ಚೇತಕ್ ಹೆಲಿಕ್ಯಾಪ್ಟರ್ ಅವಧಿಗೂ ಮೊದಲೇ ನೌಕಾಪಡೆಗೆ ಹಸ್ತಾಂತರಿಸಿದ ಎಚ್ಎಎಲ್
ಬೆಂಗಳೂರು, ಜು.26: ಎಚ್ಎಎಲ್ ತಯಾರಿಸಿರುವ ಚೇತಕ್ ಹೆಲಿಕ್ಯಾಪ್ಟರ್ ಅನ್ನು ಅವಧಿಗೂ ಮೊದಲೇ ಭಾರತೀಯ ನೌಕಾಪಡೆಗೆ ಹಸ್ತಾಂತರ ಮಾಡಿದೆ. ಎಚ್ಕ್ಯೂಎನ್ಎ ಸಿಎಸ್ಒ(ಏರ್) ವಿಎಸ್ಎಂ ಕಮಾಂಡರ್ ವಿಕ್ರಂ ಮೆನನ್ಗೆ ಎಚ್ಎಎಲ್ ಹೆಲಿಕಾಪ್ಟರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಅನ್ಬುವೇಲನ್ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.
2019 ಆಗಸ್ಟ್ ನಲ್ಲಿ ಎರಡು ಹಾಗೂ 2020ರ ಆಗಸ್ಟ್ನಲ್ಲಿ ಆರು ಸೇರಿದಂತೆ ಒಟ್ಟಾರೆ ಎಂಟು ಚೇತಕ್ ಹೆಲಿಕ್ಯಾಪ್ಟರ್ಗಳನ್ನು ನೀಡಲು 2017 ರ ಆಗಸ್ಟ್ನಲ್ಲಿ ನೌಕಾಪಡೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈ ಹೆಲಿಕ್ಯಾಪ್ಟರ್ಗಳು ಎಚ್ಎಎಲ್ ನಿರ್ಮಿತ ವಿನೂತನ ಸಂವಹನ ಹಾಗೂ ನೇವಿಗೇಷನ್ ವ್ಯವಸ್ಥೆ ಹೊಂದಿದೆ ಎಂದು ಎಚ್ಎಎಲ್ ಸಿಎಂಡಿ ಆರ್.ಮಾಧವನ್ ಹೇಳಿದ್ದಾರೆ.
ನಿಗದಿತ ಅವಧಿಗಿಂತ ಒಂದು ತಿಂಗಳ ಮೊದಲೇ ಒಂದು ಹೆಲಿಕ್ಯಾಪ್ಟರ್ ಪಡೆಯಲು ಸಂತಸವಾಗುತ್ತಿದೆ. ಕಳೆದ ಐದು ದಶಕದಲ್ಲಿ ನೌಕಾ ವಿಮಾನಯಾನದಲ್ಲಿ ಚೇತಕ್ ಹೆಲಿಕ್ಯಾಪ್ಟರ್ಗಳು ನಿರ್ವಹಿಸಿದ ಪಾತ್ರದ ಅರಿವಿದೆ. ಎಚ್ಎಎಲ್ ಹಾಗೂ ನೌಕಾದಳಗಳು ಬಹಳ ವರ್ಷಗಳ ಉತ್ತಮ ಬಾಂಧವ್ಯ ಹೊಂದಿವೆ. ಎಚ್ಎಎಲ್ ಬದ್ಧತೆ ಪ್ರಶಂಸಿಸುವ ಜತೆಗೆ ಭವಿಷ್ಯದಲ್ಲೂ ಇದೇ ಬೆಂಬಲವನ್ನು ನಿರೀಕ್ಷಿಸುತ್ತೇವೆ ಎಂದು ಕಮಾಂಡರ್ ವಿಕ್ರಂ ಮೆನನ್ ತಿಳಿಸಿದ್ದಾರೆ