ದ.ಕ.: ಭರ್ತಿಯಾಗದ ಅಲ್ಪಸಂಖ್ಯಾತರ ವಿವಿಧ ಇಲಾಖೆಗಳ ಹುದ್ದೆಗಳು
ಕಲ್ಯಾಣ ಇಲಾಖೆ, ಅಭಿವೃದ್ಧಿ ನಿಗಮ, ವಕ್ಫ್ ಇಲಾಖೆಯ ಹುದ್ದೆಗಳು ಖಾಲಿ...ಖಾಲಿ!
► ಜಿಲ್ಲಾ ಮಟ್ಟದಲ್ಲಿ ‘ಪೂರ್ಣ ಪ್ರಮಾಣದ ಅಧಿಕಾರಿ’ಗಳೇ ಇಲ್ಲ-‘ಪ್ರಭಾರ’ವೇ ಎಲ್ಲ
► ಅಲ್ಪಸಂಖ್ಯಾತ ಸಮುದಾಯಗಳಿಗೆ ಸಕಾಲಕ್ಕೆ ಸಿಗುತ್ತಿಲ್ಲ ಸೇವೆ!
ಮಂಗಳೂರು, ಜು. 21: ದ.ಕ.ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಇಲಾಖೆಯಲ್ಲಿ ಕೆಲವು ವರ್ಷಗಳಿಂದ ಹಲವು ಹುದ್ದೆಗಳು ಖಾಲಿಯಾಗಿವೆ. ಅದರಲ್ಲೂ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ, ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಗಳೇ ಇಲ್ಲ. ಅಲ್ಲಿ ‘ಪ್ರಭಾರ’ ಹುದ್ದೆಯಲ್ಲಿರುವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ದಿನನಿತ್ಯ ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯಲು ಇಲಾಖೆಗಳು ಮತ್ತು ನಿಗಮಗಳ ಕಚೇರಿಗೆ ತೆರಳುವ ಮತೀಯ ಅಲ್ಪಸಂಖ್ಯಾತ ಸಮುದಾಯದವರಿಗೆ ಸಕಾಲಕ್ಕೆ ಸೇವೆ ನೀಡಲು ಅಧಿಕಾರಿ/ಸಿಬ್ಬಂದಿ ವರ್ಗವು ಹರಸಾಹಸ ಪಡುವಂತಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಲ್ಲದೆ ಮೂರ್ನಾಲ್ಕು ವರ್ಷಗಳೇ ಆಗಿವೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಭಾರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದಂತೆ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರೂಪ್ ‘ಡಿ’ ನೌಕರ ಹುದ್ದೆಗೆ ತಲಾ ಒಬ್ಬೊಬ್ಬರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹುದ್ದೆಯೂ ಖಾಲಿ ಇವೆ. ಅಲ್ಲಿ ಈಗ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರನ್ನು ಪ್ರಭಾರ ನೆಲೆಯಲ್ಲಿ ನಿಯುಕ್ತಿಗೊಳಿಸಲಾಗಿದೆ.
