ಬಿ.ಸಿ.ರೋಡು-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ: ಹೊಂಡಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ !
ವಾಹನ ಸವಾರರಿಗೆ ಹೆದ್ದಾರಿ ಪ್ರಯಾಣ ದುಸ್ಸಾಹಸಕರ
ಬಂಟ್ವಾಳ, ಜು. 25: ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿಯು ಶೋಚನೀಯ ಸ್ಥಿತಿಗೆ ತಲುಪಿದ್ದು, ಬೃಹತ್ ಗಾತ್ರದ ಹೊಂಡಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಆರಂಭಗೊಂಡ ಬಳಿಕ ಅವಳಿ ತಾಲೂಕಿಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅವವ್ಯಸ್ಥೆಯಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಸಣ್ಣದು, ದೊಡ್ಡದು ಸೇರಿದಂತೆ ಹೊಂಡಗಳೇ ಎದ್ದು ಕಾಣುತ್ತಿವೆ. ಈ ಹೊಂಡಗಳನ್ನೇ ದಾಟಿ ವಾಹನ ಸಂಚಾರ ನಡೆಸಬೇಕಾದ ಅನಿವಾರ್ಯತೆಯೂ ಪ್ರಯಾಣಿಕರಿಗೆ ಎದುರಾಗಿದೆ.
ಚತುಷ್ಪಥ ಕಾಮಗಾರಿ ಸ್ಥಗಿತದಿಂದ ಅವ್ಯವಸ್ಥೆ
ದೇಶದ ಅತಿ ಉದ್ದದ ಕಾಂಕ್ರೀಟ್ ಚತುಷ್ಪಥ ಹೆಗ್ಗಳಿಕೆಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ರಸ್ತೆ ಕಾಮಗಾರಿಯನ್ನು ವಹಿಸಿಕೊಂಡಿದ್ದ ಎಲ್ ಆ್ಯಂಡ್ ಟಿ (ಲಾರ್ಸೆನ್ ಆ್ಯಂಡ್ ಟುಬ್ರೊ) ಕಂಪೆನಿಯು ಹಾಗೂ ಎನ್‍ಎಚ್‍ಎಐ ಒಪ್ಪಂದ ತಾಂತ್ರಿಕ ದೋಷದಿಂದ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಂಡಿರುವುದು ಈ ಅವ್ಯವಸ್ಥೆಗೆ ಕಾರಣ ಎನ್ನುವುದು ಸಾರ್ವಜನಿಕರ ದೂರು.
2017ರ ಮಾರ್ಚ್ 28ಕ್ಕೆ ಪಾಣೆಮಂಗಳೂರು ಸೇತುವೆಗೆ ತಾಗಿಕೊಂಡು ನೂತನ ಸೇತುವೆ ಕಾಮಗಾರಿಯನ್ನು ಪ್ರಾರಂಭ ಮಾಡಿದ ಕಂಪೆನಿಯು, ನೇತ್ರಾವತಿ ನದಿಗೆ ಮಣ್ಣು ಹಾಕಿ ಪಿಲ್ಲರ್ ನಿರ್ಮಾಣ ಕಾಮಗಾರಿ ಸಹಿತ ವಿವಿಧೆಡೆ ರಸ್ತೆಯನ್ನು ಅಗೆಯುವ ಹಾಗೂ ಮಣ್ಣು ಹಾಕುವ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ, ಕಂಪೆನಿ ಮತ್ತು ಎನ್‍ಎಚ್‍ಎಐನ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ.
