ಮ್ಯಾನ್ಮಾರ್: ಸೇನೆಯನ್ನು ಟೀಕಿಸಿದ ಚಿತ್ರ ನಿರ್ದೇಶಕನ ಬಂಧನ
ಯಾಂಗನ್ (ಮ್ಯಾನ್ಮಾರ್), ಜು. 18: ಮ್ಯಾನ್ಮಾರ್‌ನ ಬಲಿಷ್ಠ ಸೇನೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ ಸಿನೆಮಾ ನಿರ್ದೇಶಕ ಮಿನ್ ಹಟಿನ್ ಕೊ ಕೊ ಗ್ಯಿ ವಿರುದ್ಧ ಮ್ಯಾನ್ಮಾರ್‌ನ ನ್ಯಾಯಾಧೀಶರೊಬ್ಬರು ಗುರುವಾರ ದೋಷಾರೋಪ ಹೊರಿಸಿದ್ದಾರೆ.
ಹಾಗಾಗಿ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ನಿರ್ದೇಶಕರು, ಮಾನವಹಕ್ಕು ಸಂಘಟನೆಗಳ ವಿರೋಧದ ಹೊರತಾಗಿಯೂ ವಿಚಾರಣೆಯನ್ನು ಎದುರಿಸಲಿದ್ದಾರೆ.
ಮಾನವಹಕ್ಕು ಚಿತ್ರೋತ್ಸವವೊಂದನ್ನು ನಡೆಸುವ ನಿರ್ದೇಶಕರನ್ನು ಸೇನಾಧಿಕಾರಿಯೊಬ್ಬರ ದೂರಿನ ಮೇರೆಗೆ ಮೂರು ತಿಂಗಳ ಹಿಂದೆ ಬಂಧಿಸಲಾಗಿತ್ತು. ತನ್ನ ದೂರಿನಲ್ಲಿ ಸೇನಾಧಿಕಾರಿಯು ಅವರ 10 ಫೇಸ್‌ಬುಕ್ ಬರಹಗಳನ್ನು ಉಲ್ಲೇಖಿಸಿದ್ದರು.
ಚಿತ್ರ ನಿರ್ದೇಶಕರು ತನ್ನ ಬರಹಗಳಲ್ಲಿ ಸೇನೆಯ ರಾಜಕೀಯ ಪಾತ್ರ ಮತ್ತು 2008ರ ಸಂವಿಧಾನವನ್ನು ಟೀಕಿಸಿದ್ದಾರೆ. 2008ರ ಸಂವಿಧಾನವನ್ನು ಅಂದಿನ ಸೇನಾ ಸರಕಾರವು ರೂಪಿಸಿತ್ತು. ಈಗಿನ ನಾಗರಿಕ ನಾಯಕಿ ಆಂಗ್ ಸಾನ್ ಸೂ ಕಿ ಅದಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದ್ದಾರೆ.
ಸೇನೆಯು ಇತ್ತೀಚಿನ ತಿಂಗಳುಗಳಲ್ಲಿ ತನ್ನ ಟೀಕಾಕಾರರ ವಿರುದ್ಧ ಹಲವು ಮೊಕದ್ದಮೆಗಳನ್ನು ದಾಖಲಿಸಿದ್ದು, ಆ ಪೈಕಿ ಇದೂ ಒಂದಾಗಿದೆ.