ವಕ್ಫ್ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯ ಹುದ್ದೆಯೂ ಖಾಲಿ ಇದ್ದು, ಅಲ್ಲಿ ಕೂಡ ಪ್ರಭಾರ ಅಧಿಕಾರಿಯು ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಕ್ಫ್ ಇಲಾಖೆಯ 6 ಹುದ್ದೆಗಳ ಪೈಕಿ ಮೂರು ಹುದ್ದೆಗಳು ಭರ್ತಿಗೊಂಡರೆ, ಮೂರು ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನಿಯುಕ್ತಿಗೊಳಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು, ಪಾರ್ಸಿ, ಬೌದ್ಧರು ಬರುತ್ತಾರೆ. ದ.ಕ.ಜಿಲ್ಲೆಯ ಮತೀಯ ಅಲ್ಪಸಂಖ್ಯಾತರ ಪೈಕಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿದ್ದರೆ, ಕ್ರೈಸ್ತರು ದ್ವಿತೀಯ ಮತ್ತು ಜೈನರು ತೃತೀಯ ಸ್ಥಾನದಲ್ಲಿದ್ದಾರೆ. ಉಳಿದಂತೆ ಸಿಖ್ಖರು, ಪಾರ್ಸಿ, ಬೌದ್ಧರ ಸಂಖ್ಯೆ ಅಷ್ಟೇನೂ ಇಲ್ಲ. ನಗರದ ಪಾಂಡೇಶ್ವರದಲ್ಲಿರುವ ‘ವೌಲಾನಾ ಆಝಾದ್ ಭವನ’ದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಇಲಾಖೆಯ ಕಚೇರಿ ಇದೆ. ವಿವಿಧ ರೀತಿಯ ಸರಕಾರಿ ಸೌಲಭ್ಯಗಳನ್ನು ಪಡೆಯಲು ಈ ಭವನಕ್ಕೆ ದಿನನಿತ್ಯ ನೂರಾರು ಮತೀಯ ಅಲ್ಪಸಂಖ್ಯಾತರು ಭೇಟಿ ನೀಡುತ್ತಾರೆ. ಆದರೆ, ಪೂರ್ಣ ಪ್ರಮಾಣದ ಅಧಿಕಾರಿಗಳಿಲ್ಲದ ಕಾರಣ ಫಲಾನುಭವಿಗಳಿಗೆ ಭಾರೀ ಸಮಸ್ಯೆಯಾಗಿದೆ. ಬಹುತೇಕ ಹುದ್ದೆಗಳು ಖಾಲಿ ಇರುವ ಕಾರಣ ಹಾಲಿ ಸೇವೆ ಸಲ್ಲಿಸುವ ಅಧಿಕಾರಿ/ಸಿಬ್ಬಂದಿ ವರ್ಗಕ್ಕೆ ಕೆಲಸದ ಒತ್ತಡವೂ ಬೀಳುತ್ತಿವೆ.
ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣವು ಮೊದಲು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯಾಗಿತ್ತು. 2004ರ ಜುಲೈ 30ರಂದು ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಇಲಾಖೆಯನ್ನು ಸ್ಥಾಪಿಸಲಾಯಿತು. ಈ ಇಲಾಖೆಯ ಅಧೀನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಮಂಡಳಿ, ಅಲ್ಪಸಂಖ್ಯಾತರ ಆಯೋಗ, ಹಜ್ ಸಮಿತಿ, ಉರ್ದು ಅಕಾಡಮಿ, ವಕ್ಫ್ ಪರಿಷತ್, ವಕ್ಫ್ ಮಹಿಳಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಬರುತ್ತದೆ. 1986ರಲ್ಲೇ ಸ್ಥಾಪನೆಗೊಂಡಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಕೂಡ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನಕ್ಕೆ ತರಲಾಗಿದೆ.
ಅಲ್ಪಸಂಖ್ಯಾತ ಸಮುದಾಯ ಭವನ/ಶಾದಿಮಹಲ್, ಮಸೀದಿ/ಮದ್ರಸ/ಚರ್ಚ್/ಬಸದಿಗಳ ನವೀಕರಣ, ಅಭಿವೃದ್ಧಿ ದುರಸ್ತಿ, ದಫನ/ಸ್ಮಶಾನ ಭೂಮಿ ಅಭಿವೃದ್ಧಿ, ಅನಾಥಾಶ್ರಮ/ವೃದ್ಧಾಶ್ರಮ /ಯತೀಂ ಖಾನಾಗಳ ಅಭಿವೃದ್ಧಿ, ಬಿದಾಯಿ ಯೋಜನೆ, ವಿದೇಶದಲ್ಲಿ ಉನ್ನತ ವ್ಯಾಸಂಗ, ವಿದ್ಯಾರ್ಥಿ ವೇತನ, ನರ್ಸಿಂಗ್ ಶಿಕ್ಷಣ, ಕೌಶಲ ಅಭಿವೃದ್ಧಿ, ವಿದ್ಯಾರ್ಥಿ ನಿಲಯ ಸ್ಥಾಪನೆ, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ಗಳ ಸ್ಥಾಪನೆ, ವೌಲಾನಾ ಆಝಾದ್ ಮಾದರಿ ಶಾಲೆ, ವಸತಿ ಶಾಲೆ-ಕಾಲೇಜು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಅರಿವು ಮೂಡಿಸುವ ಕಾರ್ಯಕ್ರಮ, ಎಂಫಿಲ್/ಪಿಎಚ್ಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದ್ಯಾಸಿರಿ ಯೋಜನೆ ಇತ್ಯಾದಿ ಸೌಲಭ್ಯವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತದೆ.