ಉಪ್ಪಿನಂಗಡಿ, ಬಿ.ಸಿ.ರೋಡ್‍ಲ್ಲಿ ಸೇತುವೆಗೆ ಕಾಮಗಾರಿ ನಡೆಯುತ್ತಿದ್ದು, ಅದೂ ಸದ್ಯ ನಿಂತಿದೆ. ಬಿ.ಸಿ.ರೋಡ್ ಮೇಲ್ಸೆತುವೆ ಸಹಿತ ವಿವಿಧೆಡೆ ಕಾಮಗಾರಿ ಹಿನ್ನೆಲೆಯಲ್ಲಿ ಮಣ್ಣು ಹಾಕಿದ್ದು, ಇದೀಗ ಮಳೆಗಾಲದಲ್ಲಿ ಮಣ್ಣು ಪ್ರವಾಹದಲ್ಲಿ ಭಾಗಶಃ ಕೊಚ್ಚಿ ಹೋಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
'ಹೊಂಡಗಳನ್ನು ತಪ್ಪಿಸುವ ಸಂದರ್ಭ ಅಪಘಾತ'
ಹೊಂಡಗಳಲ್ಲಿ ಬಿದ್ದು ಪದೇ ಪದೆ ಅಪಘಾತದಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದು, ಇದರಿಂದಾಗಿ ವಾಹನ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ದ್ವಿಚಕ್ರ ಸವಾರರ ಅವಸ್ಥೆ ತೀರಾ ಭಿನ್ನವಾಗಿದೆ. ರಾತ್ರಿ ಸಮಯದಲ್ಲಿ, ಮಳೆ ಸುರಿಯುವ ಸಂದರ್ಭದಲ್ಲಿ ರಸ್ತೆಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ಹೊಂಡಗಳನ್ನು ತಪ್ಪಿಸುವ ಸಂದರ್ಭದಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ಹೀಗಾಗಿ ಹೆದ್ದಾರಿ ಪ್ರಯಾಣ ದುಸ್ಸಾಹಸಕರವಾಗಿರುತ್ತದೆ.
ಹೆದ್ದಾರಿಯಲ್ಲಿ ಪ್ರಯಾಣ ಬೆಳೆಸಿದವರಿಗೆ ಬೆನ್ನು ನೋವು, ಮೈಕೈ ನೋವು ಉಂಟಾಗಿರುವುದಾಗಿ ದೂರಿಕೊಂಡಿದ್ದಾರೆ. ಪ್ರತಿ ದಿನ ಈ ದಾರಿಯಾಗಿ ತೆರಳುವ ಬಸ್, ಟ್ಯಾಕ್ಸಿ ಚಾಲಕರ ಸ್ಥಿತಿ ಹೇಳತೀರದಾಗಿದೆ. ವಾಹನಗಳ ಬಿಡಿ ಭಾಗಗಳು, ಸಹಿತ ಇತರ ಸಾಮಗ್ರಿಗಳಿಗಾಗಿ ಹೆಚ್ಚುವರಿ ಹಣ ವೆಚ್ಚ ಮಾಡಬೇಕಾದ ಸ್ಥಿತಿಯೂ ಬಂದೊದಗಿದೆ.
ಚತುಷ್ಪಥ ರಸ್ತೆ ಕಾಮಗಾರಿಯು ಅರ್ಧಂಬರ್ಧ ಆಗಿರುವ ಸ್ಥಿತಿಯಲ್ಲಿದ್ದು ಇದರಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗುವುದಲ್ಲದೆ ಸುಗಮ ಸಂಚಾರಕ್ಕೂ ಅಡಚಣೆಯಾಗುತ್ತಿವೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಮಣ್ಣು ಹಾಕಿದ್ದರಿಂದ ಕೆಲ ತೋಡುಗಳು ಬಂದ್ ಆಗಿದೆ. ಮಳೆಗಾಲದಲ್ಲಿ ಈ ರಸ್ತೆ ಸಂಚಾರಕ್ಕೆ ಮತ್ತಷ್ಟು ತೊಡಕು ಉಂಟಾಗುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಇಲಾಖೆಯು ರಸ್ತೆ ಹೊಂಡಗಳನ್ನು ಮುಚ್ಚುವ ಕೆಲಸ ಮಾಡಬೇಕಿದೆ.
- ಕಿಶೋರ್ ಬಿ.ಸಿ.ರೋಡ್, ಸ್ಥಳೀಯ