varthabharthi


ನೇಸರ ನೋಡು

ಕಲಾರತ್ನ ಸೋನಾಲ್ ಮಾನ್ ಸಿಂಗ್

ವಾರ್ತಾ ಭಾರತಿ : 21 Jul, 2019
ಜಿ.ಎನ್ ರಂಗನಾಥ ರಾವ್

ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ ನೃತ್ಯಗಳ ಅನನ್ಯ ನೃತ್ಯ ಕಲಾವಿದೆಯಾಗಿ, ನೃತ್ಯ ಶಿಕ್ಷಕಿಯಾಗಿ, ಭಾರತೀಯ ಶಾಸ್ತ್ರೀಯ ನೃತ್ಯದ ಪಾಲನೆ-ಪೋಷಣೆಯಲ್ಲಿ ಶ್ರೀಮತಿ ಸೋನಾಲ್ ಮಾನ್ ಸಿಂಗ್ ಅವರ ಕೊಡುಗೆ ಅಸಾಧಾರಣವಾದುದು. ಅವರು ಉತ್ತಮ ವಾಗ್ಮಿ ಹಾಗೂ ಸಮಾಜ ಸೇವಕಿಯಾಗಿಯೂ ಹೆಸರು ಮಾಡಿದವರು.

ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಭರತನಾಟ್ಯ, ಕಥಕ್ಕಳಿ, ಕೂಚುಪುಡಿ, ಕಥಕ್, ಒಡಿಸ್ಸಿ ಮೊದಲಾದವು ಭವ್ಯ ಪರಂಪರೆಯನ್ನು ಹೊಂದಿವೆ.ಈ ನೃತ್ಯ ಪ್ರಕಾರಗಳು ಒಂದೊಂದೂ ಪ್ರಾದೇಶಿಕ ಸಂಸ್ಕೃತಿಯ ಅಸ್ಮಿತೆಯಯನ್ನು ಬಿಂಬಿಸುವ ವಿಶಿಷ್ಟ ಕಲೆಗಳು. ಈ ನೃತ್ಯ ಕಲೆಗಳಲ್ಲಿ ಅದ್ಭುತ ಸಾಧನೆ ಮಾಡಿರುವ ಕಲಾವಿದರ ಯಾದಿಯೂ ದೊಡ್ಡದಿದೆ. ಕೆಲವು ಕಲಾವಿದರು ಒಂದಕ್ಕಿಂತ ಹೆಚ್ಚು ನೃತ್ಯ ಪ್ರಕಾರಗಳಲ್ಲಿ ಪ್ರಯೋಗಶೀಲರಾಗಿ ಅಸದೃಶವಾದ ಸಾಧನೆಗಳನ್ನು ಮಾಡಿರುವುದೂ ಉಂಟು. ಇಂಥ ಅಪೂರ್ವ ಸಾಧಕರಲ್ಲಿ ಒಬ್ಬರು ಇದೀಗ ಕೇಂದ್ರ ಸಂಗೀತ ನಾಟಕ ಅಕಾಡಮಿಯ ‘ಅಕಾಡಮಿ ರತ್ನ’ ಗೌರವಪುರಸ್ಕಾರಕ್ಕೆ ಭಾಜನರಾಗಿರುವ ಶ್ರೀಮತಿ ಸೋನಾಲ್ ಮಾನ್ ಸಿಂಗ್. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಸಂಗೀತ, ನಾಟಕ, ನೃತ್ಯಗಳಲ್ಲಿ ಅದ್ವಿತೀಯ ಸಾಧನೆ ಗೈದಿರುವ ಕಲಾವಿದರಿಗೆ ಜೀವಮಾನದ ಸಾಧನೆಗಾಗಿ ನೀಡುತ್ತಾ ಬಂದಿರುವ ಗೌರವ ಫೆಲೋಶಿಪ್‌ಗೆ ಈಗ ‘ಅಕಾಡಮಿ ರತ್ನ’ ಎಂದು ಪುನರ್ ನಾಮಕರಣ ಮಾಡಲಾಗಿದೆ. 2018ನೇ ಸಾಲಿನ ‘ಅಕಾಡಮಿ ರತ್ನ’ ಪೆಲೋಶಿಪ್‌ಗೆ ಪಾತ್ರರಾಗಿರುವ ಶ್ರೀಮತಿ ಸೋನಾಲ್ ಮಾನ್ ಸಿಂಗ್ ಭರತ ನಾಟ್ಯ, ಒಡಿಸ್ಸಿ, ಕೂಚುಪುಡಿ ನೃತ್ಯ ಪ್ರಕಾರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಧೀಮಂತ ಕಲಾವಿದೆ. ನೃತ್ಯದಲ್ಲಿ ಹಾಗೂ ನೃತ್ಯ ನಾಟಕ ಸಂಯೋಜನೆಯಲ್ಲಿ ಪರಿಣಿತಿಗಳಿಸಿ, ನರ್ತನ ಮತ್ತು ನೃತ್ಯ ಶಿಕ್ಷಣ ಎರಡರಲ್ಲೂ ಸುವಿಖ್ಯಾತರಾಗಿರುವ ಸೋನಾಲ್ ಮಾನ್ ಸಿಂಗ್ ಹುಟ್ಟಿದ್ದು 1944ರ ಎಪ್ರಿಲ್ 30ರಂದು ಮುಂಬೈಯಲ್ಲಿ. ತಂದೆ ಅರವಿಂದ ಪಕ್ವಾಸ್, ತಾಯಿ ಪೂರ್ಣಿಮಾ ಪಕ್ವಾಸ್. ಜನ್ಮ ನಾಮ ಸೋನಾಲ್ ಪಕ್ವಾಸ್. ನಾಲ್ಕನೆಯ ವಯಸ್ಸಿನಿಂದಲೇ ನೃತ್ಯದಲ್ಲಿ ಆಸಕ್ತಿ ತಳೆದ ಬಾಲಕಿ ಸೋನಾಲ್ ಅಕ್ಕನ ಜೊತೆಯಲ್ಲಿ ನೃತ್ಯ ಗತಿಯಲ್ಲಿ ಹೆಜ್ಜೆ ಹಾಕತೊಡಗಿದಳು. ನಾಗಪುರದ ಗುರು ಕುಮಾರ್ ಜಯಕರ್ ಅವರಲ್ಲಿ ಭರತ ನಾಟ್ಯದಲ್ಲಿ ಪ್ರಾರಂಭಿಕ ಶಿಕ್ಷಣ. ಹದಿನೆಂಟನೆಯ ವಯಸ್ಸಿನಲ್ಲಿ ಬೆಂಗಳೂರಿನತ್ತ ಮುಖ ಮಾಡಿದರು ಭರತ ನಾಟ್ಯದಲ್ಲಿ ಹೆಚ್ಚಿನ ಶಿಕ್ಷಣಕ್ಕಾಗಿ. ಕರ್ನಾಟಕಕ್ಕೂ ಸೋನಾಲ್ ಮಾನ್ ಸಿಂಗ್ ಅವರಿಗೂ ವಿಶಿಷ್ಟ ನಂಟಿದೆ. ಸೋನಾಲ್ ಅವರದು ಸ್ವಾತಂತ್ರ ಹೋರಾಟಗಾರರ ಮನೆತನ. ಸ್ವಾತಂತ್ರ ಹೋರಾಟಗಾರರಾದ ತಾತ ಮಂಗಳದಾಸ್ ಪಕ್ವಾಸ್ 1960-61,1963ರಲ್ಲಿ ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿದ್ದರು. (ಆಗಿನ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಅವರ ಅನುಪಸ್ಥಿತಿಯಲ್ಲಿ) ಇನ್ನೊಂದು ನಂಟು ಗುರು-ಶಿಷ್ಯೆ ಸಂಬಂಧದ್ದು. ಸೋನಾಲ್ ಮಾನ್ ಸಿಂಗ್ ಭರತ ನಾಟ್ಯದಲ್ಲಿ ಪ್ರೌಢ ಶಿಕ್ಷಣ ಪಡೆದದ್ದು ಕರ್ನಾಟಕದ ಸುಪ್ರಸಿದ್ಧ ಭರತ ನಾಟ್ಯ ಕಲಾವಿದ ದಂಪತಿಯಾದ ಪ್ರೊ.ಯು.ಎಸ್. ಕೃಷ್ಣ ರಾವ್ ಮತ್ತು ಶ್ರೀಮತಿ ಚಂದ್ರಬಾಗಾ ದೇವಿಯವರ ಪದತಲದಲ್ಲಿ. ಭರತ ನಾಟ್ಯದಲ್ಲಿ ಪರಿಣಿತಿಗಳಿಸಿ ನೃತ್ಯ ಕಾರ್ಯಕ್ರಮಗಳನ್ನು ನೀಡಲಾರಂಭಿಸಿದಂತೆ ನೃತ್ಯದ ಉಳಿದ ಪ್ರಕಾರಗಳಲ್ಲೂ ಆಸಕ್ತಿ ಮೂಡಿತು. ಸೋನಾಲ್ ಆಗಿನ ಮದ್ರಾಸಿಗೆ ಹೋಗಿ ಮೈಲಾಪುರಂ ಗೌರಿ ಅಮ್ಮಾಳ್ ಅವರಿಂದ ಅಭಿನಯ ಕಲೆ ಕಲಿತರು. ವಿಜಯನಗರ ಅರಸರ ಕಾಲಕ್ಕೆ ಆಂಧ್ರದಲ್ಲಿ ಪ್ರಕಾಶಮಾನಕ್ಕೆ ಬಂದ ಕೂಚಿಪುಡಿ ನೃತ್ಯ ಕಲಿತರು. ಮಣಿಪುರಿ ನೃತ್ಯ ಕಲಿಯಲು ಗುರುವನ್ನು ಅರಸಿ ಮಣಿಪುರಿಗೆ ಹೋದರು. ನಂತರ ಸುಪ್ರಸಿದ್ಧ ಕಲಾವಿದರಾದ ಗುರು ಕೇಳುಚರಣ ಮಹಾಪಾತ್ರ ಅವರಿಂದ ಒಡಿಸ್ಸಿ ನೃತ್ಯ ಶಿಕ್ಷಣ ಪಡೆದು ಅದರಲ್ಲಿ ಪರಿಣಿತರಾದರು. ಹೀಗೆ ನೃತ್ಯ ಕಲಿಕೆಯಲ್ಲಿಸೋನಾಲ್ ಅವರದು ಇಂಗದ ಆಸಕ್ತಿ. ನೃತ್ಯ ಕಲಿಕೆಯ ಜೊತೆಜೊತೆಯಲ್ಲೇ ಕಾಲೇಜು ಶಿಕ್ಷಣ. ಮುಂಬೈ ಭಾರತೀಯ ವಿದ್ಯಾ ಭವನ ಕಾಲೇಜಿನಿಂದ ಸಂಸ್ಕೃತದಲ್ಲಿ ಹಾಗೂ ಎಲ್ಫಿನ್‌ಸ್ಟನ್ ಕಾಲೇಜಿನಿಂದ ಜರ್ಮನ್ ಸಾಹಿತ್ಯದಲ್ಲಿ ಪದವಿಗಳಿಸಿದ ಸೋನಾಲ್ ಅವರ ಆಸಕ್ತಿ ಅಭಿರುಚಿಗಳು ವೈವಿಧ್ಯಮಯವಾದುವು. ಸೋನಾಲ್ ಅವರ ಆರಂಗೇಟ್ರಂ ನಡೆದದ್ದು 1962ರಲ್ಲಿ, ಮುಂಬೈಯಲ್ಲಿ. ಈ ರಂಗ ಪ್ರವೇಶದಿಂದಲೇ ಮುಂಬೈಯ ಕಲಾ ರಸಿಕರ ಮನಸೂರೆಗೊಂಡ ಸೋನಾಲ್ ಅವರ ಮುಂದಿನ ಹೆಜ್ಜೆ ಪಾಡೆಲ್ಲ ಯಶಸ್ಸಿನ ಸೋಪಾನಗಳ ಮೇಲೆಯೇ. ಸಂಸ್ಕೃತದಲ್ಲಿ ಪಾಂಡಿತ್ಯ, ಸಂಗೀತ ನೃತ್ಯಗಳಲ್ಲಿ ಪ್ರೌಢಿಮೆ, ಇತರ ಕಲಾಪ್ರಕಾರಗಳಲ್ಲಿ ಆಸಕ್ತಿ ಸೋನಾಲ್ ಅವರ ಸೃಜನಶೀಲತೆ ಮತ್ತು ಪ್ರಯೋಗಶೀಲತೆಗಳಿಗೆ ಪ್ರೇರಣೆ ಪ್ರಚೋದನೆಗಳನ್ನೊದಗಿಸಿದವು. ನಿರಂತರವಾಗಿ ಕಲಿಯುತ್ತ, ನೃತ್ಯ ಪ್ರದರ್ಶನಗಳನ್ನು ನೀಡುತ್ತ, ನೃತ್ಯ ನಾಟಕಗಳನ್ನು ಪ್ರಯೋಗಿಸುತ್ತಲೇ ನೃತ್ಯ ಕಲೆಗೆ ಹೊಸ ವರ್ಚಸ್ಸು ನೀಡುವ ಸಂಕಲ್ಪ ಮಾಡಿದರು.

ಸೋನಾಲ್ ದೇಶದ ವಿವಿಧೆಡೆಗಳಲ್ಲಿ ಮತ್ತು ವಿದೇಶಗಳಲ್ಲಿ ನೃತ್ಯ ಕಾರ್ಯಕಮ್ರಗಳನ್ನು ನೀಡಿ ಪ್ರಸಿದ್ಧಿಯ ಮೆಟ್ಟಿಲುಗಳನ್ನು ಏರ ತೊಡಗಿದರು. ನವದೆಹಲಿಯಲ್ಲಿ ‘ಸೆಂಟರ್ ಪಾರ್ ಇಂಡಿಯನ್ ಕ್ಲಾಸಿಕಲ್ ಡಾನ್ಸ್’ ನೃತ್ಯ ಶಾಲೆಯನ್ನು ತೆರೆದರು.ಈ ಶಾಲೆ ನೃತ್ಯದಲ್ಲಿ ಅಸಕ್ತಿ-ಅಭಿರುಚಿಯುಳ್ಳವರಿಗೆ ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲಿ ಶಿಕ್ಷಣ ನೀಡುವುದರ ಜೊತೆಗೆ ನೃತ್ಯ ನಾಟಕಗಳ ಪ್ರಯೋಗಕ್ಕೆ ಆಡುಂಬೊಲವಾಯಿತು. ಸೋನಾಲ್ ನೃತ್ಯ ನಾಟಕಗಳ ರಚನೆ ಮತ್ತು ಅವುಗಳ ರಂಗ ಪ್ರಯೋಗಗಳಲ್ಲಿ ತೊಡಗಿಕೊಂಡರು. ಈ ಮಧ್ಯೆ ಕಲೋತ್ಸವ ಒಂದರಲ್ಲಿ ವಿದೇಶಾಂಗ ಸೇವೆಯ ಮಾನ್ ಸಿಂಗ್ ಅವರ ಭೇಟಿ. ಪರಸ್ಪರ ಆಕರ್ಷಿತರಾಗಿ ವಿವಾಹವಾದರೂ ಈ ಮದುವೆ ಮಧುರ ಬಾಂಧವ್ಯವಾಗಿ ಹೆಚ್ಚುಕಾಲ ಉಳಿಯಲಿಲ್ಲ.ವಿಚ್ಛೇದನದಲ್ಲಿ ಪರ್ಯಾವಸಾನಗೊಂಡಿತು. ವಿಚ್ಛೇದನದನಂತರ ಕಷ್ಟದ ದಿನಗಳು. ಹಣಕಾಸಿನ ಮುಗ್ಗಟ್ಟು. ಹಗಲು ನೃತ್ಯ ಕೇಂದ್ರದಲ್ಲಿ ಕಲಿಸುವ ಕಾಯಕ, ರಾತ್ರಿ ಗೆಳೆತಿಯರ ಮನೆಗಳಲ್ಲಿ ವಾಸ್ತವ್ಯ. ಸಹ ಕಲಾವಿದರ ನೆರವಿಗಾಗಿ ಗೆಳೆಯರಿಂದ ಸಾಲ. ಇಂಥ ದಿನಗಳಲ್ಲೇ ಸೋನಾಲ್ ಅವರಿಗೆ ಜರ್ಮನಿಯ ಜಾರ್ಜ್ ಲೆಚ್ನರ್ ಎಂಬ ಕಲಾಭಿಮಾನಿಯ ಪರಿಚಯವಾಯಿತು. ಮ್ಯಾಕ್ಸ್ ಮುಲ್ಲರ್ ಭವನದ ಡೈರೆಕ್ಟರ್ ಆಗಿದ್ದ ಜಾರ್ಜ್ ಲೆಚ್ನರ್ ಪ್ರತಿಭಾವಂತ ಛಾಯಾಚಿತ್ರ ಗ್ರಾಹಕರೂ ಅಗಿದ್ದರು.ಪರಿಚಯ ಸ್ನೇಹಕ್ಕೆ ಚಾಚಿಕೊಂಡಿತು. ಈ ಮಿತ್ರನ ಸ್ನೇಹ ಬೆಂಬಲಗಳಿಂದಾಗಿ ಸೋನಾಲ್ ಅವರಿಗೆ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ಮತ್ತು ನೃತ್ಯ ನಾಟಕಗಳ ಪ್ರದರ್ಶನಕ್ಕೆ ಅವಕಾಶಗಳ ಬಾಗಿಲು ತೆರೆದವು. ತಮ್ಮ ತಂಡದೊಂದಿಗೆ ಯೂರೋಪಿನಾದ್ಯಂತ ಪ್ರವಾಸ ಮಾಡಿ ಪ್ರದರ್ಶನಗಳನ್ನು ನೀಡಿದರು. ಸೋನಾಲ್ ಅವರ ನೃತ್ಯ ಮತ್ತು ನೃತ್ಯ ನಾಟಕಗಳು ಆ ದೇಶಗಳ ಕಲಾರಸಿಕರ ಮನಸೆಳೆದವು. ಸೋನಾಲ್ ಮಾನ್ ಸಿಂಗ್ ವಿಶ್ವ ವಿಖ್ಯಾತರಾದರು.

