ನವೋತ್ಥಾನಕ್ಕೆ ಮುಸ್ಲಿಮರ ಕೊಡುಗೆಗಳು
ಈ ಹೊತ್ತಿನ ಹೊತ್ತಿಗೆ
ಜಾಗತಿಕವಾಗಿ ಮುಸ್ಲಿಮರ ವಿರುದ್ಧ ಸಂಚುಗಳು ನಡೆಯುತ್ತಿರುವ ದಿನಗಳು ಇವು. ಅವುಗಳಿಗೆ ಅದರದೇ ರಾಜಕೀಯ ಕಾರಣಗಳಿವೆ. ಇಂತಹ ಸಂದರ್ಭದಲ್ಲಿ ಮುಸ್ಲಿರೆಂದರೆ ಭಯೋತ್ಪಾದಕರು, ಪ್ರಗತಿ ವಿರೋಧಿಗಳು, ಆಧುನಿಕತೆಗೆ ಬೆನ್ನು ಮಾಡಿದವರು ಎಂಬಿತ್ಯಾದಿ ಅಪಪ್ರಚಾರಗಳು ನಡೆಯುತ್ತಿವೆ. ಇದರ ಜೊತೆ ಜೊತೆಗೇ ಆಧುನಿಕತೆಗೆ ಮುಸ್ಲಿಮರು ನೀಡಿರುವ ಕೊಡುಗೆಗಳನ್ನು ಮರೆಮಾಚುವ ಕೆಲಸವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಸ್ವತಃ ಮುಸ್ಲಿಮರೇ ಈ ಕೊಡುಗೆಗಳ ಕುರಿತಂತೆ ಗಾಢ ವಿಸ್ಮತಿಯಲ್ಲಿದ್ದಾರೆ . ಈ ಮರೆವನ್ನು ತಟ್ಟಿ ಎಬ್ಬಿಸುವ ಪುಟ್ಟ ಪ್ರಯತ್ನವಾಗಿದೆ ‘‘ನವೋತ್ಥಾನಕ್ಕೆ ಮುಸ್ಲಿಮರ ಕೊಡುಗೆಗಳು’ ಕೃತಿ. ಇಡೀ ಕೃತಿಯನ್ನು ಇಸ್ಲಾಮ್ ದೃಷ್ಟಿಕೋನದಿಂದ ಬರೆಯಲಾಗಿದೆಯಾದರೂ, ಆಧುನಿಕತೆಗೆ ಮುಸ್ಲಿಮರ ಕೊಡುಗೆಯನ್ನು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ನೆಲೆಗಳಲ್ಲಿ ವಿವರಿಸಲಾಗಿದೆ. ಯುರೋಪಿಯನ್ ಇತಿಹಾಸಕಾರರಿಗೆ ಉತ್ತರದ ರೂಪದಲ್ಲಿ ಬರೆಯಲ್ಪಟ್ಟ ಅಹ್ಮದ್ ಈಸಾ ಮತ್ತು ಉಸ್ಮಾನ್ ಅಲಿ ಬರೆದ ‘ಸ್ಟಡೀಸ್ ಇನ್ ಇಸ್ಲಾಮಿಕ್ ಸಿವಿಲೈಸೇಶನ್: ದಿ ಮುಸ್ಲಿಮ್ ಕಾಂಟ್ರಿಬ್ಯೂಶನ್ ಟು ದ ರಿನೈಸಾನ್ಸ್’ ಕೃತಿಯ ಸಂಗ್ರಹ ರೂಪವಿದು. 2008ರಲ್ಲಿ ನಿಧನರಾದ ಅಹ್ಮದ್ ಈಸಾ ಭಾರತದಲ್ಲಿ ಜನಿಸಿ, ತಮ್ಮ ಬಾಲ್ಯ ಕಾಲವನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದರು. ಉನ್ನತ ಶಿಕ್ಷಣದ ಆನಂತರ ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು. ಆಫ್ರಿಕನ್-ಮಧ್ಯ ಪ್ರಾಚ್ಯ ಸಾಹಿತ್ಯದಲ್ಲಿ ಗಮನಸೆಳೆದಿದ್ದ ಈಸಾ, ನೆವಾಡದಲ್ಲಿ ಮುಸ್ಲಿಮ್ ಸಮಾಜವನ್ನು ಕಟ್ಟಿ ಬೆಳೆಸುವುದರಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈ ಗ್ರಂಥದ ಪ್ರತಿಯನ್ನು ಸಿದ್ಧಪಡಿಸಲು ಈಸಾರಿಗೆ ಸಹಾಯ ಮಾಡಿರುವ ಉಸ್ಮಾನ್ ಅಲಿ ಕೆನಡಾದ ಟೊರೆಂಟೋ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿದವರು.ಜೊತೆಗೆ ಇರಾಕ್‌ನ ಇರ್‌ಬಿಯಾದಲ್ಲಿ ಸಲಾಹುದ್ದೀನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