ಉಳಿದಂತೆ ಅಭಿವೃದ್ಧಿ ನಿಗಮದ ಮೂಲಕ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಯೋಜನೆ, ಅರಿವು (ವಿದ್ಯಾಭ್ಯಾಸ ಸಾಲ)ಯೋಜನೆ, ಶ್ರಮಶಕ್ತಿ ಯೋಜನೆ, ಸಣ್ಣ (ಮೈಕ್ರೋ)ಸಾಲ ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿ ಭೂಮಿ ಖರೀದಿ ಯೋಜನೆ, ಗೃಹ ನಿವೇಶನ ಖರೀದಿ ಹಾಗೂ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ/ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹೊಸದಿಲ್ಲಿಯ ಹಣಕಾಸು ನಿಗಮದ ಯೋಜನೆಗಳನ್ನು ನೀಡಲಾಗುತ್ತದೆ.
ವಕ್ಫ್ ಇಲಾಖೆಯ ಮೂಲಕ ವಕ್ಫ್ ಆಸ್ತಿಯ ಸಂರಕ್ಷಣೆ, ವಕ್ಫ್ ಆಸ್ತಿಯ ಅಭಿವೃದ್ಧಿ, ವಕ್ಫ್ ಆಸ್ತಿಯ ದಾಖಲೆಗಳ ಸಂರಕ್ಷಣೆ, ಇಮಾಮ್/ವೌಝಿನ್ಗಳಿಗೆ ಗೌರವಧನ ವಿತರಣೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಕ್ಫ್ ಇಲಾಖೆಗೆ ಮಸೀದಿ-ಮದ್ರಸಗಳ ಅಭಿವೃದ್ಧಿಯ ಜೊತೆಗೆ ಬೈಲಾ ಪ್ರಕಾರ ಆಡಳಿತ ನಡೆಸುತ್ತಿದೆಯೇ ಎಂದು ಅವಲೋಕಿಸುವ, ಅಲ್ಲಿ ವ್ಯಾಜ್ಯಗಳನ್ನು ಬಗೆಹರಿಸುವ, ಆವಶ್ಯಕತೆಯಿದ್ದರೆ ಚುನಾವಣೆ ನಡೆಸುವ, ತೆರಿಗೆ ಸಂಗ್ರಹಿಸುವ, ದಫನ ಭೂಮಿಯ ಸಂರಕ್ಷಿಸುವ... ಇತ್ಯಾದಿ ಜವಾಬ್ದಾರಿ ಇದೆ. ಆದರೆ, ಇನ್ನೂ ಇಲ್ಲಿಗೆ ಪೂರ್ಣಪ್ರಮಾಣದ ಅಧಿಕಾರಿ ಇಲ್ಲ. ಸಿಬ್ಬಂದಿಯ ಕೊರತೆಯ ಜೊತೆಗೆ ವಾಹನದ ವ್ಯವಸ್ಥೆಯೂ ಇಲ್ಲ. ಈ ಹಿಂದೆ ಕೆಲವು ತಿಂಗಳು ಮಾಸಿಕ 25 ಸಾವಿರ ರೂ.ಗೆ ಗುತ್ತಿಗೆ ಆಧಾರದ ಮೇಲೆ ವಾಹನ ವ್ಯವಸ್ಥೆ ಮಾಡಿಕೊಳ್ಳುವ ಅವಕಾಶವನ್ನು ತೆಗೆದುಕೊಂಡಿತ್ತು. ಆದರೆ, ಇದೀಗ ವಾಹನವೇ ಇಲ್ಲ. ಮಸೀದಿ-ಮದ್ರಸ ಸಹಿತ ವಕ್ಫ್ ಆಸ್ತಿಯ ಸಂರಕ್ಷಣೆಯ ನಿಟ್ಟಿನಲ್ಲಿ ಜಿಲ್ಲೆಯ ಮೂಲೆ ಮೂಲೆಗೆ ತೆರಳುವ ವಕ್ಫ್ ಇಲಾಖೆಯ ಜಿಲ್ಲಾ ಅಧಿಕಾರಿಯು ಸರಕಾರಿ ವಾಹನವಿಲ್ಲದ ಕಾರಣ ಕಡತಗಳನ್ನು ಹೊತ್ತುಕೊಂಡು ಖಾಸಗಿ ಬಸ್ನಲ್ಲಿ ಓಡಾಡುವ ಪ್ರಮೇಯ ಬಂದಿದೆ.
ಸರಕಾರದ ಹಳೆಯ ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮಹತ್ತರ ಜವಾಬ್ದಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ವಕ್ಫ್-ಹಜ್ ಇಲಾಖೆಗೆ ಇದ್ದರೂ ಪೂರ್ಣಪ್ರಮಾಣದ ಅಧಿಕಾರಿಗಳಿಲ್ಲದ ಕಾರಣ ಪ್ರಭಾರ ಅಧಿಕಾರಿ ಸಹಿತ ಸಿಬ್ಬಂದಿ ವರ್ಗಕ್ಕೆ ಕೆಲಸದ ಒತ್ತಡ ಬೀಳುತ್ತದೆ. ಸದಾ ಅಲ್ಪಸಂಖ್ಯಾತರ ಕಲ್ಯಾಣದ ಪರ ಧ್ವನಿ ಎತ್ತುತ್ತಿರುವ ಮತ್ತು ಕಾಳಜಿ ವಹಿಸುತ್ತಿರುವ ಕಾಂಗ್ರೆಸ್ 2013ರಿಂದ 2018 ಮತ್ತು ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟವು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಕೂಡ ರಾಜ್ಯದಲ್ಲೇ ಅಧಿಕ ಸಂಖ್ಯೆಯ ಮುಸ್ಲಿಮರಿರುವ ದ.ಕ.ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್-ವಕ್ಫ್ ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರಿಯನ್ನು ನೇಮಿಸದಿರುವುದು ವಿಪರ್ಯಾಸ.
ಸರಕಾರವು ವಕ್ಫ್ ಇಲಾಖೆಯ ಮೂಲಕ ಮಸೀದಿ-ಮದ್ರಸ-ದರ್ಗಾ-ದಫನ ಭೂಮಿಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಪ್ರಕಟಿಸುತ್ತದೆ. ಅವುಗಳ ಅನುಷ್ಠಾನಕ್ಕೆ ಸಿಬ್ಬಂದಿಯ ಅಗತ್ಯ ಹಿಂದಿಗಿಂತ ಈಗ ತುಂಬ ಆವಶ್ಯಕತೆ ಇದೆ. ನಾವು ನಮ್ಮದೇ ಇತಿಮಿತಿಯೊಳಗೆ ಕರ್ತವ್ಯ ನಿಭಾಯಿಸುತ್ತೇವೆ. ಸರಕಾರಿ ವಾಹನದ ಸೌಲಭ್ಯವಿಲ್ಲದ ಕಾರಣ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈಗಾಗಲೆ ಅದನ್ನು ಮೇಲಧಿಕಾರಿ ಹಾಗೂ ಸಚಿವರ ಗಮನ ಸೆಳೆದಿದ್ದೇವೆ.
-ಅಬೂಬಕರ್ ಮೊಂಟೆಪದವು,
ಜಿಲ್ಲಾ ಅಧಿಕಾರಿ (ಪ್ರಭಾರ), ವಕ್ಫ್ ಮತ್ತು ಹಜ್ ಇಲಾಖೆ, ದ.ಕ.ಜಿಲ್ಲೆ
ರಾಜ್ಯ ಮತ್ತು ಕೇಂದ್ರ ಸರಕಾರ ಜಾರಿಗೊಳಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ದ.ಕ.ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯಗಳ ಜನಸಂಖ್ಯೆ ಅತೀ ಹೆಚ್ಚಿರುವುದರಿಂದ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಈ ಬಗ್ಗೆ ಮೇಲಧಿಕಾರಿಯ ಗಮನವನ್ನೂ ಸೆಳೆಯಲಾಗಿದೆ. ಇಲಾಖೆಯ ಸಿಬ್ಬಂದಿಯ ಕೊರತೆ ನೀಗಿಸಿದರೆ ಇನ್ನಷ್ಟು ಉತ್ತಮ ಸೇವೆ ನೀಡಬಹುದು.
-ಉಸ್ಮಾನ್,
ಜಿಲ್ಲಾ ಅಧಿಕಾರಿ (ಪ್ರಭಾರ), ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದ.ಕ.ಜಿಲ್ಲೆ