ಸೋನಾಲ್ ಮಾನ್ ಸಿಂಗ್ ಅವರ ‘ಸೆಂಟೆರ್ ಫಾರ್ ಇಂಡಿಯನ್ ಕ್ಲಾಸಿಕಲ್ ಡಾನ್ಸ್’ನೃತ್ಯ ಶಾಲೆ ನೃತ್ಯ ಶಿಕ್ಷಣಕ್ಕಷ್ಟೆ ಸೀಮಿತಗೊಳ್ಳಲಿಲ್ಲ. ಅಲ್ಲಿನ ಶಿಕ್ಷಣ ಕ್ರಮ ಬದುಕಿನ ವಿವಿಧ ವಿಸ್ತಾರಗಳಿಗೆ ಚಾಚಿಕೊಂಡಿತು. ನೃತ್ಯದ ಜೊತೆಗೆ ಅದಕ್ಕೆ ಪೂರಕವಾದ ಭಾಷೆ, ಭಾಷಾ ವಿಜ್ಞಾನ,ಸಾಹಿತ್ಯ,ಕಾವ್ಯ,ಶಿಲ್ಪ ಕಲೆ, ವರ್ಣಚಿತ ್ರಕಲೆ, ಕಲಾವಿದರ ಸಾಮಾಜಿಕ ಹೊಣೆಗಾರಿಕೆ ಹೀಗೆ ಸೋನಾಲ್ ಅವರ ಶಿಕ್ಷಣ ಕ್ರಮ ಸಮಷ್ಟಿ ಪ್ರಜ್ಞೆಯಿಂದ ಚಲನಶೀಲವಾಗಿತ್ತು. ಸೋನಾಲ್ ಮಾನ್ ಸಿಂಗ್ ಸಾಮಾಜಿಕವಾಗಿ ಬಹಳ ಜಾಗೃತವಾಗಿರುವ ಕಲಾವಿದೆ.ಕಲೆ ಮತ್ತು ಕಲಾವಿದನ ಸಾಮಾಜಿಕ ಬದ್ಧತೆ ಬಗ್ಗೆ ಅವರಿಗೆ ಖಚಿತವಾದ ನಂಬಿಕೆ ಹಾಗೂ ಧೋರಣೆ ಇದೆ.ನಾಟ್ಯ ಎಂದರೆ ಲೋಕದ ಚರಿತೆ ಎನ್ನುತ್ತದೆ ಭರತನ ನಾಟ್ಯ ಶಾಸ್ತ್ರ. ಸೋನಾಲ್ ಹೇಳುತ್ತಾರೆ:

 ನೃತ್ಯ ಕಲಾವಿದೆ ಕೇವಲ ನೃತ್ಯ ಕಲಾವಿದೆಯಷ್ಟೇ ಅಲ್ಲ. ಅವನು/ಅವಳು ಪರಿಸರದ ಅವಿಭಾಜ್ಯ ಅಂಗಗಳು. ಅವನಾಗಲೀ ಅವಳಾಗಲೀ ಶೂನ್ಯದಲ್ಲಿ ಬದುಕುವುದಿಲ್ಲ. ಸಮಾಜದ ಆಗುಹೋಗುಗಳೆಲ್ಲದರ ಪರಿಣಾಮ ವ್ಯಕ್ತಿಗಳ ಮೇಲೆ, ವಿಶೇಷವಾಗಿ ಕಲಾವಿದರ ಮೇಲೆ ಇದ್ದೇ ಇರುತ್ತದೆ. ಕಲಾ ಮಾಧ್ಯಮ ಪ್ರಚಲಿತ. ಸಾಮಾಜಿಕ ಪರಿಸರವನ್ನು ಬಿಂಬಿಸದೇ ಹೋದಲ್ಲಿ ಅದು ನಿಂತ ನೀರಾಗುತ್ತದೆ. ಇದು ಕಲೆ ಕುರಿತ ಸೋನಾಲ್ ಮಾನ್ ಸಿಂಗ್ ಅವರ ಬದ್ಧತೆ. ಅವರಿಗೆ ನೃತ್ಯ ಕಲೆ ಸಮಾಜದಲ್ಲಿನ ದನಿಯಿಲ್ಲದವರ ದನಿಯ ಅಭಿವ್ಯಕ್ತಿಗೆ ಮಾಧ್ಯಮ. ಈ ಮಾತಿಗೆ ನಿದರ್ಶನವಾಗಿವೆ ಅವರ ನೃತ್ಯ ನಾಟಕಗಳು. ಭರತ ನಾಟ್ಯ, ಒಡಿಸ್ಸಿ,ಕೂಚುಪುಡಿ ನೃತ್ಯಗಳ ಪ್ರತಿಭಾಪೂರ್ಣ ನರ್ತನದ ಜೊತೆಗೆ ಸೋನಾಲ್ ಮಾನ್ ಸಿಂಗ್ ಅವರಿಗೆ ಹೆಚ್ಚಿನ ಕೀರ್ತಿ ಪ್ರಸಿದ್ಧಿಗಳನ್ನು ತಂದುಕೊಟ್ಟದ್ದು ಅವರ ನೃತ್ಯ ನಾಟಕಗಳು. ನಾಟ್ಯಕ್ಕೆ ಇತ್ತ ಹೊಸ ಆಯಾಮಗಳು ಅವರ ನೃತ್ಯ ನಾಟಕಗಳು.ಸೋನಾಲ್ ಅವರ ನೃತ್ಯ ನಾಟಕಗಳು ಪೌರಾಣಿಕ ಕಥೆ/ಪ್ರಸಂಗಗಳನ್ನು ಆಧರಿಸಿದವು. ಅವುಗಳಲ್ಲಿ ಇಂದ್ರ ಧನುಷ್, ಮಾನವತ, ಸಬರಸ್, ದೇವಿದುರ್ಗ, ದ್ರೌಪದಿ, ಆತ್ಮಾಯಣ್, ಸುಂದರಿ, ಮೇರೆಬಾರತ್ ಮುಖ್ಯವಾದುವು.‘ಇಂದ್ರ ಧನುಷ್’ ಸುಪ್ರಸಿದ್ಧ ಚಿತ್ರಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿರುವ ವಿಶಿಷ್ಟ ಪ್ರಯೋಗವಾದರೆ, ‘ಸುಂದರಿ’ ರೂಪುಲಾವಣ್ಯಗಳ ಜೋತೆ ಸ್ತ್ರೀಯ ಅವ್ಯಾಜ ಕರುಣೆ ಮತ್ತು ಸ್ತ್ರೀತ್ವದ ಘನತೆಗಳನ್ನು ಬಿಂಬಿಸುವ ಪ್ರಯತ್ನವೆಂದು ವಿಮರ್ಶಕರು ಗುರುತಿಸಿದ್ದಾರೆ. ‘ಆತ್ಮಾಯಣ’ ಮನುಷ್ಯ ಚೇತನದ ಅಂತ:ಶಕ್ತಿಯನ್ನು ತೋರಿಸುವ ನಾಲ್ಕು ಕಥೆಗಳ ಸಂಯೋಜನೆಯ ನಾಟಕ. ಇದರಲ್ಲಿ ಮಾನವ ಚೇತನದ ಅಂತ:ಶಕ್ತಿ,ಪ್ರಭಾವ-ಪ್ರೇರಣೆಗಳ ಜೊತೆಗೆ ಜಾತಿ-ಧರ್ಮಗಳಲ್ಲಿನ ಅಸಮಾನತೆ, ಶೋಷಣೆಗಳೂ ದನಿಪಡೆದುಕೊಂಡು ಮೆಚ್ಚುಗೆಗೆ ಪಾತ್ರವಾಗಿವೆ.

