ಕಾಂಗೊದಲ್ಲಿ ಮತ್ತೆ ಎಬೋಲಾ: ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆ
ಕಿನ್‌ಶಾಸ (ಕಾಂಗೊ), ಜು. 18: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ನೆಲೆಸಿರುವ ಎಬೋಲಾ ಬಿಕ್ಕಟ್ಟು ‘ಅಂತರ್‌ರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಘೋಷಿಸಿದೆ.
ಆದಾಗ್ಯೂ, ಈ ರೋಗವು ಈ ವಲಯದಿಂದ ಹೊರಗೆ ಹರಡುವ ಅಪಾಯ ಕಡಿಮೆಯಾಗಿದೆ ಜಾಗತಿಕ ಆರೋಗ್ಯ ಸಂಸ್ಥೆ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
‘ಅಂತರ್‌ರಾಷ್ಟ್ರೀಯ ಕಳವಳಕ್ಕೆ ಕಾರಣವಾಗುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ’ಯು ವಿಶ್ವ ಆರೋಗ್ಯ ಸಂಸ್ಥೆಯ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ. ಈ ವರೆಗೆ ಇಂಥ ನಾಲ್ಕು ಎಚ್ಚರಿಕೆಗಳನ್ನು ಹೊರಡಿಸಲಾಗಿದೆ.
ಮೊದಲ ಎಬೋಲಾ ಪ್ರಕರಣ ನಾರ್ತ್ ಕಿವು ರಾಜ್ಯದ ರಾಜಧಾನಿ ಗೋಮದಲ್ಲಿ ಈ ವಾರ ಪತ್ತೆಯಾಗಿದೆ.
ಕಾಂಗೊದಲ್ಲಿ ರೋಗ 2018 ಆಗಸ್ಟ್‌ನಲ್ಲಿ ಕಾಣಿಸಿಕೊಂಡಿತ್ತು ಹಾಗೂ ನಾರ್ತ್ ಕಿವು ಮತ್ತು ಇಟುರಿ ಎಂಬ ಎರಡು ರಾಜ್ಯಗಳಲ್ಲಿ ಎಬೋಲಾ ಪ್ರಕರಣಗಳು ವರದಿಯಾಗಿದ್ದವು.
2,500ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 1,650ಕ್ಕೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.