ಇಸ್ಲಾಮ್ ಮತ್ತು ಕುರ್‌ಆನ್ ಜ್ಞಾನ-ವಿಜ್ಞಾನ ತಿಳುವಳಿಕೆಗೆ ಹೇಗೆ ಆದ್ಯತೆಯನ್ನು ನೀಡಿದೆ ಎನ್ನುವ ಪೀಠಿಕೆಯೊಂದಿಗೆ ಈ ಕೃತಿ ಆರಂಭವಾಗುತ್ತದೆ. ವರ್ಣಭೇದ ನೀತಿಯ ವಿರುದ್ಧ ಅದು ತಳೆದ ಕಠಿಣ ನಿಲುವು, ಮಹಿಳೆಯರ ಹಕ್ಕುಗಳ ಕುರಿತಂತೆ ಅದು ಹೊಂದಿದ ಕಾಳಜಿ, ಮುಸ್ಲಿಮೇತರರ ಜೊತೆಗಿನ ಕೊಡುಕೊಳ್ಳುವಿಕೆ, ಸೌಹಾರ್ದ ಮೊದಲಾದ ವಿಷಯಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ಮೂಲತಃ ನಾವಿಕರಾಗಿದ್ದ ಅರಬಿಗಳು ಸಮುದ್ರಯಾನದ ಮೂಲಕವೇ ಜ್ಞಾನದ ಕಡೆಗೆ ಹುಟ್ಟು ಹಾಕಿದರು. ಸಮಯವನ್ನು ತೋರಿಸುವ ಗ್ರೀಕರ ಆಸ್ಟ್ರೋಲೇಬ್‌ನ್ನು ಅರಬಿಗಳು ಆವಿಷ್ಕರಿಸಿದ್ದರು. ಕಂಪಾಸನ್ನು ಕಂಡು ಹಿಡಿದದ್ದು ಚೀನಿಯರಾಗಿದ್ದರೂ ಮುಸ್ಲಿಮ್ ನಾವಿಕರು ಅದರ ಉಪಯೋಗವನ್ನು ವ್ಯಾಪಕಗೊಳಿಸಿದರು ಎಂದು ಈ ಕೃತಿ ಹೇಳುತ್ತದೆ. ನಾವಿಕ ವಿಜ್ಞಾನದಲ್ಲಿ ಮುಸ್ಲಿಮರು ಪಡೆದ ಪ್ರಗತಿಯು ಚೀನಿಯರಿಗೂ ಬಹಳಷ್ಟು ಉಪಕರಿಸಿತು. ಚೀನಾದ ನಾವಿಕ ಪಡೆಯ ನಾಯಕ ಷೆಂಗ್ ಹೀ ಎಂಬಾತ ಮುಸ್ಲಿಮನಾಗಿದ್ದರು. ಆತ ಬದುಕಿನ ಕೊನೆಯನ್ನು ಕೇರಳದ ಕಲ್ಲಿಕೋಟೆಯಲ್ಲಿ ಕಳೆದನು ಎಂದು ಇತಿಹಾಸ ಹೇಳುತ್ತದೆ. ವ್ಯಾಪಾರದ ಮೂಲಕ ಯುರೋಪಿಯನ್ನರಿಗೆ ಅರಬಿಗಳು ಪರಿಚಯಿಸಿದ ಆಹಾರ ಪದಾರ್ಥಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಬಗ್ದಾದ್ ನಗರ ಹೇಗೆ ಆರ್ಥಿಕ ಕೇಂದ್ರವಾಗಿ ಬೆಳೆಯಿತು ಎನ್ನುವ ಮಾಹಿತಿಗಳನ್ನು ಕೃತಿ ಹೇಳುತ್ತದೆ.ವೈದ್ಯಕೀಯ, ಗಣಿತ, ಕಲೆ-ಸಾಹಿತ್ಯ, ಸಾಕ್ಷರತೆ, ಉನ್ನತ ಶಿಕ್ಷಣ, ವಾಸ್ತುಶಿಲ್ಪ, ತತ್ವಶಾಸ್ತ್ರ ಇವುಗಳಿಗೆ ಮುಸ್ಲಿಮರು ನೀಡಿರುವ ಕೊಡುಗೆಗಳ ಕುತೂಹಲಕಾರಿ ಮಾಹಿತಿಗಳಿವೆ.
ಇನ್‌ಸ್ಟಿಟ್ಯೂಟ್ ಆಫ್ ಒಬ್ಜೆಕ್ಟಿವ್ ಸ್ಟಡೀಸ್ ನವದೆಹಲಿ ಹೊರತಂದಿರುವ ಈ ಕಿರು ಕೃತಿಯ ಒಟ್ಟು ಪುಟಗಳು 40. ಮುಖಬೆಲೆ 50 ರೂಪಾಯಿ.