ಇದು ನನ್ನ ಅಥವಾ ನಿಮ್ಮ ಅಮೆರಿಕವಲ್ಲ; ನಮ್ಮೆಲ್ಲರ ಅಮೆರಿಕ: ಟ್ರಂಪ್ ಗೆ ಮಿಶೆಲ್ ಒಬಾಮ ಚಾಟಿ
ವಾಶಿಂಗ್ಟನ್, ಜು. 20: ಡೆಮಾಕ್ರಟಿಕ್ ಪಕ್ಷದ ನಾಲ್ವರು ಜನಾಂಗೀಯ ಅಲ್ಪಸಂಖ್ಯಾತ ಸಂಸದೆಯರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ವಾಗ್ದಾಳಿಗಳ ಹಿನ್ನೆಲೆಯಲ್ಲಿ, ಸಂಸದೆಯರ ಪರವಾಗಿ ಶುಕ್ರವಾರ ಧ್ವನಿ ಎತ್ತಿರುವ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮ, ‘‘ದೇಶದಲ್ಲಿ ನಮಗೆಲ್ಲರಿಗೂ ಜಾಗವಿದೆ’’ ಎಂದು ಹೇಳಿದ್ದಾರೆ.
‘‘ನಮ್ಮ ದೇಶವನ್ನು ನಿಜವಾಗಿಯೂ ಶ್ರೇಷ್ಠವನ್ನಾಗಿ ಮಾಡಿರುವುದು ಅದರ ವೈವಿಧ್ಯತೆ. ನಾವು ಇಲ್ಲಿ ಹುಟ್ಟಿರಬಹುದು ಅಥವಾ ಇಲ್ಲಿ ಆಶ್ರಯ ಪಡೆದಿರಬಹುದು, ಆದರೆ ನಮಗೆಲ್ಲರಿಗೂ ಇಲ್ಲಿ ಸ್ಥಳವಿದೆ’’ ಎಂಬುದಾಗಿ ಟ್ರಂಪ್ರನ್ನು ಉಲ್ಲೇಖಿಸದೆ ಮಿಶೆಲ್ ಒಬಾಮ ಟ್ವೀಟ್ ಮಾಡಿದ್ದಾರೆ.
‘‘ಇದು ನನ್ನ ಅಮೆರಿಕವೂ ಅಲ್ಲ, ನಿಮ್ಮ ಅಮೆರಿಕವೂ ಅಲ್ಲ; ಇದು ನಮ್ಮೆಲ್ಲರ ಅಮೆರಿಕ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು’’ ಎಂದರು.
ಡೆಮಾಕ್ರಟಿಕ್ ಪಕ್ಷದ ನಾಲ್ವರು ಮೊದಲ ಬಾರಿಯ ಸಂಸದೆಯರ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ, ಟ್ರಂಪ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಈ ಸಂಸದೆಯರು ಅಮೆರಿಕದಲ್ಲಿ ಸುಖವಾಗಿಲ್ಲದಿದ್ದರೆ ಅವರು ಬಂದಿರುವ ದೇಶಗಳಿಗೆ ವಾಪಸಾಗಬಹುದು ಎಂಬುದಾಗಿ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.