ್ತು 19ರಂದು ಹಜ್ ಯಾನ ಆರಂಭಗೊಳ್ಳಲಿದೆ. ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 747 ಹಜ್ ಯಾತ್ರಿಕರು ಮೂರು ದಿನ ಕಾಲ 5 ವಿಮಾನಗಳಲ್ಲಿ ನೇರ ಮದೀನಾಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ. ಜು.17ರಂದು ಸಂಜೆ 6:50ಕ್ಕೆ ಮೊದಲ ವಿಮಾನ ಹೊರಡಲಿದ್ದು, ಅದರಲ್ಲಿ 150 ಯಾತ್ರಿಗಳು ಪ್ರಯಾ ಣಿಸಲಿದ್ದಾರೆ. ಜುಲೈ 18ರಂದು ಪೂರ್ವಾಹ್ನ 11:50ಕ್ಕೆ ದ್ವಿತೀಯ ವಿಮಾನದಲ್ಲಿ 150 ಮತ್ತು ಮಧ್ಯಾಹ್ನ 12:50ಕ್ಕೆ ಮೂರನೇ ವಿಮಾನದಲ್ಲಿ 149, ಜುಲೈ 19ರಂದು ರಾತ್ರಿ 12:30ಕ್ಕೆ ನಾಲ್ಕನೇ ವಿಮಾನದಲ್ಲಿ 139 ಮತ್ತು ಜುಲೈ 19ರಂದು ಮುಂಜಾನೆ 5:50ಕ್ಕೆ ಐದನೇ ವಿಮಾನದಲ್ಲಿ 159 ಯಾತ್ರಿಗಳು ಪ್ರಯಾಣಿಸಲಿದ್ದಾರೆ.