 ಸೃಜನಶೀಲ ಪ್ರತಿಭೆಯ ಜೊತೆಗೆ ಅದಮ್ಯವಾದ ಆತ್ಮ ವಿಶಾಸ ಮತ್ತು ಸಹಿಷ್ಣುತೆ ಸೋನಾಲ್ ಅವರ ವ್ಯಕ್ತಿತ್ವದ ವೈಶಿಷ್ಟ. ಕಷ್ಟಕೋಟಲೆಗಳು, ಅಡೆತಡೆಗಳಿಗೆ ಎದೆಗುಂದುವ ಮನೋಭಾವ ಅವರದಲ್ಲ. 1974ರಲ್ಲಿ ಅವರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು. ಹಲವಾರು ತಿಂಗಳುಗಳು ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಮಲಗಬೇಕಾಗಿ ಬಂತು. ಅವರಿಂದ ಇನ್ನು ಮುಂದೆ ನೃತ್ಯ ಸಾಧ್ಯವಿಲ್ಲವೆಂದು ವೈದ್ಯರು ಷರಾ ಬರೆದರು. ಅವರ ನೃತ್ಯ ಜೀವನ ಮುಗಿಯಿತೆಂದು ಪತ್ರಿಕೆಗಳು ಬರೆದವು. ಆದರೆ ಇದಾವುದಕ್ಕೂ ಅಳುಕದೆ ತಿಂಗಳುಗಟ್ಟಳೆ ಮೂಳೆ ತಜ್ಞರಿಂದ ಚಿಕಿತ್ಸೆ ಮತ್ತು ಫಿಸಿಯೊತೆರಪಿ ಪಡೆದುಕೊಂಡು ನಗುನಗುತ್ತ ರಂಗಕ್ಕೆ ಹಿಂದಿರುಗಿದರು. ಮೊದಲಿನಂತೆ ನೃತ್ಯ ಮತ್ತು ನೃತ್ಯ ಶಿಕ್ಷಣ ಮುಂದುವರಿಸಿದರು.

 ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ ನೃತ್ಯಗಳ ಅನನ್ಯ ನೃತ್ಯ ಕಲಾವಿದೆಯಾಗಿ, ನೃತ್ಯ ಶಿಕ್ಷಕಿಯಾಗಿ, ಭಾರತೀಯ ಶಾಸ್ತ್ರೀಯ ನೃತ್ಯದ ಪಾಲನೆ-ಪೋಷಣೆಯಲ್ಲಿ ಶ್ರೀಮತಿ ಸೋನಾಲ್ ಮಾನ್ ಸಿಂಗ್ ಅವರ ಕೊಡುಗೆ ಅಸಾಧಾರಣವಾದುದು.ಅವರು ಉತ್ತಮ ವಾಗ್ಮಿ ಹಾಗೂ ಸಮಾಜ ಸೇವಕಿಯಾಗಿಯೂ ಹೆಸರು ಮಾಡಿದವರು. ಅವರ ಪ್ರತಿಭೆ, ಕೊಡುಗೆಗಳಿಗೆ ಮನ್ನಣೆಯಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳು ಶ್ರೀಮತಿ ಸೋನಾಲ್ ಮಾನ್ ಸಿಂಗ್ ಅವರನ್ನು ಅರಸಿ ಬಂದಿವೆ. ನೃತ್ಯದಲ್ಲಿ ಬಾಲಸರಸ್ವತಿಯವರ ನಂತರ ಪದ್ಮವಿಭೂಷಣ (2003) ಪಡೆದ ಎರಡನೆಯ ನೃತ್ಯ ಕಲಾವಿದೆ ಎಂಬ ಕೀರ್ತಿ ಅವರದು. ಪದ್ಮ ಭೂಷಣ(1992), ಕಾಳಿದಾಸ ಸಮ್ಮಾನ್ ಮೊದಲಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಶ್ರೀಮತಿ ಸೋನಾಲ್ ಮಾನ್ ಸಿಂಗ್ ಅವರು ಈಗ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಪೆಲೋ‘ರತ್ನ’. ನೃತ್ಯಕಲೆಯಲ್ಲಿ ರತ್ನಪ್ರಾಯಳಾದ ಸೋನಾಲ್ ಮಾನ್ ಸಿಂಗ್ ರಾಷ್ಟ್ರಪತಿಗಳಿಂದ ನಾಮಕರಣಗೊಂಡಿರುವ ರಾಜ್ಯ ಸಭೆ ಸದಸ್ಯರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)