FaceApp ಮಜವಾಗಿದೆಯೇ?: ಎಚ್ಚರ.. ಈ ಪ್ರಸಿದ್ಧ ಆ್ಯಪ್ ನಲ್ಲಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ…
2017ರಲ್ಲಿ ಲಾಂಚ್ ಆದ ‘ಫೇಸ್ ಆ್ಯಪ್’ (FaceApp) ಸದ್ಯ ಭಾರೀ ಪ್ರಸಿದ್ಧಿ ಗಳಿಸಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವಯಸ್ಸಾದಂತೆ ಕಾಣುವ ಫೋಟೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಟ್ವಿಟರ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಗಳಲ್ಲಿ ಸ್ಟೋರಿಗಳಲ್ಲಿ ಈ ಕೃತಕ ವೃದ್ಧಾಪ್ಯದ ಫೋಟೊಗಳೇ ತುಂಬಿ ಹೋಗಿವೆ. ಆದರೆ ಫೇಸ್ ಆ್ಯಪ್ ನಲ್ಲಿರುವ ನಿಯಮಗಳು ಮತ್ತು ಷರತ್ತುಗಳು ಅಥವಾ ಟರ್ಮ್ಸ್ ಆ್ಯಂಡ್ ಕಂಡಿಶನ್ ಗಳನ್ನು ಓದಿದರೆ ಬಳಕೆದಾರರು ಬೆಚ್ಚಿ ಬೀಳುವುದು ಖಚಿತ.
ರಷ್ಯಾ ಮೂಲದ ಫೇಸ್ ಆ್ಯಪ್ ನಲ್ಲಿರುವ ನಿಯಮಗಳು ಮತ್ತು ಷರತ್ತುಗಳಲ್ಲಿ ಕೆಲ ಅಪಾಯಕಾರಿ ಅಂಶಗಳ ಬಗ್ಗೆ ಟ್ವಿಟರಿಗರು ಧ್ವನಿಯೆತ್ತಿದ್ದಾರೆ. ಇದರಲ್ಲಿರುವ ಪ್ರಮುಖ ಷರತ್ತೆಂದರೆ, ಫೇಸ್ ಆ್ಯಪ್ ತನ್ನ ಬಳಕೆದಾರರ ಫೋಟೊಗಳನ್ನು, ಎಡಿಟೆಡ್ ಫೋಟೊಗಳನ್ನು ಯಾವುದೇ ವಾಣಿಜ್ಯಿಕ ಉದ್ದೇಶಗಳಿಗಾಗಿ, ಜಗತ್ತಿನಲ್ಲಿ ಯಾವ ಜಾಗದಲ್ಲೂ ಬಳಸಿಕೊಳ್ಳಬಹುದು.
ನಿಯಮಗಳಲ್ಲಿರುವಂತೆ ನೀವು ನಿಮ್ಮ ಫೋಟೊಗಳನ್ನು ಒಂದು ಬಾರಿ ಎಡಿಟ್ ಮಾಡಿದರೆ ಅದನ್ನು ಕಂಪೆನಿಯು ತನ್ನ ಪ್ರಚಾರಕ್ಕಾಗಿ ಜಗತ್ತಿನ ಯಾವ ಮೂಲೆಯಲ್ಲೂ ಬಳಸಿಕೊಳ್ಳಬಹುದು. ಇದಕ್ಕಾಗಿ ಅದು ನಿಮ್ಮ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ. ಜಗತ್ತಿನ ಯಾವ ನಗರದ ಬಿಲ್ ಬೋರ್ಡ್ ನಲ್ಲಾದರೂ ಯಾವ ಬಳಕೆದಾರನ ಫೋಟೊ ಬಳಸುವ ಷರತ್ತನ್ನು ಫೇಸ್ ಆ್ಯಪ್ ಹೊಂದಿದೆ. ಬಳಕೆದಾರರು ಈ ಆ್ಯಪ್ ಬಳಕೆ ಸಂದರ್ಭ ಈ ಎಲ್ಲಾ ಷರತ್ತುಗಳನ್ನು ಒಪ್ಪಿರುತ್ತಾರೆ.
ಇಷ್ಟೇ ಅಲ್ಲದೆ ವ್ಯಕ್ತಿಯೊಬ್ಬರ ಹೆಸರು, ಧ್ವನಿಗಳನ್ನು ಬಳಸಿಕೊಳ್ಳುವ ಷರತ್ತನ್ನೂ ಒಳಗೊಂಡಿದೆ. “ನಮ್ಮ ಸೇವೆಯ ಮೂಲಕ ನೀವು ಏನನ್ನದಾರೂ ಪೋಸ್ಟ್ ಮಾಡಿದಲ್ಲಿ ಅಥವಾ ಶೇರ್ ಮಾಡಿದಲ್ಲಿ ನಿಮ್ಮ ಯೂಸರ್ ಕಂಟೆಂಟ್ ಅಥವಾ ಸಂಬಂಧಪಟ್ಟ ಮಾಹಿತಿಗಳು (ಯೂಸರ್ ನೇಮ್, ಲೊಕೇಶನ್ ಅಥವಾ ಪ್ರೊಫೈಲ್ ಫೋಟೊ) ಸಾರ್ವಜನಿಕವಾಗಿ ಕಾಣಿಸುತ್ತದೆ” ಎಂದು ಷರತ್ತು ಮತ್ತು ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಬಳಕೆದಾರನ ಮೊಬೈಲ್ ನಲ್ಲಿರುವ ಫೋಟೊ ಲೈಬ್ರರಿಗೆ ಫೇಸ್ ಆ್ಯಪ್ ಆ್ಯಕ್ಸೆಸ್ ಕೇಳುತ್ತದೆ ಮತ್ತು ಕ್ಲೌಡ್ ಸರ್ವಿಸ್ ನಲ್ಲಿ ಅವುಗಳನ್ನು ಅಪ್ಲೋಡ್ ಮಾಡುತ್ತದೆ. ಆದರೆ ಇವುಗಳು 48 ಗಂಟೆಗಳಲ್ಲಿ ಡಿಲಿಟ್ ಆಗುತ್ತವೆ ಎಂದು ಫೇಸ್ ಆ್ಯಪ್ ಸ್ಪಷ್ಟನೆ ನೀಡಿದೆ. ಆದರೆ ಕಂಪೆನಿಯ ಷರತ್ತು ನಿಯಮಗಳಲ್ಲಿ 48 ಗಂಟೆಗಳ ನಂತರ ಡಿಲಿಟ್ ಆಗುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ಮೂರನೆ ಪಾರ್ಟಿ ಜೊತೆ ಬಳಕೆದಾರರ ಮಾಹಿತಿ ಹಂಚುವ ಅಪಾಯವೂ ಫೇಸ್ ಆ್ಯಪ್ ನಲ್ಲಿದೆ. ಕಂಪೆನಿ ಇದನ್ನು ನಿರಾಕರಿಸುತ್ತಿದೆಯಾದರೂ ‘ಕಂಪೆನಿಯು ಇತರ ಪಾರ್ಟಿ ಜೊತೆ ಮಾಹಿತಿ ಹಂಚಿಕೊಳ್ಳಬಹುದು’ ಎಂದು ಷರತ್ತು ಮತ್ತು ನಿಯಮಗಳು ತಿಳಿಸುತ್ತವೆ.